ಒಂದೇ ಫೋನಿನಲ್ಲಿ ಎರಡು ವಾಟ್ಸ್ಆಪ್ ಖಾತೆ ಬಳಸುವುದು ನೀರು ಕುಡಿದಷ್ಟು ಸುಲಭ!
ಒಂದೇ ಫೋನಿನಲ್ಲಿ ಎರಡು ವಾಟ್ಸ್ಆಪ್ ಖಾತೆಗಳನ್ನು ಬಳಸುವುದು ಹೇಗೆ ಎಂದು ಹಲವು ಜನ ಪ್ರಶ್ನಿಸುತ್ತಿರುತ್ತಾರೆ. ಎರಡು ಸಿಮ್ ಇರುವ ಪೋನಿನಲ್ಲಿ ಎರಡು ವಾಟ್ಸ್ಆಪ್ ಬಳಸಲು ಸಾಧ್ಯವೇ ಎಂಬ ಅವರ ಪ್ರಶ್ನೆಗೆ ಇದೀಗ ಸುಲಭವಾಗಿ 'ಹೌದು' ಎಂದು ಹೇಳಬಹುದು. ಏಕೆಂದರೆ, ಒಂದೇ ಪೋನಿನಲ್ಲಿ ಎರಡು ವಾಟ್ಸ್ಆಪ್ ಖಾತೆಗಳನ್ನು ಸುಲಭವಾಗಿ ಬಳಸಲು ಸಾಧ್ಯವಿದೆ. ಇಂದಿನ ಬಹುತೇಕ ಫೋನ್‌ಗಳು ಆಪ್ ಕ್ಲೋನ್ ಫೀಚರ್ ಅನ್ನು ಹೊಂದಿದ್ದು, ಈ ಫೀಚರ್ ಮೂಲಕ ನೀವು ಒಂದೇ ಫೋನಿನಲ್ಲಿ ಎರಡು ವಾಟ್ಸ್ಆಪ್ ಖಾತೆಗಳನ್ನು ಹೊಂದಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಆಪ್ ಕ್ಲೋನ್ ಅಥವಾ ಆಪ್ ಟ್ವಿನ್ ಎಂಬ ಆಯ್ಕೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತವೆ. ಅದರಲ್ಲೂ ಚೀನಾದ ಹಲವು ಬ್ರ್ಯಾಂಡ್‌ಗಳು ಆಪ್ ಕ್ಲೋನ್ ಆಯ್ಕೆ ಹೊಂದಿವೆ. ಜತೆಗೆ ಸ್ಯಾಮ್‌ಸಂಗ್‌ನ ಕೆಲವು ಮಾದರಿಗಳು ಕೂಡ ಸೆಕ್ಯೂರ್ ಸ್ಪೇಸ್ ಎಂಬ ಫೀಚರ್ ಹೊಂದಿವೆ.ಈ ಆಯ್ಕೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಇದ್ದರೆ ಎರಡು ವಾಟ್ಸ್ಆಪ್ ಖಾತೆ ಹೊಂದಬಹುದು. ವಾಟ್ಸಪ್ ಮಾತ್ರವಲ್ಲ, ಎರಡು ಪ್ರತ್ಯೇಕ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ ಖಾತೆ ಹೊಂದಲೂ ಸಾಧ್ಯವಿದೆ.

ನೀವು ಇದಕ್ಕಾಗಿ ಮಾಡಬೇಕಿರುವುದು ಇಷ್ಟು, ಗೂಗಲ್ ಪ್ಲೇ ಸ್ಟೋರ್‌ಗೆ ತೆರಳಿ, ವಾಟ್ಸ್ಆಪ್ ಅನ್ನು ಇನ್‌ಸ್ಟಾಲ್ ಮಾಡಿ, ವಾಟ್ಸ್ಆಪ್‌ನಲ್ಲಿ ನಿಮ್ಮ ಯಾವುದೇ ಒಂದು ಫೋನ್ ನಂಬರ್ ಅನ್ನು ನೋಂದಾಯಿಸಿ (ಈಗಾಗಲೇ ವಾಟ್ಸ್ಆಪ್ ಬಳಸುತ್ತಿದ್ದರೆ ಬೇಡ). ಇದಾದ ನಂತರ ಫೋನ್ ಸೆಟ್ಟಿಂಗ್‌ಗೆ ತೆರಳಿ, ಅಲ್ಲಿ ಡುಯಲ್ ಆಪ್, ಕ್ಲೋನ್ ಆಪ್ ಅಥವಾ ಆಪ್ ಟ್ವಿನ್ ಆಯ್ಕೆ ಮಾಡಿ( ಫೋನ್ ಮಾದರಿಗೆ ಅನುಗುಣವಾಗಿ ಬದಲಾವಣೆಯಿರಬಹುದು). ಈಗ ಕ್ಲೋನ್ ಮಾಡಬಹುದಾದ ಆಪ್ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ಅಲ್ಲಿ ವಾಟ್ಸ್ಆಪ್ ಆಯ್ಕೆ ಮಾಡಿ, ಇನ್‌ಸ್ಟಾಲ್ ಕೊಡಿ.

ಕ್ಲೋನ್ ಮಾಡಬಹುದಾದ ಆಪ್ ಲಿಸ್ಟ್‌ನಲ್ಲಿ ವಾಟ್ಸ್ಆಪ್ ಇನ್‌ಸ್ಟಾಲ್ ಮಾಡಿದ ನಂತರ ಕ್ಲೋನ್ ಮಾಡಲಾದ ಎರಡನೇ ವಾಟ್ಸ್ಆಪ್ ಆಪ್ ಅನ್ನು ತೆರೆಯಿರಿ. ಬಳಿಕ ಅಲ್ಲಿ ಕಾಣಿಸುವ ಆಯ್ಕೆಗಳಿಗೆ ಅನುಮತಿ ನೀಡಿ ಕಂಟಿನ್ಯೂ ಕ್ಲಿಕ್ ಮಾಡಿ. ಇದಾದ ನಂತರ ಕಾಂಟಾಕ್ಟ್ ಅಕ್ಸೆಸ್ ಆಯ್ಕೆಗೆ ಯೆಸ್ ಎಂದು ಕ್ಲಿಕ್ ಮಾಡಿ. ಈಗ ಈ ಎರಡನೇ ವಾಟ್ಸ್ಆಪ್ ಖಾತೆಗೆ ಎರಡನೇ ನಂಬರ್ ಅನ್ನು ನೋಂದಾಯಿಸಬಹುದು. ಒಂದು ವೇಳೆ ನಿಮ್ಮ ಫೋನಿನಲ್ಲಿ ಡುಯಲ್ ಆಪ್, ಕ್ಲೋನ್ ಆಪ್ ಅಥವಾ ಆಪ್ ಟ್ವಿನ್ ಆಯ್ಕೆಗಳು ಇಲ್ಲದಿದ್ದರೂ ಸಹ ಇನ್ನೊಂದು ಮಾರ್ಗವಿದೆ.

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಆಪ್, ಕ್ಲೋನ್ ಆಪ್ ಅಥವಾ ಆಪ್ ಟ್ವಿನ್ ಆಯ್ಕೆ ಇಲ್ಲದಿದ್ದರೆ, ಗೂಗಲ್ ಪ್ಲೇ ಸ್ಟೋರ್‌ನಿಂದ 'ಪ್ಯಾರಲಲ್ ಸ್ಪೇಸ್' ಎಂಬ ಮೂರನೇ ವ್ಯಕ್ತಿ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಎರಡು ಖಾತೆ ಬಳಸಬಹುದಾಗಿದೆ. ಆದರೆ, ಇದು ಮೂರನೇ ವ್ಯಕ್ತಿಯ ಆಪ್ ಆಗಿರುವುದರಿಂದ ಇದನ್ನು ಬಳಸಲು ನಾವು ನಿಮ್ಮನ್ನು ಶಿಫಾರಸು ಮಾಡುವುದಿಲ್ಲ ಎಂಬುದನ್ನು ನೆನಪಿಡಿ. ಏಕೆಂದರೆ, ಮೂರನೇ ವ್ಯಕ್ತಿ ಆಪ್‌ಗಳ ಕೈಲಿ ಸಂಭಾಷಣೆ ಸಿಗುವಂತೆ ಮಾಡಿಕೊಳ್ಳುವುದು ಒಳ್ಳೆಯದಲ್ಲ.


Click it and Unblock the Notifications








