‘ಕಾವೇರಿ ಆನ್‌ಲೈನ್’ ಸೇವೆಯಿಂದ ಎಷ್ಟು ಉಪಯೋಗ ಗೊತ್ತಾ?..ಇಲ್ಲಿದೆ ಫುಲ್ ಡೀಟೇಲ್ಸ್!!
ಸಾರ್ವಜನಿಕರು ಉಪನೋಂದಣಿ ಕಚೇರಿಗೆ ವೃಥಾ ಅಲೆದಾಡುವುದನ್ನು ತಪ್ಪಿಸಲು ಸಲುವಾಗಿ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ 'ಕಾವೇರಿ ಆನ್‌ಲೈನ್' (Kaveri Online) ಸೇವೆ ಆರಂಭಿಸಿದೆ. ಸರ್ಕಾರದ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶದಿಂದ ಈ ಸೇವೆಗಳಿಗೆ ಚಾಲನೆ ನೀಡಿರುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
'ಕಾವೇರಿ ಆನ್‌ಲೈನ್' ಸೇವೆಗಳಿಗೆ ಶುಕ್ರವಾರ ಚಾಲನೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 'ಕಾವೇರಿ ಆನ್‌ಲೈನ್' (Kaveri Online) ಯಿಂದ ಸಾರ್ವಜನಿಕರು ಉಪನೋಂದಣಿ ಕಚೇರಿಗೆ ವೃಥಾ ಅಲೆ ದಾಡುವುದನ್ನು ತಪ್ಪಿಸಲಿದೆ/ ಮತ್ತು ಸರ್ಕಾರದ ಸೌಲಭ್ಯಗಳು ಮಧ್ಯವರ್ತಿಗಳ ಪಾಲಾಗಬಾರದು ಎಂಬ ಉದ್ದೇಶವನ್ನು ಈ ಆನ್‌ಲೈನ್ ಸೇವೆ ಹೊಂದಿದೆ ಎಂದು ತಿಳಿಸಿದ್ದಾರೆ.

ಆಸ್ತಿ, ಸ್ಥಿರಾಸ್ತಿಗಳ ನೋಂದಣಿ, ಹಸ್ತಾಂತರ, ಅಡಮಾನ, ಭೋಗ್ಯ ಮತ್ತು ಅಧಿಕಾರ ಪತ್ರ ಮುಂತಾದ ಸೇವೆಗಳನ್ನು ಒದಗಿಸಲು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ 'ಕಾವೇರಿ ಆನ್‌ಲೈನ್' (Kaveri Online) ಸೇವೆ ಆರಂಭಿಸಿದ್ದು, ಹಾಗಾದರೆ, 'ಕಾವೇರಿ ಆನ್‌ಲೈನ್' ಸೇವೆಗಳಿಂದ ಸಾರ್ವಜನಿಕರಿಗೆ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಮೌಲ್ಯ ಮೊಬೈಲ್ ಆಪ್
ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ‘ಕಾವೇರಿ ಆನ್‌ಲೈನ್' ಸೇವೆಯಲ್ಲಿ ಸಾರ್ವಜನಿಕರು ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಸಹಾಯಕವಾಗಲು, ಮೌಲ್ಯ ಹೆಸರಿನ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಆ ಸ್ಥಿರಾಸ್ತಿಯ ನಿಖರವಾದ ಬೆಲೆಗಳನ್ನು ಸಾರ್ವಜನಿಕರು ಈಗ ಮೊಬೈಲ್‌ನಲ್ಲೇ ಸುಲಭವಾಗಿ ತಿಳಿಯಬಹುದಾಗಿದೆ.

ಮೌಲ್ಯ ಮತ್ತು ಮುದ್ರಾಂಕ ಶುಲ್ಕಗಳ ಅಂದಾಜು
‘ಕಾವೇರಿ ಆನ್‌ಲೈನ್' ಸೇವೆಯ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ನಮೂದಿಸಿ, ಆಸ್ತಿಯ ಮಾರ್ಗಸೂಚಿ ಮೌಲ್ಯವನ್ನು ಸ್ವತಃ ಲೆಕ್ಕ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಪಾವತಿಸಬೇಕಾದ ಮುದ್ರಾಂಕ ಶುಲ್ಕವನ್ನು ಸುಲಭ ಹಂತಗಳಲ್ಲಿ ತಂತ್ರಾಂಶದ ಮೂಲಕವೂ ಲೆಕ್ಕ ಮಾಡಬಹುದು ಎಂದು ಹೇಳಿದ್ದಾರೆ.

ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ
ಸ್ಥಿರಾಸ್ತಿಗಳ ಋಣಭಾರ ಪ್ರಮಾಣ ಪತ್ರ ಮತ್ತು ನೋಂದಾಯಿತ ದಸ್ತಾವೇಜುಗಳ ದೃಢೀಕೃತ ನಕಲು ಪ್ರತಿಗಳನ್ನು ‘ಕಾವೇರಿ ಆನ್‌ಲೈನ್' ಸೇವೆಯ ಮೂಲಕ ಪಡೆಯಬಹುದು. ಒಂದು ವೇಳೆ ನಿರ್ದಿಷ್ಟ ಆಸ್ತಿಗಳ ಕುರಿತು ಋಣಭಾರಗಳನ್ನು ಪರಿಶೀಲಿಸಬೇಕಾದಲ್ಲಿ ಆಸ್ತಿಯ ವಿವರವನ್ನು ನೀಡಿ ನೈಜ ಸಮಯದಲ್ಲಿ ವಿವರಗಳನ್ನು ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಣಿ ಪೂರ್ವ ಡೇಟಾ ಎಂಟ್ರಿ
ಆನ್‌ಲೈನ್ ಮೂಲಕವೇ ದಸ್ತಾವೇಜುಗಳನ್ನು ನೋಂದಣಿಗೆ ಸಲ್ಲಿಸಬಹುದಾದ ಆಯ್ಕೆಯನ್ನು ‘ಕಾವೇರಿ ಆನ್‌ಲೈನ್' ಸೇವೆ ತಂದಿದೆ. ಆಸ್ತಿಯ ಎಲ್ಲ ವಿವರಗಳನ್ನು ನೋಂದಣಿ ಪೂರ್ವವೇ ಆನ್‌ಲೈನ್ ಮೂಲಕ ನಮೂದಿಸಿ, ತಿದ್ದುಪಡಿ ಮಾಡಿದ ನಂತರ ನೋಂದಣಿಗೆ ಅಪ್‌ಲೋಡ್ ಮಾಡಬಹುದು. ಇದರಿಂದ ಕಚೇರಿಗೆ ಹಲವು ಬಾರಿ ಭೇಟಿ ನೀಡುವುದನ್ನು ತಪ್ಪಿಸುತ್ತದೆ.

ನೋಂದಣಿಗೆ ಮುಂಗಡ ಸಮಯ ನಿಗದಿ
ಆನ್‌ಲೈನ್ ಮೂಲಕ ಅರ್ಜಿ ಮತ್ತು ಮೌಲ್ಯವನ್ನು ನೋಂದಣಿಗೆ ಅಪ್‌ಲೋಡ್ ಮಾಡಿದ ನಂತರ, ಉಪನೋಂದಣಾಧಿಕಾರಿಗಳು ಆನ್‌ಲೈನ್ ಮೂಲಕವೇ ಅವುಗಳನ್ನು ಮಾನ್ಯಗೊಳಿಸುತ್ತಾರೆ. ನಂತರ ದಸ್ತಾವೇಜಿಗೆ ತಗಲುವ ಶುಲ್ಕಗಳನ್ನು ಆನ್‌ಲೈನ್ ಮೂಲಕವೇ ಪಾವತಿಸಿ ನೋಂದಣಿ ಪ್ರಕ್ರಿಯೆಗೆ ಮುಂಗಡವಾಗಿ ಸಮಯ ನಿಗದಿ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. .

ಡಿಜಿಟಲ್ ಕಾಗದಗಳು!
ಕರಾತು ಪತ್ರ ಮತ್ತು ಪ್ರಮಾಣ ಪತ್ರಗಳಿಗೆ ಮುದ್ರಾಂಕ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ, ಇ-ಸ್ಟಾಂಪ್ ಕಾಗದವನ್ನು ಮನೆಯಲ್ಲೆ ಪ್ರಿಂಟ್ ತೆಗೆದುಕೊಳ್ಳಬಹುದು. ಡಿಜಿಟಲ್ ಸಹಿ ಮಾಡಿದ ಋಣಭಾರ ಪ್ರಮಾಣ ಪತ್ರಗಳ ಶುಲ್ಕವನ್ನು ಆನ್‌ಲೈನಿನಲ್ಲಿ ಪಾವತಿಸಬಹುದು. ವಿವಾಹ ನೋಂದಣಿಗೆ ಸಮೀಪದ ನೋಂದಣಿ ಕಚೇರಿ ವಿವರವನ್ನು ಸಹ ಇಲ್ಲಿ ಪಡೆಯಬಹುದು.


Click it and Unblock the Notifications








