ವಾಟ್ಸಾಪ್ ನ ದೋಷದಿಂದ ಬಯಲಾಗುತ್ತದೆಯಂತೆ ಜನರ ಚ್ಯಾಟ್ ಮತ್ತು ನಿದ್ರೆಯ ಮಾದರಿ!
ವಾಟ್ಸಾಪ್ ಆನ್ಲೈನ್ ಸ್ಟೇಟಸ್ ಮತ್ತು ಲಾಸ್ಟ್ ಸೀನ್ ಫೀಚರ್ಗಳ ಮೂಲಕ ಇಬ್ಬರು ಬಳಕೆದಾರರು ಪರಸ್ಪರ ಮೆಸೇಜ್ ಮಾಡುತ್ತಿದ್ದಾರೆಯೇ ಮತ್ತು ಅವರ ನಿದ್ರೆಯ ಸಮಯವನ್ನು ಅಥವ ಮಾದರಿಯನ್ನು ಕಂಡುಹಿಡಿಯಬಹುದು.
ತಿಂಗಳ ಹಿಂದಷ್ಟೇ ವಾಟ್ಸಾಪ್ ಪ್ರತಿದಿನ 1 ಮಿಲಿಯನ್ ಆಕ್ಟಿವ್ ಬಳಕೆದಾರರನ್ನು ಹೊಂದಿರುವ ಸಾಧನೆ ಬಗ್ಗೆ ತಿಳಿಸಿತ್ತು ಮತ್ತು ಅವರ ಮಾಹಿತಿಯನ್ನು ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಬಳಸಿ ಗೌಪ್ಯತೆ ಕಾಪಾಡುವ ಬಗ್ಗೆ ಭರವಸೆ ನೀಡಿತ್ತು.

ಈ ಡೇಟಾ ಎನ್ಕ್ರಿಪ್ಶನ್ ಬಳಸುವ ಮೂಲಕ ಸ್ವತಃ ವಾಟ್ಸಾಪ್ ಕಂಪೆನಿಯು ಕೂಡ ಬಳಕೆದಾರರ ಮೆಸೇಜ್ಗಳನ್ನು ಓದಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ ರಾಬರ್ಟ್ ಹೀಟನ್ ಎಂಬ ಸಾಫ್ಟ್ವೇರ್ ಇಂಜಿನಿಯರ್ ಒಬ್ಬ ವಾಟ್ಸಾಪ್ ನ ಈ ಭರವಸೆಗಳು ಸುಳ್ಳು ಎಂದು TheNextWeb ಮೂಲಕ ಹೇಳಿದ್ದಾನೆ.
ವಾಟ್ಸಾಪ್ ನ ಒಂದು ನ್ಯೂನತೆಯನ್ನು ಕಂಡುಹಿಡಿದಿರುವುದಾಗಿ ಹೇಳುತ್ತಿರುವ ಈತ, ಈ ದೋಷದಿಂದ ವಾಟ್ಸಾಪ್ ಬಳಕೆದಾರರು ಯಾವಾಗ ಇತರರಿಗೆ ಮೆಸೇಜ್ ಮಾಡುತ್ತಿದ್ದಾರೆ ಮತ್ತು ಯಾವಾಗ ಮಲಗುತ್ತಿದ್ದಾರೆ ಎಂಬುದನ್ನು ತಿಳಿಯಬಹುದು ಎಂದು ಹೇಳುತ್ತಿದ್ದಾನೆ.
ಹೌದು, ಹೀಟನ್ ನ ಅನುಸಾರ ಬಳಕೆದಾರರ ವಾಟ್ಸಾಪ್ ಆನ್ಲೈನ್ ಸ್ಟೇಟಸ್ ಮತ್ತು ಲಾಸ್ಟ್ ಸೀನ್ ಫೀಚರ್ಗಳ ಮೂಲಕ ಇಬ್ಬರು ಬಳಕೆದಾರರು ಪರಸ್ಪರ ಮೆಸೇಜ್ ಮಾಡುತ್ತಿದ್ದಾರೆಯೇ ಎಂದು ತಿಳಿಯಬಹುದಂತೆ. ಯಾರಾದರೂ ಈ ಮಾಹಿತಿಗಳನ್ನು ಕೂಲಂಕುಷವಾಗಿ ವಿಶ್ಲೇಷಿಸುವ ಮೂಲಕ ಬಳಕೆದಾರರ ನಿದ್ರೆಯ ಸಮಯವನ್ನು ಅಥವ ಮಾದರಿಯನ್ನು ಕೂಡ ಕಂಡುಹಿಡಿಯಬಹುದಂತೆ.
ಬಳಕೆದಾರರ ಲಾಸ್ಟ್ ಸೀನ್ ಸ್ಟೇಟಸ್ ಅನ್ನು ಎಲ್ಲರೂ ನೋಡಬಹುದಾಗಿದ್ದು, ಬಳಕೆದಾರರಿಗೆ ಇತರರಿಗೆ ಅದು ಕಾಣದಂತೆ ಮಾಡುವ ಆಯ್ಕೆಯೂ ಇದೆ. ಆದರೆ ವಾಟ್ಸಾಪ್ ನ ಆನ್ಲೈನ್ ಸ್ಟೇಟಸ್ ಮಾಹಿತಿಯನ್ನು ಈ ರೀತಿಯಾಗಿ ರಹಸ್ಯವಾಗಿಡಲು ಸಾಧ್ಯವಿಲ್ಲ.
ಹೀಟನ್ ಹೇಳುವ ಪ್ರಕಾರ ಬಳೆದಾರರ ಆನ್ಲೈನ್ ಸ್ಟೇಟಸ್ ಮಾಹಿತಿ ಬಳಸಿ ನಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ಇಬ್ಬರು ಪರಸ್ಪರ ಮೆಸೇಜ್ ಮಾಡುತ್ತಿದ್ದಾರೆಯೇ ಎಂದು ತಿಳಿಯಬಹುದಂತೆ.ಇದಕ್ಕಾಗಿ ಕ್ರೋಮ್ ಎಕ್ಸ್ಟೆನ್ಶನ್ ಒಂದನ್ನು ಮೊದಲು ತಯಾರಿಸಿದ ಹೀಟನ್, ಈ ಮೂಲಕ ವಾಟ್ಸಾಪ್ ವೆಬ್ ಆಪ್ ಬಳಸಿ ತನ್ನ ಕಾಂಟ್ಯಾಕ್ಟ್ಗಳು ಯಾವಾಗ ಆನ್ಲೈನ್ ಬರುತ್ತಾರೆ ಎನ್ನುವುದನ್ನು ಮಾನಿಟರ್ ಮಾಡಿದನಂತೆ.
ಈ ಎಕ್ಸ್ಟೆನ್ಶನ್ ಆಭಿವೃದ್ಧಿಪಡಿಸಲು ಅವನಿಗೆ ಬೇಕಾದದ್ದು ಕೇವಲ ನಾಲ್ಕು ಸಾಲುಗಳ ಜಾವಾಸ್ಕ್ರಿಪ್ಟ್ ಕೋಡ್! ಈ ರೀತಿ ಕಲೆಹಾಕಿದ ಮಾಹಿತಿಯನ್ನು ವಿಶ್ಲೇಷಿಸುವ ಮೂಲಕ ಆತನಿಗೆ ತನ್ನ ಇಬ್ಬರು ಕಾಂಟ್ಯಾಕ್ಟ್ಗಳು ಪರಸ್ಪರ ಚ್ಯಾಟ್ ಮಾಡುತ್ತಿರುವುದು ತಿಳಿಯಿತಂತೆ. ಈ ನ್ಯೂನತೆ ಫೇಸ್ಬುಕ್ ನಲ್ಲೂ ಇದೆ ಎನ್ನುತ್ತಾನೆ ಹೀಟನ್.
ವಾಟ್ಸಾಪ್ ಮತ್ತು ಫೇಸ್ಬುಕ್ ಬಳಕೆದಾರರ ನಿದ್ರೆಯ ಮಾದರಿ ಕುರಿತಾದ ಮಾಹಿತಿಯಿಂದ ಆನ್ಲೈನ್ ಜಾಹೀರಾತುದಾರರಿಗೆ ಬಹಳಷ್ಟು ಲಾಭಗಳಿದ್ದು, ಈ ಮಾಹಿತಿ ಪಡೆಯಲು ಅವರು ತುದಿಗಾಲಲ್ಲಿ ನಿಂತಿರುತ್ತಾರೆ. ಹೀಗಿರುವಾಗ ಮೆಸೇಜಿಂಗ್ ಆಪ್ ನ ಈ ದೋಷವನ್ನು ಆದಷ್ಟು ಬೇಗ ಸರಿಪಡಿಸಬೇಕಾಗಿರುವುದು ಬಳಕೆದಾರರ ದೃಷ್ಟಿಯಲ್ಲಿ ಅಗತ್ಯವಾಗಿದೆ.


Click it and Unblock the Notifications