ರಾಜ್ಯದ ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ, ಫ್ರೀ ಬಸ್ ಅಷ್ಟೇ ಅಲ್ಲ ಇನ್ಮುಂದೆ ಈ ಸೇವೆಯೂ ಲಭ್ಯ!
ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಗ್ಯಾರಂಟಿ ಯೋಜನೆಗಳಿಂದ (Guarantee scheme) ಬಹುಪಾಲು ಮಹಿಳೆಯರು ಸಂತಸಗೊಂಡಿದ್ದಾರೆ. ಮಹಿಳೆಯರಿಗೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ್ದ ಸರ್ಕಾರ ಈಗ ಮತ್ತೊಂದು ಮಹತ್ವದ ಪ್ಲ್ಯಾನ್ ರೂಪಿಸಿದೆ.
ಹೌದು, ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಸರ್ಕಾರ ಹೊಸ ಯೋಜನೆಯ ಅನುಷ್ಠಾನಕ್ಕೆ ಎಲ್ಲಾ ಸಿದ್ಧತೆ ನಡೆಸಿದೆ. ಈ ಮೂಲಕ ರಾಜ್ಯದ ಮಹಿಳೆಯರು ಎಲ್ಲಿಗಾದರೂ ಯಾವುದೇ ಭಯವಿಲ್ಲದೆ ಸಂಚರಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಹಾಗಿದ್ರೆ, ಕರ್ನಾಟಕ ಸರ್ಕಾರದ (Government of Karnataka) ಈ ಪ್ಲ್ಯಾನ್ ಯಾವುದು?, ಇದು ಮಹಿಳೆಯರಿಗೆ ಹೇಗೆಲ್ಲಾ ಸಹಾಯಕ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಪ್ಯಾನಿಕ್ ಬಟನ್: ಕರ್ನಾಟಕ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಸಂಚಾರ ಕಲ್ಪಿಸಿಕೊಟ್ಟಿದೆ. ಈ ಗುಡ್ ನ್ಯೂಸ್‌ನೊಂದಿಗೆ ಈಗ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ಉತ್ತಮ ಸೇವೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಎಲ್ಲಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು (Panic button,vehicle tracking system) ಅಳವಡಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಸಂಬಂಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಮಾಹಿತಿ ನೀಡಿದ್ದು, ಬಸ್‌ನಲ್ಲಿ ಇರುವ ಪ್ಯಾನಿಕ್ ಬಟನ್ ಒತ್ತಿದರೆ ತಕ್ಷಣ ಕೆಎಸ್‌ಆರ್‌ಟಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನೆ ಆಗುತ್ತದೆ. ಬಳಿಕ ಅಲ್ಲಿನ ಸಿಬ್ಬಂದಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ಇದರೊಂದಿಗೆ ಜಿಪಿಎಸ್(GPS) ಬಸ್‌ನ ಸ್ಥಳ ಮತ್ತು ವೇಗದಂತಹ ನೈಜ-ಸಮಯದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಅಂದರೆ ಜಿಪಿಎಸ್ ಪ್ರಯಾಣಿಕರಿಗೆ ಬಸ್ಸುಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಲಿದ್ದು, ಇದು ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ ಜೊತೆಗೆ ಬಸ್‌ಗಳ ಆಗಮನದ ಅನಿಶ್ಚಿತತೆಯನ್ನು ಕಡಿಮೆ ಮಾಡಲಿದೆ. ಇದಕ್ಕಾಗಿ ಪ್ರಯಾಣಿಕರು ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ರೈಲ್ವೇಯಲ್ಲಿ ಈ ವ್ಯವಸ್ಥೆ ಲಭ್ಯ ಇದೆ. ಈ ಮೂಲಕ ಪ್ರಯಾಣಿಕರು ರೈಲು ಎಲ್ಲಿ ಬರುತ್ತಿದೆ ಎಂದು ತಕ್ಷಣವೇ ತಿಳಿದುಕೊಳ್ಳಬಹುದು. ಅದೇ ರೀತಿಯ ಕೆಲಸವನ್ನು ಇನ್ಮುಂದೆ ಬಸ್ ಪ್ರಯಾಣಿಕರು ಮಾಡಬಹುದಾಗಿದೆ.

ಈ ಪ್ಯಾನಿಕ್ ಬಟನ್‌ಗಳು ಮತ್ತು ಜಿಪಿಎಸ್ ಅಳವಡಿಕೆಯು ಸಾರ್ವಜನಿಕರಿಗೆ ಸಂಭಾವ್ಯ ಅಪಾಯಗಳು ಮತ್ತು ಅಹಿತಕರ ಘಟನೆಗಳನ್ನು ನಿಭಾಯಿಸಲು ಸಹಾಯ ಮಾಡಲಿದ್ದು, ಈಗಾಗಲೇ ಇದನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಿರ್ಭಯ ಯೋಜನೆಯಡಿ ಬಸ್‌ಗಳಲ್ಲಿ ಅಳವಡಿಸಲಾಗಿದೆ. ಈ ಸಂಬಂಧ ಕೆಎಸ್‌ಆರ್‌ಟಿಸಿ ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (MORTH) ಈ ಡಿವೈಸ್ ಅನ್ನು ಇನ್‌ಸ್ಟಾಲ್ ಮಾಡಲು ಅನುಮೋದನೆ ಕೋರಿ ವಿವರವಾದ ಯೋಜನಾ ವರದಿಯನ್ನು ಕಳುಹಿಸಿತ್ತು.
ಹೆದ್ದಾರಿ ಸಚಿವಾಲಯ (Ministry of Highways) ಈ ಯೋಜನೆಯನ್ನು ಅನುಮೋದಿಸಿದ್ದು, 70% ವೆಚ್ಚವನ್ನು ಈ ಕೆಲಸಕ್ಕೆ ಭರಿಸಲಿದೆ. ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸೇರಿದಂತೆ ಇನ್ನೂ ಎರಡು ನಿಗಮಗಳು ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸಲಿವೆ. ಹಾಗೆಯೇ ಈ ಯೋಜನೆಗೆ 30 ಕೋಟಿ ವೆಚ್ಚ ಮಾಡಲಾಗುವುದು ಎಂದು ಪಾಟೀಲ್ ಹೇಳಿದ್ದಾರೆ.
ಈ ನಡುವೆ ಸರ್ಕಾರ ಮತ್ತೊಂದು ಮಹತ್ವದ ಕೆಲಸಕ್ಕೂ ಮುಂದಾಗಿದೆ. ಅದೇನೆಂದರೆ ಸೈಬರ್ ಅಪರಾಧಗಳನ್ನು (Cyber crime) ನಿಗ್ರಹಿಸುವ ಮತ್ತು ಡೇಟಾ ಗೌಪ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಸೈಬರ್ ಭದ್ರತಾ ನೀತಿ 2023 (Cyber Security Policy 2023) ಅನ್ನು ಕ್ಯಾಬಿನೆಟ್ ಅನುಮೋದಿಸಿದೆ. ಸೈಬರ್ ಭದ್ರತೆ ಮತ್ತು ಡೇಟಾ ಗೌಪ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ನೀತಿಯ ಉದ್ದೇಶವಾಗಿದೆ.
ಈ ಸಂಬಂಧ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್‌ಗಳು ಜನರಿಗೆ ಜಾಗೃತಿ ಮೂಡಿಸಬೇಕಿದೆ. ಅಷ್ಟು ಮಾತ್ರವಲ್ಲದೆ ಅವುಗಳನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ. ಅದರಂತೆ ರಾಜ್ಯ ಸರ್ಕಾರದ ಹೊಸ ಸಾಫ್ಟ್‌ವೇರ್ ಮೂಲಕ ಇದನ್ನು ಮಾಡಲಾಗುತ್ತಿದ್ದು, ಇದರಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಮತ್ತು ತಾಂತ್ರಿಕ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳು ಈ ನೀತಿಯ ವ್ಯಾಪ್ತಿಯೊಳಗೆ ಸೇರಲಿವೆ.


Click it and Unblock the Notifications








