120Hz ಡಿಸ್‌ಪ್ಲೇ, 6,000mAh ಬ್ಯಾಟರಿಯ ಈ 5G ಫೋನ್ 10 ಸಾವಿರಕ್ಕೆ ಬರುತ್ತಿದೆ!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹಲವಾರು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಸದ್ದು ಮಾಡುತ್ತಿರುವ Infinix ಕಂಪೆನಿಯು, ತನ್ನ ಮುಂಬರುವ Infinix Hot 60i 5G ಫೋನ್ ಭಾರತದಲ್ಲಿ ಆಗಸ್ಟ್ 16 ರಂದು ಬಿಡುಗಡೆಯಾಗುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ. ಹಾಗೆಯೇ, ಈ ಫೋನ್ ಬಿಡುಗಡೆಗೆ ಮುನ್ನವೇ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಮೈಕ್ರೋಸೈಟ್ ಲೈವ್ ಆಗಿದ್ದು, ಇದರ ವಿನ್ಯಾಸ, ಫೀಚರ್ಸ್ ಮತ್ತು ಲಭ್ಯತೆಯ ಕುರಿತು ಪ್ರಮುಖ ವಿವರಗಳನ್ನು ಬಹಿರಂಗವಾಗಿವೆ. ಈ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.
Infinix Hot 60i 5G: ಪ್ರಮುಖ ವೈಶಿಷ್ಟ್ಯಗಳು
ಮುಂಬರುವ ಹೊಸ Infinix Hot 60i 5G ಫೋನ್ ಶ್ಯಾಡೋ ಬ್ಲೂ, ಮಾನ್ಸೂನ್ ಗ್ರೀನ್, ಸ್ಲೀಕ್ ಬ್ಲ್ಯಾಕ್ ಮತ್ತು ಪ್ಲಮ್ ರೆಡ್ ಎಂಬ ನಾಲ್ಕು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. ಫೋನಿನ ವಿನ್ಯಾಸವು ಮ್ಯಾಟ್ ಫಿನಿಶ್‌ನೊಂದಿಗೆ ಬರುವ ಹಿಂಬದಿಯ ಪ್ಯಾನೆಲ್ ಅನ್ನು ಒಳಗೊಂಡಿದೆ, ಇದು ಆಯತಾಕಾರದ ಕ್ಯಾಮೆರಾ ದ್ವೀಪವನ್ನು ಹೊಂದಿದೆ. ಡಿಸ್‌ಪ್ಲೇ ವಿಭಾಗದಲ್ಲಿ, ಈ ಫೋನ್ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ 6.75-ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದೆ.
ಕಾರ್ಯಕ್ಷಮತೆಗಾಗಿ, ಈ ಫೋನ್ MediaTek Dimensity 6400 ಚಿಪ್‌ಸೆಟ್ ಹೊಂದಿರುವುದನ್ನು ಮತ್ತು ಆಂಡ್ರಾಯ್ಡ್ 15-ಆಧಾರಿತ XOS 15 ನಲ್ಲಿ ಕಾರ್ಯನಿರ್ವಹಿಸಲಿರುವುದನ್ನು ಖಚಿತಪಡಿಸಲಾಗಿದೆ. ಫೋನ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದು 6,000mAh ಬ್ಯಾಟರಿ, ಇದು ಅದರ ಬೆಲೆ ವಿಭಾಗದಲ್ಲಿ ಇದೇ ಮೊದಲನೆಯದು ಎಂದು ಕಂಪನಿ ಹೇಳಿಕೊಂಡಿದೆ. ಈ ದೊಡ್ಡ ಬ್ಯಾಟರಿಯು ಒಂದೇ ಚಾರ್ಜ್‌ನಲ್ಲಿ 128 ಗಂಟೆಗಳವರೆಗೆ ಸಂಗೀತ ಪ್ಲೇಬ್ಯಾಕ್ ಅನ್ನು ಬೆಂಬಲಿಸುತ್ತದೆ ಎಂದು ಕಂಪೆನಿಯು ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ಈ Infinix Hot 60i 5G ಫೋನ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ಡ್ಯುಯಲ್-LED ಫ್ಲ್ಯಾಷ್ ಲೈಟ್‌ಗಳು ಸೇರಿವೆ. ಕ್ಯಾಮೆರಾದಲ್ಲಿ HDR ಮತ್ತು ಪನೋರಮಾ ಮೋಡ್‌ಗಳಂತಹ ವೈಶಿಷ್ಟ್ಯಗಳೂ ಇವೆ. ಇದಲ್ಲದೆ, ಈ ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP64 ರೇಟಿಂಗ್ ಅನ್ನು ಪಡೆದಿದೆ. ಇಷ್ಟೇ ಅಲ್ಲದೆ, ಈ ಫೋನ್‌ನಲ್ಲಿ ಹೊಸ ಬ್ಲೂಟೂತ್ ವಾಕಿ-ಟಾಕಿ ಸಂಪರ್ಕ ಮತ್ತು ಕೃತಕ ಬುದ್ಧಿಮತ್ತೆ (AI)-ಚಾಲಿತ ಕಾರ್ಯಗಳನ್ನು ನಿರ್ವಹಿಸಲು ಒನ್-ಟ್ಯಾಪ್ ಇನ್ಫಿನಿಕ್ಸ್ AI ವೈಶಿಷ್ಟ್ಯವನ್ನು ಪರಿಚಯಿಸಿದೆ.
Infinix Hot 60i 5G: ಬೆಲೆ ಎಷ್ಟು?..(ನಿರೀಕ್ಷಿತ)
ಈ Infinix Hot 60i 5G ಫೋನಿನ 4G ಆವೃತ್ತಿಯು ಈಗಾಗಲೇ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿದ್ದು, 6GB RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಸುಮಾರು ₹10,000 ಪರಿಚಯಾತ್ಮಕ ಬೆಲೆಗೆ ಲಭ್ಯವಿದೆ. ಭಾರತದಲ್ಲಿ ಈ Infinix Hot 60i 5G ಫೋನ್ ಅದರ 4G ಪ್ರತಿರೂಪಕ್ಕಿಂತ ಹೋಲುವ ಅಥವಾ ಸ್ವಲ್ಪ ಹೆಚ್ಚಿನ ಬೆಲೆಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿಯ ಕಾರಣದಿಂದಾಗಿ ಈ ಫೋನ್ ಬೆಲೆ 10 ಸಾವಿರಕ್ಕಿಂತ ಕಡಿಮೆ ಇರಬಹುದಾದ ಸಾಧ್ಯತೆ ಕೂಡ ಇದೆ.
ಇನ್ನು ಈ ಹೊಸ Infinix Hot 60i 5G ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬೆಲೆ ವಿಭಾಗದಲ್ಲಿ ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ. Infinix Hot 60i 5G ಬಿಡುಗಡೆಯಾದ ನಂತರ, ಇದು ಫ್ಲಿಪ್‌ಕಾರ್ಟ್ ಮತ್ತು ಇನ್ಫಿನಿಕ್ಸ್‌ನ ಅಧಿಕೃತ ವೆಬ್‌ಸೈಟ್ ಮೂಲಕ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಹೊಸ Infinix Hot 60i 5G ಸ್ಮಾರ್ಟ್‌ಫೋನ್ ಎಷ್ಟು ಬೆಲೆಯಲ್ಲಿ ಬಿಡುಗಡೆಯಾಗಬಹುದು?, ಮತ್ತು ಈ ಫೋನ್ ಕುರಿತ ನಿಮ್ಮ ನಿರೀಕ್ಷೆಗಳು ಯಾವುವು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








