LG ಯಿಂದ ಮತ್ತೊಂದು ಟಾಪ್ ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್..!
ದಕ್ಷಿಣ ಕೊರಿಯಾದ ಟೆಕ್ ದಿಗ್ಗಜ ಎನಿಸಿರುವ LG ನ್ಯೂಯಾರ್ಕ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ತನ್ನ ಬಹು ನಿರೀಕ್ಷಿತ ಫ್ಲ್ಯಾಗ್ಶಿಪ್ ಮೊಬೈಲ್ ಆದ LG G7 ಥಿಂಕ್ ಅನ್ನು ಅನಾವರಣಗೊಳಿಸಿದೆ. ಗೂಗಲ್ ಅಸಿಸ್ಟೆಂಟ್ ಗೆಂದೇ ಮೀಸಲಾಗಿರುವ ಬಟನ್ ಹೊಂದಿರುವ LG ಯ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಇದಾಗಿದೆ ಎಂದು LG ಸಂಸ್ಥೆ ತಿಳಿಸಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಸೂರ್ಯನ ಬೆಳಕಿನಲ್ಲಿ ನೇರವಾಗಿ ಸ್ಪಷ್ಟವಾಗಿ ನೋಡಬಲ್ಲ ಫುಲ್ ವಿಶನ್ ಸೂಪರ್ ಬ್ರೈಟ್ ಡಿಸ್ಪ್ಲೇ ಹೊಂದಿದೆ.

LG ಸಂಸ್ಥೆಯ ಈ ನೂತನ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ ಭಾರತಕ್ಕೆ ಎಂದು ಕಾಲಿಡಲಿದೆ ಎಂದು ಇನ್ನೂ ಸಂಸ್ಥೆ ತಿಳಿಸಿಲ್ಲ. ಮುಂದಿನ ತಿಂಗಳುಗಳಲ್ಲಿ ಆದಷ್ಟು ಬೇಗ ಈ ಮೊಬೈಲ್ ದಕ್ಷಿಣ ಕೋರಿಯಾದ ಮಾರುಕಟ್ಟೆ ಪ್ರವೇಶಿಸಲಿದ್ದು ಶೀಘ್ರದಲ್ಲಿಯೇ ಭಾರತಕ್ಕೂ ಬರಬಹುದು ಎಂದು ಮೊಬೈಲ್ ಪ್ರಿಯರು ಆಶಯ ವ್ಯಕ್ತಪಡಿಸಿದ್ದಾರೆ.
G7 ಥಿಂಕ್ ಸ್ಮಾರ್ಟ್ಫೋನ್ ಅತ್ಯಾಕರ್ಷಕ ವಿನ್ಯಾಸ ಹೊಂದಿಲ್ಲವಾದರೂ ತಕ್ಕಮಟ್ಟಿಗೆ ಸುಂದರ ವಿನ್ಯಾಸ, ಉತ್ತಮ ಫೀಚರ್ಗಳನ್ನು ಹೊಂದಿರುವ ಗಟ್ಟಿಮುಟ್ಟಾದ ಫೋನ್ ಆಗಿದೆ. LG G7 ಥಿಂಕ್ 6.1 ಇಂಚ್ LCD ಡಿಸ್ಪ್ಲೇ ಹೊಂದಿದ್ದು, 3120X1440 ಪಿಕ್ಸೆಲ್ ಗಳ ರೆಸೊಲ್ಯೂಶನ್ ಮತ್ತು 19.5:9 ಆಸ್ಪೆಕ್ಟ್ ಅನುಪಾತ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಟಾಪ್-ನಾಚ್ ವಿನ್ಯಾಸವನ್ನು ಹೊಂದಿದ್ದು, ಬಳಕೆದಾರರ ಆಯ್ಕೆಯಂತೆ ಇದನ್ನು ಕವರ್ ಅಥವಾ ಕಸ್ಟಮೈಸ್ ಮಾಡಬಹುದು. ಡಿಸ್ಪ್ಲೇ ಯ ಬ್ರೈಟ್ನೆಸ್ ಅನ್ನು 1000 ನಿಟ್ಸ್ ವರೆಗೆ ಹೆಚ್ಚಿಸಬಲ್ಲ 'ಸೂಪರ್ ಬ್ರೈಟ್' ಮೋಡ್ ಈ ಫೋನ್ ನ ವಿಶೇಷತೆಯಾಗಿದೆ.
ಸ್ನ್ಯಾಪ್ಡ್ರಾಗನ್ 845 ಪ್ರಾಸೆಸರ್ ಹೊಂದಿರುವ ಈ ಫ್ಲ್ಯಾಗ್ಶಿಪ್ ಮೊಬೈಲ್ 4GB/6GB RAM ಮತ್ತು 64GB/128GB ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಅಲ್ಲದೆ ಮೈಕ್ರೋSD ಕಾರ್ಡ್ ಬಳಸಿ ಇದರ ಸ್ಟೋರೇಜ್ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಬಹುದಾಗಿದೆ.
LG G7 ಥಿಂಕ್ ನ ಕ್ಯಾಮೆರಾ ಕುರಿತು ಹೇಳುವುದಾದರೆ ಇದರಲ್ಲಿದೆ ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ 16MP ಪ್ರೈಮರಿ ಸೆನ್ಸರ್ f/1.6 ಅಪರ್ಚರ್ ನೊಂದಿಗೆ ಮತ್ತು 107 ಡಿಗ್ರೀ ವೈಡ್ ಆಂಗಲ್ 16MP ಶೂಟರ್ f/1.9 ಅಪರ್ಚರ್ ನೊಂದಿಗೆ . ಅಲ್ಲದೆ ಫೋನ್ ನ ಮುಂಭಾಗದಲ್ಲಿ f/1.9 ಅಪರ್ಚರ್ ನ 8MP ಸೆಲ್ಫೀ ಕ್ಯಾಮೆರಾ ಕೂಡ ಇದೆ. ಈ ಸ್ಮಾರ್ಟ್ಫೋನ್ ಎಐ ಸಾಮರ್ಥ್ಯವನ್ನು ಹೊಂದಿದ್ದು ನೀವು ಸೆರೆಹಿಡಿಯುವ ಫೋಟೋ ಗೆ ಅನುಗುಣವಾಗಿ ಅಗತ್ಯ ಸೆಟ್ಟಿಂಗ್ ಗಳನ್ನು ತಾನೇ ಮಾಡಿಕೊಳ್ಳುತ್ತದೆ ಎಂದು LG ಸಂಸ್ಥೆ ತಿಳಿಸಿದೆ.
ಈ ಫ್ಲ್ಯಾಗ್ಶಿಪ್ ಮೊಬೈಲ್ 3000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು,IP68 ಸರ್ಟಿಫಿಕೇಶನ್ ಮತ್ತು ಆಂಡ್ರಾಯ್ಡ್ ಓರಿಯೋ ಓಎಸ್ ಹೊಂದಿದೆ. LG G7 ಥಿಂಕ್ ನ್ಯೂ ಪ್ಲಾಟಿನಂ ಗ್ರೇ, ನ್ಯೂ ಅರೋರಾ ಬ್ಲ್ಯಾಕ್, ನ್ಯೂ ಮೊರಾಕನ್ ಬ್ಲೂ ಮತ್ತು ರ್ಯಾಸ್ಪ್ಬೆರ್ರಿ ರೋಸ್ ಎಂಬ ವಿವಿಧ ಬಣ್ಣಗಳ ಆವೃತ್ತಿಗಳಲ್ಲಿ ಲಭ್ಯವಿದೆ.
ಇಷ್ಟೇ ಅಲ್ಲದೆ LG G7 ಥಿಂಕ್ ಗೂಗಲ್ ಅಸಿಸ್ಟೆಂಟ್ ಗೆಂದೇ ಮೀಸಲಾದ ಬಟನ್ ಒಂದನ್ನು ಹೊಂದಿದ್ದು ಈ ಮೂಲಕ ಬಳಕೆದಾರರು ಬಹಳ ಸುಲಭವಾಗಿ ಗೂಗಲ್ ಅಸಿಸ್ಟೆಂಟ್ ಅನ್ನು ಆಕ್ಸೆಸ್ ಮಾಡಬಹುದಾಗಿದೆ. ಅಲ್ಲದೆ ಈ ಬಟನ್ ಮೇಲೆ ಡಬಲ್-ಟ್ಯಾಪ್ ಮಾಡುವ ಮೂಲಕ ಗೂಗಲ್ ಲೆನ್ಸ್ ಅನ್ನು ಲಾಂಚ್ ಮಾಡಬಹುದಾಗಿದೆ.
LG G7 ಥಿಂಕ್ ನಲ್ಲಿ 3.5mm ಆಡಿಯೋ ಜ್ಯಾಕ್ ಇದ್ದು ಹೈ-ಫೈ ಕ್ವಾಡ್ DAC ಕೂಡ ಇದೆ. ಅಲ್ಲದೆ ಇದರಲ್ಲಿರುವ ನೂತನ 'ಬೂಮ್ಬಾಕ್ಸ್' ಸಿಸ್ಟಮ್ ನಿಂದಾಗಿ LG G7 ಥಿಂಕ್ ಅದೇ ಶ್ರೇಣಿಯ ಇತರ ಮೊಬೈಲ್ಗಳಿಗಿಂತ ಉತ್ತಮ ಸೌಂಡ್ ಹೊಂದಿದೆ ಎಂದು LG ಸಂಸ್ಥೆ ತಿಳಿಸಿದೆ.

ಇಷ್ಟೆಲ್ಲಾ ಫೀಚರ್ಗಳಿರುವ ಈ LG ಫ್ಲ್ಯಾಗ್ಶಿಪ್ ಮೊಬೈಲ್ ಭಾರತದಲ್ಲಿ ಯಾವಾಗ ಲಾಂಚ್ ಆಗುತ್ತದೆ ಮತ್ತು ಜನರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ. ಸಧ್ಯಕ್ಕೆ ಈ ಸ್ಮಾರ್ಟ್ಫೋನಿನ ಬೆಲೆಯನ್ನು LG ಸಂಸ್ಥೆ ಬಹಿರಂಗಪಡಿಸಿಲ್ಲ.


Click it and Unblock the Notifications