ಆಂಡ್ರಾಯ್ಡ್ ಮೆಸೇಜ್ ಆಪ್‌ಗೆ ಬಂದಿದೆ ಮತ್ತಷ್ಟು ಬಲ..!
ಗೂಗಲ್ ಇತ್ತೀಚೆಗೆ ತನ್ನ ಆಂಡ್ರಾಯ್ಡ್ ಮೆಸೇಜಿಂಗ್ ಆಪ್ ಗೆ ಹೊಸ ವೈಶಿಷ್ಟ್ಯತೆ ಡಾರ್ಕ್ ಮೋಡ್ ನ್ನು ಪರಿಚಯಿಸಿ ಕಣ್ಣುಗಳಿಗೆ ಆರಾಮದಾಯಕ ಅನುಭವವನ್ನು ನೀಡುವಂತೆ ಮಾಡಿದೆ. ಇದೀಗ ಮತ್ತೆ ಇನ್ನೊಂದು ಹೊಸ ಫೀಚರ್ ಬಿಡುಗಡೆಗೊಳಿಸಲು ಮುಂದಾಗಿರುವ ಗೂಗಲ್ ಅಡ್ವಾನ್ಸ್ಡ್ ಸರ್ಚ್ ವೈಶಿಷ್ಟ್ಯತೆಯನ್ನು ಸೇರಿಸುತ್ತಿದೆ. ಈ ವೈಶಿಷ್ಟ್ಯತೆಯು ಇದುವರೆಗೂ ನಿಮಗೆ ಅಸಾಧ್ಯವಾಗಿದ್ದು ಹುಡುಕಾಟಕ್ಕೆ ಹೆಚ್ಚಿನ ನೆರವು ನೀಡಲು ಆಪ್ ನಲ್ಲಿ ಸಹಕರಿಸುತ್ತದೆ. ಹೌದು ಮೀಡಿಯಾ ಫೈಲ್, ಟೆಕ್ಸ್ಟ್ ಅಥವಾ ಇತರೆ ಯಾವುದೇ ಕಟೆಂಟ್ ಚಾಟ್ ನಲ್ಲಿ ಲಭ್ಯವಿದ್ದರೆ ಅದನ್ನು ಸುಲಭದಲ್ಲಿ ಹುಡುಕುವುದಕ್ಕೆ ಆಪ್ ನಲ್ಲಿ ಈ ಅಡ್ವಾನ್ಸ್ಡ್ ಸರ್ಚ್ ವೈಶಿಷ್ಟ್ಯತೆ ಸಹಕರಿಸುತ್ತದೆ.

“ನಾವು ಹಲವು ಮಾಹಿತಿಗಳನ್ನು ನಮ್ಮ ಮೆಸೇಜ್ ಗಳಲ್ಲ ಹಂಚಿಕೊಳ್ಳುತ್ತೇವೆ. ಆದರೆ ಅದನ್ನು ಪುನಃ ನೋಡುವುದು ಅಷ್ಟು ಸುಲಭವಲ್ಲ ಅಂದರೆ ಉದಾಹರಣೆಗೆ ಒಂದು ತಿಂಗಳ ಹಿಂದೆ ನಿಮ್ಮ ತಾಯಿ ಕಳುಹಿಸಿದ ಯಾವುದೋ ಫೋಟೋವನ್ನು ಮತ್ತೆ ನಿಮ್ಮ ಚಾಟ್ ನಲ್ಲಿ ಹುಡುಕುವುದು ಅಥವಾ ನಿಮ್ಮ ಸ್ನೇಹಿತರು ಕಾಫಿ ಶಾಪ್ ಅಡ್ರೆಸ್ ಒಂದನ್ನು ಹಲವು ದಿನಗಳ ಮುಂಚೆ ಕಳುಹಿಸಿದ್ದನ್ನು ಮತ್ತೆ ಎಲ್ಲಿದೆ ಎಂದು ಚಾಟ್ ನಲ್ಲ ಹುಡುಕುವುದು ಕಷ್ಟದ ವಿಚಾರವಾಗಿದೆ. ಆದರೆ ಇದೀಗ ಇಂತಹ ಸನ್ನಿವೇಶವನ್ನು ನಿಮ್ಮ ಆಂಡ್ರಾಯ್ಡ್ ಮೆಸೇಜಿಂಗ್ ಆಪ್ ನಲ್ಲಿ ಹುಡುಕುವುದು ಸರಳವಾಗಲಿದೆ. ಹೌದು ಕೇವಲ ಕಂಟೆಂಟ್ ನ್ನು ಅಥವಾ ವಿಷಯವನ್ನು ಟೈಪ್ ಮಾಡುವ ಮೂಲಕ ನೀವು ಅದನ್ನು ಪುನಃ ನಿಮ್ಮ ಚಾಟ್ ನಲ್ಲಿ ಹುಡುಕಾಟ ನಡೆಸಬಹುದು.” ಎಂದು ಗೂಗಲ್ ನ ಪ್ರೊಡಕ್ಟ್ ಮ್ಯಾನೇಜರ್ ಆಗಿರುವ ನಟಾಲಿ ನರನ್ಸ್ ತಮ್ಮ ಬ್ಲಾಗ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಹುಡುಕಾಟ ನಡೆಸುವುದು ಹೇಗೆ?
ನೀವು ಮಾಡಬೇಕಾಗಿರುವುದು ಇಷ್ಟೇ. ಮೇಲ್ಬಾಗದಲ್ಲಿರುವ ಸರ್ಚ್ ಬಾರ್ ನ್ನು ಟ್ಯಾಪ್ ಮಾಡಬೇಕು ಮತ್ತು ಏನನ್ನು ಹುಡುಕಾಡಲು ಇಚ್ಛಿಸುತ್ತಿದ್ದೀರಿ ಎಂಬುದನ್ನು ನಮೂದಿಸಬೇಕು. ಅದರಲ್ಲಿ ಚಿತ್ರಗಳು, ವೀಡಿಯೋಗಳು, ಲಿಂಕ್ ಗಳು ಅಥವಾ ಶೇರ್ ಆಗಿರುವ ಲೋಕೇಷನ್ ಮಾಹಿತಿಗಳು ಅಥವಾ ಕಾಂಟ್ಯಾಕ್ಟ್ ಕೂಡ ಆಗಿರಬಹುದು. ಹಿಸ್ಟರಿಯ ಯಾವುದೇ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಹುಡುಕಲು ಇದರಿಂದ ಸಾಧ್ಯವಾಗುತ್ತದೆ.

ಗ್ರೂಪ್ ಚಾಟ್ ಗೂ ಅನ್ವಯ:
ಹೌದು ಈ ಹೊಸ ವೈಶಿಷ್ಟ್ಯತೆಯ ಮೂಲಕ ಕೇವಲ ಒನ್-ಟು-ಒನ್ ಮಾತುಕತೆಯಲ್ಲಿನ ಚಾಟ್ ಹಿಸ್ಟರಿಯನ್ನು ಮಾತ್ರ ಹುಡುಕಬಹುದು ಎಂದುಕೊಳ್ಳಬೇಡಿ. ಬದಲಾಗಿ ಗ್ರೂಪ್ ಚಾಟ್ ನಲ್ಲಿರುವ ಮಾಹಿತಿಗಳನ್ನು ಕೂಡ ಹುಡುಕಾಟ ನಡೆಸುವುದಕ್ಕೆ ಅವಕಾಶವಿದೆ.

ಯಾವಾಗ ಬಿಡುಗಡೆಗೊಳ್ಳುತ್ತದೆ?
ಈಗಾಗಲೇ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಆಂಡ್ರಾಯ್ಡ್ ಮೆಸೇಜಿಂಗ್ ಬಳಕೆದಾರರು ಈ ವೈಶಿಷ್ಟ್ಯತೆಯನ್ನು ಇನ್ನೊಂದು ವಾರದಲ್ಲಿ ಪಡೆಯಲಿದ್ದಾರೆ. ಇದು ಆಪ್ ಅಪ್ ಡೇಟ್ ನ ಒಂದು ಭಾಗವಾಗಿ ಬಳಕೆದಾರರಿಗೆ ಲಭ್ಯವಾಗಲಿದೆ.

ಎಸ್ಎಂಎಸ್ ಗೆ ಆರ್ ಸಿಎಸ್ ಸೌಲಭ್ಯ:
ಆಂಡ್ರಾಯ್ಡ್ ಮೆಸೇಜಿಂಗ್ ಆಪ್ ಗೆ ಗೂಗಲ್ ಸಾಕಷ್ಟು ಬದಲಾವಣೆಗಳನ್ನು ತರುತ್ತಿದೆ. ಅದರಲ್ಲಿ ಒಂದು ಆರ್ ಸಿಎಸ್ ( ರಿಚ್ ಕಮ್ಯುನಿಕೇಷನ್ ಸರ್ವೀಸ್). ಇದು ಹೈ ರೆಸಲ್ಯೂಷನ್ ಚಿತ್ರಗಳನ್ನು ನೋಡಲು ಮತ್ತು ಇತರೆ ಹಲವು ಫೀಚರ್ ಗಳನ್ನು ಬಳಕೆದಾರರಿಗೆ ತರುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಎಸ್ಎಂಎಸ್ ಗೆ ಆರ್ ಸಿಎಸ್ ಲಭ್ಯವಾಗಲಿದೆ.

ಮೆಸೇಜ್ ಪ್ಲಾನ್ ಗಳ ಬದಲಾಗಿ ಡಾಟಾ ಪ್ಲಾನ್ ಗಳ ಬಳಕೆ:
ಗೂಗಲ್ ಈ ಆಂಡ್ರಾಯ್ಡ್ ಮೆಸೇಜ್ ಆಪ್ ನ್ನು ನಿಲ್ಲಿಸಲು ಮತ್ತು ಆರ್ ಸಿಎಸ್ ಮೂಲಕ ಚಾಟ್ ನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರಕ್ಕೆ ಖಚಿತತೆ ಇಲ್ಲ ಮತ್ತು ಯಾವಾಗ ಆಗುತ್ತದೆ ಎಂಬ ಬಗ್ಗೆ ನಿಖರವಾದ ಮಾಹಿತಿಯೂ ಲಭ್ಯವಿಲ್ಲ. ಆರ್ ಸಿಎಸ್ ಮೆಸೇಜ್ ನಿಮ್ಮ ಮೆಸೇಜ್ ಪ್ಲಾನ್ ಗಳ ಬದಲಾಗಿ ಡಾಟಾ ಪ್ಲಾನ್ ನ್ನೇ ಬಳಕೆ ಮಾಡುತ್ತದೆ. ಆದರೆ ಒಂದು ವೇಳೆ ರಿಸೀವ್ ಮಾಡುವ ವ್ಯಕ್ತಿಯ ಸ್ಮಾರ್ಟ್ ಫೋನ್ ಆರ್ ಸಿಎಸ್ ನ್ನು ಬೆಂಬಲಿಸದೇ ಇದ್ದಲ್ಲಿ ರೆಗ್ಯುಲರ್ ಟೆಕ್ಸ್ಟ್ ಮೆಸೇಜ್ ನಂತೆಯೇ ಅದು ತಲುಪುತ್ತದೆ. ಅಷ್ಟೇ ಅಲ್ಲ ಈ ಚಾಟ್ ಆಪ್ ಐಮೆಸೇಜ್ ನಷ್ಟು ಸುರಕ್ಷತೆಯನ್ನು ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಯಾಕೆಂದರೆ ಎಸ್ಎಂಎಸ್ ನ ಕಾನೂನು ಮಾನದಂಡಗಳನ್ನೇ ಇದು ಬಳಸುತ್ತದೆ.


Click it and Unblock the Notifications








