OTPಯಿಂದ ಲಕ್ಷಾಂತರ ಹಣ ಗುಳುಂ..! ವಂಚಕರಿಗೆ ಸಿಕ್ಕಿದೆ ಹೊಸ ಅಸ್ತ್ರ..! ಇರಲಿ ಎಚ್ಚರ..!


ಭಾರತದಲ್ಲಿ ನೋಟ್‌ ಬ್ಯಾನ್‌ ಆದ ನಂತರ ಜನ ಡಿಜಿಟಲ್‌ ಹಣಕಾಸಿನ ವ್ಯವಹಾರದ ಕಡೆ ಮುಖ ಮಾಡಿದರು. ಇದರಿಂದ ಜೀವನ ಒಂದು ಮಟ್ಟಕ್ಕೆ ಸುಧಾರಿಸಿತು ಎನ್ನುವಾಗಲೇ ಡಿಜಿಟಲ್‌ ಮೋಸಗಳು ಹೆಚ್ಚುತ್ತಿದ್ದು, ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.

Advertisement

ವಂಚಕರು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆ ಹೊಸ ಮಾರ್ಗ ಯಾವುದು ಎಂದು ಕೇಳಿದರೆ ನೀವು ಬೆಚ್ಚಿ ಬಿಳುತ್ತೀರಿ. ಅಂತಹ ವಂಚನೆಯೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದ್ದು, ಪೊಲೀಸರನ್ನು ಕೂಡ ದಂಗುಬಡಿಸಿದೆ. ಆಗಿದ್ದರೆ, ಆ ಪ್ರಕರಣವೇನು..? ವಂಚನೆಗೆ ಬಳಸಿದ ಮಾರ್ಗ ಯಾವುದು..? ಅದರಿಂದ ನೀವು ಪಾರಾಗುವುದು ಹೇಗೆ..? ಎಂಬುದನ್ನು ಮುಂದೆ ನೋಡಿ..

Advertisement

ಇತ್ತೀಚೆಗೆ 11.5 ರೂ. ಲಕ್ಷ ವಂಚನೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವ್ಯಕ್ತಿ ನೀಡಿದ ದೂರಿನಿಂದ ಹೊಸ ರೀತಿಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಇತ್ತೀಚೆಗೆ ತಾನೇ ತನ್ನ ಬ್ಯಾಂಕ್‌ ಖಾತೆಯಿಂದ ತನಗೆ ಗೊತ್ತಿಲ್ಲದೇ 11.5 ಲಕ್ಷ ರೂ. ಕಳೆದುಕೊಂಡಿದ್ದ. ಆತ ನವದೆಹಲಿಯ ಅಶೋಕ್‌ ಹೋಟೆಲ್‌ನ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಬ್ಯಾಂಕ್‌ ಖಾತೆಯನ್ನು ಹೊಂದಿದ್ದ.

ಮೊಬೈಲ್‌ ನಂಬರ್‌ ಬದಲಾವಣೆ

ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಮತ್ತು ಬ್ಯಾಂಕ್‌ ಅಧಿಕಾರಿಗಳನ್ನು ವಿಚಾರಿಸಿದ ನಂತರ ಗ್ರಾಹಕನ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲಾಗಿದೆ ಎಂದು ಕಂಡುಹಿಡಿದಿದ್ದಾರೆ. ಆ ನಂಬರ್ ಮೂಲಕ ಕಳ್ಳರು ಹಣವನ್ನು ವರ್ಗಾವಣೆ ಮಾಡಿಕೊಂಡು ವಹಿವಾಟು ನಡೆಸಿದ್ದಾರೆ.

ಹೇಗೆ ನಡೆಯುತ್ತೇ ಮೋಸ..?

ಈ ರೀತಿ ವಂಚನೆಯನ್ನು ಮಾಡುವವರು ತಮ್ಮ ಗುರಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಥರ್ಡ್‌ ಪಾರ್ಟಿ ಮಾರಾಟಗಾರರಿಂದ ಡಾಟಾವನ್ನು ಪಡೆಯುತ್ತಾರೆ. ಅದಲ್ಲದೇ ಮುಂದಿನ ವಂಚನೆಗಳ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಲು ಹ್ಯಾಕರ್‌ಗಳ ಸಂಪರ್ಕವನ್ನು ಹೊಂದಿರುತ್ತಾರೆ.

ನಿಮ್ಮ ವೈಯಕ್ತಿಕ ಮಾಹಿತಿಯೇ ಟಾರ್ಗೇಟ್..!

ವಂಚಕರಿಗೆ ನಿಮ್ಮ ವೈಯಕ್ತಿಕ ಮಾಹಿತಿಯೇ ಟಾರ್ಗೇಟ್‌ ಆಗಿರುತ್ತದೆ. ಮುಖ್ಯವಾಗಿ ನಿಮ್ಮ ಮೊಬೈಲ್‌ ಸಂಖ್ಯೆ ಅವರಿಗೆ ಪ್ರಮುಖವಾಗುತ್ತದೆ. ಆದ್ದರಿಂದ, ನೀವು ನಿಮ್ಮ ಫೋನ್ ಸಂಖ್ಯೆಯನ್ನು ಯಾರೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದರ ಕುರಿತು ಜಾಗರೂಕರಾಗಿರಿ.

ಮುಂದಿನ ಹಂತ ಡೈರೆಕ್ಟ್‌ ಬ್ಯಾಂಕ್‌

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದ ನಂತರ ವಂಚಕರು ನೇರವಾಗಿ ಬ್ಯಾಂಕ್‌ನಲ್ಲಿ ತಮ್ಮ ಮುಂದಿನ ಹಂತವನ್ನು ಮುಂದುವರೆಸುತ್ತಾರೆ. ತಾವೂ ವಂಚಿಸುತ್ತಿರುವ ಗ್ರಾಹಕರ ಹೆಸರಿನಲ್ಲಿ ಮೊಬೈಲ್‌ ನಂಬರ್‌ ಬದಲಾಯಿಸುವ ಕುರಿತು ಮನವಿಯನ್ನು ಬ್ಯಾಂಕ್‌ಗೆ ಸಲ್ಲಿಸುತ್ತಾರೆ.

ಬ್ಯಾಂಕ್‌ ಅಧಿಕಾರಿಗಳು ಭಾಗಿ ಸಾಧ್ಯತೆ

ಬ್ಯಾಂಕ್‌ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡದೇ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುತ್ತಾರೆ. ವಂಚಕರ ಜತೆ ಬ್ಯಾಂಕ್‌ ಅಧಿಕಾರಿಗಳು ಭಾಗಿಯಾಗಿದ್ದಾಗ ಮಾತ್ರ ಇದು ಸಂಭವಿಸುವುದು ಹೆಚ್ಚು.

ಹೊಸ ಸಂಖ್ಯೆಯೊಂದಿಗೆ ವಹಿವಾಟು

ಈಗ ನಿಮ್ಮ ಮೊಬೈಲ್‌ ಸಂಖ್ಯೆ ಬ್ಯಾಂಕ್‌ನಲ್ಲಿ ಬದಲಾಗಿರುತ್ತದೆ. ಹೊಸ ಸಂಖ್ಯೆಯೊಂದಿಗೆ ವಂಚಕರು ವಹಿವಾಟನ್ನು ಮಾಡುತ್ತಾರೆ. OTP ಕೂಡ ಹೊಸ ಮೊಬೈಲ್‌ ಸಂಖ್ಯೆಗೆ ಬರುವುದರಿಂದ ನಿಮ್ಮ ಅಕೌಂಟ್‌ನಲ್ಲಿನ ದುಡ್ಡು ಖಾಲಿಯಾಗುವುದು ನಿಮಗೆ ಗೊತ್ತಾಗುವುದೇ ಇಲ್ಲ.

ನೆಟ್‌ಬ್ಯಾಂಕಿಂಗ್‌ ಬಳಕೆ

ಪ್ರತಿ ವಹಿವಾಟಿಗೂ ವಂಚಕರು ನೆಟ್‌ಬ್ಯಾಂಕಿಂಗ್‌ ಮೊರೆ ಹೋಗುತ್ತಾರೆ. ಏಕೆಂದರೆ ನೆಟ್‌ಬ್ಯಾಂಕಿಂಗ್‌ಗೆ OTP ಮಾತ್ರ ಅವಶ್ಯವಾಗಿದ್ದು, ಅದು ಹೊಸ ನಂಬರ್‌ಗೆ ಬರುವುದರಿಂದ ವಂಚಕರಿಗೆ ಬಹಳ ಸುಲಭವಾಗುತ್ತದೆ. ಇದರಿಂದ ನಿಮಗೆ ನಿಮ್ಮ ಅಕೌಂಟ್‌ನಲ್ಲಿ ದುಡ್ಡು ಖಾಲಿಯಾಗುತ್ತಿರುವ ಒಂದು ಸಣ್ಣ ಸುಳಿವು ಕೂಡ ಸಿಗುವುದಿಲ್ಲ.

ಎಟಿಎಂ, ಚೆಕ್‌ ಮೂಲಕವೂ ಡ್ರಾ

ಒಂದು ಬಾರಿ ಬ್ಯಾಂಕ್‌ನಲ್ಲಿ ಮೊಬೈಲ್‌ ನಂಬರ್‌ ಬದಲಾಯಿತೆಂದರೆ ಸಾಕು. ಆ ನಂತರ ವಂಚಕರು ಎಟಿಎಂ ಮತ್ತು ಚೆಕ್‌ ಮೂಲಕವು ಹಣವನ್ನು ಡ್ರಾ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.

ಮೊಬೈಲ್‌ ಸಂಖ್ಯೆ ನೀಡುವ ಮುನ್ನ ಇರಲಿ ಎಚ್ಚರ

ನಿಮ್ಮ ಮೊಬೈಲ್‌ ಸಂಖ್ಯೆಯನ್ನು ನೀವು ಯಾರೊಂದಿಗೆ ಹಂಚಿಕೊಳ್ಳುತ್ತೀರಿ ಎನ್ನುವುದರ ಬಗ್ಗೆ ಎಚ್ಚರವಿರಲಿ. ನಿಮ್ಮ ಸಂಖ್ಯೆಯನ್ನು ನೀಡುವುದರಿಂದ ಯಾವುದೇ ತೊಂದರೆ ಇಲ್ಲ ಎಂದುಕೊಂಡರೆ ಇಂತಹ ಹಗರಣಗಳಲ್ಲಿ ನಿಮ್ಮ ಬ್ಯಾಂಕ್‌ ಅಕೌಂಟ್‌ ಕೂಡ ಸ್ಥಾನ ಪಡೆಯಬಹುದು.

Best Mobiles in India

English Summary

Latest online banking scam: How money is stolen through mobile OTP. To know more this visit kannada.gizbot.com