IND vs SA Final: ಫೈನಲ್ ಪಂದ್ಯವನ್ನು 'ಫ್ರೀ'ಯಾಗಿ ಎಲ್ಲಿ? ಮತ್ತು ಹೇಗೆ ವೀಕ್ಷಿಸಬೇಕು?
ಟಿ20 ವಿಶ್ವ ಕಿರೀಟಕ್ಕೆ ಒಂದೇ ಹೆಜ್ಜೆ..! ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA Final) ನಡುವೆ ಇಂದು ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ನಡೆಯಲಿದೆ. ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಈ ರೋಚಕ ಕಾಳಗ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಅಜೇಯವಾಗಿ ಮುಂದುವರೆದಿದೆ. ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಇನ್ನು ದಕ್ಷಿಣ ಆಫ್ರಿಕಾ ಮೊದಲ ಪ್ರಶಸ್ತಿಯ ಕನಸಿನಲ್ಲಿದೆ. ಈ ಪಂದ್ಯವನ್ನು ಯಾವಾಗ? ಎಲ್ಲಿ? ಮತ್ತು ಹೇಗೆ ವೀಕ್ಷಿಸಬಹುದು? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
2024ರ ಐಸಿಸಿ ಟಿ20 ವಿಶ್ವಕಪ್‌ನ ಭಾರತ vs ಸೌತ್ ಆಫ್ರಿಕಾ ನಡುವಿನ ಫೈನಲ್ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆ ಮತ್ತು ಸ್ಥಳೀಯ ಸಮಯ 10:30ಕ್ಕೆ ಪ್ರಾರಂಭವಾಗಲಿದೆ. ಈ ಪಂದ್ಯವು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಸಂಪೂರ್ಣ ಟಿ20 ವಿಶ್ವಕಪ್‌ನ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಮತ್ತೊಂದೆಡೆ, ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.

ಆನ್‌ಲೈನ್ ಲೈವ್ ನೋಡುವುದು ಹೇಗೆ?
ಫೈನಲ್ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಕ್ರಿಕೆಟ್ ಅಭಿಮಾನಿಗಳು ಆ್ಯಪ್ ಮತ್ತು ವೆಬ್‌ಸೈಟ್ ಎರಡರಲ್ಲೂ ಈ ರೋಚಕ ಪಂದ್ಯವನ್ನು ವೀಕ್ಷಿಸಬಹುದು.
ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ವೀಕ್ಷಿಸುವುದು ಹೇಗೆ?
ನಿಮ್ಮ ಮೊಬೈಲ್, ಟ್ಯಾಬ್ಲೆಟ್, ಡೆಸ್ಕ್‌ಟಾಪ್, ಟಿವಿಗಳು ಮತ್ತು ಸ್ಟ್ರೀಮಿಂಗ್ ಸಾಧನಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಪ್ರವೇಶಿಸಬಹುದು.
- ಮೊದಲು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ: Google Play ಅಥವಾ ಆಪ್ ಸ್ಟೋರ್‌ನಿಂದ Disney+ Hotstar ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್ ಮಾಡಿಕೊಳ್ಳಿ.
- ಸೈನ್ ಇನ್/ನೋಂದಣಿ: ಅಪ್ಲಿಕೇಶನ್ ಬಳಸಲು ಲಾಗ್ ಇನ್ ಮಾಡಿ ಅಥವಾ ಸೈನ್ ಅಪ್ ಮಾಡಿ.
- ಪಂದ್ಯವನ್ನು ಸರ್ಚ್ ಮಾಡಿ: ಲೈವ್ ಸ್ಟ್ರೀಮಿಂಗ್ ಪ್ರಾರಂಭಿಸಲು ಭಾರತ vs ದಕ್ಷಿಣ ಆಫ್ರಿಕಾ ಬ್ಯಾನರ್ (ಫೋಟೋ) ಮೇಲೆ ಕ್ಲಿಕ್ ಮಾಡಿ.
ಬೇರೆ ದೇಶಗಳಲ್ಲಿ ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
- ಪಾಕಿಸ್ತಾನ: PTV ಮತ್ತು ಟೆನ್ ಸ್ಪೋರ್ಟ್ಸ್ ಪ್ರಸಾರ ಹಕ್ಕುಗಳನ್ನು ಹೊಂದಿವೆ.
- ಯುಎಸ್ಎ ಮತ್ತು ಕೆನಡಾ: WillowTV ದೊಡ್ಡ ಪಂದ್ಯವನ್ನು ಲೈವ್ ಸ್ಟ್ರೀಮ್ ಮಾಡುತ್ತದೆ.
- ಇಂಗ್ಲೆಂಡ್: ಸ್ಕೈ ಸ್ಪೋರ್ಟ್ಸ್‌ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
- ಆಸ್ಟ್ರೇಲಿಯಾ: ಪಂದ್ಯವನ್ನು ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಮಾಡಲಾಗುತ್ತದೆ.
- ನ್ಯೂಜಿಲೆಂಡ್: ಸ್ಕೈ ಸ್ಪೋರ್ಟ್ NZ ಪ್ರಸಾರದ ಹಕ್ಕುಗಳನ್ನು ಹೊಂದಿದೆ.
ಫೈನಲ್ ಅನ್ನು ಕೇಬಲ್‌ನಲ್ಲಿ ವೀಕ್ಷಿಸುವುದು ಹೇಗೆ?
ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇಂಗ್ಲಿಷ್ ಕಾಮೆಂಟರಿಯೊಂದಿಗೆ ಪಂದ್ಯವನ್ನು ವೀಕ್ಷಿಸಲು, ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ 1 HD ಮತ್ತು SD ಚಾನಲ್‌ಗಳಿಗೆ ಟ್ಯೂನ್ ಮಾಡಬಹುದು. ಮತ್ತೊಂದೆಡೆ, ಹಿಂದಿ ಕಾಮೆಂಟರಿಯೊಂದಿಗೆ ನೇರ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ 3 HD ಮತ್ತು SD ಚಾನಲ್‌ಗಳಲ್ಲಿ ಲಭ್ಯವಿರುತ್ತದೆ.
ಫೈನಲ್ ಪಂದ್ಯಕ್ಕೂ ಮಳೆ ಭೀತಿ!
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಶೇ.70ರಷ್ಟು ಮಳೆ ಸಾಧ್ಯತೆ ಇದೆ. ಇಂದು (ನಿಗದಿತ ದಿನ) ಪಂದ್ಯ ನಡೆಯದೆ ಇದ್ದರೆ, ಮೀಸಲು ದಿನ ಮುಂದುವರಿಯಲಿದೆ. ಮೀಸಲು ದಿನದಲ್ಲಿಯೂ ಪಂದ್ಯ ನಡೆಯದಿದ್ದರೆ 2 ತಂಡಗಳನ್ನೂ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. 2002ರಲ್ಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಮಳೆಯಿಂದಾಗಿ ಅಪೂರ್ಣಗೊಂಡಿತ್ತು. ಆಗ ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಿಸಲಾಗಿತ್ತು.
ರೋಹಿತ್, ಕೊಹ್ಲಿಗೆ ಇದು ಕೊನೆಯ ಪಂದ್ಯ?
ಇಂದಿನ ಟಿ20 ವಿಶ್ವಕಪ್ ಫೈನಲ್ ಪಂದ್ಯ ಭಾರತದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಕೊನೆಯ ಪಂದ್ಯವಾಗಲಿದೆಯಂತೆ. ಗೆದ್ದರೂ, ಸೋತರೂ ಇದು ಇಬ್ಬರಿಗೂ ಕೊನೆಯ ಅಂತರಾಷ್ಟ್ರೀಯ ಟಿ20 ಪಂದ್ಯವಾಗುವ ಸಾಧ್ಯತೆಯಿದೆ. ಇವರಿಬ್ಬರೂ ಯುವ ಕ್ರಿಕೆಟಿಗರನ್ನು ಅವಕಾಶ ಕೊಡುವ ಸಲುವಾಗಿ ಚುಟುಕು ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಎಷ್ಟು ವರ್ಷ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರೆ ಎಂಬ ಬಗ್ಗೆ ನಿರ್ಧಾರ ಆಗಬೇಕಿದೆ.
ವಿಶ್ವಕಪ್ ಗೆದ್ದರೆ ಬಹುಮಾನ ಎಷ್ಟು?
ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ 2024ರ ಫೈನಲ್‌ನಲ್ಲಿ ವಿಜೇತರು ಅಂದಾಜು 20.4 ಕೋಟಿ ರೂ. ($2.45 ಮಿಲಿಯನ್) ಬಹುಮಾನವನ್ನು ಪಡೆಯುತ್ತಾರೆ. ಆದರೆ, ರನ್ನರ್ ಅಪ್ ತಂಡ 10.6 ಕೋಟಿ ರೂ. ($1.28 ಮಿಲಿಯನ್) ಪಡೆಯುತ್ತದೆ. ಅಂತಿಮ ಪಂದ್ಯವು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶೇಷವೆಂದರೆ ಇದು ಭಾರತದ ಮೂರನೇ ಟಿ20 ವಿಶ್ವಕಪ್ ಫೈನಲ್ ಪಂದ್ಯವಾಗಿದೆ. ಇನ್ನು ದಕ್ಷಿಣ ಆಫ್ರಿಕಾ ಈವರೆಗೆ ವಿಶ್ವಕಪ್ ನೋಡೇ ಇಲ್ಲ.
ICC ಫೈನಲ್‌ನಲ್ಲಿ ಭಾರತದ ಪ್ರದರ್ಶನ ಹೇಗಿದೆ?
ಭಾರತ ತಂಡ ಒಟ್ಟು 12 ಐಸಿಸಿ ಫೈನಲ್‌ಗಳನ್ನು ಆಡಿದೆ. 1983 ಏಕದಿನ ವಿಶ್ವಕಪ್, 2002 ಚಾಂಪಿಯನ್ಸ್ ಟ್ರೋಫಿ (ಜಂಟಿ ವಿಜೇತ), 2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯವನ್ನು ಗೆದ್ದಿದೆ. ಭಾರತ 2000ರಲ್ಲಿ ಚಾಂಪಿಯನ್ಸ್ ಟ್ರೋಫಿ, 2003 ಏಕದಿನ ವಿಶ್ವಕಪ್, 2014 ಟಿ20 ವಿಶ್ವಕಪ್, 2017 ಚಾಂಪಿಯನ್ಸ್ ಟ್ರೋಫಿ, 2021 ಮತ್ತು 2023 WTC ಮತ್ತು 2023 ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತಿದೆ.
ಬೆಸ್ಟ್ ಆಫ್ ಲಕ್ ಟೀಂ ಇಂಡಿಯಾ..!
ಬ್ಲೂ ಬಾಯ್ಸ್ ಮತ್ತು ಹರಿಣಗಳ ನಡುವಿನ ಟಿ20 ವಿಶ್ವಕಪ್ ಫೈನಲ್ ಸಮರ ಇನ್ನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ. ಎಲ್ಲಾ ವಿಭಾಗಗಳಲ್ಲಿ ಬಲಿಷ್ಠವಾಗಿರುವ ಭಾರತ ತಂಡ 17 ವರ್ಷಗಳ ನಂತರ ಮತ್ತೊಮ್ಮೆ ಈ ಟ್ರೋಫಿಯನ್ನು ಎತ್ತಿಹಿಡಿಯಲು ಸಜ್ಜಾಗಿದೆ. ಆಟಗಾರರು ಮೈದಾನದಲ್ಲಿ ನೈಪುಣ್ಯ ಮತ್ತು ಉತ್ಸಾಹ ತೋರಿ ಪಂದ್ಯ ಗೆದ್ದು ಕಪ್ ತವರಿಗೆ ತರಲಿ ಎಂದು ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದಾರೆ. ನಮ್ಮ ಕಡೆಯಿಂದಲೂ ಬೆಸ್ಟ್ ಆಫ್ ಲಕ್ ಟೀಂ ಇಂಡಿಯಾ..!
ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ


Click it and Unblock the Notifications








