Aadhaar: ಇನ್ಮುಂದೆ ಟೆನ್ಷನ್ ಇರಲ್ಲ..! ಜಸ್ಟ್ ಮೊಬೈಲ್ ಇದ್ದರೆ ಸಾಕು.. ಆಧಾರ್‌ನಲ್ಲಿ ಹೊಸ ಫೀಚರ್; ಯಾವಾಗ ಲಭ್ಯ?
ಇನ್ಮುಂದೆ ಟೆನ್ಷನ್ ಬೇಡ.. ಭೌತಿಕ ಕಾರ್ಡ್ ಬೇಕಿಲ್ಲ.. ನಿಮಗೆ ಬೇಕಾಗಿರುವುದು ಮೊಬೈಲ್ ಅಷ್ಟೇ..! ಹೌದು, ಕೇಂದ್ರ ಸರ್ಕಾರ ಹೊಸ ಆಧಾರ್ ಆಪ್ (Aadhaar App) ಬಿಡುಗಡೆ ಮಾಡಿದೆ. ಇದರಲ್ಲಿ ಬಳಕೆದಾರರು ತಮ್ಮ ಆಧಾರ್ (Aadhaar Card) ಮಾಹಿತಿಯನ್ನು ಯಾವುದೇ ಭೌತಿಕ ಗುರುತಿನ ಚೀಟಿಯ ಅಗತ್ಯವಿಲ್ಲದೆ, ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ಆಧಾರ್ ಆಪ್ (New Aadhaar App) ಡೇಟಾ ಸೋರಿಕೆ ಮತ್ತು ದುರುಪಯೋಗವನ್ನು ತಡೆಯುತ್ತದೆ. ಬನ್ನಿ, ಹೊಸ ಆಧಾರ್ ಆಪ್‌ನ ವೈಶಿಷ್ಟ್ಯಗಳೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ತಿಳಿಯೋಣ.
ಹೌದು, ಈವರೆಗೆ ಹೋಟೆಲ್, ಕಾಲೇಜ್ ಮತ್ತು ಇತರೆ ಸ್ಥಳಗಳಲ್ಲಿ ನಿಮ್ಮ ಗುರುತಿನ ಚೀಟಿಗಾಗಿ ಆಧಾರ್ ಕಾರ್ಡ್‌ನ ಸಾಫ್ಟ್ ಮತ್ತು ಹಾರ್ಡ್ ಪ್ರತಿಯನ್ನು ಕೇಳಲಾಗುತ್ತಿತ್ತು. ಆದರೆ, ಇನ್ಮುಂದೆ ಮುಂದೆ ಇದು ಅಗತ್ಯವಿಲ್ಲ. ಆಧಾರ್ ಕಾರ್ಡ್ ನೀಡುವ ಸಂಸ್ಥೆ ಯುಐಡಿಎಐ ಆಧಾರ್ ಕಾರ್ಡ್‌ಗೆ ಸ್ಮಾರ್ಟ್ ಫೇಸ್ ದೃಢೀಕರಣ ವೈಶಿಷ್ಟ್ಯವನ್ನು ಸೇರಿಸಿದೆ. ನಿಮ್ಮ ಮೊಬೈಲ್ ಸಹಾಯದಿಂದ ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಗುರುತಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ, ನೀವು ಆಧಾರ್ ಕಾರ್ಡ್ ಸಾಫ್ಟ್ ಕಾಪಿಯನ್ನು ನೀಡುವ ಅಥವಾ ತೋರಿಸುವ ಅಗತ್ಯವಿಲ್ಲ.

ಈ ಹೊಸ ಆಧಾರ್ ಆಪ್ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ಆಧಾರ್ ದೃಢೀಕರಣವು ತುಂಬಾ ಸುಲಭವಾಗಿದೆ. ನೀವು ಯುಪಿಐ (UPI) ಮೂಲಕ ವಹಿವಾಟು ನಡೆಸುವ ವಿಧಾನವನ್ನು ಸಹ ಸುಲಭಗೊಳಿಸಲಾಗುತ್ತದೆ. ಇದಲ್ಲದೆ, ನೀವು ಆಧಾರ್ ಕಾರ್ಡ್ ಅನ್ನು ಪರಿಶೀಲಿಸಬಹುದು. ಯುಪಿಐ ವಹಿವಾಟುಗಳಿಗೆ ಮೊಬೈಲ್ ಅಗತ್ಯವಿರುವಂತೆ, ಆಧಾರ್ ದೃಢೀಕರಣಕ್ಕೂ ಸ್ಮಾರ್ಟ್‌ಫೋನ್ ಅಗತ್ಯವಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಕೆಲವು ವೈಶಿಷ್ಟ್ಯಗಳನ್ನು ನೋಡಬಹುದು. ಫೇಸ್ ಐಡಿ ದೃಢೀಕರಣ, ಲಾಗಿನ್ ಮಾಡಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮತ್ತು ಬಳಕೆದಾರರ ಐಡಿ ಹಂಚಿಕೊಳ್ಳುವಂತಹ ಫೀಚರ್ ಕಂಡುಬರುತ್ತದೆ. ಪ್ರಸ್ತುತ ಆಪ್ ಬೀಟಾ ಹಂತದಲ್ಲಿದೆ. ಈ ಆಪ್ ಆಧಾರ್ ಕಾರ್ಡ್ ಪರಿಶೀಲನೆಯನ್ನು ಸರಳಗೊಳಿಸಲಿದೆ. ಇದರೊಂದಿಗೆ ದುರುಪಯೋಗ ತಡೆಯುತ್ತದೆ. ನಿಮ್ಮ ವೈಯಕ್ತಿಕ ವಿವರಗಳ ಗೌಪ್ಯತೆಯನ್ನು ಕಾಪಾಡುತ್ತದೆ. ವಿಶೇಷವೆಂದರೆ, ಆಪ್ ಬಳಕೆದಾರ ಸ್ನೇಹಿಯಾಗಿದೆ. ಇದರಲ್ಲಿ ಫೇಸ್ ಗುರುತಿನಂತಹ ವೈಶಿಷ್ಟ್ಯ ಹೊಂದಿದೆ. ಇದರಿಂದ ನಿಮ್ಮ ಆಧಾರ್ ವಿವರಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು. ಇನ್ಮುಂದೆ ನೀವು ಆಧಾರ್ ಕಾರ್ಡ್ ಅನ್ನು ಎಲ್ಲೆಡೆ ತೆಗೆದುಕೊಂಡು ಹೋಗುವುದು ತಪ್ಪುತ್ತದೆ.
ಹೊಸ ಆಧಾರ್ ಆಪ್ ವೈಶಿಷ್ಟ್ಯಗಳು
* ಹೊಸ ಆಧಾರ್ ಆಪ್ ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಖಚಿತಪಡಿಸುತ್ತದೆ. ಬಳಕೆದಾರರು ತಮ್ಮ ಒಪ್ಪಿಗೆಯೊಂದಿಗೆ ಅಗತ್ಯ ಡೇಟಾವನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು.
* ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಪರಿಶೀಲನೆ ಮಾಡಬಹುದು.
* ನೀವು ಆಧಾರ್ ಕಾರ್ಡ್ ಸಾಫ್ಟ್ ಕಾಪಿಯನ್ನು (ಮುದ್ರಿತ ಆಧಾರ್ ಪ್ರತಿ) ನೀಡುವ ಅಥವಾ ತೋರಿಸುವ ಅಗತ್ಯವಿಲ್ಲ. ಎಲ್ಲೆಡೆ ಕೊಂಡೊಯ್ಯುವ ಅವಶ್ಯಕತೆ ಇರಲ್ಲ.
* ನೀವು ತಮ್ಮ ಭೌತಿಕ ಆಧಾರ್ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿಲ್ಲದೆ, ಡಿಜಿಟಲ್ ಮೂಲಕ ಪರಿಶೀಲಿಸಬಹುದು.
* ಭದ್ರತೆ ದೃಢಪಡಿಸಲು ಫೇಸ್ ಐಡಿ ದೃಢೀಕರಣ. ಈ ಫೇಸ್ ಐಡಿ ದೃಢೀಕರಣವು ಶೇಕಡಾ 100 ರಷ್ಟು ಡಿಜಿಟಲ್ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
* ನಿಮ್ಮ ವೈಯಕ್ತಿಕ ವಿವರಗಳು (ಡೇಟಾ) ಸೋರಿಕೆಯಾಗುವುದಿಲ್ಲ. ಇದಲ್ಲದೆ ದುರುಪಯೋಗ ಆಗದಂತೆ ಮತ್ತು ಕಾಪಿ
(ನಕಲು) ಆಗದಂತೆ ತಡೆಯುತ್ತದೆ.
* ಈ ಹೊಸ ಆಧಾರ್ ಆಪ್ ತ್ವರಿತ ಮತ್ತು ಸುಲಭವಾದ ಪರಿಶೀಲನಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ.
ನೀವು ಆಧಾರ್ ಮುಖ ದೃಢೀಕರಣವನ್ನು ಬಳಸಲು, ನಿಮ್ಮ ಫೋನಿನಲ್ಲಿ ಹೊಸ ಆಧಾರ್ ಆಪ್ ಡೌನ್‌ಲೋಡ್ ಮಾಡಬೇಕು. ಬಳಿಕ ಈ ಕೆಳಗಿನ ಹಂತಗಳನ್ನು ಪೂರ್ಣಗೊಳಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ನೀವು ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಪರಿಶೀಲಿಸಬಹುದು. ಇದರಲ್ಲಿ ಬಳಕೆದಾರ ಬಗೆಗಿನ ಪ್ರಮುಖ ಮಾಹಿತಿಯು ಮೊಬೈಲ್ ಡಿಸ್ಪ್ಲೇ ಮೇಲೆ ಗೋಚರಿಸುತ್ತದೆ. ಮೊದಲೇ ಹೇಳಿದಂತೆ, ಪ್ರಸ್ತುತ ಆಧಾರ್ ಮುಖ ದೃಢೀಕರಣ ಫೀಚರ್ ಬೀಟಾ ಪರೀಕ್ಷಾ ಆವೃತ್ತಿಯಲ್ಲಿ ಲಭ್ಯವಿದೆ. ಎಲ್ಲರೂ ಇದನ್ನು ಬಳಸಲು ಇನ್ನು ಸ್ವಲ್ಪ ಕಾಯಬೇಕಿದೆ.


Click it and Unblock the Notifications








