ಸಿಹಿ ಸುದ್ದಿ.. ವಾಟ್ಸಪ್ ಮೂಲಕ ವಂಚನೆಗೆ ಕಡಿವಾಣ! ಬಂತು ಹೊಸ ಫೀಚರ್
ವಾಟ್ಸಪ್ (WhatsApp) ಬಳಕೆದಾರರಿಗೆ ಸಿಹಿ ಸುದ್ದಿ ಇದೆ. ವಾಟ್ಸಪ್ ಇತ್ತೀಚೆಗೆ ವಾಟ್ಸಪ್ ಗ್ರೂಪ್‌ಗಳಿಗಾಗಿ ಕಾಂಟೆಕ್ಸ್ಟ್ ಕಾರ್ಡ್ (WhatsApp Context Card) ಫೀಚರ್ ಪ್ರಾರಂಭಿಸಿದೆ. ಗ್ರೂಪ್‌ಗೆ ಸೇರುವ ಮೊದಲು ಬಳಕೆದಾರರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲು ಈ ವೈಶಿಷ್ಟ್ಯವನ್ನು ಪ್ರಾರಂಭಿಸಲಾಗಿದೆ. ಈ ಫೀಚರ್‌ನ ಸಹಾಯದಿಂದ ನೀವು ಆನ್‌ಲೈನ್ ವಂಚನೆಯ ಅಪಾಯದಿಂದ ಪರಾಗಬಹುದು. ಬಳಕೆದಾರರು ಅಪರಿಚಿತ ಗ್ರೂಪ್‌ಗಳಿಗೆ ಸೇರುವುದನ್ನು ತಡೆಯಲು ಈ ಫೀಚರ್ ಸಹಾಯ ಮಾಡುತ್ತದೆ. ಇತ್ತೀಚೆಗೆ ವರದಿಯಾಗುತ್ತಿರುವ ವಾಟ್ಸಪ್ ಗ್ರೂಪ್ ಸ್ಕ್ಯಾಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಈ ಕಾಂಟೆಕ್ಸ್ಟ್ ಕಾರ್ಡ್ ಫೀಚರ್ ಸಹಾಯ ಮಾಡುತ್ತದೆ.
ಹೌದು, ವಾಟ್ಸಪ್ ಬಳಕೆದಾರರು ಈ ಫೀಚರ್‌ಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ಕೊನೆಗೂ ವಾಟ್ಸಪ್‌ನಿಂದ ಹೊಸ ವೈಶಿಷ್ಟ್ಯವನ್ನು ಘೋಷಿಸಲಾಗಿದೆ. ಇದು ವಾಟ್ಸಪ್ ಮೂಲಕ ನಡೆಯುವ ವಂಚನೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರಸ್ತುತ, ವಾಟ್ಸಪ್ ವಂಚನೆಯ ಪ್ರಕರಣಗಳು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿವೆ. ಇದರ ವಿರುದ್ಧ ಜನರನ್ನು ರಕ್ಷಿಸಲು ವಾಟ್ಸಪ್ ಈ ಹೊಸ ಫೀಚರ್ ಅನ್ನು ನಿಮಗಾಗಿ ತಂದಿದೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ? ವಂಚನೆಯಿಂದ ಪಾರಾಗಲಯ ಇದು ಹೇಗೆ ಸಹಾಯ ಮಾಡುತ್ತದೆ? ಎನ್ನುವುದನ್ನು ತಿಳಿಯೋಣ ಬನ್ನಿ.

ಈ ಫೀಚರ್‌ನಲ್ಲಿ, ಅಪರಿಚಿತ ಗ್ರೂಪ್ ಚಾಟ್‌ಗಳ ಬಗ್ಗೆ ಬಳಕೆದಾರರಿಗೆ ತಿಳಿಸಲಾಗುತ್ತದೆ. ವಾಟ್ಸಪ್ ಬಳಕೆದಾರರು ಆ ಗುಂಪು ಚಾಟ್‌ಗೆ ಸೇರಬೇಕೆ? ಅಥವಾ ಬೇಡವೇ? (ಅಪರಿಚಿತ ಗುಂಪುಗಳಿಗೆ ಸೇರಲು) ಎಂಬುದನ್ನು ಕಂಡುಹಿಡಿಯಲು ಈ ವೈಶಿಷ್ಟ್ಯವು ಸಹಾಯ ಮಾಡುತ್ತದೆ. ಮುಖ್ಯವಾಗಿ ಈ ಫೀಚರ್ (WhatsApp Context Card feature), ಬಳಕೆದಾರರಿಗೆ ವಾಟ್ಸಪ್ ಗ್ರೂಪ್ ಸ್ಕ್ಯಾಮ್‌ನಿಂದ ರಕ್ಷಣೆ ನೀಡುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ನಿಮ್ಮ ಫೋನ್‌ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ವಾಟ್ಸಪ್ ಬಳಕೆದಾರರು, ನಿಮ್ಮನ್ನು ಇನ್ನೊಂದು ವಾಟ್ಸಪ್ ಗ್ರೂಪ್‌ಗೆ ಸೇರಿಸಿದಾಗ, ಅದು ಆ ಬಳಕೆದಾರರ ವಿವರಗಳನ್ನು ಸೂಚಿಸುವ ಕಾಂಟೆಕ್ಸ್ಟ್ ಕಾರ್ಡ್ ಅನ್ನು ಪ್ರದರ್ಶಿಸುತ್ತದೆ. ಗ್ರೂಪ್ ಅನ್ನು ಯಾವಾಗ ರಚಿಸಲಾಗಿದೆ ಮತ್ತು ಅದನ್ನು ಯಾರು ರಚಿಸಿದ್ದಾರೆ ಎಂಬ ವಿವರಗಳೂ ಇರುತ್ತವೆ. ಈ ವಿವರಗಳನ್ನು ಆಧರಿಸಿ, ನೀವು ಆ ವಾಟ್ಸಪ್ ಗುಂಪಿನಲ್ಲಿ ಇರಬೇಕೆ? ಅಥವಾ ಬೇಡವೇ? ಎಂಬುದನ್ನು ನೀವು ನಿರ್ಧರಿಸಬಹುದು.
ಈಗಾಗಲೇ ವಾಟ್ಸಪ್‌ನಲ್ಲಿ ಈ ರೀತಿಯ ಫೀಚರ್ ಲಭ್ಯವಿದೆ. ನಿಮ್ಮ ಕಾಂಟ್ಯಾಕ್ಟ್ ಲೀಸ್ಟ್‌ನಲ್ಲಿಲ್ಲದ ಬಳಕೆದಾರರು ನಿಮಗೆ ಖಾಸಗಿ ಸಂದೇಶವನ್ನು ಕಳುಹಿಸಿದಾಗ, 'ನಿಮಗೆ ಸಂದೇಶ ಕಳುಹಿಸಿದ ವ್ಯಕ್ತಿ ನಿಮ್ಮ ಕಾಂಟ್ಯಾಕ್ಟ್ ಲೀಸ್ಟ್‌ನಲ್ಲಿಲ್ಲ' ಎಂಬ ಸೂಚನೆಯು ಕಾಣಿಸಿಕೊಳ್ಳುತ್ತದೆ. ಈ ಹೊಸ ವೈಶಿಷ್ಟ್ಯವು ಸಹ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಇದು ಕೆಲವು ಹೆಚ್ಚುವರಿ ಭದ್ರತೆ ಮತ್ತು ಮಾಹಿತಿಯನ್ನು ಒಳಗೊಂಡಿದೆ.
ವಾಟ್ಸಪ್ ಗ್ರೂಪ್ ಸ್ಕ್ಯಾಮ್ ಎಂದರೇನು?
ವಾಟ್ಸಪ್ ಗ್ರೂಪ್‌ಗಳ ಮೂಲಕ ನಡೆಯುವ ವಂಚನೆಗಳಿಂದ ಸುರಕ್ಷಿತವಾಗಿರಲು ಈ ಕಾಂಟೆಕ್ಸ್ಟ್ ಕಾರ್ಡ್ ಬಹಳ ಉಪಯುಕ್ತವಾಗಿದೆ. ಇಂತಹ ವಂಚನೆಗಳು ಇತ್ತೀಚೆಗೆ ಹೆಚ್ಚು ನಡೆಯುತ್ತಿವೆ. ವಂಚಕರು ನಿಮ್ಮನ್ನು ತಮ್ಮ ಗ್ರೂಪ್‌ಗಳಿಗೆ ಸೇರುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೊನೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡು ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುತ್ತಿದೆ.

ವಂಚಕರು ಹೇಗೆ ನಿಮ್ಮನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ?
ಸಾಮಾನ್ಯವಾಗಿ, ಈ ರೀತಿಯ ವಾಟ್ಸಪ್ ಗ್ರೂಪ್‌ಗಳಲ್ಲಿ ಹಲವು ರೀತಿಯ ಅಪ್‌ಡೇಟ್‌ಗಳನ್ನು ನೀಡಲಾಗುತ್ತದೆ. ಬಳಕೆದಾರರಿಗೆ ವಿಶ್ವಾಸವನ್ನು ನೀಡಲು ಷೇರು ಮಾರುಕಟ್ಟೆ ವಿವರಗಳು ಮತ್ತು ಇತರ ವಿವರಗಳನ್ನು ಒದಗಿಸಲಾಗಿದೆ. ವಂಚಕರು ನಂತರ ಇತರ ಗುಂಪುಗಳಿಗೆ ಸೇರುತ್ತಾರೆ. ಮತ್ತು ಬಳಕೆದಾರರಿಗೆ ಉತ್ತಮ ಕೊಡುಗೆಗಳನ್ನು ಹೊಂದಿರುವ ಬಗ್ಗೆ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಲಾಭವನ್ನು ಗಳಿಸಬಹುದು ಎಂದು ನಂಬಿಸುತ್ತಾರೆ. ನಂತರ ನಿಮ್ಮನ್ನು ಹೂಡಿಕೆ ಮಾಡುವಂತೆ ಒತ್ತಾಯಿಸುತ್ತಾರೆ. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೂ ಗಾಳ ಹಾಕುತ್ತಾರೆ.
ಎಚ್ಚರ.. ನಕಲಿ ಆಡಿಯೋ ಕಾಲ್ ಬರುತ್ತೆ!
ವಂಚಕರು ಪರಿಚಯಿಸಿದ ಸಾಫ್ಟ್‌ವೇರ್ ಮೂಲಕ ನಕಲಿ ಲಾಭವನ್ನು ತೋರಿಸುತ್ತಾರೆ. ಈ ಲಾಭವನ್ನು ನಿಜವೆಂದು ನಂಬಿರುವ ಸಂತ್ರಸ್ತರು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಆ ಹಣವನ್ನು ನಿಮ್ಮ ಖಾತೆಗಳಿಗೆ ವರ್ಗಾಯಿಸಲು ನೀವು ಕೇಳಿದಾಗ, ಅಲ್ಲಿಂದ ವಂಚಕರು ನಿಮ್ಮ ಸಂಪರ್ಕವನ್ನು ಕಡಿದುಕೊಂಡು ಹಣದೊಂದಿಗೆ ಓಡಿ ಹೋಗುತ್ತಾರೆ. ಈ ರೀತಿ ನೀವು ಹೆಚ್ಚು ಹಣವನ್ನು ಕಳೆದುಕೊಳ್ಳುವ ಅಪಾಯವಿದೆ. ವಂಚಕರು ಬಳಕೆದಾರರನ್ನು ಬಲೆಗೆ ಬೀಳಿಸಲು ನಕಲಿ ಆಡಿಯೋ ಕರೆ, ನಕಲಿ ಪ್ರೊಫೈಲ್ ಚಿತ್ರವನ್ನು ಬಳಸುತ್ತಾರೆ.
ಒಟ್ಟಾರೆ, ಈ ರೀತಿಯ ವಂಚನೆಗಳಿಗೆ ಕಡಿವಾಣ ಹಾಕಲು ಕಾಂಟೆಕ್ಸ್ಟ್ ಕಾರ್ಡ್ ವೈಶಿಷ್ಟ್ಯವನ್ನು ವಾಟ್ಸಪ್ ಪರಿಚಯಿಸಿದೆ. ಯಾವುದೇ ಗ್ರೂಪ್‌ಗೆ ಸೇರಲು ಮೆಸೇಜ್ ಬಂದರೆ, ಸಂದೇಶ ಕಳುಹಿಸಿದ ವ್ಯಕ್ತಿ ಸೇರಿದಂತೆ ಗ್ರೂಪ್‌ನ ವಿವರಗಳು ನಿಮಗೆ ತಿಳಿಯುತ್ತದೆ. ಈ ಮೂಲಕ ನೀವು ಗ್ರೂಪ್ ಸೇರ್ಪಡೆ ಅಥವಾ ನಿರ್ಗಮನದ ಬಗ್ಗೆ ಸುಲಭವಾಗಿ ನಿರ್ಧರಿಸಬಹುದು. ಈ ವೈಶಿಷ್ಟ್ಯವು ಬಳಕೆದಾರರಿಗೆ ವಾಟ್ಸಪ್ ಗ್ರೂಪ್ ಸ್ಕ್ಯಾಮ್‌ನಿಂದ ರಕ್ಷಣೆ ನೀಡುತ್ತದೆ.


Click it and Unblock the Notifications








