ಮಗುವಿನ ಅಶ್ಲೀಲತೆಯನ್ನು ವಾಟ್ಸ್ ಆಪ್ ನಲ್ಲಿ ಹಂಚಿದರೆ 7 ವರ್ಷ ಜೈಲು
ವಾಟ್ಸ್ ಆಪ್ ನಲ್ಲಿ ಅಶ್ಲೀಲ ವೀಡಿಯೋಗಳು ಹರಿದಾಡುವುದು ಹೆಚ್ಚಾಗಿದೆ ಅದರಲ್ಲೂ ಮಕ್ಕಳನ್ನು ಅಶ್ಲೀಲತೆಗೆ ಬಳಸಿ ಅದನ್ನು ಮೆಸೇಜಿಂಗ್ ಆಪ್ ಗಳಲ್ಲಿ ಹರಿಯ ಬಿಡಲಾಗುತ್ತದೆ. ಇದರ ವಿರುದ್ಧ ಭಾರತೀಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದು ಹೊಸ ನಿಯಮವನ್ನು ಜಾರಿಗೆ ತರಲು ಯೋಜನೆ ರೂಪಿಸಿದೆ.

ಏಳು ವರ್ಷ ಸಜೆ:
ಲೈಂಗಿಕ ಅಪರಾಧ ಕಾಯ್ದೆಯಡಿಯಲ್ಲಿ ಸರ್ಕಾರವು ಹಲವಾರು ತಿದ್ದುಪಡಿಗಳನ್ನು ಜಾರಿಗೆ ತಂದಿದ್ದು ಮಕ್ಕಳನ್ನು ಅಶ್ಲೀಲ ತುಣುಕುಗಳಿಗೆ ಬಳಸಿ ಅದನ್ನು ಶೇರ್ ಮಾಡುವವರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ಜಾಮೀನು ಲಭ್ಯವಾಗುವುದಿಲ್ಲ ಜೊತೆಗೆ ಭಾರೀ ದಂಡವನ್ನು ಕೂಡ ವಿಧಿಸಲಾಗುತ್ತದೆ.
ಈ ನಿಯಮಾವಳಿಯಲ್ಲಿ ಮಕ್ಕಳ ಅಶ್ಲೀಲ ವೀಡಿಯೋವನ್ನು ಅಧಿಕಾರಿಗಳಿಗೆ ವರದಿ ಮಾಡದೇ ಇರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ ಅಂತವರಿಗೂ ಕೂಡ ಭಾರೀ ಮೊತ್ತದ ದಂಡವನ್ನು ಹಾಕಲಾಗುತ್ತದೆ.

ಕೆಲವೇ ವಾರದಲ್ಲಿ ಕ್ಯಾಬಿನೆಟ್ ಗೆ:
ಟೈಮ್ಸ್ ಆಫ್ ಇಂಡಿಯಾ ವರದಿಯು ತಿಳಿಸುವಂತೆ ಆಕ್ಟ್ ನ ಬದಲಾವಣೆಯು ಕಾನೂನು ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಾಯ್ದೆಯ ಅನುಮೊದನೆಗಾಗಿ ಕಾಯುತ್ತಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಕ್ಯಾಬಿನೆಟ್ ಗೆ ಕಳಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಆಕ್ಟ್ ನ ಪ್ರಕಾರ ಯಾವುದೇ ವ್ಯಕ್ತಿ ಮಕ್ಕಳ ಅಶ್ಲೀಲತೆಯ ವೀಡಿಯೋವನ್ನು, ಫೋಟೋವನ್ನು ಸಂಗ್ರಹಿಸುವುದು ಅಥವಾ ವಾಟ್ಸ್ ಆಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಮಾಡಿದ್ದಲ್ಲಿ ಅದರಲ್ಲೂ ಪ್ರಮುಖವಾಗಿ ವಾಣಿಜ್ಯ ಉದ್ದೇಶಕ್ಕಾಗಿ ಮಾಡಿದ್ದಲ್ಲಿ ಅಂತಹವರಿಗೆ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.ಎರಡನೇ ಬಾರಿ ಇದೇ ತಪ್ಪು ಮುಂದುವರಿದರೆ 5 ರಿಂದ 7 ವರ್ಷಗಳ ಜೈಲುಶಿಕ್ಷೆಗೆ ಗುರಿಪಡಿಸಲಾಗುತ್ತದೆ.

ದೂರು ನೀಡದೇ ಇರುವವರಿಗೂ ದಂಡ:
ಆದರೆ ಅಚಾನಕ್ ಆಗಿ ಯಾವುದೇ ವ್ಯಕ್ತಿ ವಾಟ್ಸ್ ಆಪ್ ನಲ್ಲಿ ಮಕ್ಕಳ ಅಶ್ಲೀಲ ವೀಡಿಯೋ ಪಡೆದರೆ ಅಂತಹವರಿಗೆ ಶಿಕ್ಷೆ ವಿಧಿಸುವ ಬಗ್ಗೆ ಯಾವುದೇ ಅಂಶವನ್ನು ಈ ಆಕ್ಟ್ ನಲ್ಲಿ ನಮೂದಿಸಲಾಗಿಲ್ಲ,ಆದರೆ ಹೀಗೆ ಒಂದು ವೇಳೆ ಪಡೆದಲ್ಲಿ ಅವರು ಕೂಡಲೇ ಅದನ್ನು ಅಧಿಕಾರಿಗಳಿಗೆ ವರದಿ ಮಾಡಬೇಕಾಗುತ್ತದೆ ಮತ್ತು ಅಂತಹ ಬಳಕೆದಾರರು ದೂರು ನೀಡಿದ ನಂತರ ಆ ವೀಡಿಯೋವನ್ನು ಡಿಲೀಟ್ ಮಾಡಬೇಕಾಗುತ್ತದೆ. ಒಂದು ವೇಳೆ ದೂರು ನೀಡದೇ ಇದ್ದಲ್ಲಿ ಅಂತವರಿಗೆ 1000 ರುಪಾಯಿ ದಂಡವನ್ನು ಮೊದಲ ಬಾರಿಗೆ ಮತ್ತು ಪದೇ ಪದೇ ಮರುಕಳಿಸಿದರೆ 5000 ರುಪಾಯಿವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಮಕ್ಕಳ ರಕ್ಷಣೆಗೆ ಮುಂದಾದ ಸರ್ಕಾರ:
ವಿಶ್ವದಲ್ಲಿ ಅತೀ ಹೆಚ್ಚು ವಾಟ್ಸ್ ಆಪ್ ಬಳಕೆದಾರರಿದ್ದಾರೆ ಮತ್ತು ವಿಚಾರ ವಿನಿಮಯಕ್ಕೆ ಗ್ರೂಪ್ ಚಾಟ್ ನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ.ಅಷ್ಟೇ ಅಲ್ಲ ಅಶ್ಲೀಲ ವೀಡಿಯೋಗಳ ಹಂಚಿಕೆಯೂ ಕೂಡ ವಾಟ್ಸ್ ಆಪ್ ನಲ್ಲಿ ಅತಿಯಾಗಿ ನಡೆಯುತ್ತಿದೆ. ವಯಸ್ಕ ನಟರನ್ನು ಒಳಗೊಂಡಿರುವ ಕಾಮಪ್ರಚೋದಕ ವೀಡಿಯೋಗಳನ್ನು ನೋಡುವುದು ಮತ್ತು ಅದನ್ನು ಸಂಗ್ರಹಿಸುವುದು ಭಾರತದಲ್ಲಿ ಕಾನೂನುಬಾಹಿರವಾಗಿಲ್ಲ. ಅದರಲ್ಲೂ ವಾಣಿಜ್ಯ ಉದ್ದೇಶದಿಂದ ಅಶ್ಲೀಲ ವೀಡಿಯೋ ಹಂಚುವುದಕ್ಕೆ ಭಾರತದಲ್ಲಿ ಯಾವುದೇ ಕಾನೂನು ನಿಯಮಾವಳಿಗಳಿಲ್ಲ.
ಮಕ್ಕಳ ಅಶ್ಲೀಲತೆ ವೀಡಿಯೋ ಅಥವಾ ಫೋಟೋಗಳನ್ನು ಸಂಗ್ರಹಿಸುವುದು, ರೆಕಾರ್ಡಿಂಗ್ ಮಾಡುವುದು, ಹಂಚುವುದು ಅಥವಾ ನೋಡುವುದು ಕಾನೂನುಬಾಹಿರ ಚಟುವಟಿಕೆಯಾಗಿರುತ್ತದೆ.ಆದರೆ ಈಗ ಹೊಸದಾಗಿ ಬರುವ ನಿಯಮಾವಳಿಗಳು ಇದರಲ್ಲಿನ ದೋಷವನ್ನು ಸರಿಪಡಿಸುವುದಕ್ಕೆ ಮತ್ತಷ್ಟು ನೆರವು ನೀಡಲಿದೆ ಎಂಬ ವಿಶ್ವಾಸವಿದೆ. ಆ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚು ಒತ್ತು ಸಿಗಲಿದೆ.


Click it and Unblock the Notifications








