Honor: ಎರಡು ಹೊಸ ಫೋನ್ ಧೂಳೆಬ್ಬಿಸಲು ಸಿದ್ಧ: ಎದುರಾಳಿಗಳಿಗೆ ನಡುಕ! ಜು.18ರಂದು ಬಿಡುಗಡೆ
ಹಾನರ್ (Honor) ಕಂಪನಿಯು ತನ್ನ ಗ್ರಾಹಕರಿಗೆ ಕೊನೆಗೂ ಸಿಹಿ ಸುದ್ದಿಯೊಂದನ್ನು ನೀಡಿದೆ. ಭಾರತದಲ್ಲಿ ತನ್ನ Honor 200 ಸರಣಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಸರಣಿಯು ಜುಲೈ 18 ರಂದು ಎಂಟ್ರಿ ಕೊಡಲಿದೆ. ಇದರಲ್ಲಿ ಎರಡು ಫೋನ್‌ಗಳು ಇರುತ್ತವೆ. ಒಂದು Honor 200, ಮತ್ತೊಂದು Honor 200 Pro. ಈ ನೂತನ ಮೊಬೈಲ್‌ಗಳು ಹೊಸ ವಿನ್ಯಾಸ ಮತ್ತು AI ವೈಶಿಷ್ಟ್ಯಗಳೊಂದಿಗೆ ಬರಲಿವೆ. ಬಿಡುಗಡೆಯ ನಂತರ, ನೀವು ಈ ಸ್ಮಾರ್ಟ್‌ಫೋನ್‌ಗಳನ್ನು Amazon, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇತರ ದೊಡ್ಡ ಅಂಗಡಿಗಳಿಂದ ಖರೀದಿಸಬಹುದು. ಈ ಹಾನರ್ 200 ಸರಣಿಯ ಹೊಸ ಫೋನ್‌ಗಳ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಬಜೆಟ್ ಫ್ರೆಂಡ್ಲಿ ಗ್ರಾಹಕರನ್ನು ಟಾರ್ಗೆಟ್ ಮಾಡಿರುವ ಕಂಪನಿಗಳು ಪ್ರತಿನಿತ್ಯ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿವೆ. ಈ ಮೊಬೈಲ್‌ಗಳು ಮಾರುಕಟ್ಟೆಯಲ್ಲಿ ಸೌಂಡ್ ಮಾಡಲು ಇನ್ನಿಲ್ಲದ ಕಸರತ್ತು ನಡೆಸುತ್ತವೆ. ಅದರಂತೆಯೇ, ಹಾನರ್ ತನ್ನ ಎರಡು ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಿದೆ. ಹಾನರ್ 200 ಸರಣಿಯ ಬಿಡುಗಡೆ ಬಗ್ಗೆ ಕಂಪನಿಯ ಸಿಇಒ ಮಾಧವ್ ಶೇಠ್ ಮತ್ತು ಜಂಟಿ ಎಂಡಿ ಸಿಪಿ ಖಂಡೇಲ್ವಾಲ್ ಅವರು ಈ ಹಿಂದೆಯೇ ಸುಳಿವು ನೀಡಿದ್ದರು.

Honor 200 ಸರಣಿಯ ವಿಶೇಷತೆ ಏನು?
ಹಾನರ್ 200 ಸರಣಿಯು ವರ್ಣರಂಜಿತ 6.78-ಇಂಚಿನ ಕ್ವಾಡ್-ಕರ್ವ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. Honor 200 Pro ಓಷನ್ ಸಯಾನ್ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಆದರೆ, ಹಾನರ್ 200 ಮೂನ್‌ಲೈಟ್ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಬರಲಿದೆ. ಈ ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳು Android 14 ಆಧಾರಿತ MagicOS 8.0 ನಲ್ಲಿ ಕಾರ್ಯನಿರ್ವಹಿಸುತ್ತವೆ. ಇಂಟರ್ಫೇಸ್ ಹಾನರ್‌ನ ಸ್ವಾಮ್ಯದ ಮ್ಯಾಜಿಕ್‌ಎಲ್‌ಎಂ ಆನ್-ಡಿವೈಸ್ AI ದೊಡ್ಡ ಭಾಷಾ ಮಾದರಿಯಿಂದ ಚಾಲಿತವಾಗಿದೆ.
ಈಗಾಗಲೇ Amazon Indiaನಲ್ಲಿ ಹಾನರ್ 200 ಮತ್ತು ಹಾನರ್ 200 ಪ್ರೊ ಪಟ್ಟಿಯನ್ನು ನೋಡಬಹುದಾಗಿದೆ. 'ನೋಟಿಫೈ' ಬಟನ್ ಒತ್ತುವ ಮೂಲಕ ನೀವು ಫೋನ್ ಲಾಂಚ್ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಪಟ್ಟಿಯು ಫೋನ್‌ನ ಹಿಂಭಾಗದ ವಿನ್ಯಾಸವನ್ನು ತೋರಿಸುತ್ತದೆ. ಇದು ಮೂರು ಹಿಂದಿನ ಕ್ಯಾಮೆರಾಗಳು ಮತ್ತು 5G ಸಂಪರ್ಕವನ್ನು ಹೊಂದಿದೆ.
Honor 200 5G ಸರಣಿಯಲ್ಲಿ ಹೊಸದೇನಿದೆ?
ಭಾರತದಲ್ಲಿ ಮುಂಬರುವ ಹಾನರ್ 200 ಸರಣಿಯ ಫೋನ್‌ಗಳ ಕುರಿತು ಹಾನರ್ ಕಂಪನಿ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಆದರೆ, ಈ ಸರಣಿಯನ್ನು ಈಗಾಗಲೇ ವಿಶ್ವದಾದ್ಯಂತ ಬಿಡುಗಡೆ ಮಾಡಲಾಗಿದೆ. ಜಾಗತಿಕ ಆವೃತ್ತಿಯು 6.7-ಇಂಚಿನ ಪೂರ್ಣ HD+ ಬಾಗಿದ OLED ಡಿಸ್ಪ್ಲೇಯನ್ನು ಹೊಂದಿದೆ. 2664 x 1200 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 4,000 nits ಗರಿಷ್ಠ ಬ್ರೈಟ್‌ನೆಸ್ ಒಳಗೊಂಡಿದೆ.
ಈ ಫೋನ್‌ನ ಪ್ರೊಸೆಸರ್ ಯಾವುದು? ಬ್ಯಾಟರಿ ಹೇಗಿರಲಿದೆ?
ಹಾನರ್ 200 ಸರಣಿಯ ಸ್ಮಾರ್ಟ್‌ಫೋನ್‌ಗಳ ಪ್ರೊಸೆಸರ್ ಬಗ್ಗೆ ಹೇಳುವುದಾದರೆ, ಈ ಸರಣಿಯು Qualcomm Snapdragon 7 Gen 3 ಚಿಪ್‌ಸೆಟ್‌ನೊಂದಿಗೆ ತಯಾರಾಗಿದೆ. ಇದು 16GB ಯ RAM ಮತ್ತು 512GB ವರೆಗಿನ ಸ್ಟೋರೇಜ್‌ನೊಂದಿಗೆ ಬರಲಿದೆ. ಇನ್ನೂ, Honor 200 ಸರಣಿಯ ಬ್ಯಾಟರಿ ಬ್ಯಾಕಪ್ ಬಗ್ಗೆ ನೋಡುವುದಾದರೆ, ಶಕ್ತಿಯುತ ಕಾರ್ಯಕ್ಷಮತೆಗಾಗಿ 5200mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಜೊತೆಗೆ, 100W ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡಲಿದೆ.
ಕ್ಯಾಮೆರಾ ಸೆಟಪ್‌ಗೆ ಮೊಬೈಲ್ ಪ್ರಿಯರು ಫಿದಾ!
Honor 200 ಸರಣಿಯ ವಿಶೇಷತೆ ಎಂದರೆ ಅದರ ಕ್ಯಾಮೆರಾ. ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಕ್ಯಾಮೆರಾ ಮತ್ತು 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದಲ್ಲದೆ, ಈ ಫೋನ್‌ಗಳಿಗೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ಡ್ಯುಯಲ್ ಸಿಮ್ ಬೆಂಬಲ, 5G ಸಂಪರ್ಕವನ್ನು ಸಹ ನೀಡಲಾಗಿದೆ.
ಈ ಫೋನ್‌ಗಳ ಬೆಲೆ ಎಷ್ಟಿರಬಹುದು?
Honor 200 ವೆನಿಲ್ಲಾ ವೇರಿಯಂಟ್‌ನ 12GB RAM/256GB ಸ್ಟೋರೇಜ್ ಮಾದರಿಯನ್ನು ಚೀನಾದಲ್ಲಿ 2699 ಯುವಾನ್ (ಅಂದಾಜು 31,000 ರೂ.) ಬೆಲೆಗೆ ಬಿಡುಗಡೆ ಮಾಡಲಾಯಿತು. 16GB RAM ಮತ್ತು 512GB ಸ್ಟೋರೇಜ್ ಮಾದರಿಯು 3199 ಯುವಾನ್ (ಸುಮಾರು 37,000 ರೂ.) ಬೆಲೆ ಹೊಂದಿದೆ. Honor 200 Proನ 12GB RAM/256GB ಸ್ಟೋರೇಜ್ ರೂಪಾಂತರವು 3,499 ಯುವಾನ್ (ಅಂದಾಜು 40,000 ರೂ.) ಇದೆ. 16GB RAM/1TB ಸ್ಟೋರೇಜ್‌ನ ಮಾದರಿಯು 4,499 ಯುವಾನ್ (ಸುಮಾರು 51,000 ರೂ.) ಬೆಲೆ ಹೊಂದಿದೆ.
ಗ್ರಾಹಕರನ್ನು ಆಕರ್ಷಿಸುತ್ತಿರುವ AI ಫೀಚರ್ಸ್
ಹಾನರ್ 200 ಸರಣಿಯು ಹೊಸ ಆಪರೇಟಿಂಗ್ ಸಿಸ್ಟಮ್ MagicOS 8.0 ನೊಂದಿಗೆ ಅನೇಕ ವಿಶೇಷ AI ಫೀಚರ್ಸ್‌ಗಳನ್ನು ಸಹ ಹೊಂದಿದೆ. ಈ ವೈಶಿಷ್ಟ್ಯಗಳಲ್ಲಿ ಒಂದಾದ ಮ್ಯಾಜಿಕ್ ಪೋರ್ಟಲ್ ಬಳಕೆದಾರರು ಸ್ವೀಕರಿಸಿದ ಸಂದೇಶಗಳನ್ನು ಅರ್ಥಮಾಡಿಕೊಳ್ಳುತ್ತದೆ. ಮತ್ತು ಅವುಗಳನ್ನು ಸರಿಯಾದ ಅಪ್ಲಿಕೇಶನ್‌ಗಳಿಗೆ ತೆಗೆದುಕೊಂಡು ಹೋಗುತ್ತದೆ. ಇದು ಫೋನ್ ಅನ್ನು ಬಳಸಲು ಸುಲಭಗೊಳಿಸುತ್ತದೆ.
ಏಕಕಾಲದಲ್ಲಿ ಎಂಟು ಕೆಲಸ ಫಿನೀಶ್..!
ಎರಡನೆಯ ವೈಶಿಷ್ಟ್ಯವೆಂದರೆ ಮ್ಯಾಜಿಕ್ ರಿಂಗ್. ಇದು ಏಕಕಾಲದಲ್ಲಿ ಅನೇಕ ಸಾಧನಗಳಲ್ಲಿ ಬಹುಕಾರ್ಯಕವನ್ನು ಸುಲಭಗೊಳಿಸುತ್ತದೆ. ಇನ್ನೊಂದು ಸಾಧನದ ನೆಟ್‌ವರ್ಕ್ ಬಳಸುವುದು. ನಿಮ್ಮ ಡಿಸ್ಲ್ಪೇಯನ್ನು ಹಂಚಿಕೊಳ್ಳುವುದು ಮತ್ತು ಫೈಲ್‌ಗಳನ್ನು ಹಂಚಿಕೊಳ್ಳುವುದು ಮುಂತಾದ ಎಂಟು ಕೆಲಸಗಳನ್ನು ನೀವು ಏಕಕಾಲದಲ್ಲಿ ಮಾಡಬಹುದು. ಹೆಚ್ಚುವರಿಯಾಗಿ, ಮ್ಯಾಜಿಕ್ ಕ್ಯಾಪ್ಸುಲ್ ಕೂಡ ಇದೆ, ಇದು ಕರೆಗಳು ಮತ್ತು ಅಲಾರಂಗಳಂತಹ ಅಗತ್ಯ ಕಾರ್ಯಗಳಿಗೆ ತ್ವರಿತ ಪ್ರವೇಶವನ್ನು ಅನುಮತಿಸುತ್ತದೆ.
3 ಫಿಂಗರ್ ಸ್ವೈಪ್ ವೈಶಿಷ್ಟ್ಯವೂ ಇದೆ
ಇದೇ ಸಮಯದಲ್ಲಿ, ಮ್ಯಾಜಿಕ್ ಎನಿವೇರ್ ಡೋರ್ ಕೇವಲ ಡ್ರ್ಯಾಗ್ ಮತ್ತು ಡ್ರಾಪ್ ಮೂಲಕ ಫೈಲ್‌ಗಳನ್ನು ಸುಲಭವಾಗಿ ವರ್ಗಾಯಿಸಲು ಒಂದು ಮಾರ್ಗವನ್ನು ಒದಗಿಸುತ್ತದೆ. ಇದಲ್ಲದೇ, 3-ಫಿಂಗರ್ ಸ್ವೈಪ್ ವೈಶಿಷ್ಟ್ಯವೂ ಇದೆ. ಕೇವಲ ಒಂದು ಸ್ವೈಪ್‌ನೊಂದಿಗೆ ಯಾವುದೇ ಸಾಧನದಲ್ಲಿ ಜಾಗತಿಕ ಹುಡುಕಾಟವನ್ನು ಮಾಡಲು ಇದು ನಿಮ್ಮನ್ನು ಅನುಮತಿಸುತ್ತದೆ. ಆದ್ದರಿಂದ ನೀವು ಸುಲಭವಾಗಿ ಕೆಲಸ ಮಾಡಬಹುದು. ಮುಂಬರುವ ದಿನಗಳಲ್ಲಿ ಕಂಪನಿಯು Honor 200 5G ಸರಣಿಯ ಇನ್ನಿತರ ಹಲವು ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಬಹಿರಂಗಗೊಳಿಸಲಿದೆ.


Click it and Unblock the Notifications








