ಈ ನಂಬರ್ ಮೂಲಕ ಯಾರಾದರೂ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಮಾಡಬಹುದೇ?
ಸ್ಮಾರ್ಟ್‌ಜಗತ್ತಿನಲ್ಲಿ ಎಲ್ಲವೂ ಸಾಧ್ಯವಾಗುತ್ತಿದೆ. ಹೊಸ ಹೊಸ ಟೆಕ್ನಾಲಜಿ ಬಳಕೆ ಒಂದು ಕಡೆಯಾದರೆ, ಇದನ್ನೇ ದುರುಪಯೋಗ ಮಾಡಿಕೊಂಡು ಅನ್ಯ ಮಾರ್ಗದಲ್ಲಿ ಸಂಪಾದನೆ ಮಾಡುವ ವರ್ಗ ಮತ್ತೊಂದು ಕಡೆ ಕೆಲಸ ಮಾಡುತ್ತದೆ. ಈ ನಡುವೆ ಬ್ಯಾಂಕ್ ಖಾತೆ ಹ್ಯಾಕಿಂಗ್‌ಗೆ ಆಧಾರ್ ಸಂಖ್ಯೆ ಕಾರಣವಾಗಬಹುದೇ? ಎಂಬ ಬಗೆಗಿನ ಆತಂಕ ಈಗ ಬಹುತೇಕರಲ್ಲಿ ಮನೆ ಮಾಡಿದೆ.
ಹೌದು, ವಿವಿಧ ಹಣಕಾಸು ಚಟುವಟಿಕೆಗಳಲ್ಲಿ ಆಧಾರ್ ಕಾರ್ಡ್ (Aadhaar card) ನಿರ್ಣಾಯಕ ಪಾತ್ರ ವಹಿಸುತ್ತದೆ. ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆ-ಸಂಬಂಧಿತ ಕಾರ್ಯಗಳಿಗೆ ಇದು ತುಂಬಾನೇ ಅತ್ಯಗತ್ಯ. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ವಿಫಲವಾದರೆ ಬ್ಯಾಂಕಿಂಗ್ ವ್ಯವಹಾರ ಕಠಿಣವಾಗಲಿದೆ. ಎಲ್ಲಾ ಬೆಳವಣಿಗೆ ನಡುವೆ ಆಧಾರ್ ಸಂಬಂಧ ಭದ್ರತಾ ಕಾಳಜಿಗಳು ಸಹ ನಮಗೆ ಗೊತ್ತಿರಬೇಕು.

ಆಧಾರ್ ಭದ್ರತಾ ಕಾಳಜಿಗಳು: ಆಧಾರ್ ಮತ್ತು ಬಹು ಹಣಕಾಸು ಕಾರ್ಯಗಳ ನಡುವಿನ ಸಂಪರ್ಕವು ಸಂಭಾವ್ಯ ಭದ್ರತಾ ಅಪಾಯಗಳ ಬಗ್ಗೆ ಕಳವಳವನ್ನು ಉಂಟುಮಾಡಬಹುದು ಎನ್ನಲಾಗಿದೆ. ಅಂದರೆ ಯಾರಾದರೂ ಸಹ ನಿಮ್ಮ ಆಧಾರ್ ಸಂಖ್ಯೆಯನ್ನು ತಿಳಿದಿದ್ದರೆ ಅವರು ಲಿಂಕ್ ಮಾಡಲಾದ ಆಪ್‌ಗಳು ಮತ್ತು ಸೇವೆಗಳಿಗೆ ಎಂಟ್ರಿ ನೀಡಬಹುದು ಎಂದು ಕೆಲವರು ಚಿಂತಿಸುತ್ತಾರೆ. ಆದರೂ ಸಹ ಕೇವಲ ಆಧಾರ್ ಸಂಖ್ಯೆಯನ್ನು ತಿಳಿದುಕೊಳ್ಳುವುದರಿಂದ ಬ್ಯಾಂಕ್ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ನೀಡುವುದಿಲ್ಲ ಎಂದು ತಜ್ಞರು ಭರವಸೆ ನೀಡುತ್ತಾರೆ.
ಆಧಾರ್, ಬ್ಯಾಂಕ್ ಖಾತೆ ಹ್ಯಾಕಿಂಗ್: ಇನ್ನು ಇಂಡಸ್‌ಇಂಡ್ ಬ್ಯಾಂಕ್‌ನ ಅನಿಲ್ ರಾವ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಯಾರೊಬ್ಬರ ಆಧಾರ್ ಸಂಖ್ಯೆಯನ್ನು ಹೊಂದಿರುವುದು ಅವರ ಬ್ಯಾಂಕ್ ಖಾತೆಗೆ ನೇರ ಪ್ರವೇಶಕ್ಕೆ ಎಂಟ್ರಿ ನೀಡುವುದಿಲ್ಲ. ಓಟಿಪಿ ದೃಢೀಕರಣ, ಫೇಸ್ ಐಡಿ ಅಥವಾ ಐರಿಸ್ ಸ್ಕ್ಯಾನ್‌ನಂತಹ ಭದ್ರತಾ ಕಾರ್ಯವಿಧಾನಗಳು ನಿರ್ಣಾಯಕ ರಕ್ಷಣಾತ್ಮಕ ವ್ಯವಸ್ಥೆಯಾಗಿದೆ. ಈ ಹೆಚ್ಚುವರಿ ಭದ್ರತಾ ಲೇಯರ್‌ಗಳಿರುವುದರಿಂದ ಬ್ಯಾಂಕ್ ಖಾತೆಗಳು ಸುರಕ್ಷಿತವಾಗಿ ಇರಲಿವೆ ಎಂದಿದ್ದಾರೆ.
ಸೈಬರ್ ಭದ್ರತೆಯ ಕಾಳಜಿ: ಇದರೊಂದಿಗೆ ಸೈಬರ್ ಅಪರಾಧಿಗಳು ಮೋಸದ ವಹಿವಾಟುಗಳನ್ನು ನಡೆಸಲು ನೋಂದಾಯಿತ ಆಸ್ತಿ ದಾಖಲೆಗಳಿಂದ ಫಿಂಗರ್‌ಪ್ರಿಂಟ್‌ಗಳನ್ನು ಪಡೆದ ನಿದರ್ಶನಗಳು ಈಗ ಬೆಳಕಿಗೆ ಬಂದಿವೆ. ಈ ಸಂಬಂಧ ಸರ್ಕಾರಿ ಅಧಿಕಾರಿಗಳು ಜಾಗರೂಕರಾಗಿದ್ದು, ಅಂತಹ ಬೆದರಿಕೆಗಳನ್ನು ಎದುರಿಸಲು ಭದ್ರತಾ ಪ್ರೋಟೋಕಾಲ್‌ಗಳನ್ನು ನವೀಕರಿಸಿದ್ದಾರೆ. ಈ ಆಧಾರ್ ದೃಢೀಕರಣದಲ್ಲಿ ನಕಲಿ ಫಿಂಗರ್‌ಪ್ರಿಂಟ್‌ಗಳನ್ನು ಬಳಕೆ ಮಾಡಿಕೊಂಡು ಮಾಡುವ ವಂಚನೆಯನ್ನು ತಡೆಯಲು UIDAI ಎಐ ಆಧಾರಿತ ಪರಿಹಾರಗಳನ್ನು ಜಾರಿಗೆ ತಂದಿದೆ.
ಆಧಾರ್ ಪಾವತಿ ವ್ಯವಸ್ಥೆ ಸುರಕ್ಷಿತ: ಭದ್ರತೆಯನ್ನು ಹೆಚ್ಚಿಸಲು, ಆಧಾರ್-ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯಲ್ಲಿನ ದೋಷಗಳನ್ನು ಪರಿಹರಿಸಲು ಸರ್ಕಾರ ಮತ್ತು UIDAI ಕ್ರಮಗಳನ್ನು ತೆಗೆದುಕೊಂಡಿದೆ. ಫಿಂಗರ್‌ಪ್ರಿಂಟ್ ಆಧಾರಿತ ಆಧಾರ್ ದೃಢೀಕರಣದ ಸಮಯದಲ್ಲಿ ನಕಲಿ ಫಿಂಗರ್‌ಪ್ರಿಂಟ್‌ಗಳ ಬಳಕೆಯನ್ನು ಸುಧಾರಿತ ಭದ್ರತಾ ಕ್ರಮಗಳೊಂದಿಗೆ ಪತ್ತೆ ಮಾಡುತ್ತದೆ. ಈ ಮೂಲಕ ಮೋಸದ ವಹಿವಾಟಿಗೆ ಬ್ರೇಕ್ ಹಾಕಲಾಗುತ್ತದೆ.
ಬಯೋಮೆಟ್ರಿಕ್ ಮಾಹಿತಿ ನವೀಕರಣ: ಆಧಾರ್ ಅನ್ನು ನೀವು ಸಕ್ರಿಯವಾಗಿ ಬಳಕೆ ಮಾಡದೆ ಇದ್ದರೆ UIDAI ಅದನ್ನು ಲಾಕ್ ಮಾಡುವ ಆಯ್ಕೆಯನ್ನು ಸಹ ನೀಡುತ್ತದೆ. UIDAI ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಈ ಫೀಚರ್ಸ್ ಮೂಲಕ ಆಧಾರ್ ಅನ್ನು ಬಳಕೆ ಮಾಡದೆ ಇರುವಾಗ ಲಾಕ್ ಮಾಡಬಹುದು. ಹಾಗೆಯೇ ಯಾವಾಗ ಬಳಕೆ ಮಾಡಲು ಮುಂದಾಗುವಿರೋ ಆಗ ಅನ್‌ಲಾಕ್ ಮಾಡಿಕೊಳ್ಳಬಹುದು. ಇದು ದುರುಪಯೋಗವನ್ನು ತಡೆಯಲಿದ್ದು, ಆಧಾರ್ ಡೇಟಾಗೆ ಹೆಚ್ಚಿನ ಭದ್ರತೆ ನೀಡುತ್ತದೆ.

ಇನ್ನು ಆಧಾರ್ ಬಳಕೆದಾರರು ತಮ್ಮ ಆಧಾರ್ ಅನ್ನು ಸೆಪ್ಟೆಂಬರ್ 14 ರವರೆಗೆ ಮಾತ್ರ ಉಚಿತವಾಗಿ ಆನ್‌ಲೈನ್‌ನಲ್ಲಿ ನವೀಕರಿಸಬಹುದಾಗಿದೆ. ಯಾರಾದರೂ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಬಯಸಿದರೆ ಅವರು 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೀವೇ ಆಪ್‌ಡೇಟ್ ಮಾಡಿಕೊಂಡರೆ ಸಂಪೂರ್ಣ ಉಚಿತವಾಗಿರಲಿದೆ.


Click it and Unblock the Notifications








