ಸಿಲಿಕಾನ್ ಸಿಟಿ ಜನಕ್ಕೆ ಶೀಘ್ರದಲ್ಲಿಯೇ ಸಿಗಲಿದೆ ಉಚಿತ ವೈ-ಫೈ..!
ಬೆಂಗಳೂರನ್ನು ಸಿಲಿಕಾನ್ ಸಿಟಿ ಎಂದು ಕರೆಯಲಾಗುತ್ತದೆ. ಇಲ್ಲಿನ ಜನರಿಗೆ ಅಂತರ್ಜಾಲ ಸೇವೆ 24 ತಾಸೂ ಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ವೈ-ಫೈ ಸೇವೆಯ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಆದರೆ ಅದು ಇಷ್ಟು ದಿನವೂ ಕೇವಲ ಪ್ಲಾನ್ ಆಗಿಯೇ ಉಳಿದು ಬೆಂಗಳೂರಿನ ಕೆಲವು ಭಾಗಗಳು ಅಂದರೆ ಎಂಜಿ ರೋಡ್ ಮತ್ತು ರೈಲ್ವೇ ಸ್ಟೇಷನ್ ಗೆ ಸೀಮಿತವಾಗಿತ್ತು. ಆದರೆ ಈಗ ಬೆಂಗಳೂರಿಗರಿಗೊಂದು ಸಿಹಿ ಸುದ್ದಿ ಇದೆ. ಬೆಂಗಳೂರಿನಾದ್ಯಂತ ಉಚಿತ ವೈ-ಫೈ ಸಿಗುವ ಸಾಧ್ಯತೆಯು ನಿಚ್ಚಳವಾಗುತ್ತದೆ.

ಇದಕ್ಕೆ ಇಂಬು ನೀಡುವಂತೆ ಬೆಂಗಳೂರಿನ 198 ವಾರ್ಡ್ ಗಳಲ್ಲಿ ಉಚಿತ ವೈ-ಫೈ ಕನೆಕ್ಟಿವಿಟಿಯನ್ನು ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ಅಂತರ್ಜಾಲ ಸೇವೆ ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಭಾನುವಾರ ಪ್ರಕಟಿಸಿದ್ದಾರೆ. ಗೋವಿಂದರಾಜ ನಗರದಲ್ಲಿ ಉಚಿತ ವೈ-ಫೈ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಂಗಳೂರಿನಾದ್ಯಂತ ಉಚಿತ ಅಂತರ್ಜಾಲ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಗೋವಿಂದರಾಜ ನಗರದಲ್ಲಿ ಉಚಿತ ವೈ-ಫೈ ಸೇವೆ:
ರಿಲಯನ್ಸ್ ಜಿಯೋ ಸಂಸ್ಥೆ 3ಕಿಲೋ ಮೀಟರ್ ರೇಡಿಯಸ್ ನಲ್ಲಿ ಉಚಿತವಾಗಿ ವೈ-ಫೈ ಸೇವೆಯನ್ನು ಗೋವಿಂದರಾಜ ನಗರದಲ್ಲಿ ಕಲ್ಪಿಸುತ್ತಿದ್ದು ಇದು ಪ್ರಾಯೋಗಿಕವಾಗಿ ನಡೆಸಲಾಗಿದೆ.

ಫೋನ್ ನಂಬರ್ರೇ ಪಾಸ್ ವರ್ಡ್:
ಸಾರ್ವಜನಿಕರು ತಮ್ಮ ಫೋನ್ ನಂಬರ್ ನ್ನೇ ಪಾಸ್ ವರ್ಡ್ ಆಗಿ ಬಳಸಿ ಈ ಉಚಿತ ವೈ-ಫೈ ಸೇವೆಯನ್ನು ಪಡೆಯಬಹುದು. ಬಿಬಿಎಂಪಿ ಅಧಿಕಾರಿಯೊಬ್ಬರು ನಗರದ ನಿಗಮ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ವಿವಿಧ ಸೇವಾ ಪೂರೈಕೆದಾರರೊಂದಿಗೆ ಉಚಿತ ವೈ-ಫೈ ಸಂಪರ್ಕಕ್ಕಾಗಿ ತಂತ್ರಗಳನ್ನು ಚಾಕ್ ಮಾಡಲು ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಾದ್ಯಂತ ಉಚಿತ ವೈ-ಫೈ ಸಂಪರ್ಕ:
ಸಿಲಿಕಾನ್ ಸಿಟಿ ಎಂದೇ ಜಗತ್ತಿನಾದ್ಯಂತ ಪರಿಚಿತವಾಗಿರುವ ಬೆಂಗಳೂರಿನ ಜನತೆ ತಾಂತ್ರಿಕವಾಗಿ ಮುಂದುವರಿದವರಾಗಿದ್ದಾರೆ. ಹಾಗಾಗಿ ಉಚಿತ ವೈ-ಫೈ ಸೇವೆಯನ್ನು ಬೆಂಗಳೂರಿನಾದ್ಯಂತ ನೀಡಬೇಕು ಎಂಬ ಪರಿಕ್ಪನೆಯು ಹಲವು ವರ್ಷಗಳ ಹಿಂದೆಯೇ ಹುಟ್ಟಿದೆ.

ಉಚಿತ ವೈ-ಫೈ ಸೇವೆ ಆರಂಭವಾಗದಿರಲು ಕಾರಣ:
ಬೇರೆಬೇರೆ ಟೆಲಿಕಾಂ ನ ಮೂಲಭೂತ ಸೌಕರ್ಯಗಳ ಬಗೆಗಿನ ಬಾಡಿಗೆಯ ವಿಚಾರವು ಸಾರ್ವಜನಿಕ ಅಂತರ್ಜಾಲ ಸೇವೆಯು ಇನ್ನು ಆರಂಭವಾಗದಿರಲು ಪ್ರಮುಖ ಕಾರಣವಾಗಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ನಿಟ್ಟಿನಲ್ಲಿ ನಿಗದಿ ಮಾಡಬೇಕಾದ ಬಾಡಿಗೆಯ ವಿಚಾರದ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳುವುದನ್ನು ವಿಳಂಬ ಮಾಡುತ್ತಿದೆ.ಅಂದರೆ ಆಕ್ಸಿಸ್ ಪಾಯಿಂಟ್ ಗಳನ್ನು ಗುರುತಿಸುವಿಕೆಯೇ ವಿಳಂಬವಾಗುತ್ತಿದೆ.

ವೈ-ಫೈ ಪ್ಲಾನ್ ಹೇಗಿರುತ್ತದೆ?
ಪ್ರಾರಂಭಿಕ ಪ್ಲಾನ್ ನ ಪ್ರಕಾರವೇ ಹೇಳುವುದಾದರೆ, ಸಾರ್ವಜನಿಕರು ಆರಂಭದ 30 ನಿಮಿಷ ವೈ-ಫೈ ಸೇವೆಯನ್ನು ಉಚಿತವಾಗಿ ಪಡೆಯಲಿದ್ದಾರೆ. ಉಚಿತ ನಿಮಿಷಗಳ ನಂತರದ ಅವಧಿಯನ್ನು ಬಳಸುವುದಾದರೆ ಟ್ರಾಯ್ ನಿಗದಿ ಪಡಿಸುವ ವಾಣಿಜ್ಯ ಬೆಲೆಯನ್ನು ಸಾರ್ವಜನಿಕರು ಪಾವತಿಸಬೇಕಾಗುತ್ತದೆ.
ಪ್ಲಾನ್ ಪ್ರಾರಂಭವಾದ ದಿನಗಳಲ್ಲಿ ನಾಲ್ಕು ಪ್ರಮುಖ ಟೆಲಿಕಾಂ ಕಂಪೆನಿಗಳು ಸಾರ್ವಜನಿಕ ವೈ-ಫೈ ಹಾಟ್ ಸ್ಪಾಟ್ ನೀಡುವುದಕ್ಕೆ ಬೆಂಬಲ ನೀಡಿದ್ದವು. ಆದರೆ ಯೋಜನೆ ಸಂಪೂರ್ಣವಾಗಿ ಇನ್ನೂ ಕಾರ್ಯರೂಪಕ್ಕೆ ಬರದೇ ಇರಲು ಪರೋಕ್ಷವಾಗಿ ಬಿಬಿಎಂಪಿಯೇ ಕಾರಣವಾಗಿದೆ.


Click it and Unblock the Notifications








