ಫೇಸ್ಬುಕ್ ಮೆಸೆಂಜರ್ನಲ್ಲಿ ಈಗ ಶೇರ್ ಮಾಡಿ 4K ರೆಸೊಲ್ಯೂಶನ್ ಫೋಟೋಗಳು
ಮೆಸೆಂಜರ್ ಲಾಂಚ್ ಆದಾಗಿನಿಂದ ಫೇಸ್ಬುಕ್ ನಿರಂತರವಾಗಿ ಅದಕ್ಕೆ ಹೊಸ ಹೊಸ ಫೀಚರ್ಗಳನ್ನು ನೀಡುತ್ತಲೇ ಬಂದಿದೆ. ನಿನ್ನೆಯಷ್ಟೇ ಫೇಸ್ಬುಕ್ ಮೆಸೆಂಜರ್ ಗೆ ಮತ್ತೊಂದು ಹೊಸ ಫೀಚರ್ ಘೋಷಿಸಿದ್ದು, ನೀವೀಗ ಮೆಸೆಂಜರ್ ನಲ್ಲಿ 4K ರೆಸೊಲ್ಯೂಶನ್ ಅಥವಾ 4096x4096 ಪಿಕ್ಸೆಲ್ಸ್ ಪ್ರತಿ ಇಮೇಜ್ ಇರುವ ಚಿತ್ರಗಳನ್ನು ಸೆಂಡ್ ಮಾಡಬಹುದು ಮತ್ತು ಸ್ವೀಕರಿಸಲೂ ಬಹುದು. ಸಧ್ಯಕ್ಕೆ ಹೆಚ್ಚಿನ ಸ್ಮಾರ್ಟ್ಫೋನ್ಗಳು ಸಪೋರ್ಟ್ ಮಾಡುವ ಉನ್ನತ ದರ್ಜೆಯ ಫೋಟೋ ರೆಸೊಲೈಶನ್ ಇದಾಗಿದೆ.

ಇಲ್ಲಿಯವರೆಗೆ ಜನರು ಫೇಸ್ಬುಕ್ ಮೆಸೆಂಜರ್ ಮೂಲಕ ಅಧಿಕ ರೆಸೊಲ್ಯೂಶನ್ ನ ಫೋಟೋ ಶೇರ್ ಮಾಡಲು ಸಾಧ್ಯವಿರಲಿಲ್ಲ. ಈಗ ಬಂದಿರುವ ಹೊಸ ಫೀಚರ್ ಮೂಲಕ ಮೆಸೆಂಜರ್ ಜನರಿಗೆ ಮತ್ತಷ್ಟು ಆಕರ್ಷಕವೆನಿಸಲಿದೆ.ಪ್ರತೀ ತಿಂಗಳು ಜನರು ಫೇಸ್ಬುಕ್ ಮೆಸೆಂಜರ್ ಮೂಲಕ ಸುಮಾರು 17 ಬಿಲಿಯನ್ ಫೋಟೋಗಳನ್ನು ಶೇರ್ ಮಾಡುತ್ತಾರೆ ಎಂಬದು ಗಮನಾರ್ಹ ವಿಷಯವಾಗಿದೆ. ಇತರ ಫೋಟೋಗಳನ್ನು ಸೆಂಡ್ ಮಾಡುವಷ್ಟೇ ವೇಗದಲ್ಲಿ 4K ಫೋಟೋಗಳನ್ನೂ ಸೆಂಡ್ ಮಾಡಬಹುದು ಎನ್ನುತ್ತದೆ ಫೇಸ್ಬುಕ್.
4K ರೆಸೊಲ್ಯೂಶನ್ ಪೋಟೋಗಳು ಕಡಿಮೆ ರೆಸೊಲ್ಯೂಶನ್ ನ ಫೋಟೋಗಳಿಗಿಂತ ಎಷ್ಟು ಭಿನ್ನವಾಗಿರಬಹುದು ಎಂದು ನೀವು ಯೋಚಿಸತ್ತಿರಬಹುದು. ನಿಮ್ಮ ಸಂದೇಹವನ್ನು ಪರಿಹರಿಸಲೆಂದೇ ಫೇಸ್ಬುಕ್ ಈ ವಿಷಯವನ್ನಾಧರಿಸಿ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದೆ. ಒಂದೇ ವಸ್ತುವಿನ ಫೋಟೋ ಅನ್ನು 4K ಮತ್ತು ಕಡಿಮೆ ರೆಸೊಲ್ಯೂಶನ್ ನಲ್ಲಿ ಸೆರೆಹಿಡಿದು ಜೊತೆಗೆ ಶೇರ್ ಮಾಡಿದೆ. ಈ ಎರಡು ಫೋಟೋಗಳನ್ನು ಹೋಲಿಸಿದರೆ ಸಾಕು 4K ರೆಸೊಲ್ಯೂಶನ್ ನ ಫೋಟೋ ಕಡಿಮೆ ರೆಸೊಲ್ಯೂಶನ್ ನ ಫೋಟೋಗಿಂತ ಹೆಚ್ಚು ಸ್ಪಷ್ಟ ಮತ್ತು ನಿಖರವಾಗಿದೆಯೆಂದು ತಿಳಿಯುತ್ತದೆ.
ಮೆಸೆಂಜರ್ ಮೂಲಕ 4K ರೆಸೊಲ್ಯೂಶನ್ ನಲ್ಲಿ ಫೋಟೋ ಹಂಚಿಕೊಳ್ಳಲು ಮೊದಲಿಗೆ ನೀವು ನಿಮ್ಮ ಮೆಸೆಂಜರ್ ಆಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಬೇಕು. ನಂತರ ಕಾನ್ವರ್ಸೇಶನ್ ಅನ್ನು ತೆರೆದು ಕ್ಯಾಮೆರಾ ರೋಲ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನೀವು ಕಳುಹಿಸ ಬಯಸುವ ಉನ್ನತ ರೆಸೊಲ್ಯೂಶನ್ ನ ಫೋಟೋ ಅನ್ನು ಆಯ್ಕೆ ಮಾಡಿ ಸೆಂಡ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಚ್ಯಾಟ್ ಮಾಡುತ್ತಿರುವ ವ್ಯಕ್ತಿ ನೀವು ಆಯ್ಕೆ ಮಾಡಿರುವ ಹೈ-ರೆಸೊಲ್ಯೂಶನ್ ಫೋಟೋ ಅನ್ನು ಪಡೆಯುತ್ತಾರೆ.
ಫೇಸ್ಬುಕ್ ಇಂದಿನಿಂದ ಯುಎಸ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ, ಯುಕೆ, ಸಿಂಗಪೋರ್, ಹಾಂಗ್ ಕಾಂಗ್, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಎರಡರಲ್ಲೂ 4K ರೆಸೊಲ್ಯೂಶನ್ ಪೋಟೋ ಹಂಚುವ ಸಾಮರ್ಥ್ಯವುಳ್ಳ ಮೆಸೆಂಜರ್ ಆವೃತ್ತಿಯನ್ನು ಬಿಡುಗಡೆಮಾಡಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ದೇಶಗಳಲ್ಲಿ ಫೇಸ್ಬುಕ್ ಮೆಸೆಂಜರ್ ಈ ಅಪ್ಡೇಟ್ ಅನ್ನು ಪಡೆಯಲಿದೆ.


Click it and Unblock the Notifications








