ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯ ಮೂರು CMF ಇಯರ್‌ಫೋನ್ಸ್ ಬಿಡುಗಡೆ!
ಲಂಡನ್ ಮೂಲದ ಟೆಕ್ ಕಂಪನಿ ನಥಿಂಗ್‌ನ ಉಪ-ಬ್ರಾಂಡ್ CMF (ಕಲರ್, ಮೆಟೀರಿಯಲ್, ಫಿನಿಶ್) ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಮೂರು ವೈರ್‌ಲೆಸ್ ಇಯರ್‌ಫೋನ್‌ಗಳನ್ನು ಭರ್ಜರಿಯಾಗಿ ಬಿಡುಗಡೆ ಮಾಡಿದೆ. ಈ ಬಾರಿ CMF Buds 2a, CMF Buds 2 ಮತ್ತು CMF Buds 2 Plus ಎಂಬ ಈ ಮೂರು ಹೆಸರಿನ ಇಯರ್‌ಫೋನ್ ಮಾದರಿಗಳನ್ನು ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ಬೆಲೆಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಬಿಡುಗಡೆಗೊಳಿಸಿದ್ದು, ಈ ಮೂರು ಇಯರ್‌ಫೋನ್‌ಗಳು 50dB ವರೆಗಿನ ಸಕ್ರಿಯ ಶಬ್ದ ರದ್ದತಿ (Active Noise Cancellation - ANC) ಮತ್ತು ದೀರ್ಘಕಾಲದ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಎಲ್ಲಾ ಹೊಸ ಹೆಡ್‌ಸೆಟ್‌ಗಳು ನಥಿಂಗ್‌ನದೇ ಆದ X ಅಪ್ಲಿಕೇಶನ್‌ನೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತವೆ. ಇದರ ಮೂಲಕ ಬಳಕೆದಾರರು ತಮ್ಮ ಆದ್ಯತೆಗೆ ಅನುಗುಣವಾಗಿ ಆಡಿಯೊ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು. ಡ್ಯುಯಲ್-ಡಿವೈಸ್ ಸಂಪರ್ಕದ ವೈಶಿಷ್ಟ್ಯವು ಒಂದೇ ಸಮಯದಲ್ಲಿ ಎರಡು ಸಾಧನಗಳಿಗೆ ಇಯರ್‌ಫೋನ್‌ಗಳನ್ನು ಸಂಪರ್ಕಿಸಲು ಮತ್ತು ಸುಲಭವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಜುಲೈ 2024 ರಲ್ಲಿ ಬಿಡುಗಡೆಯಾದ CMF Buds ಪ್ರೊ 2 ಹೆಡ್‌ಸೆಟ್‌ಗಳ ವಿನ್ಯಾಸವನ್ನು ಈ ಹೊಸ ಮಾದರಿಗಳು ಹೋಲುತ್ತವೆ, CMF ನ ವಿಶಿಷ್ಟ ವಿನ್ಯಾಸ ಶೈಲಿಯನ್ನು ಮುಂದುವರೆಸಿಕೊಂಡು ಹೋಗುತ್ತವೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
CMF Buds 2a, CMF Buds 2 ಮತ್ತು CMF Buds 2 Plus ವೈಶಿಷ್ಟ್ಯಗಳು,
CMF Buds 2a, CMF Buds 2 ಮತ್ತು CMF Buds 2 Plus ಮೂರು ಮಾದರಿಗಳು ಆಡಿಯೊ ಗುಣಮಟ್ಟ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿವೆ. CMF Buds 2a ಡೈರಾಕ್ ಟ್ಯೂನಿಂಗ್‌ನೊಂದಿಗೆ 12.4mm ಬಯೋ-ಫೈಬರ್ ಡ್ರೈವರ್‌ಗಳನ್ನು ಒಳಗೊಂಡಿದೆ. CMF Buds 2 ಡೈರಾಕ್ ಆಪ್ಟಿಯೊ ಟ್ಯೂನಿಂಗ್ ಮತ್ತು N52 ಮ್ಯಾಗ್ನೆಟ್‌ಗಳೊಂದಿಗೆ 11mm PMI ಡ್ರೈವರ್‌ಗಳನ್ನು ಹೊಂದಿದೆ. ಉನ್ನತ ಮಾದರಿಯಾದ CMF Buds 2 Plus LDAC ಕೋಡೆಕ್ ಬೆಂಬಲ ಮತ್ತು ಹೈ-ರೆಸ್ ವೈರ್‌ಲೆಸ್ ಆಡಿಯೊ ಪ್ರಮಾಣೀಕರಣದೊಂದಿಗೆ 12mm LCP ಡ್ರೈವರ್‌ಗಳನ್ನು ಹೊಂದಿದೆ. ವಿಶೇಷವಾಗಿ, ಈ ಮೂರು ಇಯರ್‌ಫೋನ್‌ಗಳು "ನಿಖರವಾದ ಶುದ್ಧ ಟೋನ್ ಆಡಿಯೊಮೆಟ್ರಿ ಪರೀಕ್ಷೆ" ಯ ಮೂಲಕ ವೈಯಕ್ತೀಕರಿಸಿದ ಧ್ವನಿ ಪ್ರೊಫೈಲ್‌ಗಳನ್ನು ಬೆಂಬಲಿಸುತ್ತವೆ, ಇದು ಪ್ರತಿಯೊಬ್ಬ ಬಳಕೆದಾರನ ಶ್ರವಣ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಿಯೊವನ್ನು ಉತ್ತಮಗೊಳಿಸುತ್ತದೆ.
ಶಬ್ದ ರದ್ದತಿ ವೈಶಿಷ್ಟ್ಯದಲ್ಲಿಯೂ ವ್ಯತ್ಯಾಸವಿದೆ. CMF Buds 2a 42dB ವರೆಗಿನ ANC ಅನ್ನು ಬೆಂಬಲಿಸುತ್ತದೆ ಮತ್ತು ಪಾರದರ್ಶಕತೆ ಮೋಡ್ ಅನ್ನು ಸಹ ಹೊಂದಿದೆ. CMF Buds 2 48dB ಹೈಬ್ರಿಡ್ ANC ವರೆಗೆ ಬೆಂಬಲಿಸುತ್ತದೆ. CMF Buds 2 Plus ಸ್ಮಾರ್ಟ್ ಅಡಾಪ್ಟಿವ್ ಮೋಡ್‌ನೊಂದಿಗೆ 50dB ವರೆಗಿನ ANC ಅನ್ನು ನೀಡುತ್ತದೆ, ಇದು ಪರಿಸರದ ಶಬ್ದಕ್ಕೆ ಅನುಗುಣವಾಗಿ ಶಬ್ದ ರದ್ದತಿಯ ಮಟ್ಟವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.CMF Buds 2 ಸರಣಿಯ ಎಲ್ಲಾ ಇಯರ್‌ಫೋನ್‌ಗಳು ವಿಂಡ್ ನಾಯ್ಸ್ ರಿಡಕ್ಷನ್ 3.0, ಅಲ್ಟ್ರಾ ಬಾಸ್ ಟೆಕ್ನಾಲಜಿ 2.0 ಮತ್ತು ಕರೆಗಳಿಗಾಗಿ ಶಬ್ದ ರದ್ದತಿ ವೈಶಿಷ್ಟ್ಯಗಳನ್ನು ಹೊಂದಿವೆ. CMF Buds 2a ಸ್ಪಷ್ಟವಾದ ಧ್ವನಿ ತಂತ್ರಜ್ಞಾನದೊಂದಿಗೆ 4HD ಮೈಕ್ರೊಫೋನ್‌ಗಳನ್ನು ಹೊಂದಿದ್ದರೆ, CMF Buds 2 ಮತ್ತು CMF Buds 2 Plus ಆರು HD ಮೈಕ್ರೊಫೋನ್‌ಗಳನ್ನು ಹೊಂದಿದ್ದು, ಕ್ಲಿಯರ್ ವಾಯ್ಸ್ ಟೆಕ್ನಾಲಜಿ 3.0 ಅನ್ನು ಬೆಂಬಲಿಸುತ್ತವೆ.

ಈ ಎಲ್ಲಾ ಹೆಡ್‌ಸೆಟ್‌ಗಳು ಸ್ಪಾಟಿಯಲ್ ಆಡಿಯೊ ಎಫೆಕ್ಟ್ ಅನ್ನು ಸಹ ಬೆಂಬಲಿಸುತ್ತವೆ, ಇದು ಆಲಿಸುವಿಕೆಗೆ ಒಂದು ಆಳವಾದ ಅನುಭವವನ್ನು ನೀಡುತ್ತದೆ.ಕಡಿಮೆ ಲೇಟೆನ್ಸಿ ಗೇಮಿಂಗ್‌ಗೆ CMF Buds 2 ಸರಣಿಯು 110ms ವರೆಗಿನ ಕಡಿಮೆ-ಲೇಟೆನ್ಸಿ ಮೋಡ್ ಅನ್ನು ಸಹ ನೀಡುತ್ತದೆ. ನಥಿಂಗ್ X ಅಪ್ಲಿಕೇಶನ್‌ನೊಂದಿಗೆ ಹೊಂದಾಣಿಕೆ ಮತ್ತು ಡ್ಯುಯಲ್-ಡಿವೈಸ್ ಸಂಪರ್ಕದ ವೈಶಿಷ್ಟ್ಯಗಳು ಈ ಇಯರ್‌ಫೋನ್‌ಗಳ ಉಪಯುಕ್ತತೆಯನ್ನು ಹೆಚ್ಚಿಸುತ್ತವೆ. ಧೂಳು ಮತ್ತು ನೀರಿನ ಸ್ಪ್ಲಾಶ್‌ನಿಂದ ರಕ್ಷಣೆಗಾಗಿ CMF Buds 2a IP54 ರೇಟಿಂಗ್ ಅನ್ನು ಹೊಂದಿದ್ದರೆ, CMF Buds 2 ಮತ್ತು CMF Buds 2 Plus IP55 ರೇಟಿಂಗ್ ಅನ್ನು ಹೊಂದಿವೆ.ಬ್ಯಾಟರಿ ಬಾಳಿಕೆಯ ವಿಷಯಕ್ಕೆ ಬಂದರೆ, ಎಲ್ಲಾ ಮೂರು ಮಾದರಿಗಳ ಚಾರ್ಜಿಂಗ್ ಕೇಸ್‌ಗಳು 460mAh ಬ್ಯಾಟರಿಯನ್ನು ಹೊಂದಿವೆ.
CMF Buds 2a ಪ್ರತಿ ಇಯರ್‌ಬಡ್‌ನಲ್ಲಿ 43mAh ಬ್ಯಾಟರಿಯನ್ನು ಹೊಂದಿದ್ದು, ANC ಇಲ್ಲದೆ 8 ಗಂಟೆಗಳವರೆಗೆ ಮತ್ತು ಕೇಸ್‌ನೊಂದಿಗೆ 35.5 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 5.5 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಪಡೆಯಬಹುದು. CMF Buds 2 ಇಯರ್‌ಫೋನ್‌ಗಳು ಒಂದೇ ಚಾರ್ಜ್‌ನಲ್ಲಿ 13.5 ಗಂಟೆಗಳವರೆಗೆ ಮತ್ತು ಕೇಸ್‌ನೊಂದಿಗೆ 55 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡುತ್ತವೆ. 10 ನಿಮಿಷಗಳ ಚಾರ್ಜ್ 7.5 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ. CMF Buds 2 Plus ಅತ್ಯುತ್ತಮ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ, ಒಂದೇ ಚಾರ್ಜ್‌ನಲ್ಲಿ 14 ಗಂಟೆಗಳವರೆಗೆ ಮತ್ತು ಕೇಸ್‌ನೊಂದಿಗೆ 61.5 ಗಂಟೆಗಳವರೆಗೆ ಕಾರ್ಯನಿರ್ವಹಿಸುತ್ತದೆ. ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 8.5 ಗಂಟೆಗಳ ಪ್ಲೇಬ್ಯಾಕ್ ಅನ್ನು ಆನಂದಿಸಬಹುದು.
CMF Buds 2a, CMF Buds 2 ಮತ್ತು CMF Buds 2 Plus ಬೆಲೆಗಳು.
ಭಾರತೀಯ ಮಾರುಕಟ್ಟೆಯಲ್ಲಿ CMF Buds 2a ಸಾಧನದ ಬೆಲೆ ₹ 2,199 ರಿಂದ ಪ್ರಾರಂಭವಾಗುತ್ತದೆ. ಇನ್ನು CMF Buds 2 ಮತ್ತು CMF Buds 2 Plus ಕ್ರಮವಾಗಿ ₹ 2,699 ಮತ್ತು ₹ 3,299 ರ ಬೆಲೆಯಲ್ಲಿ ಲಭ್ಯವಿರುತ್ತವೆ. ಈ ಎಲ್ಲಾ ಇಯರ್‌ಫೋನ್‌ಗಳು ಆನ್‌ಲೈನ್ ಮಾರಾಟ ವೇದಿಕೆಯಾದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಬಣ್ಣಗಳ ಆಯ್ಕೆಯಲ್ಲಿಯೂ ವೈವಿಧ್ಯತೆ ಇದೆ. CMF Buds 2a ಮತ್ತು ಬಡ್ಸ್ 2 ಡಾರ್ಕ್ ಗ್ರೇ ಮತ್ತು ಆರೆಂಜ್ ಬಣ್ಣಗಳಲ್ಲಿ ಲಭ್ಯವಿದ್ದರೆ, ಬಡ್ಸ್ 2a ಹೆಚ್ಚುವರಿಯಾಗಿ ಲೈಟ್ ಗ್ರೇ ಬಣ್ಣದಲ್ಲೂ ಸಿಗುತ್ತದೆ. CMF Buds 2 ಲೈಟ್ ಗ್ರೀನ್ ಬಣ್ಣದಲ್ಲಿಯೂ ಲಭ್ಯವಿದೆ. CMF Buds 2 Plus ನೀಲಿ ಮತ್ತು ಲೈಟ್ ಗ್ರೇ ಬಣ್ಣಗಳ ಆಯ್ಕೆಯನ್ನು ಹೊಂದಿದೆ.
ಬಹುನಿರೀಕ್ಷಿತ CMF Phone 2 Pro ಸ್ಮಾರ್ಟ್‌ಫೋನ್ ಸಹ ಬಿಡುಗಡೆ
ನಥಿಂಗ್‌ನ ಉಪ-ಬ್ರಾಂಡ CMF ತನ್ನ ಮೂರು ಇಯರ್‌ಫೋನ್ಸ್ ಗಳ ಜೊತೆಗೆ ಬಹುನಿರೀಕ್ಷಿತ CMF Phone 2 Pro ಸ್ಮಾರ್ಟ್‌ಫೋನನ್ನು ಸಹ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಹೊಂದಿದ್ದು, 6.77 ಇಂಚಿನ ಡಿಸ್ಪ್ಲೇಯೊಂದಿಗೆ ಬಂದಿದೆ. ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. 8GB RAM, 256GB ಸ್ಟೋರೇಜ್, 5000mAh ಬ್ಯಾಟರಿ ಮತ್ತು 33W ಚಾರ್ಜಿಂಗ್ ಸೇರಿದಂತೆ ಹಲವಾರು ಶ್ರೇಷ್ಠ ವೈಶಿಷ್ಟ್ಯಗಳೊಂದಿಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಗೊಂಡಿದೆ. ಇನ್ನು ಈ CMF Phone 2 Pro ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ, ಮೂಲ ಮಾದರಿಯ ಬೆಲೆ 18,999 ರೂ. ಆಗಿದ್ದರೆ, 8GB RAM + 256GB ಸ್ಟೋರೇಜ್ ಮಾದರಿಯ ಬೆಲೆ 20,999 ರೂ.ಗಳಾಗಿವೆ. ಈ ನಥಿಂಗ್ CMF Phone 2 Pro, ಮೇ 5 ರಂದು ಭಾರತದಲ್ಲಿ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ, ಮತ್ತು ಆರಂಭಿಕ ಮಾರಾಟದ ಸಂದರ್ಭದಲ್ಲಿ ಕಂಪನಿಯು 1,000 ರೂ. ರಿಯಾಯಿತಿಯನ್ನು ಘೋಷಿಸಿದೆ.


Click it and Unblock the Notifications








