'ನಥಿಂಗ್ ಫೋನ್ 3' ಬಿಡುಗಡೆಯ ಅಧಿಕೃತ ಸಮಯ ಬಹಿರಂಗ!
ತನ್ನ ವಿಶಿಷ್ಟ ವಿನ್ಯಾಸದ ಸ್ಮಾರ್ಟ್‌ಫೋನ್‌ಗಳಿಗಾಗಿ ಹೆಸರಾಗಿರುವ ಯುಕೆ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ ನಥಿಂಗ್ ತನ್ನ ಬಹುನಿರೀಕ್ಷಿತ 'ನಥಿಂಗ್ ಫೋನ್ 3' ಸ್ಮಾರ್ಟ್‌ಫೋನನ್ನು ಶೀಘ್ರದಲ್ಲೇ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ನಥಿಂಗ್ ಕಂಪನಿಯ ಸಿಇಒ ಕಾರ್ಲ್ ಪೀ ಅವರೇ ಖಚಿತಪಡಿಸಿರುವಂತೆ, ಕಂಪೆನಿಯ ಮುಂಬರುವ 'ನಥಿಂಗ್ ಫೋನ್ 3' ಸ್ಮಾರ್ಟ್ಫೋನ್ 2025 ರ ಮೂರನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ಬಿಡುಗಡೆಯಾಗುವ ನಿರೀಕ್ಷೆಯಿದೆ. 2023ರಲ್ಲಿ ಬಿಡುಗಡೆಯಾದ ಯಶಸ್ವಿ ನಥಿಂಗ್ ಫೋನ್ 2 ಫೋನಿನ ಉತ್ತರಾಧಿಕಾರಿಯಾಗಿ ಈ ಮಾದರಿ ಬರಲಿದೆ ಎಂದು ಅಧಿಕೃತವಾಗಿ ತಿಳಿದುಬಂದಿದೆ.
10 ನಿಮಿಷಗಳ 'ಆಸ್ಕ್ ಮಿ ಎನಿಥಿಂಗ್' (AMA) ಕಾರ್ಯಕ್ರಮದಲ್ಲಿ, X (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿರುವಾಗ, ಕಾರ್ಲ್ ಪೀ ಅವರು ನಥಿಂಗ್ ಫೋನ್ 3 ರ ಬಿಡುಗಡೆ ಸಮಯವನ್ನು ಘೋಷಿಸಿದರು. ಆದರೆ, ಈ ಸ್ಮಾರ್ಟ್‌ಫೋನ್ ಕುರಿತು ಇತರ ಯಾವುದೇ ಮಾಹಿತಿಯನ್ನು ಅವರು ಹಂಚಿಕೊಳ್ಳಲಿಲ್ಲ. ಇತ್ತೀಚೆಗಷ್ಟೇ ಪ್ರಸಿದ್ಧ ಟಿಪ್‌ಸ್ಟರ್ ಅಭಿಷೇಕ್ ಯಾದವ್ ಅವರು 'ನಥಿಂಗ್ ಫೋನ್ 3' ಸ್ಮಾರ್ಟ್‌ಫೋನ್ ಜುಲೈ 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಥಿಂಗ್‌ನ ಹಿಂದಿನ ಬಿಡುಗಡೆಗಳನ್ನು ಪರಿಗಣಿಸಿದಾಗ, ಇದು ಸಮಂಜಸವಾಗಿದೆ ಎಂದು ಅವರು ಹೇಳಿದರು.
'ನಥಿಂಗ್ ಫೋನ್ 3' ಸ್ಮಾರ್ಟ್‌ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳು!
'ನಥಿಂಗ್ ಫೋನ್ 3' ಸ್ಮಾರ್ಟ್‌ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.77-ಇಂಚಿನ 1.5K AMOLED LTPO ಡಿಸ್ಪ್ಲೇಯನ್ನು ಹೊಂದಿರಬಹುದು. ಈ ಡಿಸ್ಪ್ಲೇ 1600 ನಿಟ್‌ಗಳ ಸಾಮಾನ್ಯ ಹೊಳಪನ್ನು ಮತ್ತು ನೇರ ಸೂರ್ಯನ ಬೆಳಕಿನಲ್ಲಿಯೂ ಸ್ಪಷ್ಟವಾಗಿ ಕಾಣುವಂತೆ 3000 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುವ ಸಾಮರ್ಥ್ಯವನ್ನು ಹೊಂದಿರಬಹುದು. ಸಾಫ್ಟ್‌ವೇರ್‌ನ ವಿಭಾಗದಲ್ಲಿ, ನಥಿಂಗ್ ಫೋನ್ 3 ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.5 ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಹಲವು ವರದಿಗಳು ತಿಳಿಸಿವೆ.
ಕ್ಯಾಮೆರಾ ವಿಭಾಗದಲ್ಲಿ, ಈ ನಥಿಂಗ್ ಫೋನ್ 3 ಸ್ಮಾರ್ಟ್‌ಫೋನ್ 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ, ಅಲ್ಟ್ರಾ-ವೈಡ್ ಲೆನ್ಸ್ ಮತ್ತು 3x ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಇರಬಹುದು. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಇರಬಹುದು. ಬ್ಯಾಟರಿಯ ವಿಷಯಕ್ಕೆ ಬಂದರೆ, ಈ ಫೋನ್ 5300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 50W ವೇಗದ ಚಾರ್ಜಿಂಗ್ ಮತ್ತು 20W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾಧ್ಯತೆ ಇದೆ.

ನಥಿಂಗ್ ತನ್ನ ವಿಶಿಷ್ಟ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದೆ. ಮುಂದುವರಿಕೆಯಾಗಿ, ಈ ಫೋನ್ ಸಹ ಗ್ಲಿಫ್ ಲೈಟಿಂಗ್‌ನೊಂದಿಗೆ ಪಾರದರ್ಶಕ ಹಿಂಭಾಗದ ಫಲಕವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಬಹುದು. ಈ ಬಾರಿ, ಕಂಪನಿಯು ಕೃತಕ ಬುದ್ಧಿಮತ್ತೆ (AI) ಚಾಲಿತ ವೈಶಿಷ್ಟ್ಯಗಳ ಮೇಲೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆಯಿದೆ, ಇದು ಈ ಫೋನ್ ಅನ್ನು ಅದರ ಹಿಂದಿನ ಮಾದರಿಗಳಿಗಿಂತ ಭಿನ್ನವಾಗಿಸುತ್ತದೆ. ಬೆಲೆಯ ಬಗ್ಗೆ ಮಾತನಾಡುವುದಾದರೆ, ಹಿಂದಿನ ಮಾದರಿಯನ್ನು ಗಮನಿಸಿದರೆ, ದೇಶ ಮಾರುಕಟ್ಟೆಯಲ್ಲಿ ಈ ಫೋನ್ ಸುಮಾರು 45,000 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
ಇತ್ತೀಚೆಗಷ್ಟೇ ನಥಿಂಗ್ ಬಜೆಟ್ ಸ್ನೇಹಿ 'Nothing Phone 3a' ಸರಣಿಯನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಎರಡು ಸ್ಮಾರ್ಟ್‌ಫೋನ್‌ಗಳಾದ Nothing Phone (3a) ಮತ್ತು Nothing Phone (3a) ಪ್ರೊ ಅನ್ನು 24,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. ಆಕರ್ಷಕ ವಿನ್ಯಾಸ, ಗೂಗಲ್‌ನೊಂದಿಗೆ ಅಭಿವೃದ್ಧಿಪಡಿಸಿದ ಅಲ್ಟ್ರಾ XDR ಡಿಸ್ಪ್ಲೇ ತಂತ್ರಜ್ಞಾನ, AI-ಚಾಲಿತ ವೈಶಿಷ್ಟ್ಯಗಳು ಮತ್ತು ಉತ್ತಮ ಕ್ಯಾಮೆರಾ ವ್ಯವಸ್ಥೆಯು ಈ ಫೋನ್‌ಗಳ ಪ್ರಮುಖ ಆಕರ್ಷಣೆಗಳಾಗಿವೆ. ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ನಥಿಂಗ್ ಫೋನ್ 3 ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.


Click it and Unblock the Notifications








