ಸ್ಕ್ವಿಡ್ ಗೇಮ್ ಸೀಸನ್ 3: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ದಿನಾಂಕ ಖಚಿತ!
ಮಾರಣಾಂತಿಕ ಸವಾಲುಗಳು ಮತ್ತು ರೋಚಕ ಕಥಾಹಂದರಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ದಕ್ಷಿಣ ಕೊರಿಯಾದ ಜನಪ್ರಿಯ ಸರಣಿ ಸ್ಕ್ವಿಡ್ ಗೇಮ್ ಒಂದು ಮನರಂಜನೆಯ ರಸದೌತಣವನ್ನು ನೀಡಿದೆ ಎನ್ನಬಹುದು. 2021 ರಲ್ಲಿ ಬಿಡುಗಡೆಯಾದ ಮೊದಲ ಸೀಸನ್, ಅದರ ಕ್ರೂರ ಬದುಕುಳಿಯುವ ಆಟಗಳಿಂದ ಭಾರತ ಸೇರಿದಂತೆ ಜಾಗತಿಕವಾಗಿ ವೀಕ್ಷಕರನ್ನು ಸೆಳೆಯಿತು. ಇತ್ತೀಚೆಗೆ ಬಿಡುಗಡೆಯಾದ ಎರಡನೇ ಸೀಸನ್ ಕಥೆಯನ್ನು ಮತ್ತಷ್ಟು ತೀವ್ರಗೊಳಿಸಿತು. ಈಗ, ಎಲ್ಲರ ಗಮನ ಅಂತಿಮ ಅಧ್ಯಾಯದ ಮೇಲೆ ನೆಟ್ಟಿದೆ. ಇದೀಗ ಸ್ಕ್ವಿಡ್ ಗೇಮ್ ಸೀಸನ್ 3 ಕುರಿತಂತೆ ಸಾಕಷ್ಟು ಸಿಹಿಸುದ್ದಿಗಳು ಸಹ ದೊರೆತಿವೆ.
ಹೌದು, ಸ್ಕ್ವಿಡ್ ಗೇಮ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಎಂದರೆ, ಸ್ಕ್ವಿಡ್ ಗೇಮ್ ಸೀಸನ್ 3 ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಮುಂಬರುವ ಸೀಸನ್ ಕಥೆಯನ್ನು ಒಂದು ರೋಚಕ ಮತ್ತು ತೀರ್ಮಾನಾತ್ಮಕ ಹಂತಕ್ಕೆ ಕೊಂಡೊಯ್ಯಲಿದೆ, ಇದುವರೆಗೂ ಕಾಯುತ್ತಿದ್ದ ವೀಕ್ಷಕರಿಗೆ ಒಂದು ತೃಪ್ತಿಕರವಾದ ಅಂತ್ಯವನ್ನು ನೀಡುವ ಭರವಸೆಯಿದೆ. ಸ್ಕ್ವಿಡ್ ಗೇಮ್ ಸೀಸನ್ 3 ರ ಅಧಿಕೃತ ಬಿಡುಗಡೆ ದಿನಾಂಕವನ್ನು ನೆಟ್‌ಫ್ಲಿಕ್ಸ್ ಖಚಿತಪಡಿಸಿದ್ದು, ಅದರಂತೆ ಈ ಬಹುನಿರೀಕ್ಷಿತ ಸೀಸನ್ ಜೂನ್ 27, 2025 ರಂದು ವಿಶ್ವಾದ್ಯಂತ ಪ್ರಥಮ ಪ್ರದರ್ಶನಗೊಳ್ಳಲಿದೆ.
ಕಥೆಯು ಅಂತಿಮ ಘಟ್ಟವನ್ನು ತಲುಪುತ್ತಿರುವ ಕಾರಣ, ಅಭಿಮಾನಿಗಳು ಸಾಕಷ್ಟು ನಾಟಕೀಯತೆ ಮತ್ತು ಅನಿರೀಕ್ಷಿತ ತಿರುವುಗಳನ್ನು ನಿರೀಕ್ಷಿಸಬಹುದು. ಈ ಹಿಂದೆ ಬಿಡುಗಡೆಯಾದ ಎರಡೂ ಸೀಸನ್‌ಗಳಂತೆ, ಸ್ಕ್ವಿಡ್ ಗೇಮ್ ಸೀಸನ್ 3 ಸಹ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಒಂದು ವೇಳೆ ನೀವು ಎರಡನೇ ಸೀಸನ್ ಅನ್ನು ವೀಕ್ಷಿಸಲು ತಪ್ಪಿಸಿಕೊಂಡಿದ್ದರೆ, ಅಂತಿಮ ಅಧ್ಯಾಯವು ನಿಮ್ಮನ್ನು ತಲುಪುವ ಮೊದಲು ಅದನ್ನು ವೀಕ್ಷಿಸುವುದು ಸೂಕ್ತವಾಗಿದೆ. ಇದರಿಂದ ಕಥೆಯ ಮುಂದುವರಿಕೆಯನ್ನು ಸಂಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗುತ್ತದೆ.
ಸ್ಕ್ವಿಡ್ ಗೇಮ್ ಸೀಸನ್ 3ರ ಕಥಾವಸ್ತುವಿನ ಬಗ್ಗೆ ಹೇಳುವುದಾದರೆ, ಇದು ಸೀಸನ್ 2 ರ ತೀವ್ರ ಘಟನೆಗಳ ನಂತರ ಮುಂದುವರಿಯುತ್ತದೆ. ಲೀ ಜಂಗ್-ಜೇ ನಿರ್ವಹಿಸಿದ ಗಿ-ಹನ್ ಪಾತ್ರವು ಮಾರಣಾಂತಿಕ ಬದುಕುಳಿಯುವ ಆಟವನ್ನು ಸಂಪೂರ್ಣವಾಗಿ ನಾಶಮಾಡಲು ಇನ್ನಷ್ಟು ಪಣತೊಟ್ಟಿದ್ದಾನೆ. ಆದರೆ ಅವನ ಈ ಪ್ರಯತ್ನಕ್ಕೆ ಅಡ್ಡಿಯಾಗಿ ನಿಲ್ಲುವ ಫ್ರಂಟ್ ಮ್ಯಾನ್ (ಲೀ ಬೈಂಗ್-ಹನ್ ನಿರ್ವಹಿಸಿದ್ದಾರೆ), ತನ್ನದೇ ಆದ ಮುಂದಿನ ನಡೆಯನ್ನು ಯೋಜಿಸುತ್ತಿದ್ದಾನೆ. ಈ ಇಬ್ಬರ ನಡುವಿನ ಸಂಘರ್ಷವು ಸೀಸನ್ 3 ರ ಪ್ರಮುಖ ಅಂಶವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಸೀಸನ್ 3 ರ ಪ್ರಚಾರ ಪೋಸ್ಟರ್ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲವನ್ನು ಕೆರಳಿಸಿದೆ. ಪೋಸ್ಟರ್‌ನಲ್ಲಿ ಗುಲಾಬಿ ಬಣ್ಣದ ಸೂಟ್ ಧರಿಸಿರುವ ಸಿಬ್ಬಂದಿಯೊಬ್ಬ ರಕ್ತಸಿಕ್ತ ಸ್ಪರ್ಧಿಯನ್ನು ಗುಲಾಬಿ ಬಣ್ಣದ ರಿಬ್ಬನ್‌ನಿಂದ ಸುತ್ತಿದ ಶವಪೆಟ್ಟಿಗೆಯ ಕಡೆಗೆ ಎಳೆಯುತ್ತಿರುವುದು ಕಂಡುಬರುತ್ತದೆ. ಈ ಚಿತ್ರವು ಮುಂಬರುವ ಸೀಸನ್‌ನ ತೀವ್ರತೆ ಮತ್ತು ಕಠಿಣ ಸ್ವರೂಪವನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ, ಸ್ಕ್ವಿಡ್ ಗೇಮ್ ಸೀಸನ್ 3 ಅಭಿಮಾನಿಗಳಿಗೆ ಒಂದು ತೀವ್ರವಾದ ಮತ್ತು ತೀರ್ಮಾನಾತ್ಮಕ ಅನುಭವವನ್ನು ನೀಡಲು ಸಿದ್ಧವಾಗಿದೆ.
ಸ್ಕ್ವಿಡ್ ಗೇಮ್ ಸೀಸನ್ 2 ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಸರಣಿಗಳಲ್ಲಿ ಮೂರನೆಯ ಸ್ಥಾನವನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ ಸಮಯದಲ್ಲಿ ಇದು 68 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿತು ಮತ್ತು 92 ದೇಶಗಳಲ್ಲಿ ಟಾಪ್ 10 ಟಿವಿ (ಇಂಗ್ಲಿಷ್ ಅಲ್ಲದ) ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿತು ಎಂದರೆ ಇದರ ಯಶಸ್ಸನ್ನು ಅರಿಯಬಹುದು. ಈ ಯಶಸ್ಸಿನಿಂದಾಗಿ, ಸ್ಕ್ವಿಡ್ ಗೇಮ್ ಸೀಸನ್ 3 ರ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಜೂನ್ 27, 2025 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಇದರ ಪ್ರಥಮ ಪ್ರದರ್ಶನಕ್ಕಾಗಿ ಕಾಯುತ್ತಿರಿ.


Click it and Unblock the Notifications








