ಆಪಲ್ ಐಫೋನ್ 17 ಸರಣಿ ಬಿಡುಗಡೆ ದಿನಾಂಕ ಖಚಿತ!..ಸಂಪೂರ್ಣ ಮಾಹಿತಿ ಇಲ್ಲಿದೆ!
ಆಪಲ್ ತನ್ನ ಬಹುನಿರೀಕ್ಷಿತ ದೊಡ್ಡ ಹಾರ್ಡ್‌ವೇರ್ ಬಿಡುಗಡೆ ಕಾರ್ಯಕ್ರಮವನ್ನು ಇದೇ ಸೆಪ್ಟೆಂಬರ್ 9, 2025 ರಂದು ರಾತ್ರಿ 10:30ಕ್ಕೆ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆಪಲ್ ಪಾರ್ಕ್‌ನಲ್ಲಿ ಆಯೋಜಿಸುವುದಾಗಿ ದೃಢಪಡಿಸಿದೆ. ಸೆಪ್ಟೆಂಬರ್ 9, ಮಂಗಳವಾರದಂದು #AppleEvent ನ ಅದ್ಭುತ ಪ್ರದರ್ಶನಕ್ಕೆ ಸಿದ್ಧರಾಗಿ! ಎಂದು ಆಪಲ್ ಸಿಇಒ ಟಿಮ್ ಕುಕ್ ಅವರು ಟ್ವೀಟ್ ಮಾಡಿದ್ದರೆ, ಇತ್ತ ಆಪಲ್ "ಅವೇ ಡ್ರಾಪಿಂಗ್" ಎಂಬ ಟ್ಯಾಗ್‌ಲೈನ್‌ನೊಂದಿಗೆ ನಡೆಯಲಿರುವ ಈ ಪ್ರಧಾನ ಭಾಷಣವನ್ನು ವಿಶ್ವಾದ್ಯಂತ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಖಚಿತಪಡಿಸಿದೆ.
ಪ್ರತಿವರ್ಷದ ಸುಗ್ಗಿಯ ಸಮಯ ಶರತ್ಕಾಲದಂತೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೊಸ ಐಫೋನ್ 17 ಏರ್ ಜೊತೆಗೆ ಐಫೋನ್ 17 ಸರಣಿಯ ಸ್ಮಾರ್ಟ್‌ಫೋನ್‌ಗಳು, ಮರುವಿನ್ಯಾಸಗೊಳಿಸಲಾದ iOS 26 ಬಳಕೆದಾರ ಇಂಟರ್ಫೇಸ್ ಸಹಿತ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಜೊತೆಗೆ, ಆಪಲ್ ವಾಚ್ ಸರಣಿ 11 ಮತ್ತು ಏರ್‌ಪಾಡ್ಸ್ ಪ್ರೊ 3 ಕೂಡ ಬಿಡುಗಡೆ ಆಗುವ ಸಾಧ್ಯತೆ ಇದೆ. ಹಾಗಾದರೆ, ಸೆಪ್ಟೆಂಬರ್ 9, 2025 ರಂದು ಆಯೋಜನೆಯಾಗಿರುವ ಬಹುನಿರೀಕ್ಷಿತ ಈವೆಂಟ್‌ನಲ್ಲಿ ಆಪಲ್ ಕಂಪೆನಿಯು ಯಾವೆಲ್ಲಾ ಉತ್ಪನ್ನಗಳನ್ನು ಪರಿಚಯಿಸಬಹುದು ಎಂಬುದನ್ನು ನೋಡೋಣ ಬನ್ನಿ.
ಐಫೋನ್ 17 ಸರಣಿ ಮತ್ತು iOS 26
ಈ ವರ್ಷದ ಕಾರ್ಯಕ್ರಮದ ಕೇಂದ್ರಬಿಂದು ಹೊಸ ಐಫೋನ್ 17 ಸರಣಿ. ವರದಿಗಳ ಪ್ರಕಾರ, ಆಪಲ್ ಈ ಬಾರಿ ಐಫೋನ್ 17, ಐಫೋನ್ 17 ಪ್ರೊ, ಐಫೋನ್ 17 ಪ್ರೊ ಮ್ಯಾಕ್ಸ್ ಮತ್ತು ಹೊಸದಾಗಿ ಪರಿಚಯಿಸಲಾಗುತ್ತಿರುವ ಐಫೋನ್ 17 ಏರ್ ಎಂಬ ನಾಲ್ಕು ಮಾದರಿಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಹೊಸ ಐಫೋನ್ 17 ಏರ್ ಸಾಧನವು ಆಪಲ್‌ನ ಅತ್ಯಂತ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದ್ದು, ವಿಶೇಷವಾಗಿ ಬಹು ಕ್ಯಾಮೆರಾ ಮಾಡ್ಯೂಲ್‌ಗಳ ಭಾರವಿಲ್ಲದ ಸುಲಭ ಬಳಕೆಯ ಫೋನ್ ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿದೆ.
ಕ್ಯಾಮೆರಾ ವಿಭಾಗದಲ್ಲಿ, ಐಫೋನ್ 17 ಸರಣಿಯು ಮರುವಿನ್ಯಾಸಗೊಳಿಸಲಾದ ಹಿಂಭಾಗದ ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು, ಇದು Google ಪಿಕ್ಸೆಲ್ ಬಾರ್‌ಗೆ ಹೋಲುವ ವಿನ್ಯಾಸವನ್ನು ಹೊಂದಿದೆ ಎಂದು ವದಂತಿಗಳಿವೆ. ಹಾರ್ಡ್‌ವೇರ್ ಬದಲಾವಣೆಗಳ ಜೊತೆಗೆ, ಆಪಲ್ ತನ್ನ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಹೈಲೈಟ್ ಮಾಡುವ ನಿರೀಕ್ಷೆಯಿದೆ. WWDC 2025 ನಲ್ಲಿ ಪ್ರದರ್ಶಿಸಲಾದ ಮರುವಿನ್ಯಾಸಗೊಳಿಸಲಾದ iOS 26 ಬಳಕೆದಾರ ಇಂಟರ್ಫೇಸ್ ಈ ಹೊಸ ಫೋಗಳೊಂದಿಗೆ ಬಿಡುಗಡೆಯಾಗಲಿದೆ, ಇದು ಸಿರಿ, ಫೋಟೋಗ್ರಫಿ, ಮತ್ತು ಆನ್-ಡಿವೈಸ್ ಪ್ರೊಸೆಸಿಂಗ್‌ನಲ್ಲಿ AI ಏಕಿಕರಣವನ್ನು ನೀಡಲಿದೆ.
ಆಪಲ್ ವಾಚ್ ಮತ್ತು ಏರ್‌ಪಾಡ್ಸ್
ಐಫೋನ್ 17 ಸರಣಿಯ ಜೊತೆಗೆ, ಈ ಕಾರ್ಯಕ್ರಮದಲ್ಲಿ ಆಪಲ್ ವಾಚ್ ಸರಣಿ 11 ಸಹ ಬಿಡುಗಡೆಯಾಗುವ ಸಾಧ್ಯತೆ ಇದೆ. ಆಪಲ್ ಈ ಈವೆಂಟ್‌ನಲ್ಲಿ ಹೊಸ ಆಪಲ್ ವಾಚ್ ಅಲ್ಟ್ರಾ 2 ಮಾದರಿಯನ್ನು ಪರಿಚಯಿಸುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಹೊಸ ವಾಚ್ ಮಾದರಿಗಳು ಸುಧಾರಿತ ಆರೋಗ್ಯ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್ ಸಾಮರ್ಥ್ಯಗಳೊಂದಿಗೆ ಬರುವ ನಿರೀಕ್ಷೆಯಿದೆ. ಹಾಗೆಯೇ, ವರದಿಗಳ ಪ್ರಕಾರ ಕಂಪನಿಯು ಹೆಚ್ಚು ಸುಧಾರಿತ ಆಡಿಯೊ ಗುಣಮಟ್ಟ, ಹೆಚ್ಚು ಪರಿಣಾಮಕಾರಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಏರ್‌ಪಾಡ್ಸ್ ಪ್ರೊ 3 ಅನ್ನು ಸಹ ಪರಿಚಯಿಸುವ ಸಾಧ್ಯತೆ ಇದೆ.

ಆಪಲ್ ಇನ್ನೂ ಪ್ರಿ-ಆರ್ಡರ್ ಮತ್ತು ವಿತರಣಾ ದಿನಾಂಕಗಳನ್ನು ಘೋಷಿಸಿಲ್ಲ, ಆದರೆ ಐತಿಹಾಸಿಕವಾಗಿ, ಮೊದಲ ಬ್ಯಾಚ್ ಸಾಧನಗಳು ಈವೆಂಟ್ ನಡೆದ ಕೆಲವು ದಿನಗಳ ನಂತರ ಸೆಪ್ಟೆಂಬರ್ ತಿಂಗಳಿನಲ್ಲೇ ಗ್ರಾಹಕರಿಗೆ ಲಭ್ಯವಾಗುತ್ತವೆ. ಈ ಕಾರ್ಯಕ್ರಮವು ತಂತ್ರಜ್ಞಾನ ಲೋಕದಲ್ಲಿ ಸಾಕಷ್ಟು ಉತ್ಸಾಹ ಮತ್ತು ನಿರೀಕ್ಷೆಗಳನ್ನು ಸೃಷ್ಟಿಸಿದೆ, ಮತ್ತು ಆಪಲ್ ಈ ಬಾರಿ ಏನು ಹೊಸದನ್ನು ನೀಡುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ನೀವು ಕೂಡ ಆಪಲ್ ಉತ್ಪನ್ನ ಬಿಡುಗಡೆ ಕಾರ್ಯಕ್ಷಮಕ್ಕಾಗಿ ಕಾಯುತ್ತಿದ್ದರೆ ಈ ಕೆಳಗೆ ನಿಮ್ಮ ನಿರೀಕ್ಷಿತ ಆಪಲ್ ಉತ್ಪನ್ನ ಯಾವುದು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.
ನಿಮಗೆ ಗೊತ್ತಾ?: ಐಫೋನ್ ಆಪಲ್‌ನ ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವುದರಿಂದ, ಈ ಕಾರ್ಯಕ್ರಮವನ್ನು ಕಂಪನಿಯ ವರ್ಷದ ಅತ್ಯಂತ ಪ್ರಮುಖ ಘಟನೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.


Click it and Unblock the Notifications








