ಕಳೆದ 5 ವರ್ಷಗಳಲ್ಲಿ ಮೊಬೈಲ್ ಪ್ರಪಂಚ ಹೀಗಿರಲಿಲ್ಲ ಅಲ್ಲವೇ?!
ಕಳೆದ ಐದು ವರ್ಷಗಳಲ್ಲಿ ಭಾರತದ ಮೊಬೈಲ್ ಮಾರುಕಟ್ಟೆ ಎಷ್ಟು ಬದಲಾಯಿತು ಅಲ್ಲವೆ.? ಕೇವಲ ಎರಡು ವರ್ಷಗಳ ಹಿಂದಷ್ಟೆ ಗಗನಕುಸುಮವಾಗಿದ್ದ ಸ್ಮಾರ್ಟ್‌ಫೋನ್‌ಗಳೀಗ ಬೀದಿ ಬದಿಯಲ್ಲಿ ಸಿಗುತ್ತಿವೆ. ಆಗ ಇದ್ದ ಟಾಪ್ 5 ಮೊಬೈಲ್ ಕಂಪೆನಿಗಳು ಈಗ ಹೇಳ ಹೆಸರಿಲ್ಲದಂತಾಗಿ ಹೋಗಿವೆ. ಎಲ್ಲದಕ್ಕಿಂತ ಈಗ ಎಲ್ಲರ ಕೈನಲ್ಲೂ ಒಂದೊಂದು ಸ್ಮಾರ್ಟ್‌ಪೋನ್ ಸೇರಿದೆ.
ಸಾಧಾರಣ ಮಧ್ಯಮ ವರ್ಗದ ಜನರು ಉತ್ತಮ ಸೌಲಭ್ಯಗಳುಳ್ಳ ಒಂದು ಸ್ಮಾರ್ಟ್‌ಪೋನ್ ಖರೀದಿಸಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಈಗ ಬದಲಾಗಿದೆ. ಕೇವಲ 10ಸಾವಿರಕ್ಕೇ ಅತ್ಯುತ್ತಮ ಫೀಚರ್ ಹೊಂದಿರುವ ಪೋನ್‌ಗಳು ನಮ್ಮ ಕೈಗೆ ಬಂದಿವೆ. ಹೆಸರಾಂತ ಕಂಪೆನಿಗಳ ಡಮ್ಮಿ ಸ್ಮಾರ್ಟ್‌ಫೋನ್‌ಗಳನ್ನು ಮುಟ್ಟಿ ಆನಂದಿಸಬೇಕಿದ್ದ ಖುಷಿ ಈಗ ನಮಗೆ ಸಿಕ್ಕದಂತಾಗಿದೆ.

ಹೌದಲ್ಲವೆ?, ಮೊಬೈಲ್ ಪ್ರಪಂಚದಲ್ಲಿ ಈ ಐದು ವರ್ಷಗಳಲ್ಲಿ ಕ್ರಾಂತಿಯೇ ನಡೆದುಹೋಗಿದೆ. ಈ ಕ್ರಾಂತಿ ಕಣ್ಣು ಮುಚ್ಚು ಬಿಡುವುದರ ಒಳಗೆ ನಮಗೆ ಮರೆತುಹೊಗಿದೆ. ನೆನಪಿಸಿಕೊಂಡರೂ ಗುರುತಿಸದಂತಹ ಹಳೆ ನೆನಪುಗಳು ಬದಲಾಗಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಈ ಐದು ವರ್ಷಗಳಲ್ಲಿ ಮೊಬೈಲ್ ಪ್ರಪಂಚದಲ್ಲಿ ಆದ ಕ್ರಾಂತಿಯ ಬಗ್ಗೆ ತಿಳಿಯುವ ಅಭಿಲಾಷೆ ನನ್ನದು.

ಐದು ವರ್ಷಗಳ ಹಿಂದೆ ಟಾಪ್ 5?
ಕಳೆದ ಐದು ವರ್ಷಗಳ ಹಿಂದಿನ ಅಂಕಿ ಅಂಶಗಳನ್ನು ನೋಡಿದಾಗ ಭಾರತದಲ್ಲಿ ಟಾಪ್ 5 ಸ್ಥಾನದಲ್ಲಿದ್ದ ಮೊಬೈಲ್ ಕಂಪೆನಿಗಳೆಂದರೆ 1. ಸ್ಯಾಮ್‌ಸಂಗ್ 2. ಮೈಕ್ರೊಮ್ಯಾಕ್ಸ್, 3. ಕಾರ್ಬನ್, 4. ನೋಕಿಯಾ, 5. ಸೋನಿ.! ಇಂದು ಈ ಐದು ಕಂಪೆನಿಗಳಲ್ಲಿ ಸ್ಯಾಮ್‌ಸಂಗ್ ಒಂದನ್ನು ಬಿಟ್ಟರೆ ಉಳಿದವು ಪಾತಾಳ ಕಂಡಿರುವುದು ನಿಮಗೆಲ್ಲಾ ತಿಳಿದಿದೆ.

ದುಬಾರಿ ಬೆಲೆ!!
ಜಗತ್ತಿನ ದೈತ್ಯ ಮೊಬೈಲ್ ಕಂಪೆನಿಗಳಾದ ಸೋನಿ, ಎಚ್‌ಟಿಸಿ, ಎಲ್‌ಜಿ ಇತ್ಯಾದಿ ಕಂಪೆನಿಗಳು ತಮ್ಮ ಮೊಬೈಲ್‌ಗಳಿಗೆ ಆಗ ದುಬಾರಿ ಬೆಲೆಯನ್ನು ಇಟ್ಟಿದ್ದವು. ಸ್ಯಾಮ್ಸಂಗ್ ಮಧ್ಯಮ ಬೆಲೆಯಲ್ಲಿದ್ದರೆ, ಮೈಕ್ರೊಮ್ಯಾಕ್ಸ್ ಮತ್ತು ಕಾರ್ಬನ್ ಕಂಪೆನಿಗಳು ಬಡವರ ಪಾಲಿನ ಕಂಪೆನಿಗಳಾಗಿದ್ದವು. ಗುಣಮಟ್ಟದ ಮೊಬೈಲ್ ಖರೀದಿ ಎಂಬುದು ಆಗ ಗಗನಕುಸುಮವಾಗಿತ್ತು.

ಸೋನಿ ಎಕ್ಸ್‌ಪೀರಿಯಾ!
ಐದು ವರ್ಷಗಳ ಹಿಂದೆ ಸೋನಿ ಎಕ್ಸ್‌ಪೀರಿಯಾ ಎಂಬ ಫೋನ್‌ಗಳ ಹಾವಳಿ ಎಷ್ಟಿತ್ತು ಎಂದರೆ, ಭಾರತದ ಮಧ್ಯಮ ವರ್ಗದ ಗ್ರಾಹಕನು ಸೋನಿಯ ಎಕ್ಸ್‌ಪೀರಿಯಾ ಫೋನ್‌ಗಳನ್ನು ಜಾಹೀರಾತಿನಲ್ಲಷ್ಟೇ ನೋಡಿ ಖುಷಿಪಡುತ್ತಿದ್ದ. ಹಲವರು ತಮ್ಮ ವರ್ಷದ ದುಡಿಮೆಯನ್ನೇ ಮೊಬೈಲ್‌ಗೆ ಹಾಕುತ್ತಿದ್ದರು. ಆಗ ಸೋನಿ ಫೋನ್ ಇದ್ದರೆ ಅವನೆ ಶ್ರೀಮಂತ.

ಸ್ಮಾರ್ಟ್‌ಫೋನ್ ವಿಧಗಳು?!
ಕಳೆದ ಐದು ವರ್ಷಗಳ ಹಿಂದೆ ಜಗತ್ತಿನಲ್ಲಿ ನಾಲ್ಕು ತರಹದ ಸ್ಮಾರ್ಟ್‌ಫೋನ್ ವಿಧಗಳಿದ್ದವು. ಆಪಲ್‌ನವರ ಐಓಎಸ್ ಇಂಟರ್ ಫೇಸ್, ಬ್ಲಾಕ್ ಬೆರ್ರಿ, ನೋಕಿಯಾದ ವಿಂಡೋಸ್ ಮತ್ತು ಗೂಗಲ್ ಅಂಡ್ರಾಯ್ಡ್ ವ್ಯವಸ್ಥೆ. ಆದರೆ, ಈಗ ಬ್ಲಾಕ್ ಬೆರ್ರಿ ಇಂಟರ್ ಫೇಸ್ ಮರೆಯಾಗಿದ್ದರೆ, ನೋಕಿಯಾದ ವಿಂಡೋಸ್ ಇಂಟರ್‌ಫೇಸ್ ಮರೆಯಾಗುತ್ತಿದೆ.

ಕ್ರಾಂತಿಗೆ ನಡೆದದ್ದು ಎಲ್ಲಿಂದ?
ಕಳೆದ ಐದು ವರ್ಷಗಳಲ್ಲಿ ಮೊಬೈಲ್ ಜಗತ್ತಿನಲ್ಲಿ ಕ್ರಾಂತಿ ನಡೆಯಲು ಪ್ರಮುಖ ಎರಡು ಕಾರಣಗಳನ್ನು ನಾವು ನೀಡಬಹುದಾಗಿದೆ. ಒಂದು ಗೂಗಲ್‌ನವರ ಉಚಿತ ಅಂಡ್ರಾಯ್ಡ್ ಇಂಟರ್ ಫೇಸ್ ಮತ್ತು ಭಾರತಕ್ಕೆ ಚೀನಾದ ಮೊಬೈಲ್‌ಗಳು ಲಗ್ಗೆ ಇಟ್ಟ ಪರಿಣಾಮ ಭಾರತದಲ್ಲಿಂದು ಮೊಬೈಲ್ ಮಾರುಕಟ್ಟೆ ನಾವು ಊಹಿಸಲು ಸಾಧ್ಯವಾಗದಷ್ಟು ಬದಲಾಗಿದೆ.

ಮೋಟೋ ಜಿ ಸ್ಮಾರ್ಟ್‌ಫೋನ್
2014ರ ಫೆ. 6 ರಂದು ಭಾರತದಲ್ಲಿ ಮತ್ತೊಂದು ಮೊಬೈಲ್ ಕ್ರಾಂತಿ ಶುರುವಾಯ್ತು. ಆಗ ಗೂಗಲ್ ಒಡೆತನದಲ್ಲಿದ್ದ ಮೋಟೋ ಜಿ ಫ್ಲಿಪ್‌ಕಾರ್ಟ್ ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆಯಾಯ್ತು. 12500 ರೂಪಾಯಿಗಳ ಬೆಲೆ ಹೊಂದಿದ್ದ ಈ ಫೋನ್ ಅನ್ನು ಜನ ಹುಚ್ಚೆದ್ದು ಖರೀದಿಸಿದರು. ಏಕೆಂದರೆ, ಇದೇ ವೈಶಿಷ್ಟ್ಯದ ಇತರೆ ಕಂಪೆನಿಗಳ ಫೋನ್ ಬೆಲೆ ಆಗ 40 ಸಾವಿರದ ಆಸುಪಾಸಿನಲ್ಲಿತ್ತು.

ಶಿಯೋಮಿ ರೆಡ್ ಮಿ1 ಎಸ್!
ಮೋಟೋ ಜಿ ನಂತರ ಶಿಯೋಮಿ ಕಂಪೆನಿ 7 ಸಾವಿರ ರೂ.ಗಳಿಗೆ ರೆಡ್ ಮಿ 1ಎಸ್ ಎಂಬ ಎಂಟ್ರಿ ಲೆವೆಲ್ ಫೋನ್ ಬಿಡುಗಡೆ ಮಾಡಿತು. 1 ಜಿಬಿ RAM, 16 ಜಿಬಿ ಮೆಮೊರಿ ಸೌಲಭ್ಯ ಇರುವ ಈ ಫೋನ್ ಮಧ್ಯಮವರ್ಗದ ಜೇಬಿಗೆ ಅಗ್ಗವಾಗಿತ್ತು. ಇದರ ನಂತರ ಭಾರತದಲ್ಲಿ ಅಪಾರ ಜನಪ್ರಿಯತೆ ಪಡೆದ ಶಿಯೋಮಿ ಇದುವರೆಗೂ ಹಿಂದಿರುಗಿ ನೋಡಿಲ್ಲ.

ಭಾರತದಲ್ಲಿ ನಂ 1 ಸ್ಥಾನ ಶಿಯೋಮಿಗೆ
ಕೌಂಟರ್ ಪಾಯಿಂಟ್ ಸಂಸ್ಥೆ ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ಪ್ರಕಾರ, ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಂ.1 ಸ್ಥಾನವನ್ನು ಶಿಯೋ ಅಲಂಕರಿಸಿದೆ. ತನ್ನ ಅಸ್ತಿತ್ವವನ್ನು ಈವರೆಗೂ ಕಾಡಿಕೊಂಡಿರುವ ಸ್ಯಾಮ್ ಸಂಗ್ ಎರಡನೇ ಸ್ಥಾನದಲ್ಲಿದೆ. ಗುಣಮಟ್ಟದ ಸ್ಮಾರ್ಟ್‌ಪೋನ್‌ಗಳನ್ನು ನೀಡಲು ವಿಫಲವಾದ ಮೈಕ್ರೋಮ್ಯಾಕ್ಸ್, ಕಾರ್ಬನ್ ಕಂಪೆನಿಗಳು ನೆಲಕಚ್ಚಿವೆ.


Click it and Unblock the Notifications






