ಇದು ಬಿಗ್ ಶಾಕಿಂಗ್ ನ್ಯೂಸ್!..ರಾಜ್ಯ ಗುಪ್ತಚರ 'ಡಿಜಿಪಿ' ಖಾತೆಗೆ ಕನ್ನ!!
ಆನ್‌ಲೈನ್ ವಂಚಕರ ಗಾಳಕ್ಕೆ ಸಾಮಾನ್ಯರು ಬಿದ್ದರೆ ಓಕೆ. ಆದರೆ, ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಯಾಗಿರುವ ಡಿಜಿಪಿಯೋರ್ವರು ಸೈಬರ್ ಖದೀಮರ ಮಾತಿನ ಮೋಡಿಗೆ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಸೈಬರ್ ವಂಚನೆ ಕುರಿತಂತೆ ರಾಜ್ಯದ ಜನತೆಗೆ ಜಾಗೃತಿ ಮೂಡಿಸುತ್ತಿರುವ ಪೊಲೀಸರಿಗೇ ಆನ್‌ಲೈನ್ ಕಳ್ಳರು ಟೋಪಿ ಹಾಕಿರುವ ಪ್ರಕರಣ ಭಯಹುಟ್ಟಿಸಿದೆ.
ಹೌದು, ರಾಜ್ಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಅಶಿತ್ ಮೋಹನ್ ಪ್ರಸಾದ್, ಸೈಬರ್ ಖದೀಮರ ಮಾತಿನ ಮೋಡಿಯ ಬಲೆಗೆ ಬಿದ್ದು 2 ಲಕ್ಷ ರೂ. ಕಳೆದುಕೊಂಡಿದ್ದಾರೆ. ಬ್ಯಾಂಕ್ ಸೇವಾ ಕೇಂದ್ರದ ಸಿಬ್ಬಂದಿಯ ಸೋಗಿನಲ್ಲಿ ಡಿಜಿಪಿಗೆ ಕರೆ ಮಾಡಿ ಡೆಬಿಟ್ ಕಾರ್ಡ್ ವಿವರವನ್ನು ಪಡೆದುಕೊಂಡ ವಂಚಕರು , ಮಾಹಿತಿ ನೀಡಿದ ಕ್ಷಣಮಾತ್ರದಲ್ಲಿ ಹಣವನ್ನು ಕದ್ದಿರುವ ಘಟನೆ ನಡೆದಿದೆ.

ದಸರಾ ಉತ್ಸವದ ತುರ್ತು ಕೆಲಸದಲ್ಲಿ ತೊಡಗಿದ್ದಾಗ ಕರೆ ಬಂದಿದ್ದು ನಿಜ. ಕಾರ್ಡ್ ಅವಧಿ ಮುಗಿಯುತ್ತಿದೆ ಎಂದು ಹೇಳಿದ್ದರಿಂದ ಡೆಬಿಟ್ ಕಾರ್ಡ್ ಮಾಹಿತಿ ಹಂಚಿಕೊಂಡೆ. ಕರೆ ಕಟ್ ಮಾಡುವಷ್ಟರಲ್ಲಿ ಬ್ಯಾಂಕ್‌ಗೆ ಕನ್ನಹಾಕಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ. ಹಾಗಾದರೆ, ಏನಿದು ಘಟನೆ? ವಂಚಕರ ಕಾರ್ಯ ಹೇಗೆಲ್ಲಾ ಇತ್ತು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಏನಿದು ಪ್ರಕರಣ?
9223040040 ಸಂಖ್ಯೆಯಿಂದ ಡಿಜಿಪಿ ಅವರಿಗೆ ಕರೆ ಮಾಡಿದ್ದ ವಂಚಕನೋರ್ವ, ನಿಮ್ಮ ಎಸ್‌ಬಿಐ ಕಾರ್ಡಿನ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ. ಅದನ್ನು ನವೀಕರಣ ಮಾಡಬೇಕಿದೆ . ಬ್ಯಾಂಕ್ ವಿವರಗಳನ್ನು ನೀಡಿ ಎಂದು ಕೆಳಿದ್ದಾನೆ. ಕಾರ್ಡ್ ಮೇಲಿನ ನಂಬರ್ ಜೊತೆಗೆ ಎಸ್‌ಎಮ್‌ಎಸ್ ಮೂಲಕಬ್ಯಾಂಕ್ ಖಾತೆಯ ವಿವರಗಳನ್ನು ಕಳುಹಿಸಿಕೊಡುವಂತೆ ತಿಳಿಸಿದ್ದಾರೆ.

ಎಚ್ಚರ ತಪ್ಪಿದ ಡಿಜಿಪಿ.
ಡೆಬಿಟ್ ಕಾರ್ಡ್ ಮೇಲಿನ ಸಂಖ್ಯೆ ಕೇಳಿದ ಸೈಬರ್ ಖದೀಮನ ಮಾತನ್ನು ನಂಬಿ ಆತನ ಸಂಚು ಅರಿಯದ ಪ್ರಸಾದ್, ಒಂದು ಡೆಬಿಟ್ ಕಾರ್ಡ್ನ ಮಾಹಿತಿ ಹಂಚಿಕೊಂಡಿದ್ದಾರೆ. ಬಳಿಕ ಆತನ ಕೋರಿಕೆ ಮೇರೆಗೆ ಮತ್ತೊಂದು ಬ್ಯಾಂಕ್ ಕಾರ್ಡ್ ಮಾಹಿತಿಯನ್ನೂ ಕೊಟ್ಟಿದ್ದಾರೆ. ಇದಾಗಿ ಅವರು ಕರೆ ಕಟ್ ಮಾಡುವ ವೇಳೆ ಅವರ ಖಾತೆಯಿಂದ 2 ಲಕ್ಷ ರೂ. ಹಣವನ್ನು ಕದಿಯಲಾಗಿದೆ.

ಈ ಬಗ್ಗೆ ಡಿಜಿಪಿ ಹೇಳಿದ್ದೇನು?
ದಸರಾ ಉತ್ಸವದ ತುರ್ತು ಕೆಲಸದಲ್ಲಿ ತೊಡಗಿದ್ದಾಗ ಕರೆ ಬಂದಿದ್ದು ನಿಜ. ಬೇರೆ ಒತ್ತಡದಲ್ಲಿದ್ದ ನಾನು ಕಾರ್ಡ್ ಅವಧಿ ಮುಗಿಯುತ್ತಿದೆ ಎಂದು ಹೇಳಿದ್ದರಿಂದ ಎಸ್‌ಬಿಐ ಹಾಗೂ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್ ಮಾಹಿತಿ ಹಂಚಿಕೊಂಡೆ. ಮೊದಲು ಎಸ್‌ಬಿಐ ಖಾತೆಯಿಂದ 1 ಲಕ್ಷ , ನಂತರ ದೂರು ದಾಖಲಿಸುವ ಮುನ್ನ ಕೆನರಾ ಬ್ಯಾಂಕ್ ಖಾತೆಯಿಂದ 1 ಲಕ್ಷ ಎಗರಿಸಿದ್ದಾಗಿ ಹೇಳಿದ್ದಾರೆ.

ಸೈಬರ್ ಕ್ರೈಮ್ ಠಾಣೆಗೆ ದೂರು
ಖಾತೆಗಳಿಂದ ಹಣವನ್ನು ದೋಚಿದ ನಂತರ ತಕ್ಷಣವೇ ವಂಚನೆಗೊಳಗಾಗಿರುವುದನ್ನು ಅರಿತ ಅವರು ಫೋನ್ ಮೂಲಕವೇ ಖಾತೆಗಳನ್ನು ಬಂದ್ ಮಾಡಿದ್ದಾರೆ. ಬಳಿಕ ಸಿಐಡಿಯ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಡಿಜಿಪಿ ಅವರೇ ಹಣ ಕಳೆದುಕೊಂಡಿರುವ ಪ್ರಕರಣವನ್ನು ಮರೆಮಾಡಲು ಸಹ ಯತ್ನಿಸಲಾಗಿದೆ. ಆದರೆ, ಈ ಸುದ್ದಿ ಮಾತ್ರ ಹೊರಗೆ ಬಿದ್ದಿದೆ.

ಒಟ್ಟು 27 ಮಂದಿ ವಂಚನೆ
ಡಿಜಿಪಿ ಪ್ರಸಾದ್ ಆನ್ಲೈನ್ನಲ್ಲಿ ದೂರು ನೀಡಿದ ಬಳಿಕ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಾಗ ಖದೀಮರು ಬಳಸಿದ್ದ ಮೊಬೈಲ್ ನಂಬರ್ ಮಾಹಿತಿ ಪಡೆಯಲಾಗಿತ್ತು. ಹೊರ ಹೋಗಿರುವ ಫೋನ್ ಸಂಖ್ಯೆಗಳಿಗೆ ಕರೆ ಮಾಡಿ ವಿಚಾರಿಸಿದಾಗ ಒಟ್ಟು 27 ಮಂದಿ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ ಎಂದು ನಂತರ ಪೊಲೀಸರು ತಿಳಿಸಿದ್ದಾರೆ.

ಇದೇ ಮೊದಲಲ್ಲ
2015ರಲ್ಲಿ ಡಿಜಿಪಿಯಾಗಿದ್ದ ಓಂಪ್ರಕಾಶ್ಗೆ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಖದೀಮರು ಖಾತೆಯ ವಿವರ ಪಡೆದು 10 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು.ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನೆಡೆಸಿ ದೆಹಲಿ ಮೂಲದ ಅಶ್ರಫ್ ಅಲಿ ಎಂಬಾತನನ್ನು ಬಂಧಿಸಿದ್ದರು. ಚೆನ್ನೈನಲ್ಲೇ ಕುಳಿತು ಅಶ್ರಫ್ ಅಲಿ ಡಿಜಿಪಿ ಓಂ ಪ್ರಕಾಶ್‌ಗೆ ವಂಚಿಸಿದ್ದ.


Click it and Unblock the Notifications