ಮೇಕ್ ಇನ್ ಇಂಡಿಯಾ ಆಪಲ್ ಐಫೋನ್ 6 ಎಸ್ ಶೀಘ್ರದಲ್ಲಿಯೇ ಲಾಂಚ್!
ಭಾರತದಲ್ಲೇ ತಯಾರಾದ ಐಫೋನ್ 6ಎಸ್ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ ಅನುಸಾರ ಥೈವಾನ್ ಮೂಲದ ಕಂಪೆನಿ ಬೆಂಗಳೂರಿನಲ್ಲಿ ತನ್ನ ಐಫೋನ್ 6 ಎಸ್ ತಯಾರಿಕೆಯನ್ನು ಈಗಾಗಲೇ ಕಳೆದ ವಾರ ಆರಂಭ ಮಾಡಿಯಾಗಿದೆ. ಇದು ಈ ಹ್ಯಾಂಡ್ ಸೆಟ್ ಗೆ ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಮತ್ತು ಭಾರತೀಯರಿಗೆ ಅನುಕೂಲವನ್ನು ಮಾಡಿಕೊಡಲಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಈ ಬದಲಾವಣೆಯು, ಆಮದು ಸುಂಕವನ್ನು ಕಡಿತ ಮಾಡಿ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಭಾರತೀಯರಿಗೆ ಫೋನ್ ಕೈಗೆಟುಕುವ ಸಾಧ್ಯತೆಯನ್ನು ಹೆಚ್ಚಿಸಿದೆ ಮತ್ತು ಇಲ್ಲಿನ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿಯೂ ಕೂಡ ಬಹಳಷ್ಟು ಪ್ರಯೋಜನಕಾರಿಯಾಗಿದೆ.

ಸ್ಥಳೀಯ ತಯಾರಿಕೆಯನ್ನು ವೃದ್ಧಿಸಿರುವ ಆಪಲ್ ಸಂಸ್ಥೆ ಇನ್ನೊಂದು ಮಾಡೆಲ್ ನ್ನು ಕೂಡ ಇಲ್ಲೇ ತಯಾರಿಸುವ ಚಿಂತನೆಯನ್ನು ನಡೆಸಿದೆ. ಐಫೋನ್ ಎಸ್ ಇ ಯಂತೆ ಭಾರತದಲ್ಲೇ ತಯಾರಾಗುವ ಐಫೋನ್ 6ಎಸ್ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಆದರೆ ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯನ್ನು ಸ್ಥಳೀಯವಾಗೇ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವವರೆಗೂ ಐಫೋನ್ 6ಎಸ್ ನ್ನು ಆಮದು ಮಾಡಿಕೊಳ್ಳುವುದನ್ನು ಕಂಪೆನಿ ನಿಲ್ಲಿಸುವುದಿಲ್ಲವಂತೆ. ಹಾಗಾಗಿ ಸದ್ಯದ ಮಟ್ಟಿಗೆ ಐಫೋನ್ 6 ಎಸ್ ನ ಬೆಲೆಯಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂಬುದನ್ನು ತಿಳಿಸಲಾಗಿದೆ. ಆದರೆ ಆಪಲ್ ಇಂಡಿಯಾ ಈ ಬಗ್ಗೆ ಯಾವುದೇ ಕಮೆಂಟ್ ಅನ್ನೂ ಮಾಡಿಲ್ಲ.
ಕಳೆದ ಮೇ ತಿಂಗಳಿನಿಂದಲೇ ಕ್ಯೂಪರ್ಟಿನೋ ಮೂಲದ ಐಫೋನ್ ಮತ್ತು ಮ್ಯಾಕ್ ಕಂಪ್ಯೂಟರ್ ತಯಾರಕರು ಐಫೋನ್ ಎಸ್ ಇ ಯನ್ನು ವಿಸ್ಟ್ರಾನ್ ನಲ್ಲಿ ತಯಾರಿಕೆಯನ್ನು ಆರಂಭಿಸಿದ್ದು, ಸದ್ಯ ಎರಡು ಐಫೋನ್ ಮಾಡೆಲ್ ಗಳನ್ನು ಸ್ಥಳೀಯವಾಗೇ ತಯಾರಿಸುತ್ತಿದ್ದಾರೆ. ಆಪಲ್ ಈಗಾಗಲೇ ಎರಡನೇ ಐಫೋನ್ ಮಾಡೆಲ್ 6 ಸೀರೀಸ್ ತಯಾರಿಕೆಯ ಟ್ರಯಲ್ ನ್ನು ಎಪ್ರಿಲ್ ನಿಂದಲೇ ಆರಂಭಿಸಿದೆ.

ಐಫೋನ್ ಎಸ್ ಇ ಗೆ ಹೋಲಿಸಿದರೆ ಐಫೋನ್ 6 ಸರಣಿಯ ಫೋನ್ ಗಳು ಶೇಕಡಾ 5 ರಷ್ಟು ಫೋನ್ ಗಳನ್ನು ಮಾರಾಟ ಮಾಡುತ್ತದೆ ಮತ್ತು ಇದು ಐಫೋನ್ ಎಸ್ ಇ ಹೋಲಿಸಿದರೆ ಶೇಕಡಾ 15 ರಷ್ಟು ಕಡಿಮೆ ಪ್ರಮಾಣದ್ದಾಗಿರುತ್ತದೆ ಎಂದು ಹಾಂಕ್ ಹಾಂಗ್ ಮೂಲದ ಸಂಶೋಧಕ ಸಂಸ್ಥೆ ಕೌಂಟರ್ ಪಾಯಿಂಟ್ ಅಂದಾಜು ಲೆಕ್ಕಾಚಾರವನ್ನು ನೀಡುತ್ತಿದೆ.
ಸಂಶೋಧಕರ ಪ್ರಕಾರ, ಆಪಲ್ ಸಂಸ್ಥೆಯು ತನ್ನ ಭಾರತೀಯ ಪ್ರೀಮಿಯಂ ಸ್ಮಾರ್ಟ್ ಫೋನ್ ಮಾರುಕಟ್ಟೆಯ ನಾಯಕತ್ವವನ್ನು ಜನವರಿ-ಮಾರ್ಚ್ ನ ತ್ರೈಮಾಸಿಕದ ಸಂದರ್ಬದಲ್ಲಿ ಕಳೆದುಕೊಂಡಿದೆ ಯಾಕೆಂದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9 ಸರಣಿ ಫೋನ್ ಗಳ ಬಿಡುಗಡೆ ಮತ್ತು ಚೀನಾದ ಒನ್ ಪ್ಲಸ್ ನಿಂದಾಗಿ ಈ ಸ್ಥಾನವನ್ನು ಆಪಲ್ ಕಳೆದುಕೊಳ್ಳಬೇಕಾಗಿತು. ಹಾಗಾಗಿ ಆಪಲ್ ಮೂರನೇ ಸ್ಥಾನಕ್ಕೆ ಕುಸಿದಿದೆ.
ಆದರೆ ಭಾರತದಲ್ಲೇ ತಯಾರಾಗಲು ಆರಂಭವಾದರೆ ಈ ಸಮಸ್ಯೆಗೊಂದು ಪುಲ್ ಸ್ಟಾಪ್ ಬೀಳಲಿದೆ ಮತ್ತು ಗ್ರಾಹಕ ಸ್ನೇಹಿ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳು ಲಭ್ಯವಾಗಲು ಆರಂಭವಾಗುತ್ತದೆ. ಇದು ಮಾರುಕಟ್ಟೆಯ ಹಿತದೃಷ್ಟಿಯಿಂದಲೂ ಬಹಳ ಒಳ್ಳೆಯದು. ಆ ನಿಟ್ಟಿನಲ್ಲಿ ಕಂಪೆನಿಗಳೂ ಕೂಡ ಈ ಬಗ್ಗೆ ಆಸಕ್ತಿ ತೋರಿಸಿವೆ. ಸರ್ಕಾರವೂ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರಿಗೆ ಸ್ವದೇಶಿ ನಿರ್ಮಿತ ಸ್ಮಾರ್ಟ್ ಫೋನ್ ಗಳು ಇನ್ನು ಮುಂದೆ ಕೈಗೆಟುಕಲಿವೆ.


Click it and Unblock the Notifications








