ಲೋಕಸಭಾ ಚುನಾವಣಾ ಫಲಿತಾಂಶ Live ನೋಡುವುದು ಹೇಗೆ?: ಇಲ್ಲಿದೆ ಸುಲಭ ವಿಧಾನ
2024ರ ಲೋಕಸಭಾ ಚುನಾವಣೆ (LokSabha Election) ಹಿನ್ನೆಲೆಯಲ್ಲಿ ದೇಶಾದ್ಯಂತ 7 ಹಂತಗಳಲ್ಲಿ ಮತದಾನ ನಡೆದಿದೆ. ಇದರ ಬೆನ್ನಲ್ಲೇ ವಿವಿಧ ಸಮೀಕ್ಷಾ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಯೂ ಹೊರ ಬಿದ್ದಿದೆ. ನಾಳೆ (ಜೂನ್ 4) ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ. ಇದಕ್ಕಾಗಿ ದೇಶಾದ್ಯಂತ ಭರದ ಸಿದ್ದತೆಗಳು ನಡೆಯುತ್ತಿವೆ. ರಾಜ್ಯದಲ್ಲೂ ಚುನಾವಣಾ ಆಯೋಗ ಸಿದ್ದತಾ ಕಾರ್ಯಗಳನ್ನ ಕೈಗೊಂಡಿದೆ. ಇದೀಗ, ಅಂತಿಮ ಫಲಿತಾಂಶಕ್ಕೆ (LokSabha Election Results 2024) ಕ್ಷಣಗಣನೆ ಶುರುವಾಗಿದೆ. ಹಾಗಿದ್ರೆ, ಫಲಿತಾಂಶದ ಕ್ಷಣಕ್ಷಣದ ಮಾಹಿತಿ ಹೇಗೆ? ಮತ್ತು ಎಲ್ಲಿ ವೀಕ್ಷಿಸಬೇಕು? ಅನ್ನೋದನ್ನು ತಿಳಿಯೋಣ ಬನ್ನಿ.
ದೇಶದ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಲ್ಲಿನ 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಏಪ್ರಿಲ್ 19 ರಂದು ಮೊದಲ ಹಂತ, ಏಪ್ರಿಲ್ 26 ರಂದು ಎರಡನೇ ಹಂತ, ಮೇ 7 ರಂದು 3ನೇ ಹಂತ, ಮೇ 13 ರಂದು 4ನೇ ಹಂತ, ಮೇ 20 ರಂದು 5ನೇ ಹಂತ, ಮೇ 25 ರಂದು 6ನೇ ಹಂತ ಮತ್ತು ಜೂನ್ 1 ಕೊನೆಯ ಹಂತದ ಮತದಾನ ನಡೆದಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ದೇಶಾದ್ಯಂತ ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ.

ಚುನಾವಣಾ ಫಲಿತಾಂಶಗಳನ್ನು ವೀಕ್ಷಿಸುವುದು ಹೇಗೆ?
ECIನ ಅಧಿಕೃತ ವೆಬ್‌ಸೈಟ್ https://results.eci.gov.in/ನಲ್ಲಿ ನೀವು ಫಲಿತಾಂಶ ವೀಕ್ಷಿಸಬಹುದು. ವಿಧಾನಸಭಾ ಕ್ಷೇತ್ರ/ಸಂಸತ್ತಿನ ಕ್ಷೇತ್ರಕ್ಕಾಗಿ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳು ನಮೂದಿಸಿದ ಡೇಟಾದ ಪ್ರಕಾರ ಎಣಿಕೆಯ ಮಾಹಿತಿಗಳು ಮತ್ತು ಫಲಿತಾಂಶಗಳು ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ, iOS ಮತ್ತು Android ಮೊಬೈಲ್ ಅಪ್ಲಿಕೇಶನ್‌ಗಳಲ್ಲಿಯೂ ಫಲಿತಾಂಶ ನೋಡಬಹುದು.
ಮತದಾರರ ಸಹಾಯವಾಣಿ ಅಪ್ಲಿಕೇಶನ್
ಗೂಗಲ್ ಪ್ಲೇ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಇಲ್ಲಿ ನೀವು ಅಭ್ಯರ್ಥಿಯ ಗೆಲುವು, ಮುನ್ನಡೆ, ಅಥವಾ ಹಿಂದುಳಿದ ಅಭ್ಯರ್ಥಿಗಳ ವಿವರಗಳನ್ನು ಮತ್ತು ಕ್ಷೇತ್ರವಾರು ಅಥವಾ ರಾಜ್ಯವಾರು ಫಲಿತಾಂಶಗಳನ್ನು ವೀಕ್ಷಿಸಲು ಲಭ್ಯವಿರುವ ಫಿಲ್ಟರ್‌ಗಳನ್ನು ಬಳಸಬಹುದು. ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ 'ರಿಟರ್ನಿಂಗ್ ಆಫೀಸರ್‌ಗಳು ಮತ್ತು ಎಣಿಕೆ ಏಜೆಂಟ್‌ಗಳಿಗಾಗಿ ಕೈಪಿಡಿ' ಅನ್ನು ನೋಡಬಹುದು ಎಂದು ಮತಗಟ್ಟೆ ಸಂಸ್ಥೆ ತಿಳಿಸಿದೆ.
ಎಣಿಕೆ ಯಾವಾಗ ಪ್ರಾರಂಭವಾಗುತ್ತದೆ?
2024ರ ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು, ನಾಳೆ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕರ್ನಾಟಕದ ಫಲಿತಾಂಶದ ಬಗ್ಗೆ ಹೇಳೋದಾದರೆ (ದಕ್ಷಿಣ ಕರ್ನಾಟಕದಲ್ಲಿ) ಮತದಾನ ನಡೆದು ಬರೋಬ್ಬರಿ 48 ದಿನಗಳ ಬಳಿಕ ಮತ ಎಣಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಈ ಪಕ್ಷಗಳಿಗೆ ಜಂಟಿಯಾಗಿ ಎಷ್ಟು ಸ್ಥಾನ ಸಿಗಬಹುದು? ಆಡಳಿತಾರೂಢ ಕಾಂಗ್ರೆಸ್ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಬಹುದು? ಎಂಬ ಕುತೂಹಲಕ್ಕೆ ನಾಳೆ ಉತ್ತರ ಸಿಗಲಿದೆ.

ಇನ್ನೂ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆಯನ್ನು ಜೂನ್ 2 ರಂದು ನಡೆಸಲಾಗಿದೆ. ಸಿಕ್ಕಿಂನಲ್ಲಿ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ನೇತೃತ್ವದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) 32 ರಲ್ಲಿ 31 ರ ಸ್ಥಾನಗಳನ್ನು ಜಯಗಳಿಸುವ ಮೂಲಕ ಪ್ರಬಲ ಗೆಲುವು ಸಾಧಿಸಿದೆ. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ 46 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ.
ಮತ ಎಣಿಕೆ ಕೇಂದ್ರದ ಬಳಿ ಸಾರ್ವಜನಿಕರಿಗೆ ನಿಷೇಧ
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರು ಜ್ಞಾನೇಶ್ ಕುಮಾರ್, ಸುಖಬೀರ್ ಸಿಂಗ್ ಸಂಧು ಅವರು ಎಲ್ಲಾ ಮುಖ್ಯ ಚುನಾವಣಾ ಅಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳೊಂದಿಗೆ ಮತ ಎಣಿಕೆ ದಿನದ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಇನ್ನು ಮತ ಎಣಿಕೆ ಕೇಂದ್ರದ ಒಳಗೆ ಚುನಾವಣಾ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳು, ಅಭ್ಯರ್ಥಿಗಳು ಹಾಗೂ ವೀಕ್ಷಕರೂ ಸೇರಿದಂತೆ ಪ್ರಮುಖರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ. ಮತ ಎಣಿಕೆ ಕೇಂದ್ರದ ವ್ಯಾಪ್ತಿಯಲ್ಲಿ ಇಂತಿಷ್ಟು ಮೀಟರ್‌ವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.


Click it and Unblock the Notifications








