PF ಹಣವನ್ನು ATMನಲ್ಲಿ ಪಡೆಯುವ ಪ್ರಕ್ರಿಯೆ ಹೇಗಿರಲಿದೆ?..ಎಷ್ಟು ಹಣ ಪಡೆಯಬಹುದು?
ಭಾರತದ ಲಕ್ಷಾಂತರ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಣವನ್ನು ATM ಗಳಲ್ಲಿ ಪಡೆಯುವ ದಿನವು ಇನ್ನೇನು ಬರುತ್ತಿದೆ. ಪ್ರಸ್ತುತ, EPF ಹಿಂಪಡೆಯುವ ಪ್ರಕ್ರಿಯೆಯು ಹಲವು ಹಂತಗಳನ್ನು ಒಳಗೊಂಡಿದ್ದು, ಇದು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, , ಸರ್ಕಾರ ಮತ್ತು EPFO ಈ ಕುರಿತು PF ಹಣವನ್ನು ATMನಲ್ಲಿ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲು ನಿರ್ಧರಿಸಿದ್ದು, ತಂತ್ರಜ್ಞಾನ ಮತ್ತು ಮೂಲಸೌಕರ್ಯದ ಲಭ್ಯತೆಯನ್ನು ಆಧರಿಸಿ ಈ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ. ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ತಿಳಿಸಿರುವಂತೆ, ಈ ವರ್ಷದ ಮೇ ಅಂತ್ಯ ಅಥವಾ ಜೂನ್ ವೇಳೆಗೆ EPFO ಸದಸ್ಯರು UPI ಮತ್ತು ATM ಮೂಲಕ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
PF ಹಣವನ್ನು ATM ಮೂಲಕ ಪಡೆಯುವ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು, EPFO ಸದಸ್ಯರು ಮುಂಬರುವ ಮೇ ತಿಂಗಳ ಅಂತ್ಯ ಅಥವಾ ಜೂನ್ ವೇಳೆಗೆ ತಮ್ಮ ಭವಿಷ್ಯ ನಿಧಿ ಖಾತೆಗೆ ಸುಲಭವಾಗಿ ಪ್ರವೇಶಿಸಬಹುದೆಂದು ತಿಳಿಸಿದ್ದಾರೆ. EPFO ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿರುವ ಮೊತ್ತವನ್ನು ನೇರವಾಗಿ ATM ಮತ್ತು UPI ಮೂಲಕ ವೀಕ್ಷಿಸಬಹುದು. ಅವರು ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಕ್ಷಣವೇ 1 ಲಕ್ಷ ರೂ.ವರೆಗೆ ಹಣ ಹಿಂಪಡೆಯಲು ಮತ್ತು ವರ್ಗಾವಣೆ ಮಾಡಲು ತಮ್ಮ ಆದ್ಯತೆಯ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು ಎಂದು ತಿಳಿಸಿದ್ದಾರೆ. ಇದರಿಂದಾಗಿ, PF ಹಣವನ್ನು ಹಣವನ್ನು ATM ಮತ್ತು UPI ಮೂಲಕ ಪಡೆಯಲು ಹೊಸ ವ್ಯವಸ್ಥೆ ಯು ಶೀಘ್ರದಲ್ಲೇ ಜಾರಿಗೆ ಬರುವುದು ನಿಶ್ಚಿತವಾಗಿದೆ.
ಏನಿದು EPF ವ್ಯವಸ್ಥೆ?
EPF (ಎಂಪ್ಲಾಯೀಸ್ ಪ್ರೊವಿಡೆಂಟ್ ಫಂಡ್) ಭಾರತದಲ್ಲಿ ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ, ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಉದ್ಯೋಗಿಯ ವೇತನದ ಒಂದು ಭಾಗವನ್ನು EPF ಖಾತೆಗೆ ಜಮಾ ಮಾಡುತ್ತಾರೆ. ಈ ಹಣವು ಬಡ್ಡಿಯೊಂದಿಗೆ ಬೆಳೆಯುತ್ತದೆ ಮತ್ತು ಉದ್ಯೋಗಿ ನಿವೃತ್ತಿಯಾದಾಗ ಅಥವಾ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ (ಉದ್ಯೋಗ ಬದಲಾವಣೆ, ವೈದ್ಯಕೀಯ ತುರ್ತು ಪರಿಸ್ಥಿತಿಗಳು) ಪಡೆಯಬಹುದು. ಪ್ರಸ್ತುತ, EPF ಹಿಂಪಡೆಯುವ ಪ್ರಕ್ರಿಯೆ ಆನ್‌ಲೈನ್ ಮತ್ತು ಆಫ್‌ಲೈನ್ ವಿಧಾನಗಳನ್ನು ಒಳಗೊಂಡಿದ್ದು, ಇದು ಕೆಲವೊಮ್ಮೆ ಸಮಯ ತೆಗೆದುಕೊಳ್ಳುತ್ತದೆ. ಆದರೆ, ATM ಗಳ ಮೂಲಕ EPF ಹಣವನ್ನು ಪಡೆಯುವ ಆಯ್ಕೆಯು ಈ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದ್ದು, ನೌಕರರಿಗೆ ತ್ವರಿತವಾಗಿ ಹಣವನ್ನು ಪಡೆಯಲು ಸಹಾಯ ಮಾಡುತ್ತದೆ.
ATM ಗಳ ಮೂಲಕ PF ಹಣವನ್ನು ಪಡೆಯುವ ಪ್ರಯೋಜನಗಳು ಹೀಗಿವೆ,
ಸುಲಭ ಲಭ್ಯತೆ: ನೌಕರರು ಅಗತ್ಯವಿರುವ ಸಮಯದಲ್ಲಿ ATM ಗಳಿಂದ ತ್ವರಿತವಾಗಿ ಹಣವನ್ನು ಪಡೆಯಬಹುದು.
ತ್ವರಿತ ಹಿಂಪಡೆಯುವಿಕೆ: ಪ್ರಸ್ತುತ ಪ್ರಕ್ರಿಯೆಗಿಂತ ಭಿನ್ನವಾಗಿ, ATM ಗಳ ಮೂಲಕ ಹಿಂಪಡೆಯುವಿಕೆ ತ್ವರಿತವಾಗಿರುತ್ತದೆ.
ಗ್ರಾಮೀಣ ಪ್ರದೇಶಗಳಿಗೆ ಅನುಕೂಲ: ಇಂಟರ್ನೆಟ್ ಸೌಲಭ್ಯವಿಲ್ಲದ ಗ್ರಾಮೀಣ ಪ್ರದೇಶದ ನೌಕರರಿಗೆ ಇದು ತುಂಬಾ ಅನುಕೂಲಕರವಾಗಿರುತ್ತದೆ.
ಪಾರದರ್ಶಕತೆ ಮತ್ತು ಭದ್ರತೆ: ಆಧಾರ್ ಲಿಂಕ್ಡ್ ಖಾತೆಗಳು ಮತ್ತು ದೃಢೀಕರಣದಂತಹ ಭದ್ರತಾ ಕ್ರಮಗಳು ಈ ಪ್ರಕ್ರಿಯೆಯನ್ನು ಸುರಕ್ಷಿತವಾಗಿಸುತ್ತವೆ.

ಈ ಪ್ರಕ್ರಿಯೆ ಹೇಗೆ ಕಾರ್ಯನಿರ್ವಹಿಸುತ್ತದೆ?
ATM ಗಳ ಮೂಲಕ EPF ಹಿಂಪಡೆಯುವ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರಬಹುದು ಎನ್ನಲಾಗಿದೆ,
EPF ಖಾತೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು.
ATM ನಲ್ಲಿ ದೃಢೀಕರಣ (ATM ಕಾರ್ಡ್ ಮತ್ತು ಪಿನ್ ಬಳಸಿ).
EPF ಮೊತ್ತವನ್ನು ಹಿಂಪಡೆಯುವುದು.
ನಗದು ವಹಿವಾಟು ಶುಲ್ಕಗಳು ಅನ್ವಯಿಸಬಹುದು.
ATM ಮೂಲಕ ಎಷ್ಟು PF ಹಣ ಪಡೆಯಬಹುದು?
ಕೇಂದ್ರ ಕಾರ್ಮಿಕ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ತಿಳಿಸಿರುವಂತೆ, 'ಹಕ್ಕುದಾರರು, ಫಲಾನುಭವಿಗಳು ಅಥವಾ ವಿಮೆದಾರರು ತಮಗೆ ಸಿಗಬೇಕಾದ ಹಣದಲ್ಲಿ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತಕ್ಷಣವೇ 1 ಲಕ್ಷ ರೂ.ವರೆಗೆ ATM ಮೂಲಕ ಪಡೆಯಬಹುದು. ಆದರೆ, ಕೆಲವು ಮಾಧ್ಯಮ ವರದಿಗಳ ಪ್ರಕಾರ, ಪಿಎಫ್ ಬ್ಯಾಲೆನ್ಸ್‌ನ ಶೇಕಡಾ 50 ರಷ್ಟು ಹಣವನ್ನು ಮಾತ್ರವೇ ATM ನಲ್ಲಿ ವಿತ್‌ಡ್ರಾ ಮಾಡಬಹುದು ಎಂದು ಹೇಳಲಾಗಿದೆ. PF ಖಾತೆದಾರನ ಮರಣದ ಸಂದರ್ಭದಲ್ಲಿ ನಾಮಿನಿ ಕೂಡ ನೇರವಾಗಿ ATM ನಿಂದ ಹಿಂಪಡೆಯಬಹುದು. ಆದರೆ, ಫಲಾನುಭವಿಯ ಬ್ಯಾಂಕ್ ಖಾತೆಯನ್ನು ಮೃತ ಇಪಿಎಫ್‌ಒ ಖಾತೆದಾರರ ಖಾತೆಗೆ ಲಿಂಕ್ ಮಾಡಬೇಕು. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.ಆದರೆ, ಸರ್ಕಾರ ಮತ್ತು EPFO ಈ ಕುರಿತು ಚರ್ಚೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
PF ಹಣವನ್ನು ATM ಗಳ ಮೂಲಕ ಹಿಂಪಡೆಯುವ ಕ್ರಮವು ಈ ಹಿಂದಿನ PF ಹಿಂಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ನೌಕರರಿಗೆ ಅಗತ್ಯವಿರುವ ಸಮಯದಲ್ಲಿ ಹಣವನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ, PF ಹಿಂಪಡೆಯುವ ಪ್ರಕ್ರಿಯೆಯು ಹಲವು ಹಂತಗಳನ್ನು ಒಳಗೊಂಡಿದ್ದು, ಇದು ಸಮಯ ತೆಗೆದುಕೊಳ್ಳುತ್ತದೆ. ಆದರೆ, ATM ಗಳ ಮೂಲಕ EPF ಹಣವನ್ನು ನೇರವಾಗಿ ಪಡೆಯುವುದು ಅನುಕೂಲತೆ ಮತ್ತು ಲಭ್ಯತೆಯನ್ನು ಹೆಚ್ಚಿಸುತ್ತದೆ ಹಾಗೂ ATM ಮೂಲಕ PF ಹಿಂಪಡೆಯುವ ಸೌಲಭ್ಯವು ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿರುತ್ತದೆ ಎಂದು ಹೇಳಬಹುದು.


Click it and Unblock the Notifications








