ಕ್ಯಾಶ್‌ಲೆಸ್ ಇಂಡಿಯಾಗಾಗಿ ಬಳಸಿ ಯುಪಿಐ ಪೇಮೆಂಟ್ ಆಪ್ಸ್..!
ಹಿಂದೊಂದು ದಿನ ದೂರದ ಊರಲ್ಲಿ ಇರುವವರಿಗೆ ದುಡ್ಡು ಕಳಿಸಬೇಕೆಂದರೆ ಒಂದು ಮನಿ ಆರ್ಡರ್ ಅಥವಾ ಡಿಡಿ ಕಳಿಸಬೇಕಾಗಿತ್ತು. ಅವೇರಡು ಮಾಡಿದರೂ ದುಡ್ಡು ಹೋಗೋದು ಏನಿಲ್ಲ ಎಂದರು 3 ರಿಂದ 4 ದಿನ ಬೇಕಾಗಿತ್ತು. ಆದರೆ, 2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರೂ. ನೋಟುಗಳ ಅಮಾನ್ಯೀಕರಣ ಘೋಷಿಸಿದ ನಂತರ ಭಾರತದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಯಾಗಿತ್ತು. ಆಗ ಎಲ್ಲರಿಗೂ ನೆನಪಾಗಿದ್ದು ಡಿಜಿಟಲ್ ಪೇಮೆಂಟ್.

ಹೌದು, ಭಾರತ ಕ್ಯಾಶ್‌ಲೆಸ್ ಆಗುವತ್ತ ಹೆಜ್ಜೆ ಹಾಕುತ್ತಿದೆ. ಡಿಜಿಟಲ್ ಇಂಡಿಯಾ ಮತ್ತು ಕ್ಯಾಶ್‌ಲೆಸ್ ಇಂಡಿಯಾದ ಪರಿಕಲ್ಪನೆ ಸಾಕಾರಗೊಳಿಸಲು ನಿಮ್ಮ ಅಂಗೈಯಲ್ಲಿಯೇ ಹಲವು ಅಸ್ತ್ರಗಳು ಲಭ್ಯವಿವೆ. ಕ್ಯಾಶ್‌ಲೆಸ್ ಇಂಡಿಯಾ ನಿರ್ಮಿಸಲು ಭಾಗಶಃ ಎಲ್ಲಾ ಬ್ಯಾಂಕ್‌ಗಳು ತಮ್ಮದೇ ಆದ ಮೊಬೈಲ್ ಆಪ್‌ಗಳನ್ನು ಹೊಂದಿವೆ. SMS ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ನಂತರ ಡಿಜಿಟಲ್ ಬ್ಯಾಂಕಿಂಗ್ ಜನರನ್ನು ಸೆಳೆಯುತ್ತಿದೆ. ಯುಪಿಐ ಮೂಲಕ ಹಣವನ್ನು ತಕ್ಷಣ ಕಳಿಸುವ ಆಯ್ಕೆ ದೊರೆತಿದೆ. ಅಂತಹ ಬೆಸ್ಟ್ ಯುಪಿಐ ಪೇಮೆಂಟ್ ಆಪ್‌ಗಳನ್ನು ನಿಮಗಾಗಿಯೇ ಪಟ್ಟಿ ಮಾಡಲಾಗಿದೆ.

ಭೀಮ್ BHIM
ಭೀಮ್ ಯುಪಿಐ ಆಪ್‌ನ್ನು ಭಾರತ ಸರ್ಕಾರದ ಒಡೆತನದಲ್ಲಿರುವ ನ್ಯಾಷನಲ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡುತ್ತಿದೆ. ಆದ್ದರಿಂದ ಬೇರೆ ಎಲ್ಲ ಆಪ್‌ಗಳಿಗಿಂತ ಈ ಆಪ್‌ನ್ನು ಜನ ನಂಬಬಹುದಾಗಿದೆ. ಡಿಸೆಂಬರ್ 30, 2016ರಲ್ಲಿ ಈ ಆಪ್ ಬಿಡುಗಡೆಯಾಗಿದ್ದು, ಹಣ ವರ್ಗಾವಣೆ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ, ಮುಂತಾದ ಪಾವತಿಗಳನ್ನು ಮಾಡಬಹುದಾಗಿದೆ. ಭೀಮ್ ಸೇವೆಯನ್ನು ಸಾಧಾರಣ ಜಾವಾ ಮೊಬೈಲ್‌ಗಳಲ್ಲಿಯೂ ಪಡೆಯಬಹುದಾಗಿದೆ. *99# ಕೋಡ್ ಮೂಲಕ ಭೀಮ್ ಬಳಸಬಹುದು.

ಪೋನ್‌ಪೇ PhonePe
ಪೋನ್‌ಪೇ ಆಪ್ ಬಳಕೆಗೆ ಬಹಳಷ್ಟು ಸರಳವಾಗಿದ್ದು, ಭಾರತದ ಪ್ರಸಿದ್ಧ ಆನ್‌ಲೈನ್ ಶಾಪಿಂಗ್ ತಾನ ಫ್ಲಿಪ್‌ಕಾರ್ಟ್‌ನ ಒಡೆತನದಲ್ಲಿದೆ. ಬಳಕೆದಾರ ಸ್ನೇಹಿಯಾಗಿರುವ ಪೋನ್‌ಪೇ ಮೊಬೈಲ್ ರಿಚಾರ್ಜ್, ಡಿಟಿಎಚ್, ಆನ್‌ಲೈನ್‌ನಲ್ಲಿ ಬಿಲ್ ಪಾವತಿ, ಮೂವೀ ಟಿಕೇಟ್ ಬುಕ್ ಮಾಡಲು ಆಯ್ಕೆ ನೀಡಲಾಗಿದೆ. ಈ ಆಪ್‌ನಲ್ಲಿ ಹಲವು ಆಫರ್‌ಗಳು ಲಭ್ಯವಿದ್ದು, ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಸದ್ಯ ಪೋನ್‌ಪೇ ಆಪ್‌ನಲ್ಲಿ 24 ಗಂಟೆಗಳಲ್ಲಿ 1 ಲಕ್ಷ ರೂ.ವರೆಗೂ ಹಣ ವರ್ಗಾವಣೆ ಮಾಡುವ ಸೌಲಭ್ಯವಿದೆ. ಭಾರತದ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಈ ಆಪ್ ಬಳಸಬಹುದಾಗಿದೆ.

ಗೂಗಲ್ ತೇಜ್ Google Tez
ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಹೊಂದಿರುವ ಸರ್ಚ್ ಇಂಜಿನ್ ದೈತ್ಯ ಗೂಗಲ್ ತೇಜ್ ಎಂಬ ಯುಪಿಐ ಪೇಮೆಂಟ್ ಆಪ್ ಬಿಡುಗಡೆ ಮಾಡಿದೆ. ಇದರಲ್ಲಿ ನೇರವಾಗಿ ಬ್ಯಾಂಕ್ ಅಕೌಂಟ್‌ಗೆ ಹಣ ಪಾವತಿಸಬಹುದಾಗಿದೆ. ಡಿಟಿಹೆಚ್ ಬಿಲ್, ಅಗತ್ಯತೆಗಳಾದ ಮೊಬೈಲ್ ರೀಚಾರ್ಜ್, ಡಾಟಾ ಕಾರ್ಡ್, ಬ್ರಾಡ್‌ಬ್ಯಾಂಡ್, ವಿದ್ಯುತ್ ಬಿಲ್ ಪಾವತಿಸಬಹುದಾಗಿದೆ. ಕ್ಯಾಶ್ ಮೋಡ್ ಸಹ ಇದ್ದು, ಹತ್ತಿರದಲ್ಲಿರುವ ಸ್ನೇಹಿತರಿಗೆ ಯಾವುದೇ ವಿವರವಿಲ್ಲದೇ ಹಣ ವರ್ಗಾವಣೆ ಮಾಡುವ ಆಯ್ಕೆ ಇದೆ. ಅದಲ್ಲದೇ ಗೂಗಲ್ ತೇಜ್ ಸ್ಕ್ರಾಚ್ ಕಾರ್ಡ್ ನೀಡುತ್ತಿದ್ದು 1000 ರೂ.ವರೆಗೂ ಗೆಲ್ಲುವ ಅವಕಾಶ ನೀಡಿದೆ. ಉತ್ತಮ ಯುಪಿಐ ಆಪ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಪೇಟಿಎಂ Paytm
ಪೇಟಿಎಂ ಅಂದ್ರೇ ಎಲ್ಲರೂ ಹೆಸರು ಕೇಳಿಯೇ ಕೇಳಿರುತ್ತಿರಿ. ಪೇಟಿಎಂ ಮೇಕ್ ಇನ್ ಇಂಡಿಯಾ ಉತ್ಪನ್ನವಾಗಿದೆ. ಆಗಸ್ಟ್ 2010ರಲ್ಲಿ ನೋಯ್ಡಾದಲ್ಲಿ ವಿಜಯ್ ಶೇಖರ್ ಶರ್ಮಾ ಎಂಬುವವರು ಪೇಟಿಎಂ ಸ್ಥಾಪಿಸಿದರು. ಪೇಟಿಎಂ ಭಾರತದ 10 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ಹಣ ವರ್ಗಾವಣೆ, ಮೊಬೈಲ್ ರಿಚಾರ್ಜ್, ಅಗತ್ಯ ಬಿಲ್‌ಗಳ ಪಾವತಿ, ಟ್ರಾವೆಲ್, ಮೂವೀಸ್, ಇವೆಂಟ್‌ಗಳ ಬುಕ್ಕಿಂಗ್ ಮಾಡಲು ಮತ್ತು ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಸಹ ಪೇಟಿಎಂ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸುವ ಆಯ್ಕೆಯನ್ನು ಪೇಟಿಎಂ ನೀಡಿದೆ. 2018ರ ಜನವರಿ ಹೊತ್ತಿಗೆ ಪೇಟಿಎಂ 10 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಅದಲ್ಲದೇ ಇತ್ತೀಚೆಗೆ ಪೇಟಿಎಂ ತನ್ನ ಆಪ್‌ನಲ್ಲಿ ಮನರಂಜನೆಗೂ ಒತ್ತು ನೀಡಿದ್ದು, ಹೊಸ ಹೊಸ ಆಯ್ಕೆಗಳನ್ನು ನೀಡಿದೆ.

ಎಸ್‌ಬಿಐ ಪೇ SBI Pay
ಎಸ್‌ಬಿಐ ಪೇ ಆಪ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಬೇರೆ ಯುಪಿಐ ಆಪ್‌ಗಳಂತೆ ಇದು ಸಹ ಸಾಮಾನ್ಯ ಫೀಚರ್‌ಗಳನ್ನು ಹೊಂದಿದೆ. ಇದರ ಜೊತೆಗೆ ಎಸ್‌ಬಿಐ ಪೇ ನಿಮ್ಮ ನಗರದಲ್ಲಿರುವ ಲೆಟೇಸ್ಟ್ ಡೀಲ್ಸ್ ಬಗ್ಗೆ ನಿಮಗೆ ಸೂಚನೆ ನೀಡುತ್ತದೆ. ಸ್ಪಾ, ಸಲೂನ್, ಬಫ್ಫೇಟ್‌ಗಳಲ್ಲಿ , ವಾರಾಂತ್ಯದ ಚಟುವಟಿಕೆಗಳಲ್ಲಿ ಮತ್ತು ಅನೇಕ ಸೇವೆಗಳಲ್ಲಿ ಎಸ್‌ಬಿಐ ಪೇ ಆಪ್ ಬಳಸಿ ರಿಯಾಯಿತಿ ಪಡೆಯಬಹುದು.

ಆಕ್ಸಿಸ್ ಪೇ Axis Pay
ಈ ಆಪ್ ಸಹ ಎಸ್‌ಬಿಐ ಪೇ ಆಪ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಈ ಆಪ್‌ನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಹಣ ವರ್ಗಾವಣೆ, ರೀಚಾರ್ಜ್, ಬಿಲ್ ಪಾವತಿ ಮುಂತಾದ ಸಾಮಾನ್ಯ ಫೀಚರ್ಸ್‌ಗಳನ್ನು ಬಿಟ್ಟರೆ ಬೇರೆ ಆಪ್‌ಗಳಂತೆ ವಿಶೇಷ ಫೀಚರ್‌ಗಳು ಇಲ್ಲ.

ಚಿಲ್ಲರ್ Chillr
ಯುಪಿಐ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡು ರೂಪುಗೊಂಡಿರುವ ಈ ಆಪ್ ಖಾಸಗಿ ಕಾರ್ಪೊರೇಷನ್‌ನಿಂದ ನಿರ್ವಹಿಸಲ್ಪಡುತ್ತಿದೆ. ಸುರಕ್ಚಿತ ಹಣ ವರ್ಗಾವಣೆ, ಬಹು ಭಾಷೆಗೆ ಬೆಂಬಲಿತ, ನಿಮ್ಮ ಬಿಲ್‌ಗಳ ಹಂಚಿಕೆ, ಅಗತ್ಯ ಬಿಲ್ ಪಾವತಿ ಮತ್ತು ರೀಚಾರ್ಜ್, ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್, ಟ್ರಾನ್ಸ್ಯಾಕ್ಷನ್ ಸ್ಟೇಟ್‌ಮೆಂಟ್, ಸ್ಟೋರ್ ಪೇಮೆಂಟ್ಸ್ ನೋಡುವುದು, ಐಎಂಪಿಎಸ್ ಮತ್ತೀತರ ಸೌಲಭ್ಯಗಳು ಲಭ್ಯವಿವೆ.

ಪಾಕೇಟ್ಸ್ Pockets
ಚಿಲ್ಲರ್ ಆಪ್‌ನಂತೆ ಪಾಕೇಟ್ಸ್ ಆಪ್ ಕಾರ್ಯನಿರ್ವಹಸುತ್ತೆ. ಐಸಿಐಸಿಐ ಬ್ಯಾಂಕ್ ಈ ಆಪ್‌ನ್ನು ಅಭಿವೃದ್ಧಿಪಡಿಸಿದೆ. ವಿಸಾ ಕಾರ್ಡ್‌ನಂತೆ ಎಲ್ಲಿ ಬೇಕಾದರೂ ಬಳಸುವ ಆಯ್ಕೆ ಇದೆ. ಇದಲ್ಲದೇ ಯುಪಿಐ, ಎನ್‌ಎಫ್‌ಸಿ, ಟಚ್ & ಪೇ, ಎಂವಿಸಾ ಮತ್ತು ಭಾರತ್ ಕ್ಯೂಆರ್ ಕೋಡ್ ಆಯ್ಕೆ ನೀಡಿದೆ. ಹಲವು ವಿಶೇಷವಾದ ಡೀಲ್ಸ್‌ಗಳನ್ನು ನೀಡುತ್ತದೆ.


Click it and Unblock the Notifications








