Theft Protection ಅಪ್‌ಗ್ರೇಡ್: ಇನ್ನು ನಿಮ್ಮ ಫೋನ್ ಕಳೆದೆಹೋದರೂ ಚಿಂತೆ ಇಲ್ಲ!
ಇತ್ತೀಚಿಗೆ ಸ್ಮಾರ್ಟ್‌ಫೋನ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಸಮಯದಲ್ಲಿ, ಆಂಡ್ರಾಯ್ಡ್ ಬಳಕೆದಾರರ ವೈಯಕ್ತಿಕ ಡೇಟಾ ಮತ್ತು ಹಣಕಾಸು ಮಾಹಿತಿಯನ್ನು ಸುರಕ್ಷಿತವಾಗಿಡುವ ಉದ್ದೇಶದಿಂದ ಗೂಗಲ್ ಹೊಸ Android Theft Protection ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಕ್ರಮಗಳು ಫೋನ್ ಕಳೆದುಹೋದಾಗ ಅಥವಾ ಕಸಿದುಕೊಂಡು ಓಡುವಂತಹ ಕಳ್ಳತನವಾದಾಗ ಡೇಟಾ ದುರುಪಯೋಗವಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಗಾದರೆ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗೆ ಬಂದಿರುವ ಹೊಸ Android Theft Protection ವೈಶಿಷ್ಟ್ಯವೇನು ಎಂಬುದನ್ನು ನೋಡೋಣ ಬನ್ನಿ.
ಆಂಡ್ರಾಯ್ಡ್ 16 ಹಾಗೂ ಅದರ ಮೇಲಿನ ಆವೃತ್ತಿಗಳನ್ನು ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ಈ ಹೊಸ Theft Protectio ವೈಶಿಷ್ಟ್ಯಗಳು ಹಂತ ಹಂತವಾಗಿ ಲಭ್ಯವಾಗುತ್ತಿವೆ. Android 15ರಲ್ಲಿ ಮೊದಲ ಬಾರಿಗೆ ಪರಿಚಯಿಸಿದ Failed Authentication Lock ಅನ್ನು ಈಗ ಇನ್ನಷ್ಟು ಸುಧಾರಿಸಲಾಗಿದ್ದು, ಬಳಕೆದಾರರು ಸೆಟ್ಟಿಂಗ್‌ಗಳಲ್ಲಿ ಇದನ್ನು ಸುಲಭವಾಗಿ ನಿಯಂತ್ರಿಸಬಹುದು. ತಪ್ಪು ಪಿನ್ ಅಥವಾ ಪಾಸ್‌ವರ್ಡ್ ಪ್ರಯತ್ನಗಳು ಹೆಚ್ಚಾದಂತೆ ಫೋನ್ ಸ್ವಯಂಚಾಲಿತವಾಗಿ ಲಾಕ್ ಆಗುವ ವ್ಯವಸ್ಥೆ ಇದರಲ್ಲಿ ಸೇರಿದೆ.
ಈಗ ಹೊಸ Identity Check ವೈಶಿಷ್ಟ್ಯವು ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಮತ್ತು ಪಾಸ್‌ವರ್ಡ್ ಮ್ಯಾನೇಜರ್‌ಗಳಂತಹ ಸಂವೇದನಶೀಲ ಅಪ್ಲಿಕೇಶನ್‌ಗಳಿಗೆ ಹೆಚ್ಚುವರಿ ಭದ್ರತೆ ನೀಡುತ್ತದೆ. ವಿಶ್ವಾಸಾರ್ಹ ಸ್ಥಳಗಳ ಹೊರಗೆ ಮಹತ್ವದ ಬದಲಾವಣೆಗಳನ್ನು ಮಾಡುವಾಗ ಕಡ್ಡಾಯವಾಗಿ ಬಯೋಮೆಟ್ರಿಕ್ ದೃಢೀಕರಣ ಅಗತ್ಯವಾಗುತ್ತದೆ. ಇದರಿಂದ ಕಳ್ಳರು ಫೋನ್ ಕೈಗೆ ಸಿಕ್ಕರೂ ಹಣಕಾಸು ಅಪ್ಲಿಕೇಶನ್‌ಗಳಿಗೆ ಪ್ರವೇಶಿಸುವುದು ಕಷ್ಟವಾಗುತ್ತದೆ. ಇದು ಬಳಕೆದಾರರಿಗೆ ಮತ್ತೊಂದು ಹಂತದ ಸುರಕ್ಷತೆಯನ್ನು ಹೆಚ್ಚಿಸುತ್ತದೆ.

ಗೂಗಲ್ ಪಿನ್, ಪ್ಯಾಟರ್ನ್ ಮತ್ತು ಪಾಸ್‌ವರ್ಡ್ ಊಹಿಸುವ ಪ್ರಯತ್ನಗಳನ್ನು ತಡೆಯಲು ಲಾಕ್‌ಔಟ್ ಸಮಯವನ್ನು ಹೆಚ್ಚಿಸಿದೆ. ನಿರಂತರ ತಪ್ಪು ಪ್ರಯತ್ನಗಳು ನಡೆದರೆ ಡಿವೈಸ್ ಹೆಚ್ಚು ಸಮಯ ಲಾಕ್ ಆಗಿರುತ್ತದೆ. ಆದರೆ ನಿಜವಾದ ಬಳಕೆದಾರರು ತಪ್ಪಾಗಿ ಲಾಕ್ ಆಗದಂತೆ, ಒಂದೇ ರೀತಿಯ ತಪ್ಪು ಪ್ರಯತ್ನಗಳನ್ನು ಮರುಮರು ಮಾಡಿದರೂ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇದು ಸುರಕ್ಷತೆ ಮತ್ತು ಬಳಕೆದಾರ ಅನುಭವದ ನಡುವೆ ಸಮತೋಲನ ಕಾಯ್ದುಕೊಳ್ಳುತ್ತದೆ.
Android 10 ಅಥವಾ ಅದರ ಮೇಲಿನ ಆವೃತ್ತಿಗಳನ್ನು ಬಳಸುವ ಫೋನ್‌ಗಳಿಗೆ ಸುಧಾರಿತ Recovery Tools ಅನ್ನು ಗೂಗಲ್ ಪರಿಚಯಿಸಿದೆ. Remote Lock ವೈಶಿಷ್ಟ್ಯದಲ್ಲಿ ಈಗ ಹೆಚ್ಚುವರಿ ಭದ್ರತಾ ಪ್ರಶ್ನೆ ಅಥವಾ ಚಾಲೆಂಜ್ ಸೇರಿಸುವ ಆಯ್ಕೆ ಲಭ್ಯವಿದ್ದು, ಫೋನ್ ಕಳೆದುಹೋದಾಗ ಅದನ್ನು ಸುರಕ್ಷಿತವಾಗಿ ಲಾಕ್ ಮಾಡುವ ಅವಕಾಶ ನೀಡುತ್ತದೆ. ಇಂಟರ್ನೆಟ್ ಇರುವ ಯಾವುದೇ ಸಾಧನದಿಂದ ಫೋನ್ ಲಾಕ್ ಮಾಡಬಹುದಾದ ವ್ಯವಸ್ಥೆ ಇದಾಗಿದೆ.
Theft Protection ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ, ಬ್ರೆಜಿಲ್‌ನಲ್ಲಿ ಹೊಸದಾಗಿ ಸಕ್ರಿಯಗೊಳಿಸುವ ಆಂಡ್ರಾಯ್ಡ್ ಫೋನ್‌ಗಳಲ್ಲಿ ಕೆಲವು ವೈಶಿಷ್ಟ್ಯಗಳನ್ನು ಡೀಫಾಲ್ಟ್ ಆಗಿಯೇ ಆನ್ ಮಾಡಲಾಗಿದೆ. Theft Detection Lock ಫೋನ್ ಅನ್ನು ಕಸಿದುಕೊಂಡು ಓಡುವಂತಹ ಕಳ್ಳತನವನ್ನು AI ಮೂಲಕ ಗುರುತಿಸಿ ತಕ್ಷಣ ಲಾಕ್ ಮಾಡುತ್ತದೆ. ಜೊತೆಗೆ Remote Lock ವೈಶಿಷ್ಟ್ಯವೂ ಮುಂಚಿತ ಸೆಟ್ಟಿಂಗ್ ಅಗತ್ಯವಿಲ್ಲದೇ ಕಾರ್ಯನಿರ್ವಹಿಸುತ್ತದೆ.
ಭಾರತದಂತಹ ದೇಶಗಳಲ್ಲಿ ಸ್ಮಾರ್ಟ್‌ಫೋನ್ ಕಳ್ಳತನವು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ಆಂಡ್ರಾಯ್ಡ್ ಭದ್ರತಾ ಅಪ್‌ಡೇಟ್ ಬಳಕೆದಾರರಿಗೆ ದೊಡ್ಡ ರಕ್ಷಣೆಯಾಗಿ ಕಾರ್ಯನಿರ್ವಹಿಸಲಿದೆ. ಡೇಟಾ ಸುರಕ್ಷತೆ, ಹಣಕಾಸು ಅಪ್ಲಿಕೇಶನ್ ರಕ್ಷಣೆ ಮತ್ತು ಫೋನ್ ಮರುಪಡೆಯುವ ಸಾಧ್ಯತೆಯನ್ನು ಹೆಚ್ಚಿಸುವ ಈ ಹೊಸ Theft Protection ವೈಶಿಷ್ಟ್ಯಗಳು ಆಂಡ್ರಾಯ್ಡ್ ಬಳಕೆದಾರರಿಗೆ ಭರವಸೆ ನೀಡುವ ತಂತ್ರಜ್ಞಾನ ಅಪ್‌ಗ್ರೇಡ್ ಆಗಿವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications