ಯಾವ OTTನಲ್ಲಿ ಸಿನಿಮಾ ಇದೆ ಅನ್ನೋ ಪ್ರಶ್ನೆಗೆ ಪ್ಲೇ ಸ್ಟೋರ್‌ನಿಂದಲೇ ಉತ್ತರ!
ಸಿನಿಮಾ ನೋಡಲು ಯಾವ OTT ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ ಎಂದು ಹುಡುಕುವುದು ಹಲವಾರು ಬಾರಿ ಕಿರಿಕಿರಿ ಉಂಟುಮಾಡುತ್ತದೆ. ಒಂದೊಂದು ಆ್ಯಪ್ ತೆರೆಯುತ್ತಾ ಚೆಕ್ ಮಾಡಬೇಕಾದ ಪರಿಸ್ಥಿತಿ ಬೇಸರ ತರಿಸುತ್ತಿದೆ. ಹಾಗಾಗಿ, Android ಬಳಕೆದಾರರಿಗೆ ಗೂಗಲ್ ಈಗ ಹೊಸದಾಗಿ ಒಂದು ಉಪಯುಕ್ತ, ದಿನನಿತ್ಯದ ಬಳಕೆಗೆ ತಕ್ಕ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಇದರಿಂದ ಸಿನಿಮಾಗಳು ಮತ್ತು ವೆಬ್‌ಸೀರೀಸ್‌ಗಳನ್ನು ಯಾವ ಸ್ಟ್ರೀಮಿಂಗ್ ಆ್ಯಪ್‌ನಲ್ಲಿ ನೋಡಬಹುದು ಎಂಬ ಪ್ರಶ್ನೆಗೆ ಈಗ ಪ್ಲೇ ಸ್ಟೋರ್‌ನಲ್ಲೇ ಉತ್ತರ ಸಿಗಲಿದೆ.!
ಹೌದು, ಗೂಗಲ್ ತನ್ನ ಪ್ಲೇ ಸ್ಟೋರ್‌ನಲ್ಲಿ ಹೊಸ 'Where to Watch' ಫೀಚರ್ ವಿಭಾಗವನ್ನು ಸೇರಿಸಲು ಆರಂಭಿಸಿದೆ. ಈ ಫೀಚರ್ ಮೂಲಕ ನೀವು ಹುಡುಕುವ ಸಿನಿಮಾ ಅಥವಾ ವೆಬ್‌ಸೀರೀಸ್ ಎಲ್ಲೆಲ್ಲಿ ಸ್ಟ್ರೀಮ್ ಆಗುತ್ತಿದೆ ಎಂಬ ಮಾಹಿತಿ ಒಂದೇ ಜಾಗದಲ್ಲಿ ಸಿಗುತ್ತದೆ. . ಪ್ಲೇ ಸ್ಟೋರ್‌ನಲ್ಲಿ ನೀವು ಯಾವುದೇ ಸಿನಿಮಾ ಅಥವಾ ಸರಣಿ ಹೆಸರು ಟೈಪ್ ಮಾಡಿದರೆ, ಅದರ ಜತೆಗೆ ಅದು ಲಭ್ಯವಿರುವ OTT ಪ್ಲಾಟ್‌ಫಾರ್ಮ್‌ಗಳ ಪಟ್ಟಿ ತಕ್ಷಣವೇ ತೋರಿಸಲಾಗುತ್ತದೆ. Netflix, Prime Video, JioCinema, Disney+ Hotstar ಸೇರಿದಂತೆ ಜನಪ್ರಿಯ ಆ್ಯಪ್‌ಗಳಲ್ಲಿ ಲಭ್ಯತೆ ಒಂದೇ ಕಾರ್ಡ್‌ನಲ್ಲಿ ಕಾಣುತ್ತದೆ.
ಇದರಿಂದ ನೀವು ನಿಮ್ಮ ಫೋನ್‌ನಲ್ಲಿ ಆ OTT ಆ್ಯಪ್ ಇರದಿದ್ದರೆ, ಕೈಯಾರೆ ಹುಡುಕುವ ತೊಂದರೆಯೇ ಇಲ್ಲ. ಕಾರ್ಡ್‌ನಲ್ಲೇ ಕಾಣುವ 'Install' ಬಟನ್ ಮೂಲಕ ನೇರವಾಗಿ ಇನ್‌ಸ್ಟಾಲ್ ಮಾಡಬಹುದು. ಆದರೆ, ಈ ಹೊಸ ಫೀಚರ್ ಉಪಯುಕ್ತವಾದರೂ, ಇನ್ನೂ ಒಂದು ಸಣ್ಣ ಮೈನಸ್ ಇದೆ. ಸಿನಿಮಾ ಅಥವಾ ಶೋ ನಿಮ್ಮ ಸಾಮಾನ್ಯ ಸಬ್‌ಸ್ಕ್ರಿಪ್ಷನ್‌ಗೆ ಒಳಪಟ್ಟಿರುತ್ತದೆಯೇ ಅಥವಾ ಖರೀದಿ/ರೆಂಟ್ ಮಾಡಬೇಕೇ ಎಂಬ ಮಾಹಿತಿ ಪ್ಲೇ ಸ್ಟೋರ್ ತೋರಿಸುವುದಿಲ್ಲ. ಅಂದರೆ, ಇದರಲ್ಲಿ ಸಬ್‌ಸ್ಕ್ರಿಪ್ಷನ್ ಮಾಹಿತಿ ಮಾತ್ರ ಲಭ್ಯವಿಲ್ಲ, ಅದಕ್ಕಾಗಿ OTT ಆ್ಯಪ್‌ನೊಳಗೆ ಹೋಗಿ ಪರಿಶೀಲನೆ ಮಾಡಬೇಕಾಗುತ್ತದೆ.

ಪ್ಲೇ ಸ್ಟೋರ್ ಇನ್ನಷ್ಟು ಆಧುನಿಕ ಅನುಭವ
Google Play Store ಹಲವು ವರ್ಷಗಳಿಂದ ಆ್ಯಪ್‌ಗಳು, ಗೇಮ್‌ಗಳು ಮತ್ತು ಪುಸ್ತಕಗಳಿಗಾಗಿ ಜನಪ್ರಿಯವಾಗಿದ್ದರೂ, ಸಿನಿಮಾಗಳ ಮಾಹಿತಿ ಹುಡುಕುವಲ್ಲಿ ಎಡವಿತ್ತು ಎನ್ನಬಹುದು. Google TV ಆ್ಯಪ್‌ಗೆ ಕಂಟೆಂಟ್ ವರ್ಗಾವಣೆಗೊಂಡ ನಂತರ ಬಳಕೆದಾರರಿಗೆ ಎಲ್ಲ ಮಾಹಿತಿ ಒಂದೇ ಜಾಗದಲ್ಲಿ ಸಿಗದೇ ಸಮಸ್ಯೆ ಎದುರಾಗಿತ್ತು. ಈ ಹೊಸ 'Where to Watch' ಅಪ್ಡೇಟ್ ಆ ಕೊರತೆಯನ್ನು ತುಂಬಿದೆ. ಈಗ ಸಿನಿಮಾವನ್ನು ನೋಡಬೇಡವೇ ಎಂಬ ನಿರ್ಧಾರ ತೆಗೆದುಕೊಳ್ಳುವುದೇ ಮತ್ತಷ್ಟು ಸುಲಭವಾಗಲಿದೆ.
ಎಲ್ಲಾ Android ಡಿವೈಸ್‌ಗಳಿಗೆ ಹಂತ ಹಂತವಾಗಿ ಲಭ್ಯ
ಗೂಗಲ್ ಈ ಹೊಸ 'Where to Watch' ವೈಶೀಷ್ಟ್ಯವನ್ನು ಹಂತ ಹಂತವಾಗಿ ರೋಲ್‌ಔಟ್ ಮಾಡುತ್ತಿದೆ. ನೀವು ಈಗಾಗಲೇ ಈ ಫೀಚರ್ ಅನ್ನು ಹೊಂದಿರಬಹುದು. ಅಥವಾ ಕೆಲವು ಬಳಕೆದಾರರಿಗೆ ತಡವಾಗಿ ಕಾಣಿಸಬಹುದು. ಫೀಚರ್ ಲಭ್ಯವಾದ ಬಳಿಕ, Android ಫೋನ್‌ನಲ್ಲಿ ಸಿನಿಮಾ ಹುಡುಕಾಟ ಹೆಚ್ಚು ವೇಗವಾಗಿ, ಗೊಂದಲವಿಲ್ಲದೆ, ಒಂದು ಜಾಗದಲ್ಲೇ ಸಾಧ್ಯವಾಗುತ್ತದೆ ಎಂಬುದು ನಮ್ಮ ಅಭಿಪ್ರಾಯ. ನಿಮಗೂ ಸಹ ಈ ಫೀಚರ್‌ನಿಂದ ಸಹಾಯವಾಗಲಿದೆ ಎಂದು ಅನಿಸುತ್ತದೆಯೇ?, ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








