ಯೂಟ್ಯೂಬ್‌ನಿಂದ ಲಕ್ಷ ಲಕ್ಷ ದುಡಿಬಹುದು..! ಆದರೆ ಹೇಗೆ..?
ಬಿಬಿ ಕಿ ವಿನೇಸ್ ಭಾರತದಲ್ಲಿನ ಅತ್ಯಂತ ಪ್ರಸಿದ್ಧ ಯೂಟ್ಯೂಬ್ ಚಾನಲ್ ಇದು. ಪ್ರಸ್ತುತ 86,98,579 ಸಬ್‌ಸ್ಕ್ರೈಬರ್ ಹೊಂದಿದ್ದು, ತಿಂಗಳಿಗೆ ಈ ಚಾನಲ್ 20 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದೆ ಎಂದರೆ ನೀವು ನಂಬಲೇಬೇಕು. ಯಾಕಂದರೆ ಯೂಟ್ಯೂಬ್ ಅಷ್ಟೊಂದು ಜನಪ್ರಿಯವಾಗಿದೆ. ಗೂಗಲ್ ಮಾಲೀಕತ್ವದಲ್ಲಿರುವ ವಿಡಿಯೋ ಫ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್ ವಿಡಿಯೋಗಿಂತ ಹೆಚ್ಚು ಸದ್ದು ಮಾಡುತ್ತಿರುವುದು ಅಲ್ಲಿ ಚಾನಲ್‌ಗಳು ಗಳಿಸುತ್ತಿರುವ ಆದಾಯದಿಂದ ಎನ್ನುವುದಂತೂ ಸತ್ಯ.

ಬಹಳಷ್ಟು ಜನ ಯೂಟ್ಯೂಬ್‌ನಲ್ಲಿ ನಾವು ಹಣ ಗಳಿಸಬೇಕು ಎಂದು ಕನಸು ಕಟ್ಟಿಕೊಂಡು, ಯೂಟ್ಯೂಬ್ ಸ್ಟಾರ್‌ಗಳಾಗಬೇಕು ಎಂಬ ಹಂಬಲ ಹೊಂದಿರುತ್ತಾರೆ. ಆದರೆ, ದೊಡ್ಡ ವಿಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಹೇಗೆ ಹಣ ಗಳಿಸುವುದು ಎಂದು ಬಹಳಷ್ಟು ಜನರಿಗೆ ಗೊತ್ತೆ ಇಲ್ಲ. ಅದಕ್ಕಾಗಿಯೇ ಯೂಟ್ಯೂಬ್‌ನಲ್ಲಿ ಹಣ ಗಳಿಸುವುದು ಹೇಗೆ ? ಯಾವ್ಯಾವ ತಂತ್ರ ಅನುಸರಿಸಿದರೆ ಹೆಚ್ಚು ಹಣ ಬರುತ್ತದೆ? ನಿಮ್ಮ ಚಾನಲ್ ಪ್ರಾರಂಭಕ್ಕೆ ಬೇಕಾದ ಅಗತ್ಯತೆಗಳು ಯಾವುವು? ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಓದಿ ನೀವು ದೊಡ್ಡ ಯೂಟ್ಯೂಬ್ ಸ್ಟಾರ್ ಆಗಿ ಲಕ್ಷಾಂತರ ಹಣ ಗಳಿಸಿ.

ಎಷ್ಟು ಹಣ ಗಳಿಸಬಹುದು..?
ಯೂಟ್ಯೂಬ್ ಚಾನಲ್ ಮುಖಾಂತರ ನೀವು ಬಹಳಷ್ಟು ಹಣ ಗಳಿಸಬಹುದಾಗಿದೆ. ನೀವು ಅಪ್‌ಲೋಡ್ ಮಾಡಿದ ವಿಡಿಯೋವನ್ನು 1000 ಜನ ವೀಕ್ಷಿಸಿದರೆ ನಿಮಗೆ 1.5 ಡಾಲರ್ ಸಿಗಲಿದೆ. ಅಂದರೆ ಸರಿ ಸುಮಾರು ನೂರು ರೂಪಾಯಿ ಸಿಗಲಿದೆ. ನಿಮ್ಮ ವಿಡಿಯೋವನ್ನು 10 ಲಕ್ಷ ಜನ ವೀಕ್ಷಿಸಿದರೆ ನಿಮಗೆ ಸುಮಾರು 1 ಲಕ್ಷ ರೂಪಾಯಿ ನೀವು ಗಳಿಸುತ್ತೀರಿ. ಆದ್ದರಿಂದ ಹೆಚ್ಚು ಜನ ನೋಡುವ ರೀತಿ ಯೂಟ್ಯೂಬ್ ವಿಡಿಯೋ ಸೃಷ್ಟಿಸುವುದು ಸಹ ತಂತ್ರಗಾರಿಕೆ.

ಜಾಹೀರಾತುದಾರರಿದ್ದಾರೆ ಹುಡುಕಿ..!
ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದು ಏನೆಂದರೆ ಯೂಟ್ಯೂಬ್‌ನಿಂದ ಅಷ್ಟೇ ಅಲ್ಲದೇ, ನೀವು ನಿಮ್ಮ ಚಾನಲ್‌ಗೆ ಬೇರೆ ರೀತಿಯಿಂದಲೂ ಆದಾಯದ ಮೂಲವನ್ನು ಹುಡುಕಬಹುದಾಗಿದೆ. ಬಹಳಷ್ಟು ಯೂಟ್ಯೂಬ್ ಚಾನಲ್‌ಗಳು ಅನೇಕ ಜಾಹೀರಾತು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಯೂಟ್ಯೂಬ್‌ಗೆ ವಿಡಿಯೋ ಅಪ್‌ಲೋಡ್ ಮಾಡುತ್ತಾರೆ. ಜಾಹೀರಾತುದಾರರನ್ನು ಸೆಳೆಯಲು ನಿಮ್ಮ ಯೂಟ್ಯೂಬ್ ಇನ್‌ಸೈಟ್ ಉತ್ತಮವಾಗಿರಬೇಕು. ಆಗಿದ್ದಾಗ ಜಾಹೀರಾತುದಾರರು ನಿಮ್ಮ ಚಾನಲ್‌ನಲ್ಲಿ ಜಾಹೀರಾತು ನೀಡಲು ಮುಂದೆ ಬರುತ್ತಾರೆ.

ಗೂಗಲ್ ಆಡ್‌ಸೆನ್ಸ್ ಮಾಡಿ
ಯೂಟ್ಯೂಬ್ ಚಾನಲ್ ಒಪನ್ ಮಾಡಿದ ನಂತರ ನೀವು ನಿಮ್ಮ ಚಾನಲ್‌ನ್ನು ಗೂಗಲ್ ಆಡ್‌ಸೆನ್ಸ್‌ನೊಂದಿಗೆ ಜೋಡಿಸಿ. ಇದರಿಂದ ನಿಮ್ಮ ಚಾನಲ್‌ನ್ನು ಮಾನಟೈಸ್ ಮಾಡಬಹುದಾಗಿದೆ. ನಂತರ ನಿಮ್ಮ ಚಾನೆಲ್ ವೀಕ್ಷಣೆ ಮತ್ತು ಫಾಲೋವರ್ಸ್‌ಗಳ ಆಧಾರದ ಮೇಲೆ ಚಾನಲ್ ಮಾನಟೈಸ್ ಮಾಡಲಾಗುತ್ತದೆ. ನಿಮ್ಮ ಬೆಸ್ಟ್ ವಿಡಿಯೋಗಳನ್ನು ಮಾತ್ರ ಮಾನಟೈಸ್ ಮಾಡುವ ಆಯ್ಕೆಯು ನಿಮಗಿದೆ. ಈ ವಿಡಿಯೋಗಳಲ್ಲಿ ಗೂಗಲ್ ತನ್ನ ಜಾಹೀರಾತುಗಳನ್ನು ಪ್ರಸಾರ ಮಾಡುತ್ತದೆ. ಅದರಿಂದಲೂ ಸಹ ನಿಮಗೆ ಹಣ ಹರಿದು ಬರುತ್ತದೆ.

ಕಾಫಿರೈಟ್ ಬಗ್ಗೆ ಎಚ್ಚರ ವಹಿಸಿ
ಯೂಟ್ಯೂಬ್‌ನಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಕಾಫಿರೈಟ್. ನಿಮ್ಮ ವಿಡಿಯೋದಲ್ಲಿ ಯಾವುದೇ ಕಾಫಿರೈಟ್ ಹೊಂದಿದ ಅಂಶಗಳನ್ನು ಗಮನಿಸಿ. ಅಂದರೆ, ಮ್ಯೂಸಿಕ್, ವಿಡಿಯೋ, ಮೊಂಟ್ಯಾಜ್‌ಗಳು ಕಾಫಿರೈಟ್ ಬರದಂತೆ ನೋಡಿಕೊಳ್ಳಿ. ಯೂಟ್ಯೂಬ್ ಲೈಬ್ರಿ ಅಥವಾ ಬೇರೆ ಸ್ಟಾಕ್ ವೆಬ್‌ಸೈಟ್‌ಗಳಿಂದ ಮ್ಯೂಸಿಕ್, ವಿಡಿಯೋ, ಮೊಂಟ್ಯಾಜ್‌ಗಳನ್ನು ತೆಗೆದುಕೊಂಡು ಬಳಸಿ ಯಾವುದೇ ಕಾಫಿರೈಟ್ ವಿವಾದ ಆಗುವುದಿಲ್ಲ. ಕಾಫಿರೈಟ್ ಅಂಶಗಳಿಗೂ ಯೂಟ್ಯೂಬ್ ಕನಿಷ್ಠ ಅವಕಾಶಗಳನ್ನು ನೀಡಿದೆ. ಅದಕ್ಕಿಂತಲೂ ಹೆಚ್ಚು ಬಾರಿ ಕಾಫಿರೈಟ್ ಆಗಿರುವ ಅಂಶಗಳು ನಿಮ್ಮ ವಿಡಿಯೋದಲ್ಲಿ ಅಪ್‌ಲೋಡ್ ಆದರೆ, ನಿಮ್ಮ ಚಾನಲ್ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚು.

ಒಂದಿಷ್ಟು ಸಿದ್ಧತೆ ಇರಲಿ
ನಿಮ್ಮ ಯೂಟ್ಯೂಬ್ ಚಾನಲ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು ಎನ್ನುವುದರ ಮೇಲೆ ಒಂದಿಷ್ಟು ಸಿದ್ಧತೆ ಮಾಡಿಕೊಂಡಿರಿ. ಗುಣಮಟ್ಟದ ವಿಡಿಯೋಗಳನ್ನು ನೀಡಿದರೆ ನಿಮ್ಮ ಫಾಲೋವರ್ಸ್ ಸಂಖ್ಯೆಯು ಹೆಚ್ಚಾಗುವ ಜತೆಗೆ ವೀಕ್ಷಣೆಯ ಪ್ರಮಾಣವು ಹೆಚ್ಚುತ್ತದೆ. ಯಾವುದೋ ಮೊಬೈಲ್‌ನಿಂದ ತೆಗೆದಿರುವ ವಿಡಿಯೋವನ್ನು ಎಡಿಟ್ ಮಾಡದೇ ನೇರವಾಗಿ ಹಾಕಬೇಡಿ ಇದರಿಂದ ನಿಮ್ಮ ಚಾನಲ್ ವೀಕ್ಷಕರ ಸಂಖ್ಯೆಯ ಪ್ರಮಾಣದಲ್ಲಿ ಕಡಿಮೆಯಾಗುವ ಸಾಧ್ಯತೆಯೇ ಅಧಿಕ.

ಏನೇನು ಬೇಕು..?
ವಿಡಿಯೋ ಸೃಷ್ಟಿಸಲು ಒಂದು ಉತ್ತಮ ಕ್ಯಾಮೆರಾ ಇದ್ದರೆ ಬೆಸ್ಟ್, ಯಾಕಂದ್ರೆ ವಿಡಿಯೋ ಕ್ವಾಲಿಟಿ 1080 ಪಿಕ್ಸೆಲ್ಸ್ ಗುಣಮಟ್ಟದಲ್ಲಿ ಇದ್ದರೆ ವೀಕ್ಷಕರನ್ನು ಸೆಳೆಯುತ್ತವೆ. ಸದ್ಯ ಉತ್ತಮ ಕ್ಯಾಮೆರಾ ಹೊಂದಿದ ಮೊಬೈಲ್‌ಗಳಿದ್ದು ಅವುಗಳಿಂದಲೂ ವಿಡಿಯೋ ಸೆರೆಹಿಡಿಯಬಹುದಾಗಿದೆ. ವಿಡಿಯೋ ಎಡಿಟಿಂಗ್ ಮಾಡಲು ಉತ್ತಮ ಸಾಫ್ಟ್‌ವೇರ್ ಇದ್ದರೆ ಒಳಿತು. ವಿಂಡೋಸ್ ಕಂಪ್ಯೂಟರ್‌ನಲ್ಲಿ ಮೂವೀ ಮೇಕರ್ ಆಪಲ್ ಕಂಪ್ಯೂಟರ್‌ನಲ್ಲಿ ಐಮೂವಿ ಎನ್ನುವ ಇನ್‌ಬಿಲ್ಟ್ ಎಡಿಟಿಂಗ್ ಸಾಫ್ಟ್‌ವೇರ್‌ಗಳಿವೆ. ಅವುಗಳನ್ನು ಬಿಟ್ಟು ಇನ್ನು ವಿಡಿಯೋದಲ್ಲಿ ಸೃಜನಾತ್ಮಕ ಎಡಿಟಿಂಗ್ ಮಾಡ್ತಿವಿ ಎಂದರೆ ವಿಂಡೋಸ್ ಪಿಸಿಯಲ್ಲಿ ಅಡೋಬ್ ಪ್ರೀಮಿಯರ್ ಪ್ರೋ ಮತ್ತು ಕೊರೆಲ್ ವಿಡಿಯೋ ಸ್ಟುಡಿಯೋ ಬೆಸ್ಟ್ ಆಗಿದೆ. ಆಪಲ್ ಪಿಸಿಗೆ ಫೈನಲ್ ಕಟ್ ಪ್ರೋ ಉತ್ತಮ ಆಯ್ಕೆ. ಈ ಮೂರು ಸಾಫ್ಟ್‌ವೇರ್‌ಗಳು ಉಚಿತವಲ್ಲ. ನಿಮ್ಮ ಜಾಣ್ಮೆ ಪ್ರದರ್ಶಿಸಿ ಉಚಿತವಾಗಿಯೂ ಈ ಸಾಫ್ಟ್‌ವೇರ್‌ಗಳನ್ನು ಪಡೆಯಬಹುದು.

ಧ್ವನಿ, ಬೆಳಕು, ಹಿನ್ನೆಲೆ
ನಿಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಗುಣಮಟ್ಟದ ಧ್ವನಿ ಇರಲೇಬೇಕು. ಅದಕ್ಕಾಗಿ ಶೂಟಿಂಗ್ ಸಮಯದಲ್ಲಿ ಮೈಕ್ರೋಫೋನ್ ಬಳಸಿ. ವಿಡಿಯೋದಲ್ಲಿ ಬೆಳಕು ಸಹ ಪ್ರಮುಖ ಪಾತ್ರವಹಿಸುತ್ತದೆ. ಉತ್ತಮವಾದ ಬೆಳಕಿನಲ್ಲಿ ವಿಡಿಯೋ ಸೆರೆ ಹಿಡಿದರೆ ಗುಣಮಟ್ಟ ಚೆನ್ನಾಗಿದ್ದು, ವೀಕ್ಷಕರನ್ನು ಸೆಳೆಯುತ್ತದೆ. ನಿಮ್ಮ ಹಿನ್ನೆಲೆಯು ಖಾಲಿಯಾಗಿ ಉತ್ತಮವಾಗಿದ್ದರೆ ಓಳಿತು. ಹಸಿರು ಅಥವಾ ನೀಲಿ ಪರದೆ ಬಳಸಿ ವಿಡಿಯೋ ಚಿತ್ರಿಕರಿಸಿದರೆ ಎಡಿಟಿಂಗ್ ಮಾಡುವಾಗ ಹಿನ್ನೆಲೆಯಲ್ಲಿ ಬೇಕಾದ ರೀತಿಯಲ್ಲಿ ಸೃಷ್ಟಿಸಿಕೊಳ್ಳಬಹುದಾಗಿದೆ.

ನಿಮ್ಮ ಚಾನಲ್ ಜನಪ್ರಿಯತೆ ನಿಮಗೆ ಹಣದ ಹೊಳೆ ಹರಿಸುತ್ತದೆ
ಯೂಟ್ಯೂಬ್ ಚಾನಲ್ ಜನಪ್ರಿಯತೆಯಿಂದ ಹೆಚ್ಚು ವೀಕ್ಷಕರು ನಿಮ್ಮ ವಿಡಿಯೋಗಳನ್ನು ನೋಡುವಂತಾಗುತ್ತದೆ. ಆದ್ದರಿಂದ ಉತ್ತಮ ಯೂಸರ್ ನೇಮ್‌ನ್ನು ಮೊದಲು ಆಯ್ಕೆ ಮಾಡಿ. ನಿಮ್ಮ ಚಾನಲ್ ಹೆಸರು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುವಂತೆ ಹೆಸರು ಹುಡುಕುವುದು ಸಹ ಜಾಣ್ಮೆ. ನಿಮ್ಮ ಚಾನಲ್‌ನ್ನು ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ. ಆಗ ಇನ್ನು ಬಹಳಷ್ಟು ಜನಕ್ಕೆ ನಿಮ್ಮ ಚಾನಲ್ ತಲುಪುತ್ತದೆ.

ವಿಡಿಯೋದಲ್ಲಿ ಇದು ಇದ್ದರೆ ಚಂದ
ಯೂಟ್ಯೂಬ್‌ನಲ್ಲಿ ಉತ್ತಮವಾಗಿ ವೀಕ್ಷಣೆಗೆ ಒಳಪಡುವ ವಿಡಿಯೋಗಳೆಂದರೆ ಸಾಹಸ, ಕ್ರೀಡೆ, ಸಿನಿಮಾಗಳೆ ಪ್ರಮುಖ. ಇದು ಬಿಟ್ಟು ಉತ್ಪನ್ನದ ವಿಮರ್ಶೆ, ಹಾಸ್ಯ, ಸೌಂದರ್ಯ ಮತ್ತು ಹೇಗೆ? ಎನ್ನುವ ವಿಡಿಯೋಗಳು ಹೆಚ್ಚು ವೀಕ್ಷಕರನ್ನು ಸೆಳೆಯುತ್ತವೆ. ವಿಡಿಯೋ ಜತೆ ಉತ್ತಮವಾದ ಹಾಗೂ ಆಕರ್ಷಕವಾದ ಹೆಡ್ಡಿಂಗ್ ಇರಲಿ ಇದು ಸಹ ನಿಮ್ಮ ಯೂಟ್ಯೂಬ್ ಚಾನಲ್‌ನ್ನು ಎತ್ತರಕ್ಕೆ ಬೆಳೆಸುತ್ತದೆ.

ವಿಡಿಯೋ ಪಯಣ ನಿರಂತರವಾಗಿರಲಿ
ನಿಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋಗಳನ್ನು ದೈನಂದಿನವಾಗಿ ಅಪ್‌ಲೋಡ್ ಮಾಡುತ್ತಿದ್ದರೆ, ವೀಕ್ಷಕರು ನಿಮ್ಮ ವಿಡಿಯೋಗಳಿಗೆ ಫಾಲೋವರ್ಸ್ ಆಗುತ್ತಾರೆ. ಒಂದು ವಿಡಿಯೋ ಹಾಕಿ, ಮತ್ತೊಂದು ವಿಡಿಯೋವನ್ನು ಹಲವು ದಿನಗಳ ನಂತರ ಯಾವಾಗ್ಲೋ ಹಾಕುವುದರಿಂದ ವೀಕ್ಷಕರಿಗೆ ನಿಮ್ಮ ವಿಡಿಯೋ ಕಾಣದೆಯೂ ಇರಬಹುದು.

ಸೃಜನಾತ್ಮಕ ಚಿಂತನೆಯಿರಲಿ
ನಿಮ್ಮ ವಿಡಿಯೋಗಳು ಬೇರೆ ವಿಡಿಯೋಗಳಿಗಿಂತ ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕು. ಆದ್ದರಿಂದ ನಿಮ್ಮ ವಿಡಿಯೋಗಳು ಸೃಜನಾತ್ಮಕವಾಗಿರಲಿ, ಬೇರೆ ವಿಡಿಯೋಗಳಿಂದ ಪ್ರೇರಿತವಾಗಿ ನೀವು ವಿಡಿಯೋಗಳನ್ನು ಸೃಷ್ಟಿ ಮಾಡಿದರೂ, ನಿಮ್ಮದೇ ಆದ ನೈಜ ವಿಷಯವಿರಲಿ. ಇದರಿಂದ ವೀಕ್ಷಕರತ್ತಿರ ಚಾನಲ್ ಕುರಿತು ನಂಬಿಕೆ ಬೆಳೆಸಬಹುದಾಗಿದೆ.

ನಿಮ್ಮ ವಿಡಿಯೋ ಮೇಲೆ ನಿಮಗಿರಲಿ ಇಷ್ಟ
ಯಾವಾಗಲೂ ಕೆಲಸವನ್ನು ಇಷ್ಟ ಪಟ್ಟೇ ಮಾಡಬೇಕು. ಇದರಿಂದ ಯಾವುದೇ ಕ್ಷೇತ್ರದಲ್ಲಾಗಲಿ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ವಿಡಿಯೋ ಪ್ರೀತಿಯನ್ನು ನಿಮ್ಮ ವೀಕ್ಷಕರಿಗೆ ಅರ್ಥ ಮಾಡಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ವಿಡಿಯೋ ನಿರ್ಮಾಣದಲ್ಲಿನ ಅಚ್ಚುಕಟ್ಟುತನ ಉತ್ತಮ ವೀಕ್ಷಕರನ್ನು ನಿಮ್ಮ ಚಾನಲ್‌ಗೆ ಕರೆತರುತ್ತದೆ. ಇನ್ಯಾಕೆ ತಡ ಈ ಎಲ್ಲಾ ತಂತ್ರಗಳನ್ನು ಅನುಸರಿಸಿ ಹಣದ ಹೊಳೆಯನ್ನೆ ಜೇಬಿಗಿಳಿಸಿ.


Click it and Unblock the Notifications








