ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಇಂಗ್ಲೀಷ್ ಸಹ ಕಲಿಸಿಕೊಡುವ ಆಪ್‌ಗಳು ಇವು!!
ಮೊಬೈಲ್‌ನಲ್ಲಿ ಆಪ್‌ಗಳನ್ನು ಡೌನ್‌ಲೋಡ್ ಮಾಡುವುದು ಎಂದರೆ ಮನರಂಜನೆಗೆ ಮಾತ್ರ ಎಂದು ಎಂದುಕೊಂಡಿದ್ದರೆ ಅದು ತಪ್ಪು. ಮನರಂಜನೆಯಿಂದ ಹಿಡಿದು ವಿಶ್ವದ ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ಆಪ್‌ಗಳು ಲಭ್ಯವಿವೆ. ಅದರಲ್ಲಿಯೂ ವಿದ್ಯಾರ್ಥಿಗಳ ನಡುವಿನ ಸ್ಪರ್ಧೆಯ ಒತ್ತಡ ನಿಭಾಯಿಸಲು ಸಹ ಕೆಲವು ಶೈಕ್ಷಣಿಕ ಆಪ್‌ಗಳು ರೂಪುಗೊಂಡಿವೆ.
ಮೊಬೈಲ್ ಆಧಾರಿತ ಕಲಿಕೆ ಮತ್ತು ಮೊಬೈಲ್ ಉಪಕರಣಗಳು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿರುವುದರಿಂದ ಸಾವಿರಾರು ಆಪ್‌ಗಳು ಬೀಡುಬಿಟ್ಟಿವೆ. ಇನ್ನು ಕೆಲವು ಶೈಕ್ಷಣಿಕ ಸಂಸ್ಥೆಗಳು ಶಾಲಾ ಕಾಲೇಜುಗಳ ಶೈಕ್ಷಣಿಕ ಕಲಿಕೆಗೆ ಪೂರಕ ಮಾಹಿತಿ ಮತ್ತು ಶಿಕ್ಷಣ ನೀಡುವ ಸದುದ್ದೇಶದಿಂದ ಹಲವು ಶೈಕ್ಷಣಿಕ ಆಪ್‌ಗಳನ್ನು ಉಚಿತವಾಗಿ ಸಿದ್ಧಪಡಿಸಿವೆ.

ಇಂತಹ ಶೈಕ್ಷಣಿಕ ಆಪ್‌ಗಳು ವೈಯಕ್ತಿಕ ಕಲಿಕೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತಿದ್ದು, ಇವುಗಳಲ್ಲಿ ವೈವಿಧ್ಯಮಯವಾಗಿ ಕಲಿಯುವ, ಅಭ್ಯಾಸ ಮತ್ತು ಅಧ್ಯಯನ ಮಾಡುವ ಸಾಧ್ಯತೆಗಳಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಎಲ್ಲ ವಯಸ್ಸಿನ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾದ ಉತ್ತಮ ಗುಣಮಟ್ಟದ ಶೈಕ್ಷಣಿಕ ಆಪ್‌ಗಳು ಯಾವುವು ಎಂಬುದನ್ನು ತಿಳಿಯೋಣ.

ಮೆಮ್‌ರೈಸ್(Memrise)
ನಿಮ್ಮ ಮಕ್ಕಳಿಗೆ ಸುಲಭವಾಗಿ ಭಾಷೆ ಕಲಿಸುವ ಆಪ್ ಇದಾಗಿದೆ. ಇದೊಂದು ಭಾಷಾ ಕಲಿಕೆಯ ಅಪ್ಲಿಕೇಶನ್ ಆಗಿದ್ದು, ಕಲಿಕೆಯನ್ನು ಪ್ರೋತ್ಸಾಹಿಸುವ ಆಟಗಳು ಇಲ್ಲಿವೆ. ಇದರ ವಿಶೇಷ ಎಂದರೆ ನೀವು ಕಲಿಯಬಹುದಾದ 100ಕ್ಕಿಂತ ಹೆಚ್ಚಿನ ಭಾಷಾ ಕೌಶಲಗಳನ್ನು ಕಲಿಸುತ್ತದೆ. ಪ್ರಾಥಮಿಕ ಕಲಿಕೆಗೆ ಚಂದಾದಾರಿಕೆ ಉಚಿತವಾಗಿದ್ದು, ಉನ್ನತ ಕಲಿಕೆಗೆ ಹಣವನ್ನು ನೀಡಬೇಕು.

ಬುಸು(Busuu)
ವಿಶ್ವದ 11 ಜನಪ್ರಿಯ ಭಾಷೆಗಳಲ್ಲಿ ಓದುವುದು, ಬರೆಯುವುದು, ಮಾತನಾಡುವುದನ್ನು ಕಲಿಸುವ ವಿಶಿಷ್ಟ ಆಪ್ ಎಂದರೆ ಬುಸು. ಇದರ ತಂತ್ರಗಾರಿಕೆ ಕೇವಲ ಒಣ ಪುಸ್ತಕಗಳನ್ನು ಓದುವುದಕ್ಕಿಂತ ಅರ್ಥಗರ್ಭಿತ ಹಾಗೂ ಪರಿಣಾಮಕಾರಿಯಾಗಿವೆ.ನೀವು ಈ ಆಪ್ ಮೂಲಕ 45 ದಶಲಕ್ಷಕ್ಕೂ ಹೆಚ್ಚು ಜನರೊಂದಿಗೆ ಸಂವಹನ ಮಾಡಬಹುದು.

ಟೆಡ್ ಟಾಕ್ಸ್ (TED Talks)
ಯೂಟ್ಯೂಬ್‌ನಲ್ಲಿ ಹೆಚ್ಚು ಪ್ರಖ್ಯಾತಿ ಹೊಂದಿರುವ ಟೆಡ್ ಎಕ್ಸ್ ಸಂಸ್ಥೆಯ ಆಪ್ ಇದು. ಕೆಲವೊಮ್ಮೆ ನೇರ ಶಿಕ್ಷಣ ಪರಿಣಾಮಕಾರಿಯಾಗುವುದಿಲ್ಲ. ಇದಕ್ಕಾಗಿ ಒಂದಿಷ್ಟು ಪ್ರೇರಣಾತ್ಮಕ ಮಾತುಗಳು ಅಗತ್ಯವಿರುತ್ತದೆ. ಇದಕ್ಕೆ ಪ್ರಸಿದ್ಧವಾದ ಅಪ್ಲಿಕೇಶನ್ ಎಂದರೆ ಟೆಡ್ಟಾಕ್ಸ್. ಇಲ್ಲಿನ ಮಾತುಗಳು ಪ್ರಬುದ್ಧವಾಗಿದ್ದು ನಿಮ್ಮನ್ನು ನೀವೇ ಅರಿಯಲು ಸಾಧ್ಯವಾಗುತ್ತದೆ.

ಇ.ಡಿ.ಎಕ್ಸ್.(EdX)
ಇ.ಡಿ.ಎಕ್ಸ್.(EdX) ಆಪ್ ಬಗ್ಗೆ ವೃತ್ತಿಪರ ಶಿಕ್ಷಣ ಪಡೆಯುವವರಿಗೆ ಬಹುತೇಕ ತಿಳಿವಳಿಕೆ ಇರುತ್ತದೆ. ಆನ್ಲೈನ್ ಮತ್ತು ಆಫ್ಲೈನ್ ವೀಡಿಯೋ ಉಪನ್ಯಾಸಗಳ ಮೂಲಕ ಕಂಪ್ಯೂಟರ್ ಪ್ರೋಗ್ರಾಮಿಂಗ್, ಇಂಜಿನಿಯರಿಂಗ್, ಇತಿಹಾಸ, ಮನಶಾಸ್ತ್ರ, ಆರೋಗ್ಯ ಮತ್ತಿತರ ನೂರಾರು ಶೈಕ್ಷಣಿಕ ವಿಷಯಗಳ ಬಗ್ಗೆ ತಿಳಿಯಬಹುದಾಗಿದೆ.

ಯುಡೆಮಿ (Udemy)
ಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಅಡುಗೆಮನೆ ಶಿಕ್ಷಣದಿಂದ ವಿದೇಶಿ ಭಾಷಾ ಕಲಿಕೆವರೆಗಿನ ವ್ಯಾಪ್ತಿಯ 32,000ಕ್ಕೂ ಹೆಚ್ಚಿನ ಕಲಿಕಾಂಶಗಳನ್ನು ಹೊಂದಿರುವ ಇದು ಮೊಬೈಲ್ ಮೂಲಕ ಶಿಕ್ಷಣ ನೀಡುವ ಮೊದಲ ಶೈಕ್ಷಣಿಕ ಆಪ್ ಆಗಿದೆ. ಇಲ್ಲಿ ಉದ್ಯಮಶೀಲತೆ, ವಿನ್ಯಾಸ, ಆರೋಗ್ಯ, ಸಂಗೀತ, ಫಿಟ್ನೆಸ್, ಛಾಯಾಗ್ರಹಣ ಕಲಿಕೆಗೆ ಬಹಳ ಯೋಗ್ಯವಾಗಿದೆ.

ಕೋರ್ಸೆರಾ(Coursera)
ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಹಣಕಾಸು ಮತ್ತು ವ್ಯವಹಾರ, ವಿದೇಶಿ ಭಾಷೆಗಳನ್ನು ಒಳಗೊಂಡಂತೆ ಹಲವಾರು ಸ್ವದೇಶಿ ಭಾಷೆಗಳನ್ನು ಈ ಆಪ್ ಮೂಲಕ ಕಲಿಯಬಹುದಾಗಿದೆ. 20ಕ್ಕೂ ಹೆಚ್ಚಿನ ಕ್ಷೇತ್ರಗಳ ವಿಷಯಗಳಿದ್ದು 100ಕ್ಕೂ ಹೆಚ್ಚಿನ ಉನ್ನತ ವಿಶ್ವವಿದ್ಯಾನಿಲಯದೊಂದಿಗೆ ಪಾಲುದಾರಿಕೆ ಹೊಂದಿರುವ ಈ ಆಪ್‌ನಲ್ಲಿ ವೀಡಿಯೋ ಪಾಠಗಳು ಮತ್ತು ಟ್ಯುಟೋರಿಯಲ್ಗಳಿವೆ.

ಖಾನ್ ಅಕಾಡೆಮಿ (Khan Academy)
ಯುವಜನತೆಗೆ ಮತ್ತು ಮಕ್ಕಳಿಗೆ ವಿವಿಧ ಶಿಕ್ಷಣ ಮತ್ತು ತರಗತಿ ನೀಡುವ ಖಾನ್ ಅಕಾಡೆಮಿ 10,000ಕ್ಕೂ ಹೆಚ್ಚಿನ ವೀಡಿಯೋಗಳನ್ನು ಹೊಂದಿದೆ. ಇವೆಲ್ಲವೂ ಸಂಪೂರ್ಣ ಉಚಿತ. ಗಣಿತ, ಅರ್ಥಶಾಸ್ತ್ರ, ಇತಿಹಾಸ, ವಿಜ್ಞಾನ ಹೀಗೆ ಅನೇಕ ವಿಷಯಗಳ ಸಂಕೀರ್ಣ ಅಂಶಗಳನ್ನು ಸುಲಭವಾಗಿ ತಿಳಿಸುವ ಪ್ರಯತ್ನ ಕಾಣಿಸುತ್ತದೆ. ಇದು ಆಫ್ಲೈನ್ನಲ್ಲೂ ಕಾರ್ಯ ನಿರ್ವಹಿಸುತ್ತದೆ.


Click it and Unblock the Notifications




