ಭಾರತದ ಸದ್ಯದ ಪ್ರಭಲ ಸ್ಮಾರ್ಟ್‌ಫೋನ್ ಕಂಪನಿಗಳಿವು
ಸ್ಮಾರ್ಟ್ ಫೋನ್ ಗಳಿಗೆ ಭಾರತೀಯ ಮಾರುಕಟ್ಟೆ ಬಹಳಷ್ಟು ತೆರೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಭಾರತದಲ್ಲಿ ಸ್ಮಾರ್ಟ್ ಫೋನ್ ಗ್ರಾಹಕರ ಸಂಖ್ಯೆ ಬೆಳೆಯುತ್ತಲೇ ಇದೆ. ಅದೇ ಕಾರಣಕ್ಕೆ ಅದೆಷ್ಟೋ ವಿದೇಶಿ ಕಂಪೆನಿಗಳು ಕೂಡ ಭಾರತದಲ್ಲಿ ಸ್ಮಾರ್ಟ್ ಫೋನ್ ತಯಾರಿಕೆಗೆ ಬಂಡವಾಳ ಹೂಡುತ್ತಿದೆ ಮತ್ತು ಅತ್ಯಂತ ಹೆಚ್ಚು ಲಾಭವನ್ನು ಗಳಿಸಿಕೊಳ್ಳುತ್ತಿದೆ.
ಅದರ ಜೊತೆಗೆ ಭಾರತದಲ್ಲಿ ಸ್ವದೇಶಿ ಕಂಪೆನಿಗಳು ಕೂಡ ಬೆಳೆಯುತ್ತಿದೆ. ಕೇವಲ 15 ದಿನದಲ್ಲಿ ಮಿಲಿಯನ್ ಗಟ್ಟಲೆ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿರುವ ದಾಖಲೆಗಳು ಕೂಡ ಭಾರತದಲ್ಲಿ ಸೃಷ್ಟಿಯಾಗಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹಾಗಾದ್ರೆ 2018 ರಲ್ಲಿ ಅತೀ ಹೆಚ್ಚು ಮಾರಾಟ ಕಂಡಿರುವ ಸ್ಮಾರ್ಟ್ ಫೋನ್ ಗಳು ಯಾವುದು ಎಂಬ ಕುತೂಹಲ ನಿಮಗೆ ಇದ್ದರೆ ಈ ಪಟ್ಟಿಯನ್ನು ನೀವು ಗಮನಿಸಲೇಬೇಕು.

ಸದ್ಯ ಭಾರತದಲ್ಲಿನ ದೊಡ್ಡ ಸ್ಮಾರ್ಟ್ ಫೋನ್ ಕಂಪೆನಿಗಳ ಪಟ್ಟಿ
ಇಂಟರ್ ನ್ಯಾಷನಲ್ ಡಾಟಾ ಕಾರ್ಪೋರೇಷನ್ ನೀಡಿರುವ 2018 ರ ಸಾಲಿನ ಎರಡನೇ ತ್ರೈಮಾಸಿಕರ ಟಾಪ್ 5 ಸ್ಮಾರ್ಟ್ ಫೋನ್ ವೆಂಡರ್ ಗಳ ಪಟ್ಟಿ ಇದು. ಭಾರತದಲ್ಲಿ ಮಾರಾಟ ಕಂಡ ಸುಮಾರು 20 ಮಿಲಿಯನ್ ಸ್ಮಾರ್ಟ್ ಫೋನ್ ಗಳಲ್ಲಿ ಶೇಕಡಾ 79 ರಷ್ಟನ್ನು ಈ ಐದು ಸ್ಮಾರ್ಟ್ ಫೋನ್ ಗಳು ಪಡೆದುಕೊಂಡಿವೆ ಎಂಬುದನ್ನು ಈ ವರದಿಯು ಬಹಿರಂಗಪಡಿಸಿದೆ.ಅಂದರೆ ಒಟ್ಟು ಮಾರುಕಟ್ಟೆ ಮೌಲ್ಯದ ಮುಕ್ಕಾಲು ಅಂಶಕ್ಕೂ ಹೆಚ್ಚಿನ ಪಾಲನ್ನು ನಾವು ಈ ಕೆಳಗೆ ಪಟ್ಟಿ ಮಾಡಲಿರುವ ಕಂಪೆನಿಯ ಪಾಲಾಗಿದೆ.

ಶಿಯೋಮಿ
ಶಿಯೋಮಿ ಕಂಪೆನಿಯು ಈ ಪಟ್ಟಿಯಲ್ಲಿರುವ ಮೊದಲ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ. ಮಾರ್ಕೆಟ್ ನ ಒಟ್ಟು ಪಾಲುದಾರಿಕೆಯ ಶೇಕಡಾ 29.7 ರಷ್ಟು ಅಂಶವನ್ನು ಶಿಯೋಮಿ ಸಂಸ್ಥೆ ಹೊಂದಿದೆ. ಎಪ್ರಿಲ್, ಮೇ, ಮತ್ತು ಜೂನ್ ಈ ಮೂರು ತಿಂಗಳಲ್ಲಿ ಶಿಯೋಮಿ ತಯಾರಿಸಿ ಭಾರತದಲ್ಲಿ ಮಾರಾಟ ಮಾಡಿರುವ ಸ್ಮಾರ್ಟ್ ಫೋನ್ ಗಳ ಸಂಖ್ಯೆ ಬರೋಬ್ಬರಿ 10 ಮಿಲಿಯನ್ ಆಗಿದೆ.

ಸ್ಯಾಮ್ ಸಂಗ್
ಶಿಯೋಮಿ ನಂತರ ಎರಡನೇ ಸ್ಥಾನವನ್ನು ಹಂಚಿಕೊಂಡಿರುವುದು ಸ್ಯಾಮ್ ಸಂಗ್ ಸಂಸ್ಥೆ. ಇದು ಮಾರುಕಟ್ಟೆ ಪಾಲುದಾರಿಕೆಯ ಒಟ್ಟು ಮೌಲ್ಯದ ಶೇಕಡಾ 23.9 ರಷ್ಟನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸೌತ್ ಕೊರಿಯಾದ ಟೆಕ್ ಸಂಸ್ಥೆ ಹೇಳುವ ಪ್ರಕಾರ ಎರಡನೇ ತ್ರೈಮಾಸಿಕದಲ್ಲಿ ಸ್ಯಾಮ್ ಸಂಗ್ ಸಂಸ್ಥೆ ಮಾರಾಟ ಮಾಡಿರುವ ಒಟ್ಟು ಸ್ಮಾರ್ಟ್ ಫೋನ್ ಗಳ ಸಂಖೆಯ ಬರೋಬ್ಬರಿ 8 ಮಿಲಿಯನ್.

ವಿವೋ
ಶಿಯೋಮಿ ಮತ್ತು ಸ್ಯಾಮ್ ಸಂಗ್ ನಂತರ ವಿವೋ ಈ ಪಟ್ಟಿಯಲ್ಲಿರುವ ಮೂರನೇ ಫೋನ್ ಆಗಿದೆ. ಇದು ಮಾರುಕಟ್ಟೆ ಪಾಲುದಾರಿಕೆಯ ಒಟ್ಟು ಶೇಕಡಾ 12.6% ರನ್ನು ಹೊಂದಿದೆ ಮತ್ತು ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಮಾರಾಟ ಕಂಡ ವಿವೋ ಫೋನ್ ಗಳ ಸಂಖ್ಯೆ 4.2 ಮಿಲಿಯನ್ ಆಗಿದೆ.

ಓಪೋ
ಓಪೋ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿರುವ ನಾಲ್ಕನೇ ಫೋನ್ ತಯಾರಿಕಾ ಕಂಪೆನಿ ಆಗಿದ್ದು, ಮಾರುಕಟ್ಟೆ ಪಾಲುದಾರಿಕೆಯ ಒಟ್ಟು ಶೇಕಡಾ 7.6 ರಷ್ಟನ್ನು ಇದು ಹೊಂದಿದೆ.ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಇದರ ಒಟ್ಟು 2.5 ಮಿಲಿಯನ್ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದೆ.

ಟ್ರಾನ್ಸಿಷನ್
ಟ್ರಾನ್ಸಿಷನ್ ಐದನೇ ಸ್ಥಾನದಲ್ಲಿದೆ ಎಂದರೆ ಹೆಚ್ಚಿನವರಿಗೆ ಆಶ್ಚರ್ಯವಾಗಬಹುದು. ಆದರೂ ನಿಜ ಸಂಗತಿ ಏನೆಂದರೆ ಭಾರತದಲ್ಲಿ ಎರಡನೇ ತ್ರೈಮಾಸಿಕದಲ್ಲಿ ಟ್ರಾನ್ಸಿಷನ್ ಸಂಸ್ಥೆ 1.7 ಮಿಲಿಯನ್ ಸ್ಮಾರ್ಟ್ ಫೋನ್ ಗಳನ್ನು ಮಾರಾಟ ಮಾಡಿದೆ ಮತ್ತು ಮಾರುಕಟ್ಟೆ ಪಾಲುದಾರಿಕೆಯ ಶೇಕಡಾ 5 ರಷ್ಟನ್ನು ಇದು ಹೊಂದಿದೆ ಎಂದು ವರದಿ ತಿಳಿಸಿದೆ.


Click it and Unblock the Notifications








