ಇನ್ಮುಂದೆ ಕನ್ನಡದಲ್ಲೂ ಸಿಗಲಿದೆ 'ಪೇಟಿಎಂ' ಸೇವೆ!
ಜನಪ್ರಿಯ ಡಿಜಿಟಲ್ ಪೇಮೆಂಟ್ ಆಪ್ ಪೇಟಿಎಂ ಕಂಪನಿಯು ಕನ್ನಡವೂ ಸೇರಿದಂತೆ 11 ಪ್ರಾದೇಶಿಕ ಭಾಷೆಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದೆ. ಡಿಜಿಟಲ್ ಸ್ವರೂಪದಲ್ಲಿ ಹಣ ಪಾವತಿ ಮಾಡಲು ಬಯಸುವ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪೇಟಿಎಂ ಪ್ರಾದೇಶಿಕ ಭಾಷೆಗಳಲ್ಲಿಯೂ ಸೇವೆಯನ್ನು ನೀಡಲು ಮುಂದಾಗಿರುವುದಾಗಿ ತಿಳಿಸಿದೆ.
ಪೇಟಿಎಂ ಬಳಕೆದಾರರ ಪೈಕಿ ಶೇಕಡ 35ಕ್ಕೂ ಹೆಚ್ಚು ಜನರು ಪ್ರಾದೇಶಿಕ ಭಾಷೆಗಳ ಬಳಕೆಗೆ ಒಲವು ತೋರುತ್ತಿರುವುದು ಕಂಡುಬಂದಿರುವುದರಿಂದ ಪ್ರಾದೇಶಿಕ ಭಾಷೆಗಳಲ್ಲಿಯೂ ಪೇಟಿಎಂ ಇನ್ಮುಂದೆ ಕಾರ್ಯನಿರ್ವಹಿಸಲಿದ್ದು, ಕನ್ನಡದ, ಇಂಗ್ಲಿಷ್ ಜತೆಗೆ ಗುಜರಾತಿ, ತೆಲುಗು, ಮರಾಠಿ, ಬಂಗಾಳಿ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಕೂಡ ಪೇಟಿಎಂ ಸೇವೆ ಲಭ್ಯವಾಗಲಿದೆ.

ಇಂದು ಕೋಟ್ಯಂತರ ಭಾರತೀಯರು ತಮ್ಮ ದಿನನಿತ್ಯದ ವ್ಯವಹಾರಗಳಿಗೆ ಪೇಟಿಎಂ ಅನ್ನು ಬಳಸುತ್ತಿದ್ದು, ದಿನದಿಂದ ದಿನಕ್ಕೆ ಇದರ ಪ್ರಮಾಣ ಏರುತ್ತಲೇ ಇದೆ. ಪ್ರಾದೇಶಿಕ ಭಾಷೆಗಳಲ್ಲಿ ಸೇವೆಯನ್ನು ಒದಗಿಸುವ ಮೂಲಕ ಸದ್ಯಕ್ಕಿರುವ ಬಳಕೆದಾರರಿಗೆ ಮತ್ತು ಭವಿಷ್ಯದ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಪೇಟಿಎಂ ಹೇಳಿಕೊಂಡಿದೆ.
ಪೇಟಿಎಂ ಕಾರ್ಯಾರಂಭ ಮಾಡಿದ ಐದು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ರಾಷ್ಟ್ರದ ಶೇ.88ರಷ್ಟು ಹಳ್ಳಿಗಳಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಜತೆಗೆ, ದೇಶದಲ್ಲಿನ ಇಂಟರ್‍ನೆಟ್ ಬಳಕೆ ಪ್ರವೃತ್ತಿ ಬಗ್ಗೆ ಸಂಸ್ತೆಯ ಈ ಪ್ರಯತ್ನವು ಆ ನಿಟ್ಟಿನಲ್ಲಿ ಒಂದು ಸರಿಯಾದ ಉಪಕ್ರಮವಾಗಿದೆ ಎಂದು ಪೇಟಿಎಂನ ಹಿರಿಯ ಉಪಾಧ್ಯಕ್ಷ ದೀಪಕ್ ಅಬೋಟ್ ಹೇಳಿದ್ದಾರೆ.

ಐಎಂಎಐ-ಕಾಂಟಾರ್ ಮತ್ತು ಗೂಗಲ್-ಕೆಪಿಎಂಜಿ ವರದಿಗಳು ಭಾರತದಲ್ಲಿ ಇಂಗ್ಲೀಷೇತರ ಭಾಷಿಕರು ಡಿಜಿಟಲ್ ಸೇವೆಗಳನ್ನುಅಳವಡಿಸಿಕೊಳ್ಳುತ್ತಿರುವ ಪ್ರವೃತ್ತಿ ಏರುಮುಖವಾಗಿದೆ. ಪ್ರಾದೇಶಿಕ ಭಾಷೆಗಳಲ್ಲಿ ಇಂತಹ ಸೇವೆಗಳನ್ನು ಒದಗಿಸಿದರೆ, ಇನ್ನೂ 20 ಕೋಟಿಗೂ ಹೆಚ್ಚು ಜನರು ಇಂಟರ್‌ನೆಟ್ ಬಳಸುವಂತೆ ಮಾಡಬಹುದು ಎಂದ ನಂತರ ಪೇಟಿಎಂ ಸಂಸ್ಥೆ ಎಚ್ಚತ್ತಿದೆ ಎನ್ನಲಾಗಿದೆ.


Click it and Unblock the Notifications








