ಮೇ 12ಕ್ಕೆ ಮತದಾನ ಮಾಡಿ: ಅದಕ್ಕೂ ಮುನ್ನ ಈ ಆಪ್ ಹಾಕಿಕೊಳ್ಳಿ..!

ಈ ಬಾರಿ ಚುನಾವಣೆಯನ್ನು ಉತ್ತಮವಾಗಿ ನಡೆಸುವ ಮತ್ತು ಮತದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಚುನಾವಣಾ ಆಯೋಗವು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ. ಇದಕ್ಕಾಗಿ ಹೊಸದೊಂದು ಆಪ್ ವೊಂದನ್ನು ಲಾಂಚ್ ಮಾಡಿದೆ.

ಒಬ್ಬ ಮತದಾರನಿಗೆ ಚುನಾವಣೆಯ ಕುರಿತು ಅಗತ್ಯವಾಗಿ ಬೇಕಾದ ಮಾಹಿತಿಯನ್ನು ಒಳಗೊಂಡ "ಚುನಾವಣಾ ಆಪ್" ಲಾಂಚ್ ಆಗಿದ್ದು, ಹೊಸ ಮಾದರಿಯಲ್ಲಿ ಮತದಾರರನ್ನು ಚುನಾವಣೆಗೆ ಸಿದ್ಧಗೊಳಿಸಲು ಚುನಾವಣಾ ಆಯೋಗವು ಮುಂದಾಗಿದೆ. ಈ ಪ್ರಯತ್ನವು ಕರ್ನಾಟಕದಲ್ಲಿಯೇ ಮೊದಲು ಎನ್ನಲಾಗಿದೆ.

ಪ್ಲೇ ಸ್ಟೋರಿನಲ್ಲಿ ಲಭ್ಯ:
ಚುನಾವಣಾ ಹೆಸರಿನಲ್ಲಿಯೇ ಇರುವ ಆಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದ್ದು, ಚುನಾವಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರದ ಸಹಯೋಗದೊಂದಿಗೆ ಈ ಆಪ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಚುನಾವಣೆಯ ಸಮಗ್ರ ಮಾಹಿತಿ:
"ಚುನಾವಣಾ ಆಪ್" ಗುಣಮಟ್ಟದಿಂದ ಕೂಡಿದ್ದು, ರಾಜ್ಯದ 56,696 ಮತಕೇಂದ್ರಗಳು ಮತ್ತು ಅವುಗಳ ವಿಳಾಸ ಮ್ಯಾಪ್(ನಕಾಶೆ) ನೊಂದಿಗೆ ಲಭ್ಯವಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಒಳಗೊಂಡಿದೆ.

ಹೆಚ್ಚು ಮಾಹಿತಿ:
ಆಪ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ, ಚುನಾವಣಾ ವೇಳಾ ಪಟ್ಟಿ, ಅಧಿಕಾರಿಗಳ ಪಟ್ಟಿ, ಸೇರಿದಂತೆ ಇಲ್ಲವೇ ತುರ್ತು ಸಂದರ್ಭಗಳಲ್ಲಿ ಹತ್ತಿರದ ಪೊಲೀಸ್ ಠಾಣೆ ಮತ್ತು ಆರೋಗ್ಯ ಕೇಂದ್ರದ ಮಾಹಿತಿಯೂ ದೊರೆಯಲಿದೆ.

ಮತದಾನದ ಬಗ್ಗೆ:
ಇದಲ್ಲದೇ ಮತದಾನ ಮಾಡಲು ಗಾಲಿ ಕುರ್ಚಿಯ ಅಗತ್ಯವಿದ್ದರೆ ಅನ್ನು ಆಪ್ ಮೂಲಕವೇ ಬುಕ್ ಮಾಡಬಹುದಾಗಿದೆ. ವಿಕಲಚೇತನರು ಮತ ಚಲಾಯಿಸಲು ಅಗತ್ಯವಿರುವ ಸಹಾಯ ಮತ್ತು ಮತಗಟ್ಟೆಯ ಸರದಿ ಬಗ್ಗೆಯೂ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಮತಗಟ್ಟೆ ಬಗ್ಗೆ:
ನಿಮ್ಮ ಸಮೀಪದ ಮತದಾನದ ಕೇಂದ್ರ ಯಾವುದು, ನಿಮ್ಮ ಗುರುತಿನ ಚೀಟಿಯೂ ಯಾವ ಪಟ್ಟಿಯಲ್ಲಿದೆ. ನೀವು ಮತದಾನ ಎಲ್ಲಿ ಮತದಾನ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ಈ ಚುನಾವಣಾ ಆಪ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ.

ಜಾಗೃತಿ:
ಈ ಆಪ್ ಮೂಲಕ ಸಾರ್ವಜನಿಕರು ನೇರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿದ್ದು, ಪರಿಣಾಮಕಾರಿಯಾಗಿ ಚುನಾವಣೆ ನಡೆಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಜಾರಿಗೆ ತರಲು ಸಾರ್ವಜನಿಕರು ತಮ್ಮ ಕೊಡುಗೆಯನ್ನು ನೀಡಬಹುದಾಗಿದೆ.

ಎಲ್ಲಾ ಸಂದರ್ಭದಲ್ಲಿಯೂ ಸಹಾಯಕಾರಿ:
ಚುನಾವಣಾ ಆಯೋಗವು ಎಲ್ಲಾ ಸಂದರ್ಭದಲ್ಲಿಯೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಈ ಆಪ್ ಬಿಡುಗಡೆ ಮಾಡಿದ್ದು, ಹೊಸ ಮತದಾರರಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಬಳಸಬಹುದಾಗಿದೆ.


Click it and Unblock the Notifications








