ಸಿಮ್ ಪರಿಶೀಲನೆಗೆ ಸುರಕ್ಷಿತವಾಗಿ ಆಧಾರ್ ಬಳಸುವುದು ಹೇಗೆ ಗೊತ್ತಾ..?
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಹೊಸ SIM ಕಾರ್ಡ್ ಅಥವಾ ಮೊಬೈಲ್ ಸಂಪರ್ಕವನ್ನು ಪಡೆಯಲು ನಾಗರಿಕರಿಗೆ ಆಧಾರ್ ಸಂಖ್ಯೆಗಳು ಕಡ್ಡಾಯವಾಗಿಲ್ಲ ಎಂದು ಸರ್ಕಾರ ಇತ್ತೀಚೆಗೆ ಸ್ಪಷ್ಟಪಡಿಸಿದೆ. ಈಗ, ದೂರಸಂಪರ್ಕ ಇಲಾಖೆ (DoT) ವರ್ಚುವಲ್ ಐಡಿ (ಆಧಾರ್ ಇ-ಕೆವೈಸಿ ಸೇವೆ) ಮತ್ತು ಹೊಸ ಸಿಮ್ ಕಾರ್ಡ್ ನೋಂದಣಿಗೆ ಸೀಮಿತವಾದ ಕೆವೈಸಿ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸಲು ದೇಶದಾದ್ಯಂತ ಎಲ್ಲಾ ಟೆಲಿಕಾಂ ಆಪರೇಟರ್ ಗಳಿಗೆ ಸೂಚನೆ ನೀಡಿದೆ.
ಇದು ಈಗಾಗಲೇ ಅಸ್ತಿತ್ವದಲ್ಲಿರುವ ಮೊಬೈಲ್ ಚಂದಾದಾರರ ಮರು-ಪರಿಶೀಲನೆಗೆ ಕೂಡ ಅನ್ವಯಿಸುತ್ತದೆ ಮತ್ತು ಜುಲೈ 1 ನೇ ತಾರೀಕಿನಿಂದ ಎಲ್ಲಾ ಕಡೆ ಇದು ಜಾರಿಗೆ ಬರಲಿದೆ. ಗಮನಿಸಬೇಕಾಗಿರುವ ಅಂಶವೇನೆಂದರೆ, ವರ್ಚುವಲ್ ಐಡಿ ಮತ್ತು ಸೀಮಿತ eKYC ಎರಡೂ ಕೂಡ ಆಧಾರ್ ವ್ಯವಸ್ಥೆ ಒಂದು ಭಾಗವಾಗಿರುತ್ತದೆ ಮತ್ತು ಪ್ರಮುಖವನಾಗಿ ನಾಗರೀಕರ ಆಧಾರ್ ಸಂಖ್ಯೆಯನ್ನು ಇದು ಹಂಚಿಕೊಳ್ಳುವುದಿಲ್ಲ. ಕೇವಲ ಅಗತ್ಯವಿರುವ ಮಾಹಿತಿ ಗಳನ್ನು ಮಾತ್ರ ಪಡೆದು,ಟೆಲಿಕಾಂ ಆಪರೇಟರ್ ಗಳ ಪರಿಶೀಲನೆಗಾಗಿ ಬಳಸಲಾಗುತ್ತೆ.

ಅಷ್ಟೇ ಅಲ್ಲ, ಯಾರ ಬಳಿ ಆಧಾರ್ ಸಂಖ್ಯೆ ಇಲ್ಲವೋ, ಅದರಲ್ಲೂ ವಿಶೇಷವಾಗಿ ಎನ್.ಆರ್.ಐ ಗಳು ಮತ್ತು ವಿದೇಶಿಗರು ಕೂಡ ಹೊಸ ಮೊಬೈಲ್ ಸಿಮ್ ಕಾರ್ಡ್ ಮತ್ತು ಕನೆಕ್ಷನ್ ಪಡೆಯಬಹುದಾಗಿದೆ. ಅದಕ್ಕಾಗಿ ಅವರು ಸರ್ಕಾರದ ಇತರೆ ಗುರುತಿನ ಚೀಟಿಗಳನ್ನು ನೀಡಬೇಕಾಗುತ್ತದೆ. ಜುಲೈ 1 ಕ್ಕೂ ಮುನ್ನ Telcos ತಮ್ಮ ಸಿಸ್ಟಮ್ ನಲ್ಲಿ ವರ್ಚುವಲ್ ಐಡಿಗೆ ಸಂಬಂಧಿಸಿದ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದು, ಆಧಾರ್ ನಂಬರ್ ನ್ನು ಹಂಚಿಕೊಳ್ಳಲು ಇಷ್ಟ ಪಡದೇ ಇದ್ದರೆ, ನೀವು ವರ್ಚುವಲ್ ಐಡಿಯನ್ನು ಬಳಸಿಕೊಳ್ಳಬಹುದು.
ವರ್ಚುವಲ್ ಐಡಿ ಅಂದರೆ ಏನು?
ಇದು ಯಾದೃಚ್ಛಿಕ 16- ಡಿಜಿಟಲ್ ಸಂಖ್ಯೆ ಆಗಿದ್ದು ಪ್ರತಿಯೊಬ್ಬರ ಆಧಾರ್ ಸಂಖ್ಯೆಯ ಜೊತೆ ಮ್ಯಾಪ್ ಆಗಿರುತ್ತದೆ. ಇದನ್ನು ನೀವು UIDAI ವೆಬ್ ಸೈಟ್ ನಿಂದ ನಿಮ್ಮ ಆಧಾರ್ ಸಂಖ್ಯೆಯನ್ನು ಎಂಟರ್ ಮಾಡುವ ಮೂಲಕ ಯಾವಾಗ ಬೇಕಿದ್ದರೂ ಪಡೆಯಬಹುದು.(https://resident.uidai.gov.in/web/resident/vidgeneration). ಆದರೆ ನೆನಪಿರಲಿ, ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು ಯಾಕೆಂದರೆ ಅದಕ್ಕೆ ಬರುವ OTP ಯನ್ನು ನೀವು ಬಳಸಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ಬಳಕೆದಾರರ ಬಳಿ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಆಗದೇ ಇದ್ದಲ್ಲಿ, ಹತ್ತಿರದ ಆಧಾರ್ ಸೆಂಟರ್ ಗೆ ತೆರಳಬೇಕಾಗುತ್ತದೆ. ವರ್ಚುವಲ್ ಐಡಿ ಆಧಾರ್ ಸಂಖ್ಯೆಯ ಜೊತೆ ಮ್ಯಾಪ್ ಆಗಿದ್ದರೂ ಕೂಡ ಅದು ಯಾರಿಗೂ ಕಾಣುವುದಿಲ್ಲ. UIDAI ಅದನ್ನು ಮಾಸ್ಕ್ ಮಾಡಿರುತ್ತದೆ. ಹಾಗಾಗಿ ಮೂರನೇ ವ್ಯಕ್ತಿಗಳು ಆಧಾರ್ ನಂಬರ್ ಮತ್ತು ಇತರೆ ಮಾಹಿತಿಯನ್ನು ಕದಿಯುವ ಭಯ ಇರುವುದಿಲ್ಲ. ದೂರಸಂಪರ್ಕ ಆಪರೇಟರ್ ಯಾವುದೇ ಆಧಾರ್ ಸಂಬಂಧಿತ ಡೇಟಾ ಅಥವಾ ವರ್ಚುವಲ್ ಐಡಿಯನ್ನು ಅವರ ಸಿಸ್ಟಮ್ ಗಳಲ್ಲಿ ಸಂಗ್ರಹಿಸುವುದಿಲ್ಲವೆಂದು ಡೋಟ್ ಸ್ಪಷ್ಟೀಕರಿಸಿದೆ.
ಸೀಮಿತ KYC ಎಂದರೇನು ?
ಇದರ ಮೂಲಕ, ಅಗತ್ಯ ಡಾಟಾವನ್ನು ಮೂರನೇ ಪಾರ್ಟಿ ಏಜೆನ್ಸಿಯವರಿಗೆ ನೀಡಲಾಗುತ್ತೆ ಮತ್ತು ಆಧಾರ್ ಸಂಖ್ಯೆ ಸೇರಿದಂತೆ ಇತರೆ ಯಾವುದೇ ಮಾಹಿತಿಯನ್ನು ನೀಡಲಾಗುವುದಿಲ್ಲ.ಟೆಲಿಕಾಂ ಸರ್ವೀಸ್ ಪ್ರೊವೈಡರ್ ಗಳು ಕೇಳುವ ಎಲ್ಲಾ eKYC ಕೋರಿಕೆಗಳು, UIDAI , KYC ಪ್ರತಿಕ್ರಿಯೆಯ ಭಾಗವಾಗಿ ಕೆಲವು ಮಾಹಿತಗಳನ್ನು ಮಾತ್ರ ಅಂದರೆ ಹೆಸರು, ಲಿಂಗ, ಹುಟ್ಟಿದ ದಿನಾಂಕ, ವಿಳಾಸ ಮತ್ತು ಫೋಟೋ ಮತ್ತು ಯುಐಡಿ ಟೋಕನ್ ನ್ನು ಮಾತ್ರ ಹಂಚಿಕೊಳ್ಳಲಾಗುತ್ತೆ.
ಆಧಾರ್ ನಂಬರ್ ನ್ನು ಟೆಲಿಕಾಂ ಸರ್ವೀಸ್ ಪ್ರೊವೈಡರ್ ಗೆ ಯಾವುದೇ ಕಾರಣಕ್ಕೂ ಸೀಮಿತ ಕೆವೈಸಿ ಪ್ರತಿಕ್ರಿಯೆಯ ಭಾಗವಾಗಿ ಹಂಚಿಕೊಳ್ಳಲಾಗುವುದಿಲ್ಲ ಎಂದು DoT ಅಧಿಕಾರಿಗಳು ತಿಳಿಸಿದ್ದಾರೆ. ವರ್ಚುವಲ್ ಐಡಿಯನ್ನು ಸೇರಿಸುವುದು ಟೆಲಿಕಾಂ ಆಪರೇಟರ್ ಗಳಿಗೆ ಬ್ಯಾಕ್ ಎಂಡ್ ನಲ್ಲಿ ಹೆಚ್ಚಿನ ಕೆಲಸಕ್ಕೆ ಕಾರಣವಾಗಬಹುದು. ಆದರೆ ಸೀಮಿತ ಕೆವೈಸಿ ಅವರಿಗೆ ಪೇಪರ್ ಲೆಸ್ ಆಗಲು ನೆರವು ನೀಡುತ್ತದೆ ಮತ್ತು ವೇಗವಾಗಿ ಕಾರ್ಯಗತಗೊಳಿಸಲು ಸಹಕರಿಸುತ್ತದೆ. DoT ಸಂಪೂರ್ಣ ಮಾಹಿತಿಗೆ ಇಲ್ಲಿ ಓದಿ. “http://dot.gov.in/sites/default/files/Virtual%20ID%20-Final.PDF?download=1”

ಇನ್ನು ಮುಂದೆ ನೀವು ಹೊಸ ಸಿಮ್ ಕಾರ್ಡ್ ಖರೀದಿಸುವುದಾದರೆ, ಎರಡು ರೀತಿಯ ದಾಖಲೆಗಳನ್ನು ಕೊಡಬೇಕು, ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯನ್ನು ಒದಗಿಸಬೇಕು., ಅದರ ಜೊತೆದೆ ಎರಡು ಇತ್ತೀಚೆಗಿನ ಪಾಸ್ ಪೋರ್ಟ್ ಸೈಜಿನ ಫೋಟೋಗಳನ್ನು ನೀಡಬೇಕು.
ವಿದೇಶಿ ಪ್ರಜೆಗಳು ಭಾರತದಲ್ಲಿ ಸಿಮ್ ಪಡೆಯುವುದಾದರೆ, ಏರ್ ಟೆಲ್ ಅವರಿಗೆ ನೀಡುತ್ತದೆ. ಪಾಸ್ಪೋರ್ಟ್ ಪ್ರತಿ, ವೀಸಾ ಮತ್ತು ಫೋಟೋವನ್ನು ಏರ್ ಟೆಲ್ ಮಳಿಗೆಗಳಲ್ಲಿ ನೀಡಿ ಪಡೆದುಕೊಳ್ಳಬಹುದು. ಇನ್ನು ಜಿಯೋ, ವಡಾಫೋನ್, ಐಡಿಯಾ ಇತ್ಯಾದಿಗಳು ವಿದೇಶಿಗರು ನೆಲೆಸಿರುವ ಹೊಟೆಲಿನ ಮಾಹಿತಿಯನ್ನು ಕೇಳುತ್ತೆ ಮತ್ತು ಇಲ್ಲಿ ಅವರು ಯಾರನ್ನು ಭೇಟಿ ಮಾಡಲು ಬಂದಿದ್ದಾರೆ ಎಂಬ ಮಾಹಿತಿಯನ್ನೂ ಕೇಳುತ್ತಾರೆ. ಅಂದರೆ ಸ್ಥಳೀಯರ ರೆಫರೆನ್ಸ್ ನ ಅಗತ್ಯವೂ ಅವರಿಗೆ ಇರುತ್ತದೆ.
ಪಾಸ್ ಪೋರ್ಟ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳು ಸ್ವೀಕಾರಾರ್ಹ ದಾಖಲೆಗಳಾಗಿರುತ್ತವೆ . ವಿಳಾಸದ ಗುರುತಿಗಾಗಿ, ವಿದ್ಯುತ್ ಬಿಲ್, ವಾಟರ್ ಬಿಲ್ , ಪಾಸ್ ಪೋರ್ಟ್, ಡ್ರೈವಿಂಗ್ ಲೈಸನ್ಸ್ ಇತ್ಯಾದಿ ದಾಖಲೆಗಳನ್ನು ನೀಡಬಹುದು. ಕೆಲವು ಸಂದರ್ಭಗಳಲ್ಲಿ, ಆಧಾರ್ ಒದಗಿಸದಿದ್ದಲ್ಲಿ ಚಿಲ್ಲರೆ ವ್ಯಾಪಾರಿಗಳು ಅಧಿಕೃತ ದಾಖಲೆಗಳನ್ನು ಕೇಳಬಹುದು.


Click it and Unblock the Notifications




