ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ 5G ಫೋನ್‌ಗಳ ಆರ್ಭಟ!
ಸೈಬರ್ ಮೀಡಿಯಾ ರಿಸರ್ಚ್ (CMR) ನ ಇತ್ತೀಚಿನ ವರದಿಯ ಪ್ರಕಾರ, 2025 ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಗಮನಾರ್ಹ ಬೆಳವಣಿಗೆ ಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾರುಕಟ್ಟೆ 8% ರಷ್ಟು ಬೆಳೆದಿದ್ದು, ಇದಕ್ಕೆ ಪ್ರಮುಖ ಕಾರಣಗಳು ಬಜೆಟ್ 5G ಫೋನ್‌ಗಳ ಬೇಡಿಕೆಯಲ್ಲಿನ ಏರಿಕೆ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೇಲಿನ ಹೆಚ್ಚಿದ ಆಸಕ್ತಿ ಎಂದು ಸೈಬರ್ ಮೀಡಿಯಾ ರಿಸರ್ಚ್ ವರದಿಯು ತಿಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
2025 ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 5G ಫೋನ್‌ಗಳು ಪ್ರಾಬಲ್ಯ ಸಾಧಿಸಿದ್ದು, ಒಟ್ಟು ಸಾಗಣೆಯಲ್ಲಿ 87% ಪಾಲನ್ನು ಹೊಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು 20% ರಷ್ಟು ಹೆಚ್ಚಳವಾಗಿದೆ. ವಿಶೇಷವಾಗಿ ₹8,000 ರಿಂದ ₹10,000 ಬೆಲೆಯ ಬಜೆಟ್ ಫೋನ್‌ಗಳು ಬರೋಬ್ಬರಿ 600% ರಷ್ಟು ಏರಿಕೆ ಕಂಡಿರುವುದು, ಭಾರತೀಯ ಗ್ರಾಹಕರು ಕೈಗೆಟುಕುವ 5G ತಂತ್ರಜ್ಞಾನಕ್ಕೆ ಆಕರ್ಷಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ವರದಿಯು ಹೇಳಿದೆ.
ಈ ತ್ರೈಮಾಸಿಕದಲ್ಲಿ, Vivo 19% ಮಾರುಕಟ್ಟೆ ಪಾಲಿನೊಂದಿಗೆ ಅಗ್ರಸ್ಥಾನದಲ್ಲಿದೆ. ಇದಕ್ಕೆ ಕಾರಣ T4X ಮತ್ತು Y39 ನಂತಹ ಜನಪ್ರಿಯ 5G ಮಾದರಿಗಳು. ನಂತರದ ಸ್ಥಾನದಲ್ಲಿ ಸ್ಯಾಮ್‌ಸಂಗ್ 16% ಪಾಲು ಹೊಂದಿದೆ. ಸ್ಯಾಮ್‌ಸಂಗ್‌ನ ಈ ಯಶಸ್ಸಿಗೆ ಅದರ ಅಲ್ಟ್ರಾ-ಪ್ರೀಮಿಯಂ ಫೋನ್‌ಗಳ ಮಾರಾಟದಲ್ಲಿ ಆದ 90% ಬೆಳವಣಿಗೆ ದೊಡ್ಡ ಕೊಡುಗೆ ನೀಡಿದೆ. ಮೂರನೇ ಸ್ಥಾನದಲ್ಲಿರುವ Oppo, ತನ್ನ ನವೀಕರಿಸಿದ A3X ಮತ್ತು F29 ಸರಣಿಗಳ ಸಹಾಯದಿಂದ 13.4% ಮಾರುಕಟ್ಟೆ ಪಾಲು ಪಡೆದಿದೆ.
ಸೂಪರ್-ಪ್ರೀಮಿಯಂ ವಿಭಾಗದಲ್ಲಿ (₹50,000 ಕ್ಕಿಂತ ಹೆಚ್ಚು), ಮಾರುಕಟ್ಟೆಯು ವರ್ಷದಿಂದ ವರ್ಷಕ್ಕೆ 35% ರಷ್ಟು ಬೆಳೆದಿದೆ. ಈ ವಿಭಾಗದಲ್ಲಿ Apple ಸ್ಪಷ್ಟವಾಗಿ ಪ್ರಾಬಲ್ಯ ಸಾಧಿಸಿದೆ. iPhone 16e ಮಾದರಿಯ ಯಶಸ್ಸಿನಿಂದಾಗಿ Appleನ ಮಾರುಕಟ್ಟೆ ಪಾಲು 54% ಕ್ಕೆ ಏರಿದೆ. ಸ್ಯಾಮ್‌ಸಂಗ್ ಕೂಡ ಈ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಇಡೀ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಪಲ್ ಈಗ 7% ಪಾಲು ಹೊಂದಿದೆ. ಇದರ ನಡುವೆ, OnePlus ಪ್ರೀಮಿಯಂ ವಿಭಾಗದಲ್ಲಿ 21% ಕುಸಿತ ಕಂಡಿದೆ, ಆದರೂ ಅದರ Nord ಸರಣಿಯು ಮಧ್ಯಮ ಶ್ರೇಣಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದೆ.
ಈ ತ್ರೈ ಮಾಸಿಕದಲ್ಲಿ Motorola 81% ರಷ್ಟು ಪ್ರಭಾವಶಾಲಿ ಬೆಳವಣಿಗೆ ಕಂಡಿದೆ. CMF Phone 2 Pro ಬಿಡುಗಡೆಯಿಂದಾಗಿ Nothing ಕಂಪನಿಯು 190% ರಷ್ಟು ಏರಿಕೆ ಕಂಡಿದೆ ಎಂದು ವರದಿಯು ಹೇಳಿದೆ. ಆದರೆ, ಶಿಯೋಮಿ ಮತ್ತು ರಿಯಲ್‌ಮಿ ಬಜೆಟ್ 5G ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಸಹ ಸಿತಕಂಡಿವೆ. ಈ ತ್ರೈಮಾಸಿಕದಲ್ಲಿ ಶಿಯೋಮಿಯ ಒಟ್ಟು ಸಾಗಣೆಗಳು 25% ರಷ್ಟು ಕುಸಿದಿದ್ದು, ಇದು ಅಗ್ರ ಐದು ಬ್ರಾಂಡ್‌ಗಳಲ್ಲಿ ಅತಿದೊಡ್ಡ ಕುಸಿತವಾಗಿದೆ.

ಫೀಚರ್ ಫೋನ್‌ಗಳ ಮಾರುಕಟ್ಟೆ ಕುಸಿತ ಮುಂದುವರಿದಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ 18% ರಷ್ಟು ಇಳಿಕೆ ಕಂಡುಬಂದಿದೆ. 2G ಮಾದರಿಗಳು 15% ಮತ್ತು 4G ಫೀಚರ್ ಫೋನ್‌ಗಳು 31% ರಷ್ಟು ಕುಸಿದಿವೆ. ಇಷ್ಟೆಲ್ಲಾ ಕುಸಿತಗಳ ನಡುವೆಯೂ, Itel 27% ಇಳಿಕೆಯ ಹೊರತಾಗಿಯೂ ಅಗ್ರಸ್ಥಾನದಲ್ಲಿದೆ. ಆದರೆ Lava ಕಂಪನಿಯು ಇದಕ್ಕೆ ಅಪವಾದ ಎಂಬಂತೆ 17% ರಷ್ಟು ಲಾಭ ಗಳಿಸಿ ಆಶ್ಚರ್ಯ ಮೂಡಿಸಿದೆ ಎಂದು ವರದಿಯು ಹೇಳಿದೆ.
ಈ ಸೈಬರ್ ಮೀಡಿಯಾ ರಿಸರ್ಚ್ ವರದಿಯು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಕೈಗೆಟುಕುವ 5G ಮತ್ತು ಪ್ರೀಮಿಯಂ ಫೋನ್‌ಗಳ ಬೇಡಿಕೆಯಿಂದಾಗಿ ಬಲಿಷ್ಠವಾಗಿ ಬೆಳೆಯುತ್ತಿದೆ ಎಂಬುದನ್ನು ತೋರಿಸುತ್ತದೆ. ಈ ಪ್ರವೃತ್ತಿ ಮುಂಬರುವ ದಿನಗಳಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ. ಈ ಕುರಿತು ನಿಮ್ಮ ಸನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿದೆ.


Click it and Unblock the Notifications








