Paris Olympics 2024: ಭಾರತದಲ್ಲಿ ಉಚಿತ ಟಿವಿ ನೇರಪ್ರಸಾರ, ಲೈವ್ ಸ್ಟ್ರೀಮಿಂಗ್ ಎಲ್ಲಿ ವೀಕ್ಷಿಸಬೇಕು?
Paris Olympics 2024: 2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಶುರುವಾಗಿದೆ. ಜಗತ್ತಿನ ಅತಿದೊಡ್ಡ ಕ್ರೀಡಾಜಾತ್ರೆ ಎನಿಸಿಕೊಂಡಿರುವ ಈ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಇಂದಿನಿಂದ (ಜುಲೈ 26) ಆಗಸ್ಟ್ 11 ರವರೆಗೆ ಫ್ರೆಂಚ್ ರಾಜಧಾನಿಯಲ್ಲಿ ನಡೆಯಲಿದೆ. ಇಂದು ಪ್ರಾರಂಭವಾಗಲಿರುವ ಗ್ರ್ಯಾಂಡ್ ಈವೆಂಟ್‌ನೊಂದಿಗೆ ಒಲಿಂಪಿಕ್ಸ್‌ನ 33ನೇ ಆವೃತ್ತಿಯನ್ನು ಯಶಸ್ವಿಯಾಗಿ ನಡೆಸಲು ಪ್ಯಾರಿಸ್ ಸಿದ್ಧವಾಗಿದೆ. ಇದನ್ನು ಅನೇಕರು ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ್ದಾರೆ. ಹಾಗಿದ್ರೆ, ಭಾರತದಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ಟಿವಿ ಟೆಲಿಕಾಸ್ಟ್ ಎಲ್ಲಿ ವೀಕ್ಷಿಸಬೇಕು? ಎನ್ನುವುದನ್ನು ತಿಳಿಯೋಣ ಬನ್ನಿ.
17 ದಿನಗಳ ಕಾಲ ನಡೆಯುವ 33ನೇ ಒಲಿಂಪಿಕ್ ಕ್ರೀಡಾಕೂಟವು ಆಗಸ್ಟ್ 11 ರಂದು ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ಯಾರಾಲಿಂಪಿಕ್ಸ್ ಆಗಸ್ಟ್ 28 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಸುಮಾರು 10,500 ಕ್ರೀಡಾಪಟುಗಳು 329 ಕ್ರೀಡಾಕೂಟಗಳಲ್ಲಿ 32 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಈ ವರ್ಷ ಬ್ರೇಕ್ ಡ್ಯಾನ್ಸಿಂಗ್ ಮತ್ತು ಕಯಾಕ್ ಕ್ರಾಸ್‌ನ ಹೊಸ ಸೇರ್ಪಡೆಗಳೂ ಇವೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಷ್ಟ್ರಗಳ ಮೆರವಣಿಗೆಯನ್ನು ಕ್ರೀಡಾಂಗಣದಲ್ಲಿ ನಡೆಸುವುದಿಲ್ಲ. ಬದಲಿಗೆ ಸೀನ್ ನದಿಯಲ್ಲಿ ನಡೆಸಲಾಗುತ್ತದೆ. ಈ ವರ್ಷ ಕ್ರೀಡಾಪಟುಗಳು ದೋಣಿಗಳಲ್ಲಿ ಪ್ರಯಾಣಿಸುವ ಮೆರವಣಿಗೆಯು 6 ಕಿಲೋಮೀಟರ್ ಮಾರ್ಗವನ್ನು ಒಳಗೊಂಡಿದೆ. ನದಿಯ ದಡದಲ್ಲಿ ಸುಮಾರು 3,00,000 ಜನ ಸೇರುವ ನಿರೀಕ್ಷೆಯಿದೆ. ಜಲಮಾರ್ಗದ ಉದ್ದಕ್ಕೂ 80 ಬೃಹತ್ ಪರದೆಗಳೂ ಇರುತ್ತವೆ. ಉದ್ಘಾಟನಾ ಸಮಾರಂಭವು ಪ್ರಪಂಚದಾದ್ಯಂತ ಪ್ರಸಾರವಾಗುವುದರಿಂದ ಅಭಿಮಾನಿಗಳು ದೂರದರ್ಶನ ಮತ್ತು ಆನ್‌ಲೈನ್‌ನಲ್ಲಿ ಈವೆಂಟ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭ ಯಾವಾಗ ನಡೆಯಲಿದೆ?
ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭವು ಜುಲೈ 26ರಂದು ಶುಕ್ರವಾರ 11 PM ISTಕ್ಕೆ ನಡೆಯಲಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರ ಉದ್ಘಾಟನಾ ಸಮಾರಂಭ ಎಲ್ಲಿ ನಡೆಯಲಿದೆ?
ಉದ್ಘಾಟನಾ ಸಮಾರಂಭವು ಮೊದಲ ಬಾರಿಗೆ ಒಲಿಂಪಿಕ್ ಕ್ರೀಡಾಂಗಣದ ಹೊರಗೆ ಸೀನ್ ನದಿಯಲ್ಲಿ ನಡೆಯಲಿದೆ. ಇದು ಆಸ್ಟರ್ಲಿಟ್ಜ್ ಸೇತುವೆಯಲ್ಲಿ ಪ್ರಾರಂಭವಾಗಿ ಪಶ್ಚಿಮಕ್ಕೆ 6 ಕಿ.ಮೀ ವರೆಗೆ ಮುಂದುವರಿಯುತ್ತದೆ. ಟ್ರೊಕಾಡೆರೊ ಚೌಕದಲ್ಲಿ ಕೊನೆಗೊಳ್ಳುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸುವುದು ಹೇಗೆ?
ಉದ್ಘಾಟನಾ ಸಮಾರಂಭವು NBCಯಲ್ಲಿ ನೇರ ಪ್ರಸಾರವಾಗಲಿದ್ದು, ಪೀಕಾಕ್ ಅದನ್ನು ಸ್ಟ್ರೀಮ್ ಮಾಡುತ್ತದೆ. ಭಾರತದಲ್ಲಿ ಅಭಿಮಾನಿಗಳು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಪ್ಯಾರಿಸ್ ಒಲಿಂಪಿಕ್ಸ್ 2024ರ ಉದ್ಘಾಟನಾ ಸಮಾರಂಭವನ್ನು ಭಾರತದಲ್ಲಿ ಲೈವ್ ಸ್ಟ್ರೀಮ್ ಮಾಡುವುದು ಹೇಗೆ?
ಭಾರತದ ಕ್ರೀಡಾಭಿಮಾನಿಗಳು ಡಿಡಿ ಸ್ಪೋರ್ಟ್ಸ್, ಸ್ಪೋರ್ಟ್ಸ್ 18 ಹಾಗೂ ಮೊಬೈಲ್‌ನಲ್ಲಿ ಜಿಯೋ ಸಿನಿಮಾದಲ್ಲಿ ಒಲಿಂಪಿಕ್ಸ್ ನೇರಪ್ರಸಾರ ವೀಕ್ಷಿಸಬಹುದು. ಇಂದು ರಾತ್ರಿ 11 ಗಂಟೆಗೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ನಡೆಯಲಿದೆ.
206 ದೇಶಗಳು ಭಾಗಿ: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ, ಅಮೆರಿಕ, ಸ್ಪೇನ್, ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 206 ದೇಶಗಳು ಭಾಗವಹಿಸಲಿವೆ.
10,700ಕ್ಕೂ ಹೆಚ್ಚು ಅಥ್ಲೀಟ್ಸ್‌ಗಳು: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10,700ಕ್ಕೂ ಹೆಚ್ಚಿನ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಅಮೆರಿಕದಿಂದ 592 ಅಥ್ಲೀಟ್‌ಗಳು, ಭಾರತದಿಂದ 117 ಅಥ್ಲೀಟ್‌ಗಳು ಪಾಲ್ಗೊಳ್ಳುತ್ತಿದ್ದಾರೆ.
32 ಕ್ರೀಡೆಗಳು: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಟ್ಟು 32 ಕ್ರೀಡೆಗಳ 39 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ. ಅಥ್ಲೆಟಿಕ್ಸ್, ಶೂಟಿಂಗ್, ಬ್ರೇಕ್ ಡ್ಯಾನ್ಸ್, ಹಾಕಿ, ಬೀಚ್ ವಾಲಿಬಾಲ್ ಸೇರಿದಂತೆ 32 ಕ್ರೀಡೆಗಳು ಜರುಗಲಿವೆ.
35 ಕ್ರೀಡಾಂಗಣ: ಪ್ಯಾರಿಸ್ ಹಾಗೂ ಇತರ ಕಡೆಗಳ ಒಟ್ಟು 35 ಕ್ರೀಡಾಂಗಣಗಳು ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. 35 ಸ್ಟೇಡಿಯಂನಲ್ಲಿ ಅಥ್ಲೀಟ್‌ಗಳು ತಮ್ಮ ಪ್ರತಿಭ ಪ್ರದರ್ಶಿಸಲಿದ್ದಾರೆ.
ಭಾರತದ 117 ಅಥ್ಲೀಟ್‌ಗಳು ಭಾಗಿ: ನೀರಜ್ ಚೋಪ್ರಾ, ಪಿ.ವಿ.ಸಿಂಧು, ಕರ್ನಾಟಕದ ರೋಹನ್ ಬೋಪಣ್ಣ ಸೇರಿದಂತೆ ಭಾರತದ ಒಟ್ಟು 117 ಅಥ್ಲೀಟ್‌ಗಳು ಪಾಲ್ಗೊಳ್ಳುವುದಾಗಿ ಐಒಎ ಮಾಹಿತಿ ನೀಡಿದೆ. ಇದರಲ್ಲಿ 70 ಪುರುಷರು, 47 ಮಹಿಳೆಯರಿದ್ದಾರೆ.


Click it and Unblock the Notifications








