ಜಗತ್ತಿನಾದ್ಯಂತ iPhone 17 ಬೆಲೆ: ಎಲ್ಲಿ ಕಡಿಮೆ, ಎಲ್ಲಿ ದುಬಾರಿ?..ಭಾರತದಲ್ಲಿ?
ಟೆಕ್ ದೈತ್ಯ ಆ್ಯಪಲ್ ತನ್ನ ಹೊಸ iPhone 17 ಸರಣಿಯು ವಿಶ್ವಾದ್ಯಂತ ಮೊಬೈಲ್ ಪ್ರಿಯರ ಗಮನ ಸೆಳೆದಿದೆ. ಈ ಹೊಸ ಐಫೋನ್ ಖರೀದಿಸಲು ಬಯಸುವವರು ಸಾಮಾನ್ಯವಾಗಿ, "ನಮ್ಮ ದೇಶದಲ್ಲಿ ಇದರ ಬೆಲೆ ಎಷ್ಟಿದೆ?" " ನಾನು ಎಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು?" ಎಂದು ಪ್ರಶ್ನಿಸುವುದು ಸಹಜ. ಏಕೆಂದರೆ, ಆ್ಯಪಲ್ ಜಗತ್ತಿನ ಎಲ್ಲೆಡೆಯೂ ಒಂದೇ ಬೆಲೆಯಲ್ಲಿ ಫೋನ್‌ಗಳನ್ನು ಮಾರಾಟ ಮಾಡುವುದಿಲ್ಲ. ಏಕೆಂದರೆ, ಒಂದೊಂದು ದೇಶದಲ್ಲೂ ತೆರಿಗೆ, ಆಮದು ಸುಂಕ, ಮತ್ತು ಆಯಾ ದೇಶದ ಕರೆನ್ಸಿಯ ಮೌಲ್ಯ ವ್ಯತ್ಯಾಸವಿರುತ್ತದೆ.
ಹೀಗಾಗಿ, ಒಂದು ದೇಶದಲ್ಲಿ ಅಗ್ಗವಾಗಿ ಸಿಗುವ ಐಫೋನ್ ಇನ್ನೊಂದು ದೇಶದಲ್ಲಿ ದುಬಾರಿಯಾಗಿರುತ್ತದೆ. iPhone 17 ಸರಣಿಯ ಫೋನ್‌ಗಳ ಬೆಲೆಯಲ್ಲೂ ಇದೇ ರೀತಿಯ ವ್ಯತ್ಯಾಸ ಕಂಡುಬಂದಿದೆ. ಪ್ರಪಂಚದಾದ್ಯಂತ iPhone 17 ಎಲ್ಲೆಲ್ಲಿ ಅಗ್ಗವಾಗಿ ಲಭ್ಯವಿದೆ, ಯಾವ ದೇಶಗಳಲ್ಲಿ ಬೆಲೆ ಹೆಚ್ಚಿದೆ ಮತ್ತು ಅದಕ್ಕೆ ಕಾರಣಗಳೇನು ಎಂಬುದನ್ನು ಇಲ್ಲಿ ವಿವರವಾಗಿ ನೀಡಲಾಗಿದೆ. ನಿಮ್ಮಲ್ಲೂ ಕೂಡ ಜಗತ್ತಿನಲ್ಲಿ ಎಲ್ಲಿ ಐಫೋನ್ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಪ್ರಶ್ನೆ ಇದ್ದರೆ, ಈ ಲೇಖನದಲ್ಲಿ ಸಂಪೂರ್ಣ ಬೆಲೆಗಳ ಮಾಹಿತಿಯನ್ನು ನೋಡೋಣ ಬನ್ನಿ.
iPhone 17 ಅತಿ ಕಡಿಮೆ ಬೆಲೆಗೆ ಸಿಗುವ ದೇಶಗಳು
iPhone 17 ಖರೀದಿಸಲು ಬಯಸುವವರಿಗೆ ಜಗತ್ತಿನ ಅತ್ಯಂತ ಅಗ್ಗದ ದೇಶ ಅಮೆರಿಕಾ.! ಇಲ್ಲಿ ಮೂಲ ಮಾದರಿ iPhone 17 ಸುಮಾರು ₹71,000 ಗೆ ಲಭ್ಯವಿದೆ. ಇದಕ್ಕೆ ಮುಖ್ಯ ಕಾರಣ, ಕೆಲವು ಅಮೆರಿಕ ರಾಜ್ಯಗಳಲ್ಲಿ ಮಾರಾಟ ತೆರಿಗೆ ಇಲ್ಲದಿರುವುದು. ಆದರೆ, ಇಲ್ಲಿ ಒಂದು ಪ್ರಮುಖ ವಿಷಯ ಗಮನಿಸಬೇಕು, ಅಮೆರಿಕಾದಲ್ಲಿ ಸಿಗುವ ಫೋನ್‌ಗಳು ಕೇವಲ eSIM ಮಾದರಿಯಲ್ಲಿದ್ದು, ಇದರಲ್ಲಿ ಸಿಮ್ ಕಾರ್ಡ್ ಹಾಕಲು ಯಾವುದೇ ಸ್ಲಾಟ್ ಇರುವುದಿಲ್ಲ.
ಅಮೆರಿಕಾದ ನಂತರ iPhone 17 ಅಗ್ಗವಾಗಿ ಸಿಗುವ ದೇಶಗಳ ಪಟ್ಟಿಯಲ್ಲಿ ಹಾಂಗ್ ಕಾಂಗ್ ಮತ್ತು ಯುಎಇ (ದುಬೈ) ಸೇರಿವೆ. ಹಾಂಗ್ ಕಾಂಗ್‌ನಲ್ಲಿ ಫೋನ್ ಬೆಲೆ ಸುಮಾರು ₹73,000-₹74,000 ಇದ್ದು, ವ್ಯಾಟ್ಇಲ್ಲದಿರುವುದು ಇದಕ್ಕೆ ಕಾರಣ. ಅದೇ ರೀತಿ ದುಬೈನಲ್ಲಿ ಕೇವಲ 5% ವ್ಯಾಟ್ ಇರುವ ಕಾರಣ, ಇಲ್ಲಿ ಫೋನ್ ಬೆಲೆ ಸುಮಾರು ₹75,000 ಆಗಿದೆ. ಈ ಎರಡು ದೇಶಗಳು ವ್ಯಾಟ್ ಅಥವಾ ಇತರೆ ತೆರಿಗೆಗಳನ್ನು ಕಡಿಮೆ ಪ್ರಮಾಣದಲ್ಲಿ ಇಟ್ಟಿರುವುದರಿಂದ, ಫೋನ್ ಬೆಲೆ ಅಮೆರಿಕದ ಬೆಲೆಗೆ ಹತ್ತಿರದಲ್ಲಿದೆ.
ಇದೇ ಪಟ್ಟಿಯಲ್ಲಿರುವ ಮತ್ತೊಂದು ದೇಶ ಜಪಾನ್. ಇಲ್ಲಿ iPhone 17 ಸುಮಾರು ₹78,000 ಕ್ಕೆ ಸಿಗುತ್ತದೆ. ಪ್ರವಾಸಿಗರಿಗೆ ಇಲ್ಲಿ ವ್ಯಾಟ್ ರಿಫಂಡ್ ಸಹ ಲಭ್ಯವಿದೆ. ಆದರೆ, ಇತ್ತೀಚಿಗೆ ಯೆನ್ ಮೌಲ್ಯದಲ್ಲಿ ಆಗಿರುವ ಕುಸಿತದಿಂದಾಗಿ ಬೆಲೆ ಸ್ವಲ್ಪ ಹೆಚ್ಚಾಗಿದೆ. ಈ ದೇಶಗಳಲ್ಲಿ ಕಡಿಮೆ ಬೆಲೆಗೆ ಫೋನ್ ಸಿಗಲು ಆಮದು ಸುಂಕ ಮತ್ತು ತೆರಿಗೆಗಳು ಕಡಿಮೆ ಇರುವುದೇ ಮುಖ್ಯ ಕಾರಣ.

iPhone 17: ಅತಿ ಹೆಚ್ಚು ಬೆಲೆ ಹೊಂದಿರುವ ದೇಶಗಳು
ಕೆಲವು ದೇಶಗಳಲ್ಲಿ iPhone 17 ಬೆಲೆ ಅತ್ಯಂತ ಹೆಚ್ಚಾಗಿದೆ. ಈ ಪಟ್ಟಿಯಲ್ಲಿ ಟರ್ಕಿ, ಬ್ರೆಜಿಲ್, ಯುಕೆ ಮತ್ತು ಜರ್ಮನಿ ಸೇರಿವೆ. ಟರ್ಕಿಯಲ್ಲಿ iPhone 17 ಬೆಲೆ ₹1,30,000-₹1,35,000 ರಷ್ಟಿದ್ದು, ಇದು ಜಗತ್ತಿನಲ್ಲೇ ಅತಿ ದುಬಾರಿ ಬೆಲೆಯಾಗಿದೆ. ಇದಕ್ಕೆ ಪ್ರಮುಖ ಕಾರಣ, ಆಮದು ಸುಂಕ ಮತ್ತು ಸ್ಥಳೀಯ ಕರೆನ್ಸಿಯ ಮೌಲ್ಯದಲ್ಲಿನ ಭಾರಿ ಕುಸಿತ.
ಬ್ರೆಜಿಲ್‌ನಲ್ಲಿ ಸಹ ಐಫೋನ್ ಬೆಲೆ ₹1,20,000-₹1,25,000 ರಷ್ಟಿದೆ. ಈ ದೇಶಗಳಲ್ಲಿ ಫೋನ್ ಬೆಲೆ ಇಷ್ಟು ಹೆಚ್ಚಾಗಲು, ಆಮದು ಸುಂಕಗಳು ಭಾರಿ ಪ್ರಮಾಣದಲ್ಲಿ ಇರುವುದೇ ಮುಖ್ಯ ಕಾರಣ. ಯುರೋಪಿನ ದೇಶಗಳಾದ ಯುಕೆ ಮತ್ತು ಜರ್ಮನಿಯಲ್ಲಿ ಕೂಡ ಫೋನ್ ಬೆಲೆ ಹೆಚ್ಚಿದೆ. ಉದಾಹರಣೆಗೆ, ಯುಕೆನಲ್ಲಿ ₹1,14,000 ಮತ್ತು ಜರ್ಮನಿಯಲ್ಲಿ ₹98,000 ರಷ್ಟಿದೆ. ಈ ದೇಶಗಳಲ್ಲಿ ಸ್ಥಳೀಯ ತೆರಿಗೆಗಳು ಫೋನ್ ಬೆಲೆಯ ಜೊತೆಗೆ ಸೇರಿರುವುದರಿಂದ ಬೆಲೆ ಹೆಚ್ಚಾಗಿದೆ.
ಭಾರತದಲ್ಲಿ iPhone 17 ಬೆಲೆ ಮತ್ತು ಲಾಭ
ಭಾರತದಲ್ಲಿ iPhone 17 ಮೂಲ ಮಾದರಿಯ ಬೆಲೆ ₹82,900 ರಷ್ಟಿದೆ. ಇದು ಅಮೆರಿಕಾ ಮತ್ತು ದುಬೈ ದೇಶಗಳಿಗಿಂತ ಸ್ವಲ್ಪ ಹೆಚ್ಚಿದೆ, ಆದರೆ ಬ್ರೆಜಿಲ್ ಮತ್ತು ಟರ್ಕಿ ದೇಶಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ. ಭಾರತದಲ್ಲಿ ಐಫೋನ್‌ಗಳು ದುಬಾರಿಯಾಗಿರಲು ಪ್ರಮುಖ ಕಾರಣ ಇಲ್ಲಿರುವ ಆಮದು ಸುಂಕ. ಆದರೆ ಈ ಬಾರಿ ಆ್ಯಪಲ್ ಕಂಪನಿ ಭಾರತೀಯ ಗ್ರಾಹಕರಿಗೆ ಒಂದು ವಿಶೇಷ ಪ್ರಯೋಜನ ನೀಡಿದೆ. ಹಿಂದಿನ iPhone 16 ಸರಣಿಯಲ್ಲಿ ಮೂಲ ಮಾದರಿ 128GB ಸಂಗ್ರಹಣೆಯೊಂದಿಗೆ ಬರುತ್ತಿತ್ತು, ಆದರೆ iPhone 17 ಸರಣಿಯಲ್ಲಿ 256GB ಸಂಗ್ರಹಣೆ ಇರುವ ಮಾದರಿ ಬಿಡುಗಡೆ ಮಾಡಿದೆ.
ಹಿಂದಿನ ಮಾದರಿಗೆ ಹೋಲಿಸಿದರೆ, ಕೇವಲ ₹3,000 ಹೆಚ್ಚು ಪಾವತಿಸಿ ಡಬಲ್ ಸಂಗ್ರಹಣೆ ಪಡೆಯುವುದು ಭಾರತೀಯ ಖರೀದಿದಾರರಿಗೆ ಒಂದು ದೊಡ್ಡ ಲಾಭವಾಗಿದೆ. ಈ ಕಾರಣದಿಂದ, ಭಾರತದ ಬೆಲೆ ದುಬಾರಿಯೆಂದು ಅನಿಸುವುದಿಲ್ಲ. ಆ್ಯಪಲ್ ಕಂಪನಿಯು ಭಾರತದಲ್ಲಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ. ಒಟ್ಟಾರೆ, ಜಾಗತಿಕವಾಗಿ ಅಮೆರಿಕಾದಲ್ಲಿ iPhone 17 ಅಗ್ಗವಾಗಿದ್ದರೆ, ಭಾರತದಲ್ಲಿ ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಇದು ಲಭ್ಯವಿದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








