ವಿವೋದಿಂದ ಹೊಸ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ಬಿಡುಗಡೆ: ಹೇಗಿದೆ ಗೊತ್ತಾ?
ತಂತ್ರಜ್ಞಾನ ಲೋಕಕ್ಕೆ ಹೊಸ ಸೇರ್ಪಡೆಯಾಗಿ, ಚೀನಾ ಮೂಲಕ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೋ ತನ್ನ ಮೊದಲ ಮಿಕ್ಸ್ಡ್ ರಿಯಾಲಿಟಿ (MR) ಹೆಡ್‌ಸೆಟ್ ಅನ್ನು ಪರಿಚಯಿಸಿದೆ. ಆಪಲ್‌ನ ಬಹುನಿರೀಕ್ಷಿತ ವಿಷನ್ ಪ್ರೊಗೆ ಪ್ರಬಲ ಪ್ರತಿಸ್ಪರ್ಧಿಯಾಗಿ 'ವಿವೋ ವಿಷನ್ ಎಕ್ಸ್‌ಪ್ಲೋರರ್' ( Vivo Vision Explorer) ಎಡಿಷನ್ ಅನ್ನು ಚೀನಾದಲ್ಲಿ ಅನಾವರಣಗೊಳಿಲಾಗಿದ್ದು, ಕೇವಲ 398 ಗ್ರಾಂ ತೂಕದ ಈ ಸಾಧನವು ಇದರ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನದ ಮೂಲಕ ಗಮನ ಸೆಳೆಯುತ್ತಿದೆ. ಹಾಗಾದರೆ, ವಿವೋ ಹೊಸ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ 'ವಿಷನ್ ಎಕ್ಸ್‌ಪ್ಲೋರರ್ ' ಹೇಗಿದೆ ಎಂಬುದನ್ನು ನೋಡೋಣ ಬನ್ನಿ.
ವಿವೋ ವಿಷನ್ ಎಕ್ಸ್‌ಪ್ಲೋರರ್ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ : ಪ್ರಮುಖ ಫೀಚರ್ಸ್
ಮೊದಲೇ ಹೇಳಿದಂತೆ, ಈ ಹೊಸ ಸಾಧನವು ತನ್ನ ತಾಂತ್ರಿಕ ವಿಶೇಷಣಗಳಿಂದಲೇ ಎಲ್ಲರ ಗಮನ ಸೆಳೆದಿದ್ದು, ಇದರಲ್ಲಿ ಡ್ಯುಯಲ್ 8K ಮೈಕ್ರೋ-OLED ಡಿಸ್ಪ್ಲೇ ಗಳಿವೆ, ಇದು ಅಸಾಧಾರಣ ದೃಶ್ಯ ಅನುಭವವನ್ನು ನೀಡುತ್ತದೆ. ಇದಲ್ಲದೆ, ಕ್ವಾಲ್ಕಾಮ್‌ನ ಅತ್ಯಾಧುನಿಕ ಸ್ನಾಪ್‌ಡ್ರಾಗನ್ XR2+ Gen 2 ಚಿಪ್‌ಸೆಟ್ ಇದರ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. ವಿವೋ ಒರಿಜಿನ್OS ವಿಷನ್ ಆಪರೇಟಿಂಗ್ ಸಿಸ್ಟಮ್‌ನಿಂದ ಕಾರ್ಯನಿರ್ವಹಿಸುವ ಈ ಹೆಡ್‌ಸೆಟ್ ಕೇವಲ 13ms ನಷ್ಟು ಕಡಿಮೆ ಲೇಟೆನ್ಸಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ಸುಗಮ ಅನುಭವವನ್ನು ನೀಡುತ್ತದೆ ಎಂದು ವಿವೋ ಹೇಳಿಕೊಂಡಿದೆ.
ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ವಿನ್ಯಾಸ ಕೂಡ ವಿಶಿಷ್ಟವಾಗಿದೆ. ಮುಂಭಾಗದ ದೊಡ್ಡ ವೈಸರ್ ಮತ್ತು ಆರಾಮದಾಯಕವಾದ ಪ್ಯಾಡ್ಡ್ ಹಿಂಭಾಗದ ಹೆಡ್‌ಬ್ಯಾಂಡ್ ಇದನ್ನು ಧರಿಸಲು ಸುಲಭವಾಗಿಸಿದೆ. ಕೇವಲ 398 ಗ್ರಾಂ ತೂಕದ ಈ ಸಾಧನ ದೀರ್ಘಾವಧಿಯ ಬಳಕೆಯಲ್ಲಿಯೂ ಆಯಾಸವನ್ನು ಉಂಟುಮಾಡುವುದಿಲ್ಲ. ಜೊತೆಗೆ, ಬಳಕೆದಾರರ ಅನುಕೂಲಕ್ಕಾಗಿ, ಕಣ್ಣಿನ ಚಲನೆಯ ಟ್ರ್ಯಾಕಿಂಗ್ ಮತ್ತು ಮೈಕ್ರೋ-ಗೆಸ್ಚರ್ ನಿಯಂತ್ರಣದಂತಹ ಆಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇದು ಬಳಕೆದಾರರು ತಮ್ಮ ಕೈ ಅಥವಾ ದೇಹದ ಚಲನೆಯ ಮೂಲಕ ಹೆಡ್‌ಸೆಟ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವಿವೋ ತಿಳಿಸಿದೆ.

ವಿಷನ್ ಎಕ್ಸ್‌ಪ್ಲೋರರ್ ಎಡಿಷನ್ ಕೇವಲ ಮನರಂಜನೆಗಾಗಿ ಮಾತ್ರ ಸೀಮಿತವಾಗಿಲ್ಲ. ಇದು 3D ವಿಡಿಯೋ ರೆಕಾರ್ಡಿಂಗ್ ಮತ್ತು ಪ್ರಾದೇಶಿಕ ಫೋಟೋಗಳನ್ನು ಸೆರೆಹಿಡಿಯುವಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಜೊತೆಗೆ, ಬಳಕೆದಾರರು 180 ಡಿಗ್ರಿ ಪನೋರಮಿಕ್ ದೃಶ್ಯಗಳನ್ನು, ಸ್ಪೇಷಿಯಲ್ ಆಡಿಯೋ ಮತ್ತು 120-ಇಂಚಿನ ವರ್ಚುವಲ್ ಸಿನಿಮಾ ಸ್ಕ್ರೀನ್ ಅನ್ನು ಆನಂದಿಸಬಹುದು. ಗೇಮಿಂಗ್ ಪ್ರಿಯರಿಗಾಗಿ PC ಮತ್ತು ಮೊಬೈಲ್ ಗೇಮ್‌ಗಳನ್ನು ಕೂಡ ಇದರಲ್ಲಿ ಸ್ಟ್ರೀಮ್ ಮಾಡಲು ಅವಕಾಶವಿದೆ. ಕೆಲವು ನಿರ್ದಿಷ್ಟ ವಿವೋ ಸ್ಮಾರ್ಟ್‌ಫೋನ್‌ಗಳೊಂದಿಗೆ ಜೋಡಿಸಿದಾಗ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳು ಲಭ್ಯವಾಗುತ್ತವೆ.
ಪ್ರಸ್ತುತ, ವಿವೋ ಈ ಹೆಡ್‌ಸೆಟ್‌ನ ಬೆಲೆ ಮತ್ತು ಜಾಗತಿಕ ಲಭ್ಯತೆಯ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಚೀನಾದಾದ್ಯಂತ 12 ಅಧಿಕೃತ ವಿವೋ ಅನುಭವ ಮಳಿಗೆಗಳಲ್ಲಿ ಈಗಾಗಲೇ ಪೂರ್ವ-ಆರ್ಡರ್ ಮಾಡಲು ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಳಿಗೆಗಳಲ್ಲಿ ಇದರ ಲಭ್ಯತೆಯನ್ನು ವಿಸ್ತರಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಆಪಲ್ ವಿಷನ್ ಪ್ರೊ, ಮೆಟಾ ಕ್ವೆಸ್ಟ್ 3 ಮತ್ತು ಸ್ಯಾಮ್‌ಸಂಗ್‌ನ ಮುಂಬರುವ XR ಹೆಡ್‌ಸೆಟ್‌ಗಳಂತಹ ಸಾಧನಗಳಿಗೆ ಇದು ಪ್ರಬಲ ಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಭದ್ರಪಡಿಸುವ ನಿರೀಕ್ಷೆಯಿದೆ.
ಈ ಹೊಸ ವಿಷನ್ ಎಕ್ಸ್‌ಪ್ಲೋರರ್ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ತಂತ್ರಜ್ಞಾನದ ಭವಿಷ್ಯಕ್ಕೆ ಒಂದು ಹೆಜ್ಜೆ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ಈ ಸಾಧನವು ಬಾರತದ ಮಾರುಕಟ್ಟೆಗೂ ಬರುವ ನಿರೀಕ್ಷೆ ಇದ್ದೇ ಇದೆ. ಈ ಹೊಸ ಸಾಧನದ ಕುರಿತು ನಿಮ್ಮ ಅಭಿಪ್ರಾಯವೇನು? ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








