ನೋಡಲು ಸಾಮಾನ್ಯವಾಗಿ ಕಾಣುತ್ತಿರುವ ಈ' ಮೊಬೈಲ್ ಕೇಸ್' ಸಾಮಾನ್ಯವಾದುದ್ದಲ್ಲ!!
ಎಲ್ಲದರಲ್ಲಿಯೂ ವಿಶೇಷತೆಯನ್ನು ಹುಡುಕಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಎಂಬ ಒಂದು ಮಾತಿದೆ. ಆದರೆ, ಬೇರೆಯವರು ಹುಡುಕಿದ ಆ ವಿಶೇಷತೆಯನ್ನು ನಾವು ನೋಡಿ ಖುಷಿಪಡಬಹುದು. ಅಲ್ಲವೇ? ಅಯ್ಯೋ ಇದೇಕೆ ಹೀಗೆ ಹೇಳುತ್ತಿದ್ದೇನೆ ಎಂದು ನಿಮಗನಿಸುತ್ತಿದ್ದರೆ, ಅದಕ್ಕೆ ಕಾರಣ ಒಂದು ವಿಶಿಷ್ಟ ಮೊಬೈಲ್ ಕೇಸ್ ತಯಾರಾಗಿರುವುದು!!

ಹೌದು, ವಿಶ್ವದಲ್ಲಿಯೇ ವಿಶಿಷ್ಟವಾದ ಮೊಬೈಲ್ ಬ್ಯಾಕ್ ಕೇಸ್‌ಗಳನ್ನು ಫೋಕ್ಸ್ ವ್ಯಾಗನ್ ಸ್ವೀಡನ್ ಹಾಗೂ ನಾರ್ಡ್ ಡಿಡಿಬಿ ಹೊರತಂದಿದೆ.ಬೀದಿ ಬೀದಿಯಲ್ಲಿ 20 ರಿಂದ 30 ರೂಪಾಯಿಗಳಿಗೆ ಸಿಗುವ ಮೊಬೈಲ್ ಕೇಸ್‌ನಂತೆಯೇ ಕಾಣಿಸಿದರೂ ಇದೊಂದು ಸಾಮಾನ್ಯವಾದ ಮೊಬೈಲ್ ಕೇಸ್ ಅಲ್ಲ ಅಥವಾ ಚಿನ್ನಾಭರಣಗಳಿಂದ ಕೂಡಿದ ಆಡಂಬರದ ಕೇಸ್ ಅಂತೂ ಅಲ್ಲವೇ ಅಲ್ಲ.! ಹಾಗಾದರೆ, ಈ ಮೊಬೈಲ್ ಕೇಸ್‌ನಲ್ಲಿ ಇರುವ ವಿಶೇಷತೆಯಾದರೂ ಏನು? ಎಂಬುದನ್ನು ಮುಂದೆ ತಿಳಿಯಿರಿ.

ಎಚ್ಚರಿಕೆ ನೀಡಲು ಮೊಬೈಲ್ ಕೇಸ್
ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಹಾಗೆ ಗೊತ್ತಿದ್ದರೂ ಬಳಸುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಒಂದು ಕೈಯಲ್ಲಿ ಮೆಸೇಜ್ ಮಾಡುತ್ತಾ ಡ್ರೈವಿಂಗ್ ಮಾಡುವವರು ಎಷ್ಟೊಂದು ಮಂದಿ ಇದ್ದಾರೆ. ಇವರಿಗೆ ಎಚ್ಚರಿಕೆ ನೀಡಲು ಬಂದಿರುವ ಮೊಬೈಲ್ ಕೇಸ್ ಇದು!!

ಆಕ್ಸಿಡೆಂಟ್ ಸಾಧ್ಯತೆ 23 ಪಟ್ಟು ಹೆಚ್ಚು!!
ಚಾಲನೆ ವೇಳೆ ಮೊಬೈಲ್ ಬಳಸಿದರೆ, ಕಾರು ಅಪಘಾತಕ್ಕೆ ತುತ್ತಾಗಬಹುದಾದ ಸಾಧ್ಯತೆಯು 23 ಪಟ್ಟು ಹೆಚ್ಚಿರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಮೊಬೈಲ್‌ನಿಂದ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳೂ ದಿನೇ ದಿನೇ ಹೆಚ್ಚುತ್ತಿವೆ. ಅದಕ್ಕೆಂದೇ ಫೋಕ್ಸ್ ವ್ಯಾಗನ್ ಸ್ವೀಡನ್ ಹಾಗೂ ನಾರ್ಡ್ ಡಿಡಿಬಿ ಹೊಸ ರೀತಿಯ ಮೊಬೈಲ್ ಕೇಸ್ ಸರಣಿಯನ್ನು ಹೊರತಂದಿದೆ.

ಗೀರುಗಳಿವೆ ಕೇಸ್‌ನಲ್ಲಿ
ಈ ಮೊಬೈಲ್ ಕೇಸ್‍ನ ವಿನ್ಯಾಸಕ್ಕೆ ಬಳಸಿರುವುದು ಗುಜರಿ ಲೋಹವನ್ನು, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದ ಕಾರಣದಿಂದಾಗಿ ಅಪಘಾತಕ್ಕೊಳಗಾದ ಕಾರುಗಳ ಲೋಹದಿಂದಲೇ ತಯಾರಿಸಲಾದ ಕೇಸ್‌ಗಳಿವು. ಹಾಗಾಗಿ, ಗೀರುಗಳಿರುವಂಥ, ನಜ್ಜುಗುಜ್ಜಾಗಿರುವಂತೆ ಈ ಕೇಸ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ.

ಮೊಬೈಲ್ ಬಳಸುವುದನ್ನು ತಪ್ಪಿಸುತ್ತಾರೆ?
ಗೀರುಗಳಿರುವಂಥ, ನಜ್ಜುಗುಜ್ಜಾಗಿರುವಂತೆ ಇರುವ ಕೇಸ್ ಅನ್ನು ಡ್ರೈವಿಂಗ್ ಮಾಡುವಾಗ ನೋಡಿದಾಗ ಎಚ್ಚರಿಕೆ ಗಂಟೆಯಾಗಿ ಕೆಲಸ ಮಾಡುತ್ತದೆಯಂತೆ. ಅದನ್ನು ನೋಡಿದರೆ ಚಾಲಕರು ಮೊಬೈಲ್ ಬಳಸುವುದನ್ನು ತಪ್ಪಿಸುತ್ತಾರೆ ಎಂಬುದು ಇದರ ಉದ್ದೇಶ.. ನಿಮಗೆ ಗೊತ್ತಾ? ಮೊಬೈಲ್ ಕೇಸ್ ಬಳಸಿದ ಬಹುತೇಕರಿಗೂ ಈ ಅನುಭವವಾಗಿದೆಯಂತೆ.!

ಖರೀದಿಸಲು ಸಾಧ್ಯವಿಲ್ಲ.!!
ಇನ್ನು ಈ ಮೊಬೈಲ್ ಕೇಸ್ ಅನ್ನು ನೀವು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ, ಲೋಹದ ಕಲಾಕಾರ ಲೆನ್ನರ್ಟ್ ವಿಂಟರ್ ಮಿರ್ ಜೊತೆಗೂಡಿ ಕೇವಲ 153 ಕೇಸ್‌ಗಳನ್ನು ವಿನ್ಯಾಸಗೊಳಿಸಿ ಮಾರಲಾಗಿದೆ. ಇವುಗಳ ಮಾರಾಟದಿಂದ ಬಂದ ಲಾಭವನ್ನು ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಾದವರಿಗೆ ನೆರವಾಗುವ ಫಾಂಡೆನ್ ಒಂದಕ್ಕೆ ನೀಡಲಾಗಿದೆ.


Click it and Unblock the Notifications








