ಭಾರತದಲ್ಲೇ 'ಶಿಯೋಮಿ ಟಿವಿ' ಉತ್ಪಾದನಾ ಘಟಕ ಆರಂಭ!..850 ಜನರಿಗೆ ಉದ್ಯೋಗ!!
ಭಾರತದ ನಂ ಒನ್ ಮೊಬೈಲ್ ಬ್ರ್ಯಾಂಡ್ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಶಿಯೋಮಿ ಕಂಪೆನಿ 'ಮೇಡ್ ಇನ್ ಇಂಡಿಯಾ'ಕ್ಕೆ ಒತ್ತು ನಿಡುತ್ತಿದೆ. ಕೆಲವೇ ತಿಂಗಳ ಹಿಂದಷ್ಟೇ ಭಾರತದಲ್ಲಿ ಮೊಬೈಲ್ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದ ಶಿಯೋಮಿ ಕಂಪೆನಿ ಇದೀಗ ತನ್ನ 'ಮಿ ಎಲ್ಇಡಿ ಟಿವಿ' ಗಳನ್ನು ಭಾರತದಲ್ಲೇ ತಯಾರಿಸಲು ಇಂದಿನಿಂದ ಆರಂಭಿಸಿದೆ.
ಆಂಧ್ರಪ್ರದೇಶದ ತಿರುಪತಿಯಲ್ಲಿನ 32 ಎಕರೆ ಪ್ರದೇಶದಲ್ಲಿ ಶಿಯೋಮಿ ಹಾಗೂ ಡಿಕ್ಸನ್ ಟೆಕ್ನಾಲಜೀಸ್ ಕಂಪೆನಿ ಸಹಭಾಗಿತ್ವದಲ್ಲಿ ಶಿಯೋಮಿ ಕಂಪೆನಿಯ ಭಾರತದ ಮೊದಲ ಟಿವಿ ಉತ್ಪಾದನಾ ಘಟಕ ಉದ್ಘಾಟನೆಯಾಗಿದೆ. ಸ್ಮಾರ್ಟ್‌ಟಿವಿಗಳನ್ನು ಉತ್ಪಾದಿಸುವ ಈ ಉತ್ಪಾದಕ ಘಟಕದಲ್ಲಿ 850 ಕ್ಕಿಂತ ಹೆಚ್ಚು ಜನರನ್ನು ನೇಮಕ ಮಾಡಲು ಶಿಯೋಮಿ ಕಂಪೆನಿ ನಿರ್ಧರಿಸಿದೆ ಎನ್ನಲಾಗಿದೆ.

2019ರ ಮೊದಲ ಮೂರು ತಿಂಗಳ ವೇಳೆಗೆ ಪ್ರತಿ ತಿಂಗಳು 1,00,000 ಮಿ ಎಲ್ಇಡಿ ಟಿವಿಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿಲಿದೆ ಎಂದು ಶಿಯೋಮಿ ಕಂಪೆನಿ ಮಾಹಿತಿ ನೀಡಿದ್ದು, ಈ ಉತ್ಪಾದನಾ ಘಟಕದಲ್ಲಿ 32 ಇಂಚು ಮತ್ತು 43 ಇಂಚಿನ ರೂಪಾಂತರಗಳ 'ಮಿ ಎಲ್ಇಡಿ 4ಎ' ಬ್ರ್ಯಾಂಡ್ ಸ್ಮಾರ್ಟ್‌ಟಿವಿಗಳ ಜೋಡಣೆಯಾಗಲಿದೆ ಎಂದು ತಿಳಿಸಿದೆ.
ಇತ್ತೀಚಿಗಷ್ಟೇ ಐಡಿಸಿ ನೀಡಿರುವ ರಿಪೋರ್ಟ್ ಪ್ರಕಾರ, ಶಿಯೋಮಿ ಈಗ ಭಾರತದ ನಂ 1 ಸ್ಮಾರ್ಟ್ ಟಿವಿ ಬ್ರ್ಯಾಂಡ್ ಆಗಿದೆ ಎಂದು ಹೇಳಿದೆ. 2018ರ ಮೊದಲ ತ್ರೈಮಾಸಿಕದಿಂದ ಎರಡನೇ ತ್ರೈ ಮಾಸಿಕದವರೆಗೂ ಶಿಯೋಮಿ ಟಿವಿ ಮಾರುಕಟ್ಟೆಯಲ್ಲಿ ಭಾರೀ ಜಿಗಿತ ಕಂಡಿದೆ. ಜೊತೆಗೆ ತನ್ನ ಸ್ಮಾರ್ಟ್ ಟಿವಿಗಳಿಗಾಗಿ ಭಾರತದಾದ್ಯಂತ 650 ಸೇವೆ ಕೇಂದ್ರಗಳನ್ನು ಸ್ಥಾಪಿಸಿದೆ.

ಅತ್ಯುತ್ತಮ ಸ್ಮಾರ್ಟ್‌ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವಂತೆ ನೋಡಿಕೊಳ್ಳುತ್ತಿರುವ ಶಿಯೋಮಿ ಈ ಸುದ್ದಿಯ ಜೊತೆಗೆ ಮತ್ತೊಂದು ಶಾಕಿಂಗ್ ಸುದ್ದಿಯನ್ನು ಸಹ ನೀಡಿದೆ. ಶೀಘ್ರದಲ್ಲೇ ಶಿಯೋಮಿ ಸ್ಮಾರ್ಟ್‌ಫೋನ್ ಹಾಗೂ ಸ್ಮಾರ್ಟ್‌ಟಿವಿಗಳ ಬೆಲೆ ಹೆಚ್ಚಾಗಲಿದೆ ಎಂದು ಹೇಳಿದೆ. ಬೆಲೆ ಏಕೆ ಹೆಚ್ಚಳವಾಗುತ್ತಿವೆ ಎಂಬುದನ್ನು ಮುಂದಿನ ಲೇಖನದಲ್ಲಿ ತಿಳಿಯಿರಿ.


Click it and Unblock the Notifications








