CMF Headphone Pro ರಿಲೀಸ್: ಒಂದೇ ಚಾರ್ಜ್‌ನಲ್ಲಿ 100 ಗಂಟೆಗಳ ಬ್ಯಾಟರಿ ಬಾಳಿಕೆ!
ತಂತ್ರಜ್ಞಾನದ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸ ಮತ್ತು ಉತ್ತಮ ಕಾರ್ಯಕ್ಷಮತೆಯಿಂದ ಗಮನ ಸೆಳೆದಿರುವ 'ನಥಿಂಗ್' ಕಂಪನಿಯ ಉಪಬ್ರ್ಯಾಂಡ್ ಆಗಿರುವ ಸಿಎಂಎಫ್ (CMF) ತನ್ನ ಮೊದಲ ಓವರ್-ಇಯರ್ ಹೆಡ್‌ಫೋನ್ ಅನ್ನು ಬಿಡುಗಡೆ ಮಾಡಿದೆ. CMF Headphone Pro ಹೆಸರಿನಲ್ಲಿ ಈ ಹೊಸ ಹೆಡ್‌ಫೋನ್ ಸಾಧನವು ಪರಿಚಯಗೊಂಡಿದ್ದು, ಇದು ಒಂದೇ ಚಾರ್ಜ್‌ನಲ್ಲಿ 100 ಗಂಟೆಗಳ ವರೆಗೆ ಸಂಗೀತ ಆಲಿಸುವ ಸಮಯವನ್ನು ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಹಾಗಾದರೆ, ಹೊಸ CMF Headphone Pro ಹೆಡ್‌ಫೋನ್ ಹೇಗಿದೆ?, ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
CMF Headphone Pro: 'ಎನರ್ಜಿ ಸ್ಲೈಡರ್' ಮತ್ತು 100 ಗಂಟೆಗಳ ಬ್ಯಾಟರಿ ವೈಶಿಷ್ಟ್ಯಗಳು
CMF Headphone Pro ಸಾಧನದ ಅತ್ಯಂತ ವಿಶಿಷ್ಟವಾದ ಫೀಚರ್ ಎಂದರೆ ಅದರ 'ಎನರ್ಜಿ ಸ್ಲೈಡರ್' (Energy Slider). ಇದು ಒಂದು ಭೌತಿಕ ಸ್ಲೈಡರ್ ಆಗಿದ್ದು, ಬಳಕೆದಾರರಿಗೆ ಸಂಗೀತ ಕೇಳುವಾಗ ತಕ್ಷಣವೇ ಬಾಸ್ ಮತ್ತು ಟ್ರೆಬಲ್ (Bass and Treble) ಮಟ್ಟವನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಸಾಮಾನ್ಯವಾಗಿ ಇಂತಹ ಹೊಂದಾಣಿಕೆಗಳನ್ನು ಆಪ್‌ನಲ್ಲಿ ಮಾತ್ರ ಮಾಡಬೇಕಾಗುತ್ತದೆ, ಆದರೆ ಸಿಎಂಎಫ್ ಇದನ್ನು ಹೆಡ್‌ಫೋನ್‌ನಲ್ಲೇ ನೀಡಿರುವುದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ.
ಬ್ಯಾಟರಿ ಬಾಳಿಕೆ ಬಗ್ಗೆ ಹೇಳುವುದಾದರೆ, 100 ಗಂಟೆಗಳ ಪ್ಲೇಬ್ಯಾಕ್ ಸಮಯವು ಈ ಬೆಲೆಯ ಶ್ರೇಣಿಯ ಹೆಡ್‌ಫೋನ್‌ಗಳಲ್ಲಿ ನಿಜಕ್ಕೂ ಅಸಾಮಾನ್ಯ. ಆದರೆ ಇದು ಎಎನ್‌ಸಿ (Active Noise Cancellation - ANC) ಆಫ್ ಇರುವಾಗ ದೊರೆಯುವ ಸಮಯವಾಗಿದೆ. ಎಎನ್‌ಸಿ ಆನ್ ಮಾಡಿದಾಗಲೂ ಇದು 50 ಗಂಟೆಗಳ ವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ, ಇದು ಕೂಡ ಹೆಚ್ಚಿನ ಪ್ರೀಮಿಯಂ ಹೆಡ್‌ಫೋನ್‌ಗಳಿಗಿಂತ ಉತ್ತಮವಾಗಿದೆ. ಕರೆಗಳಿಗಾಗಿ, ಇದು 50 ಗಂಟೆಗಳ ಟಾಕ್ ಟೈಮ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

ಇತರೆ ಗಮನಾರ್ಹ ವೈಶಿಷ್ಟ್ಯಗಳು:
ಸೌಂಡ್ ಕ್ವಾಲಿಟಿ: Headphone Pr 40mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದೆ. ಇದು ಎಲ್‌ಡಿಎಸಿ (LDAC) ಕೋಡೆಕ್‌ಗೆ ಬೆಂಬಲ ನೀಡುತ್ತದೆ ಮತ್ತು ವೈರ್ಡ್ ಹಾಗೂ ವೈರ್‌ಲೆಸ್ ಎರಡರಲ್ಲೂ ಹೈ-ರೆಸ್ ಆಡಿಯೋ (Hi-Res Audio) ಪ್ರಮಾಣೀಕರಣವನ್ನು ಹೊಂದಿದೆ. ಇದು ಕಡಿಮೆ ಅಸ್ಪಷ್ಟತೆಯೊಂದಿಗೆ ಉತ್ತಮ ಗುಣಮಟ್ಟದ ಆಡಿಯೊವನ್ನು ನೀಡಲು ಸಹಾಯಕವಾಗಿದೆ.
ಆಕ್ಟಿವ್ ನೋಯ್ಸ್ ಕ್ಯಾನ್ಸಲೇಶನ್ (ANC): ಇದು 40dB ವರೆಗೆ ಶಬ್ದವನ್ನು ತಡೆಯಬಲ್ಲ ಹೈಬ್ರಿಡ್ ಅಡಾಪ್ಟಿವ್ ಎಎನ್‌ಸಿ ಹೊಂದಿದೆ. ಇದು ಸುತ್ತಮುತ್ತಲಿನ ಶಬ್ದಕ್ಕೆ ತಕ್ಕಂತೆ ತನ್ನ ಮಟ್ಟವನ್ನು ಸ್ವಯಂಚಾಲಿತವಾಗಿ ಸರಿಹೊಂದಿಸಿಕೊಳ್ಳುತ್ತದೆ.
ವಿನ್ಯಾಸ ಮತ್ತು ನಿಯಂತ್ರಣಗಳು: ಇದು ಮಾಡ್ಯುಲರ್ ವಿನ್ಯಾಸವನ್ನು ಹೊಂದಿದೆ. ಅಂದರೆ, ನೀವು ಕಿವಿಯ ಕುಶನ್‌ಗಳನ್ನು ತೆಗೆದುಹಾಕಿ ಬೇರೆ ಬಣ್ಣದ (ಉದಾಹರಣೆಗೆ ಲೈಟ್ ಗ್ರೀನ್ ಮತ್ತು ಆರೆಂಜ್) ಕುಶನ್‌ಗಳನ್ನು ಹಾಕಬಹುದು. ಇದರಲ್ಲಿ ವಾಲ್ಯೂಮ್, ಪ್ಲೇ/ಪಾಸ್ ಮತ್ತು ಎಎನ್‌ಸಿ ನಿಯಂತ್ರಿಸಲು ಒಂದು ರೋಲರ್ ಡಯಲ್ ಮತ್ತು ಕಸ್ಟಮೈಸ್ ಮಾಡಬಹುದಾದ ಬಟನ್ ಕೂಡ ಇದೆ.
ಪರ್ಸನಲ್ ಸೌಂಡ್: ಆಡಿಯೋಡೋ (Audiodo) ತಂತ್ರಜ್ಞಾನದೊಂದಿಗೆ ಇದು ನಿಮ್ಮ ಶ್ರವಣ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಿಯೊ ಪ್ರೊಫೈಲ್ ಅನ್ನು ವೈಯಕ್ತೀಕರಿಸುತ್ತದೆ.
ಬೆಲೆ ಮತ್ತು ಲಭ್ಯತೆ:
CMF Headphone Pro ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು $99 (ಅಂದಾಜು ₹8,000) ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇದು ಡಾರ್ಕ್ ಗ್ರೇ, ಲೈಟ್ ಗ್ರೇ ಮತ್ತು ಲೈಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ಹೆಚ್ಚುವರಿ ಕಿವಿಯ ಕುಶನ್‌ಗಳು ಸುಮಾರು $25 (ಅಂದಾಜು ₹2,100) ಗೆ ಲಭ್ಯವಾಗಲಿವೆ. ಆದರೆ, ಪ್ರಸ್ತುತಕ್ಕೆ, ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಮತ್ತು ಲಭ್ಯತೆಯ ದಿನಾಂಕವನ್ನು ಕಂಪನಿಯು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಹಾಗಾಗಿ, ಭಾರತೀಯ ಗ್ರಾಹಕರು ಈ ಹೊಸ ಹೆಡ್‌ಫೋನ್‌ಗಳಿಗಾಗಿ ಸ್ವಲ್ಪ ಸಮಯ ಕಾಯಬೇಕಾಗಬಹುದು.


Click it and Unblock the Notifications








