ಮ್ಯಾನ್‌ಹೋಲ್‌ಗಳಲ್ಲಿ ಪ್ರಾಣ ಉಳಿಸುವ ಸ್ಮಾರ್ಟ್ ಡಿವೈಸ್; ಇದರ ಕೆಲಸ ಹೇಗೆ?
ಮಳೆಗಾಲ ಆರಂಭ ಆದರೆ ಸಾಕು ಅದೆಷ್ಟೋ ಅನಾಹುತಗಳು ಕಣ್ಣು ಮುಚ್ಚಿ ಬಿಡುವುದರ ಒಳಗೆ ನಡೆದುಬಿಡುತ್ತವೆ. ಅದರಲ್ಲೂ ಮಹಾನಗರಗಳಲ್ಲಿ ಸಾಕಷ್ಟು ಜನ ಮಹಾ ಮಳೆಗೆ ಪ್ರಾಣ ಕಳೆದುಕೊಳ್ಳುತ್ತಾರೆ. ಇದಕ್ಕೆ ಕಾರಣ ಮ್ಯಾನ್‌ಹೋಲ್‌ಗಳು ಎಂದರೆ ತಪ್ಪಾಗಲಾರದು. ಈ ಕಾರಣಕ್ಕೆ ಒಂದು ಹೊಸ ಡಿವೈಸ್ ಅನ್ನು ಅನ್ವೇಷಣೆ ಮಾಡಲಾಗಿದೆ.
ಹೌದು, ಉತ್ತರ ಕರ್ನಾಟಕದ ಹಲವು ಭಾಗದಲ್ಲಿ ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ಮಹಾರಾಷ್ಟ್ರ ರಾಜ್ಯದಲ್ಲಿ ಮಳೆಯಿಂದ ಹಲವಾರು ಸಾವು ನೋವುಗಳು ಸಂಭವಿಸುತ್ತಿದ್ದು, ಈ ಇದಕ್ಕೆ ಕಡಿವಾಣ ಹಾಕಲು ಮಹಾರಾಷ್ಟ್ರ ಈ ಪಾಲಿಕೆ ಮಹತ್ವದ ನಿರ್ಧಾರ ಮಾಡಿದೆ. ಅಂದರೆ ಅನಾಹುತಗಳಿಗೆ ಕಾಣರವಾಗುವ ಮ್ಯಾನ್‌ಹೋಲ್‌ಗಳಲ್ಲಿ ಈ ಸ್ಮಾರ್ಟ್ ಡಿವೈಸ್ ಅಳವಡಿಸಲಾಗುತ್ತಿದೆ. ಹಾಗಿದ್ರೆ, ಏನಿದು ಹೊಸ ಡಿವೈಸ್?, ಇದರಿಂದ ಏನೆಲ್ಲಾ ಲಾಭ? ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಮ್ಯಾನ್‌ಹೋಲ್‌ಗೆ ಸ್ಮಾರ್ಟ್ ಡಿವೈಸ್: ಮಹಾರಾಷ್ಟ್ರದ ಪಾಲಿಕೆ ಡಿ ವಾರ್ಡ್, ಗ್ರಾಂಟ್ ರಸ್ತೆಯಲ್ಲಿ ಮ್ಯಾನ್‌ಹೋಲ್ ಮುಚ್ಚಳದ ಅಡಿಯಲ್ಲಿ ಈ ಸ್ಮಾರ್ಟ್ ಡಿವೈಸ್ ಅನ್ನು ಅಳವಡಿಸಲಾಗುತ್ತಿದ್ದು, ನೀರು ಹರಿಯುವ ಸಂದರ್ಭದಲ್ಲಿ ಏನಾದರೂ ಸಮಸ್ಯೆ ಉಂಟಾದಾಗ ಅಥವಾ ಯಾರಾದರೂ ಮುಚ್ಚಳವನ್ನು ತೆಗೆದಾಗ ಇದು ಸೈರನ್ ಬಾರಿಸುತ್ತದೆ. ಅಷ್ಟು ಮಾತ್ರವಲ್ಲದೆ ಹತ್ತಿರದ ಬಿಎಂಸಿ ಕೇಂದ್ರಗಳಿಗೆ ಎಚ್ಚರಿಕೆಯ ಮಾಹಿತಿಯನ್ನು ನೀಡುತ್ತದೆ.
ಮಹಾರಾಷ್ಟ್ರದ ಪಾಲಿಕೆ ಯೋಗಿಕವಾಗಿ ಈ ಕಾರ್ಯ ಮಾಡುತ್ತಿದ್ದು, ಸದ್ಯಕ್ಕೆ 14 ಡಿವೈಸ್‌ಗಳನ್ನು ಈಗ ಇನ್‌ಸ್ಟಾಲ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಅಂದರೆ ವರ್ಲಿ ಬಿಡಿಡಿ ಚಾಲ್, ಜೆರ್ಬೈ ರಸ್ತೆ, ಪರೇಲ್, ಸೆವ್ರಿ ಕ್ರಾಸ್ ಲೇನ್, ಡಿಜಿ ಮಹಾಜನಿ ರಸ್ತೆ ಸೆವ್ರಿ, ಗ್ರಾಂಟ್ ರೋಡ್‌ನ ತ್ರ್ಯಂಬಕ್ ಪರಶುರಾಮ್ ಲೇನ್‌ನಲ್ಲಿ ಒಂದು ಮತ್ತು ಗ್ರಾಂಟ್ ರಸ್ತೆ, ವರ್ಲಿ, ಪರೇಲ್ ಮತ್ತು ದಾದರ್‌ನಲ್ಲಿ ತಲಾ ಎರಡು ಡಿವೈಸ್‌ಗಳನ್ನು ಇನ್‌ಸ್ಟಾಲ್ ಮಾಡಲಾಗುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಇತರೆ ಪ್ರದೇಶಗಳಲ್ಲಿಯೂ ಡಿವೈಸ್‌ಗಳನ್ನು ಇನ್‌ಸ್ಟಾಲ್ ಮಾಡುವ ಕೆಲಸ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಹಾಗೆಯೇ ಎಂಜಿನಿಯರ್‌ಗಳು ಈ ಡಿವೈಸ್ ಅನ್ನು ಕಂಡುಹಿಡಿದಿದ್ದಾರಾದರೂ ನಾಗರಿಕ ಸಂಸ್ಥೆಯು ಅದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಸಂಸ್ಥೆಗಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ. ಆರಂಭದಲ್ಲಿ ನಗರದ 14 ಮ್ಯಾನ್‌ಹೋಲ್‌ಗಳಲ್ಲಿ ಈ ಡಿವೈಸ್ ಅಳವಡಿಸುತ್ತೇವೆ. ಅದರ ನಂತರ, ಇದನ್ನು ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಸ್ಥಾಪಿಸಲಾಗುವುದು. ಈ ಡಿವೈಸ್‌ಗಳಿಗೆ ಬಿಎಂಸಿ ಸುಮಾರು 11 ಲಕ್ಷ ವೆಚ್ಚ ಮಾಡಲಿದೆ ಎಂದು ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ.
ಈ ಡಿವೈಸ್ ಹೇಗೆ ಕೆಲಸ ಮಾಡುತ್ತದೆ?: ಇದನ್ನು ನೋಡಿದರೆ ಒಂದು ಸಾಮಾನ್ಯ ಕಬ್ಬಿಣದಿಂದ ಜೋಡಿಸಿದ ವಸ್ತುವಿನಂತೆ ಕಾಣಿಸುತ್ತದೆ. ಆದರೆ, ಇದರ ಕೆಲಸ ಮಾತ್ರ ಅಸಾಮಾನ್ಯ ಎಂದು ಹೇಳಲಾಗುತ್ತದೆ. ಇದು 30 ಸೆಂಟಿಮೀಟರ್ ಉದ್ದ ಇದ್ದು, ಇದನ್ನು ಹೇಗೆ ಬೇಕೋ ಹಾಗೆ ಹೊಂದಿಸಿಕೊಳ್ಳಬಹುದಾಗಿದೆ. ಈ ಮೂಲಕ ಯಾವುದೇ ಮ್ಯಾನ್‌ಹೋಲ್‌ನಲ್ಲೂ ಸಹ ಇದನ್ನು ಇರಿಸಲು ಸಹಾಯಕವಾಗುವಂತೆ ನಿರ್ಮಾಣ ಮಾಡಲಾಗಿದೆ.

ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುವ ಈ ಡಿವೈಸ್ ಎರಡು ವರ್ಷಗಳ ಜೀವಿತಾವಧಿಯನ್ನು ಹೊಂದಿದೆ. ಇದರೊಂದಿಗೆ ಈ ಡಿವೈಸ್ ನೀಡುವ ಎಚ್ಚರಿಕೆಗಳನ್ನು ಸ್ವೀಕರಿಸಲು ಬಿಎಂಸಿಯು ವರ್ಸೋವಾದ ಗ್ರಾಂಟ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿ ಬಿ ವಾರ್ಡ್ ಮತ್ತು ಘಾಟ್‌ಕೋಪರ್‌ನ ಪಂತ್ ನಗರದಲ್ಲಿ ಕಂಟ್ರೋಲ್ ರೂಂಗಳನ್ನು ತೆರೆದಿದೆ. ಇದರಿಂದಾಗಿ ತಕ್ಷಣಕ್ಕೆ ಏನಾದರೂ ಸಮಸ್ಯೆ ಉಂಟಾದಾಗ ಅಧಿಕಾರಿಗಳು ಅಲ್ಲಿಗೆ ಧಾವಿಸುತ್ತಾರೆ.
ತೆರೆದ ಮ್ಯಾನ್‌ಹೋಲ್‌ಗಳು ಸಾವಿನ ಬಲೆಗಳಾಗಿವೆ: ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಈ ಮ್ಯಾನ್‌ವೇಲ್‌ಗಳು ಭಯಾನಕ ಸಮಸ್ಯೆಗಳನ್ನೇ ನಿರ್ಮಾಣ ಮಾಡುತ್ತವೆ. ಅದರಲ್ಲೂ
ಮುಂಬೈನಲ್ಲಿ ತೆರೆದ ಮ್ಯಾನ್‌ಹೋಲ್‌ಗಳನ್ನು ಸಾವಿನ ಬಲೆಗಳು ಎಂದು ಕರೆಯಲಾಗುತ್ತದೆ. ಹಲವು ವರ್ಷಗಳಿಂದ ಈ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ ಹಲವಾರು ನಿದರ್ಶನಗಳು ಇಂದಿಗೂ ಜನರನ್ನು ಕಾಡುತ್ತಿವೆ.
ಅದರಲ್ಲೂ ಮಳೆಗಾಲದಲ್ಲಿ ನೀರು ತುಂಬಿ ತೆರೆದ ಮ್ಯಾನ್‌ಹೋಲ್‌ಗಳಲ್ಲಿ ಜನರು ಬೀಳುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ದುರಂತದ ವಿಷಯ ಏನೆಂದರೆ ಕೆಲವು ಜನರು ಮ್ಯಾನ್‌ಹೋಲ್ ಮುಚ್ಚಳಗಳನ್ನು ಕದಿಯುವ ಕೆಲಸ ಮಾಡುತ್ತಾರಂತೆ. ಇನ್ನೂ ಕೆಲವರು ಮಳೆನೀರು ಸಲೀಸಾಗಿ ಹೋಗಲಿ ಎಂದು ಈ ಮುಚ್ಚಳ ತೆರೆದಿರುತ್ತಾರಂತೆ. ಈ ರೀತಿ ಮಾಡುವುದರಿಂದ ಈ ಬಗ್ಗೆ ಅರಿವಿಲ್ಲದ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಾಂಬೆ ಹೈಕೋರ್ಟ್ ಬಿಎಂಸಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಜೊತೆಗೆ ಕಬ್ಬಿಣದ ಜಾಲರಿ ಅಳವಡಿಸದ ಮತ್ತು ತೆರೆದ ಮ್ಯಾನ್‌ಹೋಲ್‌ಗಳನ್ನು ಮುಚ್ಚಬೇಕು ಎಂದು ಆದೇಶ ನೀಡಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಬಿಎಂಸಿ ಈ ಡಿವೈಸ್ ಅಳವಡಿಸಿಕೊಳ್ಳುತ್ತಿದೆ. ಇದೇ ರೀತಿಯ ಡಿವೈಸ್‌ಗಳು ಬೆಂಗಳೂರು ಸೇರಿದಂತೆ ಅನೇಕ ಮಹಾನಗರಗಳಿಗೆ ಅನಿವಾರ್ಯ ಎಂದು ಹೇಳಿದರೆ ತಪ್ಪಾಗಲಾರದು.


Click it and Unblock the Notifications








