ಬೆರಳ ತುದಿಯಲ್ಲೇ ಕೆಲಸ! ಸರ್ಕಾರಿ ಕಚೇರಿಗಳಿಗೆ ಹೋಗಂಗಿಲ್ಲ.. ಈ 5 ಆಪ್‌ಗಳು ಇರಲೇಬೇಕು
Government Apps: ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾಗೆ ಹೆಚ್ಚು ಒತ್ತು ನೀಡುತ್ತಿದೆ. ಸಾರ್ವಜನಿಕ ಅನುಕೂಲಕ್ಕಾಗಿ ಹೊಸ ಹೊಸ ಆಫ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಹೊಸ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೂ ಸರ್ಕಾರ ಮುಂದಾಗಿದೆ. ನಾವು ಕೆಲವು ಸರ್ಕಾರಿ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಿದ್ದೇವೆ. ನಿಮ್ಮ ಮೊಬೈಲ್‌ನಲ್ಲಿ ಈ ಐದು ಇರಲೇಬೇಕು! ಹಾಗಿದ್ರೆ, ಇವುಗಳನ್ನು ಯಾವುದಕ್ಕೆ ಬಳಸುತ್ತಾರೆ? ಈ ಆಪ್‌ಗಳ ಹೆಸರೇನು? ಎನ್ನುವುದನ್ನು ತಿಳಿಯೋಣ ಬನ್ನಿ.
ಅಂದೊಂದಿತ್ತು ಕಾಲ.. ಆ ಕಾಲದಲ್ಲಿ, ಯಾವುದೇ ಚಿಕ್ಕ ಕೆಲಸಕ್ಕೂ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ಆದರೆ, ಪ್ರಸ್ತುತ ತಂತ್ರಜ್ಞಾನ ಬದಲಾಗಿದೆ. ಮನೆಯಲ್ಲಿಯೇ ಇರುವ ಅನುಕೂಲತೆ ಬಂದಿದೆ. ಕೆಲವು ಕೆಲಸಗಳನ್ನು ಕಚೇರಿಗೆ ಹೋಗದೆ ನಿಮ್ಮ ಪೋನ್‌ಗಳಲ್ಲಿಯೇ ಮಾಡಬಹುದು. ಹೌದು, ಹೆಚ್ಚಿನ ಸರ್ಕಾರಿ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಇಲ್ಲಿಯವರೆಗೆ, ಕೇಂದ್ರ ಸರ್ಕಾರವು ಜನರ ಅನುಕೂಲಕ್ಕಾಗಿ ಹಲವು ಮೊಬೈಲ್ ಆಪ್‌ಗಳನ್ನು (Mobile Apps) ಬಿಡುಗಡೆ ಮಾಡಿದೆ. ಈ ಆಪ್‍ಗಳು ನಿಮ್ಮ ಮೊಬೈಲ್‍ನಲ್ಲಿದ್ದರೆ ಸರ್ಕಾರಿ ಸೇವೆಗಳೆಲ್ಲಾ ನಿಮ್ಮ ಬೆರಳ ತುದಿಯಲ್ಲಿಯೇ ಆಗುತ್ತವೆ.

ಎಂ ಆಧಾರ್: ಈ ಆಪ್‌ನ ಮೂಲಕ ಏನು ಮಾಡಬಹುದು?
ಎಂ ಆಧಾರ್ (mAadhaar) ಅಪ್ಲಿಕೇಶನ್‌ನ ಸಹಾಯದಿಂದ, ನಿಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು. ಆನ್‌ಲೈನ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಬಹುದು. ಆಧಾರ್ ಅನ್ನು ಪರಿಶೀಲಿಸುವುದು ಮತ್ತು ನಿಮ್ಮ ಇಮೇಲ್ ಅಥವಾ ಮೊಬೈಲ್ ಅನ್ನು ಪರಿಶೀಲಿಸುವಂತಹ ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು.
ಉಮಾಂಗ್ ಇಂಡಿಯಾ ಆಪ್: ಇದರಿಂದ ಏನು ಪ್ರಯೋಜನ?
ಉಮಾಂಗ್ ಆಪ್ (UMANG India) ಒಂದು ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ. ಉಮಾಂಗ್ ಆಪ್ (UMANG App) ಸಹಾಯದಿಂದ, ನೀವು ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಗ್ಯಾಸ್ ಬುಕಿಂಗ್, ಚಾಲನಾ ಪರವಾನಗಿ, ರೈಲು ಟಿಕೆಟ್ ಬುಕಿಂಗ್ ಸೇರಿದಂತೆ ಮುಂತಾದ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು.
ಎಂ ಪಾಸ್‌ಪೋರ್ಟ್ ಸೇವಾ: ಈ ಆಪ್‌ನ ಉಪಯೋಗವೇನು?
ಎಂ ಪಾಸ್‌ಪೋರ್ಟ್ ಸೇವಾ (Mpassportseva) ಸಹ ಮೊಬೈಲ್ ಆಪ್ ಆಗಿದೆ. ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಈ ಸರ್ಕಾರಿ ಎಂ ಪಾಸ್‌ಪೋರ್ಟ್ ಸೇವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದು. ಈ ಅಪ್ಲಿಕೇಶನ್ ಸಹಾಯದಿಂದ ನೀವು ಅಪಾಯಿಂಟ್‌ಮೆಂಟ್ ಬುಕ್ ಮಾಡಬಹುದು. ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಪಾಸ್‌ಪೋರ್ಟ್ ಸ್ಥಿತಿಯನ್ನು ಪರಿಶೀಲಿಸಬಹುದು.
ಎಂ ಪರಿವಾಹನ್: ಈ ಆಪ್‌ನಿಂದ ಇಷ್ಟೆಲಾ ಲಾಭವೇ?
ಎಂ ಪರಿವಾಹನ್ (mParivahan) ಆಪ್‌ನ ಸಹಾಯದಿಂದ, ನಿಮ್ಮ ವಾಹನ ದಾಖಲೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಹಾಗೆಯೇ ನೀವು ವರ್ಚುವಲ್ ಆರ್‌ಸಿ, ವರ್ಚುವಲ್ ಡಿಎಲ್, ಆರ್‌ಸಿ ಸರ್ಚ್, ಡಿಎಲ್ ಸರ್ಚ್, ಡುಪ್ಲಿಕೇಟ್ ಆರ್‌ಸಿ, ಮಾಲೀಕತ್ವ ವರ್ಗಾವಣೆ, ಹೈಪೋಥೆಕೇಶನ್ ತೆಗೆಯುವಿಕೆ ಮತ್ತು ಇನ್ನೂ ಅನೇಕ ಕೆಲಸಗಳನ್ನು ಮಾಡಬಹುದು.
ಡಿಜಿಲಾಕರ್ ಆಪ್: ಈ ಅಪ್ಲಿಕೇಶನ್‌ನಿಂದ ಉಪಯೋಗ ಏನು?
ಇದು ಡಿಜಿಟಲ್ ಲಾಕರ್ (DigiLocker App). ಇ ಆಪ್‌ನಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿ ಇಡಬಹುದು. ಈ ಅಪ್ಲಿಕೇಶನ್‌ನಲ್ಲಿ, ನೀವು ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಮತ್ತು ಅಂಕಪಟ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು.
ಒಟ್ಟಾರೆ, ಈ ಐದು ಅಪ್ಲಿಕೇಶನ್‌ಗಳಲ್ಲದೆ, ಇನ್ನೂ ಅನೇಕ ಸರ್ಕಾರಿ ಆಪ್‌ಗಳು ಲಭ್ಯವಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಬಹುದು.


Click it and Unblock the Notifications








