Galaxy S26 Ultra, S26+ಮತ್ತು S26: ನಿರೀಕ್ಷಿತ ಬೆಲೆಗಳು ಸೋರಿಕೆ!
2026ರ ಆರಂಭದಲ್ಲೇ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆ ಹುಟ್ಟಿಸಿರುವುದು Samsung ಕಂಪೆನಿಯ ಹೊಸ ಫ್ಲ್ಯಾಗ್‌ಶಿಪ್ ಸರಣಿ. ಗ್ಯಾಲಕ್ಸಿ ಅನ್ಪ್ಯಾಕ್ಡ್ 2026 ಕಾರ್ಯಕ್ರಮದಲ್ಲಿ Samsung Galaxy S26 Ultra, Samsung Galaxy S26+ ಮತ್ತು Samsung Galaxy S26 ಮಾದರಿಗಳು ಜಾಗತಿಕವಾಗಿ ಪರಿಚಯವಾಗುವ ನಿರೀಕ್ಷೆಯಿದೆ. ಅಧಿಕೃತ ಬಿಡುಗಡೆಗೂ ಮುನ್ನವೇ ಬೆಲೆ ಸಂಬಂಧಿತ ಮಾಹಿತಿಗಳು ಹೊರಬಿದ್ದಿದ್ದು, ಈ ಬಾರಿ ಅತ್ಯಂತ ಪ್ರೀಮಿಯಂ Galaxy S26 Ultra ಬೆಲೆಯು ಎಷ್ಟಿರಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗುತ್ತಿದೆ.
ಹೌದು, ದಕ್ಷಿಣ ಕೊರಿಯಾ ಮೂಲದ ETNews ವರದಿಯ ಪ್ರಕಾರ, ಪ್ರೀಮಿಯಂ Galaxy S26 Ultra ಫೋನಿನ 256GB ರೂಪಾಂತರವು ಸುಮಾರು KRW 1.8 ಮಿಲಿಯನ್ (ಭಾರತೀಯ ರೂಪಾಯಿಗಳಲ್ಲಿ ಸುಮಾರು 1,13,000 ರೂ.) ಹೊಂದಿರಬಹುದು. 512GB ಮಾದರಿ KRW 2 ಮಿಲಿಯನ್ (ಸುಮಾರು ರೂ. 1,26,000) ವರೆಗೆ ಹೋಗಬಹುದು ಎನ್ನಲಾಗುತ್ತಿದೆ. ಇತ್ತ Galaxy S26+ 256GB ರೂಪಾಂತರವು KRW 1.5 ಮಿಲಿಯನ್ (ಸುಮಾರು ರೂ. 94,000) ಮತ್ತು 512GB ಮಾದರಿ KRW 1.66 ಮಿಲಿಯನ್ (ಸುಮಾರು ರೂ. 1,04,000) ಬೆಲೆಯಲ್ಲಿ ಬರಬಹುದು.
ಮತ್ತೊಂದೆಡೆ, ಸಾಮಾನ್ಯ Galaxy S26 ಫೋನಿನ 256GB ಮಾದರಿಯು KRW 1.3 ಮಿಲಿಯನ್ (ಸುಮಾರು ರೂ. 94,000) ಮತ್ತು 512GB ರೂಪಾಂತರವು KRW 1.46 ಮಿಲಿಯನ್ (ಸುಮಾರು ರೂ. 1,04,000) ಸುತ್ತಮುತ್ತ ಇರಬಹುದು ಎಂಬ ಅಂದಾಜು ಇದೆ. ಈ ಅಂಕಿಅಂಶಗಳು ನಿಜವಾಗಿದ್ದರೆ, ಕಳೆದ ವರ್ಷದ Samsung Galaxy S25 ಸರಣಿಯಿಗಿಂತ ಹೊಸ Galaxy S26 ಸರಣಿ ಫೋನ್‌ಗಳು ಹೆಚ್ಚು ದುಬಾರಿಯಾಗಲಿವೆ. ವಿಶೇಷವಾಗಿ Glaxy S25 Ultraಗೆ ಹೋಲಿಸಿದರೆ Galaxy S26 Ultra ಮಾದರಿಯಲ್ಲಿ ಗಮನಾರ್ಹ ಬೆಲೆ ಏರಿಕೆ ಕಾಣಬಹುದು ಎಂದು ಅಂದಾಜಿಸಬಹುದು.
ಇದನ್ನು ಈ ಹೊಂದಿನ ಮಾದರಿಗಳೊಂದಿಗೆ ಹೋಲಿಸಿ ನೋಡಿದರೆ, Galaxy S26 ಮತ್ತು Galaxy S26+ ಬೆಲೆಗಳು Galaxy S25 ಮತ್ತು Galaxy S25+ ಗಿಂತ ಸುಮಾರು KRW 99,000 (ಸುಮಾರು ರೂ. 6,300) ರಷ್ಟು ಏರಿಕೆಯಾಗಲಿದೆ ಎಂದು ವರದಿಯಾಗಿದೆ, ಆದರೆ ಫ್ಲ್ಯಾಗ್‌ಶಿಪ್ Galaxy S26 Ultra ಮಾದರಿಯು Galaxy S25 Ultra ಬಿಡುಗಡೆ ಬೆಲೆಗಿಂತ KRW 98,600 (ಸುಮಾರು ರೂ. 6,200) ರಷ್ಟು ಏರಿಕೆಯಾಗಬಹುದು. ದಕ್ಷಿಣ ಕೊರಿಯಾದಲ್ಲಿ ಮೂರು ವರ್ಷಗಳಲ್ಲಿ ಸ್ಯಾಮ್‌ಸಂಗ್‌ನ ಫ್ಲ್ಯಾಗ್‌ಶಿಪ್ ಗ್ಯಾಲಕ್ಸಿ S ಸರಣಿಯು ಕಾಣುತ್ತಿರುವ ಮೊದಲ ಬೆಲೆ ಏರಿಕೆ ಇದಾಗಿದೆ ಎಂದು ಹೇಳಲಾಗುತ್ತದೆ.

ಇತ್ತೀಚಿಗಷ್ಟೇ, ಯುರೋಪ್‌ನಲ್ಲಿ Galaxy S26 ಮೂರು ಮಾದರಿಗಳ ಬೆಲೆಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಯೂರೋಪ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯ ಮೂಲ ರೂಪಾಂತರದ ಬೆಲೆ EUR 999 (ಸುಮಾರು ರೂ. 1,07,700) ಎಂದು ಹೇಳಲಾಗುತ್ತದೆ. ಏತನ್ಮಧ್ಯೆ, Galaxy S26+ ಮತ್ತು Galaxy S26 Ultra ಬೆಲೆ ಕ್ರಮವಾಗಿ EUR 1,269 (ಸುಮಾರು ರೂ. 1,36,800) ಮತ್ತು EUR 1,469 (ಸುಮಾರು ರೂ. 1,58,400) ಆಗಬಹುದು. ಈ ಹ್ಯಾಂಡ್‌ಸೆಟ್‌ಗಳನ್ನು ಬಿಳಿ, ನೀಲಿ, ಕಪ್ಪು ಮತ್ತು ನೇರಳೆ ಬಣ್ಣಗಳಲ್ಲಿ ಪರಿಚಯಿಸಲಾಗುವುಸು ಎಂದು ವರದಿಯಾಗಿದೆ.
ಬೆಲೆ ಏರಿಕೆಗೆ ಕಾರಣವೇನು?
ಜಾಗತಿಕ ಮಟ್ಟದಲ್ಲಿ ಸಂಗ್ರಹಣೆ ಮತ್ತು ಮೆಮೊರಿ ಘಟಕಗಳ, ಅದರಲ್ಲೂ ನಿರ್ಧಿಷ್ಟವಾಗಿ DRAM ಮತ್ತು NAND ಮೆಮೊರಿ ಘಟಕಗಳ ಬೆಲೆ ಏರಿಕೆಯಾಗಿರುವುದು Galaxy ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆಗೂ ಪ್ರಮುಖ ಕಾರಣ ಎಂದು ವರದಿಗಳು ಸೂಚಿಸುತ್ತವೆ. ಉನ್ನತ ಮಟ್ಟದ ಸ್ಟೋರೇಜ್ ಮತ್ತು ಮೆಮೊರಿ ಬಳಕೆ ಮಾಡುವ ಫ್ಲ್ಯಾಗ್‌ಶಿಪ್ ಫೋನ್‌ಗಳ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಕಂಪನಿಗಳು ಬೆಲೆ ಹೆಚ್ಚಳ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿವೆ.
ಭಾರತದಲ್ಲಿ ಪರಿಣಾಮ ಏನು?
ದಕ್ಷಿಣ ಕೊರಿಯಾ ಮತ್ತು ಯುರೋಪ್‌ನಲ್ಲಿ ಬೆಲೆ ಏರಿಕೆ ಕಂಡುಬಂದಿರುವುದರಿಂದ ಭಾರತದಲ್ಲಿಯೂ ದರಗಳು ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಅಂತಿಮ ಭಾರತೀಯ ಬೆಲೆಗಳು ತೆರಿಗೆ, ಆಮದು ಸುಂಕ ಮತ್ತು ಮಾರುಕಟ್ಟೆ ತಂತ್ರಗಳ ಮೇಲೆ ಅವಲಂಬಿತವಾಗಿರುತ್ತವೆ. ಒಟ್ಟಿನಲ್ಲಿ, Galaxy S26 ಸರಣಿ ಪ್ರೀಮಿಯಂ ವಿಭಾಗದಲ್ಲಿ ಹೊಸ ಸ್ಪರ್ಧಾತ್ಮಕ ಮಾನದಂಡಗಳನ್ನು ಸ್ಥಾಪಿಸಲು ಸಿದ್ಧವಾಗಿದೆ. ಆದರೆ ಹೆಚ್ಚಿದ ದರಗಳು ಭಾರತೀಯ ಗ್ರಾಹಕರ ಖರೀದಿ ನಿರ್ಧಾರವನ್ನು ಹೇಗೆ ಪ್ರಭಾವಿಸುತ್ತವೆ ಎಂಬುದು ಅಧಿಕೃತ ಬಿಡುಗಡೆ ನಂತರ ಸ್ಪಷ್ಟವಾಗಲಿದೆ.


Click it and Unblock the Notifications