ನಕಲಿ ಆಪ್‌ಗಳಿಂದ ಸಮಸ್ಯೆ ಆಗಿದೆಯಾ..? ನಕಲಿ ಆಪ್‌ಗಳನ್ನು ಕಂಡುಹಿಡಿಯೋದು ಹೇಗೆ..?


ಆಪ್ಸ್‌, ಆಪ್ಸ್, ಆಪ್ಸ್‌ ಎಲ್ಲಿ ನೋಡಿದರಲ್ಲಿ ಅಪ್ಲಿಕೇಶನ್‌ಗಳು ಕಾಣಸಿಗುತ್ತವೆ. ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಸ್ಮಾರ್ಟ್‌ವಾಚ್‌, ಲ್ಯಾಪ್‌ಟಾಪ್‌ ಮತ್ತು ಟಿವಿಯವರೆಗೂ ಆಪ್‌ ಸಾಮ್ರಾಜ್ಯ ವಿಸ್ತರಿತವಾಗಿದ್ದು, ಅಪ್ಲಿಕೇಷನ್‌ಗಳಿಲ್ಲದಿದ್ದರೆ, ಯಾವುದೇ ಸಾಧನ ಪರಿಪೂರ್ಣವಾಗದ ಸ್ಥಿತಿ ತಲುಪಿದೆ. ಅದು ಆಂಡ್ರಾಯ್ಡ್, ಐಒಎಸ್ ಅಥವಾ ವಿಂಡೋಸ್ ಯಾವುದೇ ಆಗಿರಲಿ, ಡೌನ್‌ಲೋಡ್ ಮಾಡಬಹುದಾದ ಸಾಕಷ್ಟು ಉಚಿತ ಅಪ್ಲಿಕೇಶನ್‌ಗಳಿವೆ. ಶಾಪಿಂಗ್ ಮತ್ತು ಉತ್ಪಾದಕತೆಯಿಂದ ಹಿಡಿದು ಮನರಂಜನೆ ಮತ್ತು ಆಟಗಳವರೆಗೆ ಎಲ್ಲಾ ವರ್ಗಗಳಲ್ಲೂ ಉಚಿತ ಆಪ್‌ಗಳು ದೊರೆಯುತ್ತವೆ. ಆದರೆ, ನಕಲಿ ಆಪ್‌ಗಳ ಸಮಸ್ಯೆ ಬಳಕೆದಾರರನ್ನು ಬಾಧಿಸುತ್ತಿದೆ.

ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ಪ್ಲೇ ಸ್ಟೋರ್‌ನಲ್ಲಿ ಹಲವಾರು ಭದ್ರತಾ ಪರಿಶೀಲನೆಗಳನ್ನು ಗೂಗಲ್ ಸೇರಿಸಿದೆ. ಆದರೂ, ವಂಚಕ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿರುವ ಸಂದರ್ಭಗಳಿವೆ. ಅಂತಹ ಅಪ್ಲಿಕೇಶನ್‌ಗಳ ಬಗ್ಗೆ ವರದಿಯಾದಾಗಲೆಲ್ಲಾ, ಗೂಗಲ್‌ ಅವುಗಳನ್ನು ತೆಗೆದುಹಾಕುತ್ತದೆ. ಆದರೆ, ಕೆಲವು ಆಪ್‌ಗಳು ಇನ್ನೂ ಪತ್ತೆಯಾಗದೆ ಉಳಿದಿವೆ.

ನಕಲಿ ಆಪ್‌ಗಳ ಸಮಸ್ಯೆ

ಕೆಲವು ಅಪ್ಲಿಕೇಶನ್‌ಗಳು ಕಿರಿಕಿರಿಗೊಳಿಸುವ ಬ್ಯಾನರ್ ಜಾಹೀರಾತುಗಳನ್ನು ಪ್ರದರ್ಶಿಸಿದರೆ, ಇತರ ಆಪ್‌ಗಳು ಗಂಭೀರ ಬೆದರಿಕೆಯನ್ನು ಉಂಟುಮಾಡಬಹುದು. ಸಂಪರ್ಕಗಳು, ನಿಮ್ಮ ಸಂದೇಶಗಳನ್ನು ಓದುವುದು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಕದಿಯುವಂತಹ ಮಾಲ್‌ವೇರ್ ಹೊಂದಿರುವ ಅಪ್ಲಿಕೇಶನ್‌ಗಳಿದ್ದು, ನಿಮ್ಮ ಸ್ಟೋರೆಜ್‌, ಕ್ಯಾಮೆರಾ ಮತ್ತು ಹೆಚ್ಚಿನವುಗಳಿಗೆ ಪ್ರವೇಶ ಪಡೆಯುತ್ತವೆ. ನಂತರ, ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದ ಲಾಭ ಮಾಡುವ ಆಪ್‌ಗಳು ಕೂಡ ಪ್ಲೇ ಸ್ಟೋರ್‌ನಲ್ಲಿ ಕಂಡುಬರುತ್ತವೆ.

ಬ್ಯಾಂಕಿಂಗ್‌ ಮಾಲ್‌ವೇರ್‌

ಕೆಲವು ತಿಂಗಳುಗಳ ಹಿಂದೆ, ಬ್ಯಾಂಕಿಂಗ್ ಮಾಲ್‌ವೇರ್ ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಟ್ರೆಂಡ್‌ ಮೈಕ್ರೋ ಗುರುತಿಸಿತ್ತು, ವಾಸ್ತವವಾಗಿ, 2018ರಲ್ಲಿ, ಶೇ.4ರಷ್ಟು ಭಾರತೀಯ ಬಳಕೆದಾರರು ಬ್ಯಾಂಕಿಂಗ್ ಟ್ರೋಜನ್‌ಗಳಿಂದ ಪೆಟ್ಟು ತಿಂದಿದ್ದಾರೆ ಎಂದು ಕ್ಯಾಸ್‌ಪರ್ಸ್ಕಿ ಲ್ಯಾಬ್ ಹೇಳಿದೆ. ಈ ಆಪ್‌ಗಳು, ದಾಳಿಕೋರರಿಗೆ ಬ್ಯಾಂಕ್ ಖಾತೆ ಸಂಖ್ಯೆ, ಪಾಸ್‌ವರ್ಡ್‌ಗಳನ್ನು ನೀಡುವುದಲ್ಲದೇ, ಹಣ ವರ್ಗಾಯಿಸಲು ಕೂಡ ಅನುಮತಿಸುತ್ತದೆ. ಹಾಗಾದರೆ, ನಕಲಿ ಅಪ್ಲಿಕೇಶನ್‌ಗಳನ್ನು ಗುರುತಿಸುವುದು ಹೇಗೆ ಅಂತೀರಾ..? ಇದಕ್ಕಾಗಿಯೇ ಕೆಲವು ತಂತ್ರಗಳನ್ನು ಇಲ್ಲಿ ನೀಡಲಾಗಿದೆ. ಒಂದ್ಸಲ ನೋಡ್ಕೊಂಡು ಬನ್ನಿ..

ಹಂತ 1

ನೀವು ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಾಗಿ ಹುಡುಕುವಾಗ, ಒಂದೇ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್‌ಗಳು ನಿಮಗೆ ಕಂಡುಬರುತ್ತವೆ. ಅವುಗಳಲ್ಲಿ ಸಾಮಾನ್ಯವಾಗಿ ಹೆಸರು ಮತ್ತು ವಿವರಣೆಯಲ್ಲಿ ಕಾಗುಣಿತ ತಪ್ಪುಗಳು ವ್ಯತ್ಯಾಸವನ್ನು ತೋರಿಸುತ್ತವೆ. ಡೌನ್‌ಲೋಡ್ ಮಾಡುವ ಮೊದಲು ನೀವು ಅಪ್ಲಿಕೇಶನ್‌ನ ವಿವರಣೆಯನ್ನು ಓದಬೇಕಿರುವುದು ಅವಶ್ಯ.

ಹಂತ 2

ನೀವು ಅಪ್ಲಿಕೇಶನ್ ವಿವರಣೆ ಪುಟವನ್ನು ಪರಿಶೀಲಿಸುತ್ತಿರುವಾಗ, "ಸಂಪಾದಕರ ಆಯ್ಕೆ" ಮತ್ತು "ಉನ್ನತ ಡೆವಲಪರ್" ನಂತಹ ಟ್ಯಾಗ್‌ಗಳನ್ನು ನೋಡಿ. ಈ ಟ್ಯಾಗ್‌ಗಳಿದ್ದರೆ, ಅವು ನಕಲಿ ಅಪ್ಲಿಕೇಶನ್‌ಗಳಾಗುವ ಸಾಧ್ಯತೆ ಕಡಿಮೆ. ಮತ್ತು ಡೌನ್‌ಲೋಡ್ ಮಾಡುವ ಮೊದಲು ಪಬ್ಲಿಷರ್‌ ವೆಬ್‌ಸೈಟ್‌ನ್ನು ಒಂದು ಬಾರಿ ನೋಡುವುದು ಉತ್ತಮ.

ಹಂತ 3

ಜನಪ್ರಿಯ ಅಪ್ಲಿಕೇಶನ್‌ಗಳಾದ ವಾಟ್ಸ್‌ಆಪ್, ಫೇಸ್‌ಬುಕ್, ಪಬ್‌ಜಿ ಮೊಬೈಲ್ ಮತ್ತು ಹೆಚ್ಚಿನದನ್ನು ಡೌನ್‌ಲೋಡ್ ಮಾಡಿದಾಗ, ಡೌನ್‌ಲೋಡ್ ಕೌಂಟ್‌ ಖಂಡಿತವಾಗಿಯೂ ಹೆಚ್ಚಿರುತ್ತದೆ. ಆದಾಗ್ಯೂ, ಒಂದು ಅಪ್ಲಿಕೇಶನ್‌ ಸುಮಾರು 5,000 ಅಥವಾ ಅದಕ್ಕಿಂತ ಕಡಿಮೆ ಡೌನ್‌ಲೋಡ್‌ ಆಗಿದ್ದರೆ, ಅದು ನಕಲಿ ಅಪ್ಲಿಕೇಶನ್‌ ಆಗುವ ಸಾಧ್ಯತೆಗಳು ಹೆಚ್ಚು.

ಹಂತ 4

ಸ್ಕ್ರೀನ್‌ಶಾಟ್‌ಗಳ ಪರಿಶೀಲನೆ ಅಪ್ಲಿಕೇಶನ್‌ನ ಬಗ್ಗೆ ಖಚಿತವಾಗಿ ತಿಳಿಯುವ ಇನ್ನೊಂದು ಮಾರ್ಗವಾಗಿದೆ. ನಕಲಿ ಅಪ್ಲಿಕೇಶನ್ ಸ್ಕ್ರೀನ್‌ಶಾಟ್‌ಗಳಲ್ಲಿ ವಿಲಕ್ಷಣ ಪದಗಳು ಮತ್ತು ವಿಚಿತ್ರ ಫೋಟೋಗಳಿರುವ ಸಾಧ್ಯತೆಯಿದೆ. ಅಂತೆಯೇ, ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಪರಿಶೀಲಿಸಿ.

ಹಂತ 5

ಅಪ್ಲಿಕೇಶನ್ ಪ್ರಕಟವಾಗಿರುವ ದಿನಾಂಕವನ್ನು ಒಮ್ಮೆ ಗಮನಿಸಿ. ಜನಪ್ರಿಯ ಕಂಪನಿಯ ಹೊಸ ಅಪ್ಲಿಕೇಶನ್‌ ಆಗಿದ್ದರೆ, ಅದು ಇತ್ತೀಚಿನ ಪ್ರಕಟಣೆ ದಿನಾಂಕವನ್ನು ಹೊಂದಿರುತ್ತದೆ. ಆದರೆ, ಹೆಚ್ಚಿನ ನಕಲಿ ಅಪ್ಲಿಕೇಶನ್‌ಗಳು ಇತ್ತೀಚಿನ ಪ್ರಕಟಣೆ ದಿನಾಂಕವನ್ನು ಹೊಂದಿರುತ್ತವೆ. ನಿಜವಾದ ಅಪ್ಲಿಕೇಶನ್ ಅಪ್‌ಡೇಟೆಡ್‌ ಆನ್‌ ಎಂಬ ಅಂಶವನ್ನು ಹೊಂದಿದ್ದು, ಇತ್ತೀಚೆಗೆ ಅಪ್‌ಡೇಟ್‌ ಆಗಿರುತ್ತದೆ.

ಹಂತ 6

ಕೊನೆಯದಾಗಿ, ನಕಲಿ ಅಪ್ಲಿಕೇಶನ್‌ಗಳನ್ನು ಹುಡುಕುವಾಗ ಇದು ಪ್ರಮುಖ ಅಂಶವಾಗುತ್ತದೆ. ಅಪ್ಲಿಕೇಶನ್ ಕೇಳುತ್ತಿರುವ ಅನುಮತಿಗಳನ್ನು ನೋಡಿ. ನೀವು ಥರ್ಡ್‌ ಪಾರ್ಟಿ ಮೆಸೇಜಿಂಗ್‌ ಆಪ್‌ನ್ನು ಡೌನ್‌ಲೋಡ್‌ ಮಾಡಿರುತ್ತೀರಿ, ಇದಕ್ಕೆ ಫೋನ್ ಬುಕ್‌, ಡಯಲರ್ ಮತ್ತು ಬ್ಯಾಕಪ್‌ ಸಂಗ್ರಹಣೆಗೆ ಅನುಮತಿ ಅಗತ್ಯವಿರುತ್ತದೆ. ಆದರೆ ಅದು ಕ್ಯಾಮೆರಾ, ಆಡಿಯೋ ಮತ್ತು ಹೆಚ್ಚಿನವುಗಳಿಗೆ ಅನುಮತಿಗಳನ್ನು ಕೇಳುತ್ತಿದ್ದರೆ ಒಂದಿಷ್ಟು ಯೋಚಿಸುವುದು ಅವಶ್ಯಕ. ಅಲ್ಲದೆ, ನೀವು ಅಪ್ಲಿಕೇಶನ್‌ಗೆ ಅಂತಹ ಅನುಮತಿಗಳನ್ನು ನೀಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

Most Read Articles
Best Mobiles in India
Read More About: Apps news features how to

Have a great day!
Read more...

English Summary

How To Spot Fake Apps On Google Play Store