ಅಗ್ಗದ ಬೆಲೆಗೆ ಅರೈಸ್ ಮೊಬೈಲ್ ಸಿದ್ಧ

Posted By: Staff
ಅಗ್ಗದ ಬೆಲೆಗೆ ಅರೈಸ್ ಮೊಬೈಲ್ ಸಿದ್ಧ

ಕಳೆದ 25 ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಯಲ್ಲಿ ಹೆಸರು ಗಳಿಸಿರುವ ಅರೈಸ್ ಇಂಡಿಯಾ ಲಿಮಿಟೆಡ್ ಇದೀಗ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದೆ. ಭಾರತದಲ್ಲಿ ಕಡಿಮೆ ಬೆಲೆಯ ಮೊಬೈಲ್ ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಗ್ಗದ ಬೆಲೆಯ ಮೊಬೈಲ್ ತಯಾರಿಕೆಗೆ ಮುಂದಾಗಿರುವುದಾಗಿ ಕಂಪನಿ ತಿಳಿಸಿದೆ.

ಕಂಪನಿ ತಯಾರಿಸಿರುವ ಅಗ್ಗದ ಬೆಲೆಯ ಮೊಬೈಲ್ ಗಳು ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಡುಗಡೆಗೊಂಡಿವೆ. ಒಟ್ಟು 15 ಮೊಬೈಲ್ ಮಾದರಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಹ್ಯಾಂಡ್ ಸೆಟ್ ಗಳನ್ನು ವಿಶೇಷವಾಗಿ ಭಾರತೀಯರಿಗೆಂದೇ ತಯಾರಿಸಲಾಗಿದ್ದು, ಅರೈಸ್ ಮೊಬೈಲ್ಸ್ ಎಂಬ ಬ್ರ್ಯಾಂಡ್ ಹೆಸರಲ್ಲಿ ಮೊಬೈಲ್ ಪರಿಚಿತಗೊಂಡಿವೆ.

ಮುಂದಿನ ಮೂರು ವರ್ಷದಲ್ಲಿ ಮೊಬೈಲ್ ತಯಾರಿಕೆಗೆಂದು ಸುಮಾರು 300 ಕೋಟಿ ಬಂಡವಾಳ ಹೂಡುವುದಾಗಿ ಕಂಪನಿ ತಿಳಿಸಿದೆ. ಈ ಹ್ಯಾಂಡ್ ಸೆಟ್ ಗಳನ್ನು ಮಲ್ಟಿಮೀಡಿಯಾ ಹ್ಯಾಂಡ್ ಸೆಟ್, ಬಿಸಿನೆಸ್ ಹ್ಯಾಂಡ್ ಸೆಟ್ ಮತ್ತು ಟಚ್ ಸ್ಕ್ರೀನ್ ಹ್ಯಾಂಡ್ ಸೆಟ್ ಹೀಗೆ ವಿವಿಧ ಭಾಗಗಳಲ್ಲಿ ಪರಿಚಚಯಿಸಲಾಗಿದೆ.

ಬಿಸಿನೆಸ್ ವಿಭಾಗದಲ್ಲಿ A5 ಮತ್ತು W1 ಎರಡು ಮೊಬೈಲ್ ಮಾದರಿಗಳಿದ್ದು, ಎರಡರಲ್ಲೂ ಪೂರ್ಣ ಕ್ವೆರ್ಟಿ ಕೀ ಪ್ಯಾಡ್ ಇದೆ. A5 4 GSM ಪಡೆದುಕೊಂಡಿರುವ ಭಾರತದ ಮೊದಲ ಮೊಬೈಲ್ ಫೋನ್ ಆಗಿದೆ. W1 ನಲ್ಲಿ ಡ್ಯೂಯಲ್ ಸಿಮ್ ಇದ್ದು, 3ಜಿ ಸಂಪರ್ಕವಿಲ್ಲದೇ 2ಜಿ ಬೆಂಬಲದಿಂದ ವಿಡಿಯೋ ಕಾಲಿಂಗ್ ಸಾಧ್ಯವಾಗಲಿದೆ.

Arise T777 ಎಂಬ ಇನ್ನೊಂದು ಮಾದರಿ ಪೂರ್ಣ ಟಚ್ ಸ್ಕ್ರೀನ್ ಆಗಿದ್ದು, ಹೈ ಡೆಫನಿಶನ್ ಫೋಟೊ ಮತ್ತು ವಿಡಿಯೋ ನೀಡಲಿದೆ. 3ಡಿ ಯೂಸರ್ ಇಂಟರ್ ಫೇಸ್ ಕೂಡ ಇದರೊಂದಿಗಿದೆ.

ಮಲ್ಟಿ ಮೀಡಿಯಾ ಮೊಬೈಲ್ ವಿಭಾಗದಲ್ಲಿನ T222 ಮೊಬೈಲ್ ಸ್ಲಿಮ್ ಆಗಿದ್ದು ಟಚ್ ಮತ್ತು ಟೈಪ್ ಎರಡೂ ಆಯ್ಕೆ ನೀಡಲಾಗಿದೆ. ಈ ಮೊಬೈಲ್ ನಲ್ಲಿ ಮ್ಯುಸಿಕ್ ಗೆಂದೇ ಪ್ರತ್ಯೇಕ ಕೀ ನೀಡಲಾಗಿದೆ. ಹೆಚ್ಚು ಮಲ್ಟಿಮೀಡಿಯಾ ಸಾಮರ್ಥ್ಯವನ್ನು ಈ ಮೊಬೈಲ್ ಪಡೆದುಕೊಮಡಿದೆ. ದಿನನಿತ್ಯದ ಬಳಕೆಯ ಮೊಬೈಲ್ ವಿಭಾಗದಲ್ಲಿ 10 ಮೊಬೈಲ್ ಗಳಿದ್ದು, ಬ್ಯಾಟರಿ ಬಾಳಿಕೆಯಲ್ಲಿ ಈ ಮೊಬೈಲ್ ಗಳೂ ಅತ್ಯುತ್ತಮವಾಗಿದೆ ಎಂದು ಕಂಪನಿ ತಿಳಿಸಿದೆ.

ಎಲ್ಲಾ ವಿಧಾನದ ಮೊಬೈಲ್ ನಲ್ಲಿಯೂ ಕ್ಯಾಮೆರಾ ಮತ್ತು ಬ್ಲೂಟೂಥ್ ಆಯ್ಕೆ ಒದಗಿಸಿರುವುದು ವಿಶೇಷವಾಗಿದೆ. 450 ಮೊಬೈಲ್ ಕೇಂದ್ರಗಳನ್ನು ಕಂಪನಿ ತೆರೆಯಲಿದ್ದು, 2012 ರ ಹೊತ್ತಿಗೆ 750 ಕ್ಕೆ ಏರಿಸುವ ಚಿಂತನೆಯಿದೆ. ಈ ಎಲ್ಲಾ ಮಾದರಿಯ ಮೊಬೈಲ್ ಗಳು 990ರು ಇಂದ 4,000ರು ವರೆಗೆ ಲಭ್ಯವಿದ್ದು, ಈ ಮೊಬೈಲ್ ಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುವ ನಿರೀಕ್ಷೆಯಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot