ಮೊಬೈಲ್ ಬಳಕೆಯಿಂದ ಮೆದುಳು ಕ್ಯಾನ್ಸರ್ ಉಚಿತ

Posted By: Staff

ಮೊಬೈಲ್ ಬಳಕೆಯಿಂದ ಮೆದುಳು ಕ್ಯಾನ್ಸರ್ ಉಚಿತ
ಲಂಡನ್, ಜುಲೈ1: ಮೊಬೈಲ್ ಫೋನ್ ಬಳಕೆ ಧೂಮಪಾನಕ್ಕಿಂತ ಅಪಾಯಕಾರಿ ಎಂಬುದು ದೃಢಪಡತೊಡಗಿದೆ. ಮೊಬೈಲ್ ಫೋನ್ ಬಳಕೆಯನ್ನು ತಪ್ಪಿಸಲು ಹೇಗೆಲ್ಲ ಸಾಧ್ಯವೋ ಅದಕ್ಕೆ ಪ್ರಾಶಸ್ತ್ಯ ನೀಡಿ. ಸರಕಾರಗಳು ಮತ್ತು ಮೊಬೈಲ್ ಕಂಪನಿಗಳು ಈ ನಿಟ್ಟಿನಲ್ಲಿ ತಕ್ಷಣದಿಂದಲೇ ಕ್ರಮಗಳನ್ನು ಕೈಗೊಳ್ಳುವುದು ಉಚಿತ ಎಂದು ಕ್ಯಾನ್ಸರ್ ಅಧ್ಯಯನ ತಜ್ಞರು ಎಚ್ಚರಿಸಿದ್ದಾರೆ.

ಹದಿಹರೆಯದಲ್ಲೇ ಮೊಬೈಲ್ ಬಳಕೆ ಮಾಡಲಾರಂಭಿಸಿದ ಮತ್ತು ಮುಂದೆ ದಶಕಗಳ ಕಾಲ ಇದನ್ನು ಮುಂದುವರಿಸಿದ ವ್ಯಕ್ತಿಗಳು ಸಾಮಾನ್ಯ ರೀತಿಯ ಮೆದುಳು ಕ್ಯಾನ್ಸರ್ ಗೆ ತುತ್ತಾಗುವ ಅಪಾಯವು ಐದು ಪಟ್ಟು ಹೆಚ್ಚಾಗಿರುತ್ತದೆ ಎಂದು ಸ್ವೀಡನ್‌ನ ವಿಜ್ಞಾನಿಗಳು ಹೇಳಿದ್ದಾರೆ.

ಸುಮಾರು 10 ವರ್ಷಗಳ ಕಾಲ ಮೊಬೈಲ್ ಬಳಸಿದವರಲ್ಲಿ ಸಾಮಾನ್ಯವಾಗಿ ಕಂಡು ಬರುವ ಗ್ಲಿಯೊಮಾ ಎಂದು ಕರೆಯಲಾಗುವ ಮಾರಣಾಂತಿಕ ಮೆದುಳು ಗೆಡ್ಡೆ ಕಾಣಿಸಿಕೊಳ್ಳುವ ನಿದರ್ಶನಗಳು ಹೆಚ್ಚುತ್ತಿವೆ ಎಂದು ಅಂತರರಾಷ್ಟ್ರೀಯ ಪತ್ರಿಕೆ ಆಂಕಾಲಜಿಯಲ್ಲಿ ಪ್ರಕಟವಾಗಿರುವ ವಿಜ್ಞಾನಿಗಳ ಅಧ್ಯಯನ ಹೇಳಿದೆ.

ಮೊಬೈಲ್ ಹ್ಯಾಂಡ್‌ಸೆಟ್ ಹೊರಸೂಸುವ ತರಂಗಗಳು 'ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಭಾಗವಾಗಿರುವ ಅಂತರರಾಷ್ಟ್ರೀಯ ಕ್ಯಾನ್ಸರ್ ಕುರಿತ ಸಂಶೋಧನಾ ಸಂಸ್ಥೆಯು ಹೇಳಿಕೆ ನೀಡಿದ ಒಂದು ವಾರದ ಬಳಿಕ ಈ ಹೊಸ ಸಂಶೋಧನೆ ನಡೆದಿದೆ. ಮೊಬೈಲ್ ಬಳಕೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯ ಇದೆ ಎಂಬುದಕ್ಕೆ ಈ ಸಂಶೋಧನೆ ಮತ್ತೊಂದು ಉದಾಹರಣೆ ಎಂದೂ ಅಭಿಪ್ರಾಯ ಪಡಲಾಗಿದೆ.

ವಿಜ್ಞಾನಿಗಳು 1200ಕ್ಕೂ ಹೆಚ್ಚು ಮಂದಿ ಮೊಬೈಲ್ ಮತ್ತು ಕಾರ್ಡ್‌ಲೆಸ್ ಪೋನ್ ಬಳಕೆದಾರರರನ್ನು ತಪಾಸಣೆಗೆ ಒಳಪಡಿಸಿದ್ದು 1997 ಮತ್ತು 2003ರ ನಡುವೆ ಇವರು ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದುದು ಪತ್ತೆಯಾಗಿತ್ತು.

ಇವರಲ್ಲಿ 905 ಮಂದಿ ಇನ್ನೂ ಬದುಕಿದ್ದು ಅವರ ಫೋನ್ ಬಳಕೆ ಬಗ್ಗೆ ಸಂದರ್ಶನ ಮಾಡಲಾಗಿದೆ. ಉಳಿದ 346 ಮಂದಿ ಅಸು ನೀಗಿದ್ದು ಇವರ ಫೋನ್ ಹವ್ಯಾಸದ ಕುರಿತು ಬಂಧುಗಳಿಂದ ಸಂಶೋಧಕರು ಮಾಹಿತಿ ಸಂಗ್ರಹಿಸಿದ್ದರು. ಅಧ್ಯಯನದ ಬಳಿಕ ಮೊಬೈಲ್ ಮತ್ತು ಕಾರ್ಡ್‌ಲೆಸ್ ಫೋನ್ ಬಳಸುವುದು 'ಮೆದುಳು ಗಡ್ಡೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ' ಎಂಬ ನಿರ್ಧಾರಕ್ಕೆ ಬರಲಾಗಿದೆ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot