ಪ್ರವಾಸ ತೆರಳುವ ಮುನ್ನ ಸ್ಮಾರ್ಟ್‌ಫೋನ್ ಸಿದ್ದತೆ ಹೇಗಿರಬೇಕು?..ಇಲ್ಲಿವೆ ಸರಿಯಾದ ಟಿಪ್ಸ್!!
ಒಂದು ಉತ್ತಮ ಸ್ಮಾರ್ಟ್‌ಫೋನೊಂದು ಪ್ರವಾಸದ ವೇಳೆ ಕೈಯಲ್ಲಿದ್ದರೆ ಆ ಪ್ರವಾಸದ ಅನುಭವವೇ ಬೇರೆ. ಗುರುತು ಪರಿಚಯವಿಲ್ಲದ ಊರಿನಲ್ಲಿ ನಿರ್ದಿಷ್ಟ ಪ್ರದೇಶವೊಂದನ್ನು ಪತ್ತೆಹಚ್ಚಲು, ಫೋಟೊ ಕ್ಲಿಕ್ಕಿಸಲು, ಸೆಲ್ಫಿ ತೆಗೆದುಕೊಳ್ಳಲು, ಹೋಟೆಲ್‌ಗಳನ್ನು ಹುಡುಕಲು, ಸಂಗೀತ ಆಲಿಸಲು..ಹೀಗೆ ಎಲ್ಲದಕ್ಕೂ ನಮ್ಮ ಸ್ಮಾರ್ಟ್‌ಫೋನ್ ನಮಗೆ ನೆರವಾಗಬಲ್ಲದು.
ಇದಕ್ಕಿಂತಲೂ ಹೆಚ್ಚಾಗಿ, ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಇಲ್ಲದೆ ಒಂದು ದಿನ ಕಳೆಯುವುದೂ ಹೇಗೆ ಅಲ್ಲವೇ.? ಆದರೆ, ನಿಮಗೆ ಗೊತ್ತಾ? ಪ್ರವಾಸ ತೆರಳುವುದಕ್ಕೂ ಮುನ್ನ ಸ್ಮಾರ್ಟ್‌ಫೋನ್‌ಗಾಗಿಯೇ ಕೆಲವು ತಯಾರಿಗಳನ್ನು ಮಾಡಿಕೊಳ್ಳದಿದ್ದರೆ ಅದನ್ನು ತೆಗೆದುಕೊಂಡು ಹೋದರೂ ಉಪಯೋಗ ಇಲ್ಲದಂತೆ ಆಗುತ್ತದೆ ಎಂದರೆ ಆಶ್ಚರ್ಯವೇನಿಲ್ಲ.

ನಮ್ಮದೇ ಊರಿನಲ್ಲಿ ಸ್ಮಾರ್ಟ್‌ಫೋನ್‌ಗಾಗಿಯೇ ಕೆಲವು ತಯಾರಿ ಬೇಡದಿದ್ದರೂ ಪರ ಊರಿನಲ್ಲಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಕೊಂಚವೇ ಎಚ್ಚರಿಕೆ ವಹಿಸುವುದು ಸೂಕ್ತ. ಹಾಗಾಗಿ, ಇಂದಿನ ಲೇಖನದಲ್ಲಿ ಪ್ರವಾಸ ತೆರಳುವುದಕ್ಕೂ ಮುನ್ನ ಸ್ಮಾರ್ಟ್‌ಫೋನ್‌ಗೆಂದೇ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಮೂಲಕ ಸಮಸ್ಯೆಗಳನ್ನು ಹೇಗೆ ತಡೆಗಟ್ಟಬಹುದು ಎಂದು ತಿಳಿಯೋಣ.

ಯಾವ ಯಾವ ತೊಂದರೆಗಳು ಬರಬಹುದು?
ನೆಟ್‌ವರ್ಕ್ ಸರಿಯಾಗಿ ಸಿಗದೇ ಇರಬಹುದು, ಆಪ್‌ಗಳೂ ಕೆಲಸ ನಿರ್ವಹಿಸದೇ ಇರುವುದು, ಮ್ಯಾಪ್ ಕಾರ್ಯನಿರ್ವಹಿಸದಿರುವುದು, ಸಂದೇಶಗಳು ಸೆಂಡ್ ಆಗದೇ ಇರುವುದು, ಬ್ಯಾಟರಿ ಮುಗಿಯುವುದು ಇತ್ಯಾದಿ ಹಲವು ಸಮಸ್ಯೆಗಳು ಎದುರಾಗುವುದು ಪ್ರವಾಸ ಕೈಗೊಂಡ ಸಂದರ್ಭದಲ್ಲೇ ಎನ್ನುತ್ತಾರೆ ಪ್ರವಾಸ ಪ್ರಿಯರು.

ಪವರ್ ಬ್ಯಾಂಕ್ ಜೊತೆಗಿರಲಿ!!
ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಎಷ್ಟೇ ಸಾಮರ್ಥ್ಯದಾಗಿದ್ದರೂ ಸಹ ಪ್ರವಾಸದ ವೇಳೆ ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ಗಮನ ನೀಡಿ. ಪ್ರವಾಸದ ವೇಳೆಯಲ್ಲಿ ಮೊಬೈಲ್ ಅನ್ನು ಹಲವು ಕೆಲಸಗಳಿಗೆ ಬಳಸುವುದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಹಾಗಾಗಿ, ಕನಿಷ್ಠ ಎರಡು ಬಾರಿ ಚಾರ್ಜ್ ಮಾಡಬಲ್ಲ ಪವರ್ ಬ್ಯಾಂಕ್ ಜತೆಗಿರಲಿ.

ಮೂರು ಪವರ್ ಕೇಬಲ್‌ಗಳಿರಲಿ!
ಪ್ರವಾಸದ ವೇಳೆ ಕನಿಷ್ಠ ಮೂರು ಪವರ್ ಕೇಬಲ್‌ಗಳು ನಿಮ್ಮ ಜತೆಗಿರಲಿ. ಕೊಠಡಿಯಲ್ಲಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಚಾರ್ಜರ್, ಪವರ್ ಬ್ಯಾಂಕ್ ಅಥವಾ ಬ್ಯಾಕಪ್ ಬ್ಯಾಟರಿ ಚಾರ್ಜ್ ಮಾಡಲು ಕೇಬಲ್ ಕೊಂಡೊಯ್ಯಬಹುದು. ಇದರಿಂದ ಸ್ಮಾರ್ಟ್‌ಫೋನ್ ಚಾರ್ಜ್ ಖಾಲಿಯಾಗಿ ಎದುರಾಗುವ ಸಮಸ್ಯೆಯನ್ನು ನಿವಾರಿಸಬಹುದು.

ಮಲ್ಟಿಪೋರ್ಟ್ ವಾಲ್ ಚಾರ್ಜರ್!
ದೂರದ ಪ್ರವಾಸವಾದರೆ ಮಲ್ಟಿಪೋರ್ಟ್ ವಾಲ್ ಚಾರ್ಜರ್ ಕೊಂಡೊಯ್ಯುವುದು ಅಗತ್ಯವಾಗಿದೆ. ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನವರ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಒಮ್ಮೆಲೆ ಚಾರ್ಜ್ ಮಾಡಬಹುದು. ಹೋಟೆಲ್ ರೂಮಿನಲ್ಲಿ ಒಂದೇ ಚಾರ್ಜಿಂಗ್ ಸಾಕೆಟ್ ಇದ್ದರೆ ಇದರ ಅಗತ್ಯ ಹೆಚ್ಚಿರುತ್ತದೆ ಅಲ್ಲವೆ.?

ಸಿಮ್ ಮತ್ತು ಸಿಮ್ ಎಜೆಕ್ಟರ್!!
ದೂರದ ಊರಿಗೆ ಪ್ರವಾಸ ಹೊರಡುವ ಮುನ್ನ ಎರಡು ಮೂರು ಟೆಲಿಕಾಂ ಕಂಪೆನಿಗಳ ಸಿಮ್ ಅನ್ನು ಖರೀದಿಸಿ ಇಟ್ಟಿಕೊಳ್ಳುವುದು ಮುಖ್ಯ. ಇದರಿಂದ ನೆಟ್‌ವರ್ಕ್ ಸಮಸ್ಯೆಯಿಂದ ಪಾರಾಗಬಹುದು. ಅಲ್ಲದೇ, ಸ್ಮಾರ್ಟ್‌ಫೋನ್‌ನಿಂದ ಸಿಮ್ ಅನ್ನು ತೆಗೆಯುವ ಸಿಮ್ ಕಾರ್ಡ್ ಎಜೆಕ್ಟರ್ ಸಹ ಸ್ಮಾರ್ಟ್‌ಫೋನ್ ಕಿಟ್‌ನಲ್ಲಿರಲಿ.


ಅಗತ್ಯ ಆಪ್‌ಗಳ ಡೌನ್‌ಲೋಡ್
ಪ್ರವಾಸಕ್ಕೆ ತೆರಳುವ ಮುನ್ನವೇ ಅಗತ್ಯ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಪ್ರವಾಸದಲ್ಲಿ ನಮಗೆ ಉಪಯೋಗ ಬರುವ ಅಪ್‌ಗಳು ಯಾವುವು ಎಂಬುದನ್ನು ಮೊದಲೇ ಹುಡುಕಿ. ಇಲ್ಲದಿದ್ದರೆ, ಪ್ರವಾಸದ ವೇಳೆ ಅನಗತ್ಯವಾಗಿ ಫೋನ್ ಚಾರ್ಜ್ ಮತ್ತು ಮೊಬೈಲ್ ಡೇಟಾ ವಿನಿಯೋಗವಾಗುವುದು ಸಹ ಸಮಸ್ಯೆಗೆ ಕಾರಣವಾಗುತ್ತದೆ.


Click it and Unblock the Notifications








