iPhone 17e ಕಾನ್ಸೆಪ್ಟ್ ವಿಡಿಯೋ ವೈರಲ್: ವಿನ್ಯಾಸ ಮತ್ತು ಬಣ್ಣ ಆಯ್ಕೆಗಳು ಲೀಕ್!
ಟೆಕ್ ದೈತ್ಯ ಆಪಲ್ ತನ್ನ ಮುಂದಿನ ಬಜೆಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿ iPhone 17e ಅನ್ನು ಶೀಘ್ರದಲ್ಲೇ ಅನಾವರಣಗೊಳಿಸಬಹುದು ಎಂಬ ಮಾಹಿತಿ ಟೆಕ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. iPhone 17 ಸರಣಿಯ ನಾಲ್ಕನೇ ಮಾದರಿಯಾಗಿ ಈ ಹೊಸ Phone 17e ಸಾಧನವು ಇದೇ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಧಿಕೃತ ಘೋಷಣೆ ಇನ್ನೂ ಬಾಕಿ ಇದ್ದರೂ, ಇತ್ತೀಚಿನ ಲೀಕ್ ವರದಿಗಳು ಮತ್ತು ಕಾನ್ಸೆಪ್ಟ್ ವಿಡಿಯೋಗಳು ಈ ಫೋನ್ ಬಗ್ಗೆ ಹಲವು ಕುತೂಹಲಕಾರಿ ವಿವರಗಳನ್ನು ಬಹಿರಂಗಪಡಿಸುತ್ತಿವೆ.! ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Phone 17e ವಿನ್ಯಾಸ, ಬಣ್ಣ ಆಯ್ಕೆಗಳು (ನಿರೀಕ್ಷಿತ)
ಇತ್ತೀಚಿಗೆ ಫ್ರಂಟ್ ಪೇಜ್ ಟೆಕ್‌ನ ಜಾನ್ ಪ್ರೊಸರ್(Jon Prosser) ಅವರು iPhone 17e ಸಂಭಾವ್ಯ ವಿನ್ಯಾಸ ಮತ್ತು ಬಣ್ಣ ಆಯ್ಕೆಗಳನ್ನು ತೋರಿಸುವ ಕಾನ್ಸೆಪ್ಟ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಪ್ರಕಾರ, iPhone 17e ತನ್ನ ಹಿಂದಿನ ಮಾದರಿ iPhone 16e ಯ ವಿನ್ಯಾಸ ಶೈಲಿಯನ್ನು ಮುಂದುವರಿಸಬಹುದು. ತೆಳ್ಳನೆಯ ಬೆಝೆಲ್‌ಗಳು ಮತ್ತು ಸರಳವಾದ ಡಿಸೈನ್ ಫೋನ್‌ಗೆ ಆಕರ್ಷಕ ಲುಕ್ ನೀಡುವಂತೆ ಕಾಣಿಸುತ್ತಿವೆ. ಬಣ್ಣ ಆಯ್ಕೆಗಳ ವಿಷಯದಲ್ಲಿ, iPhone 17e ವೈಟ್, ಬ್ಲ್ಯಾಕ್ ಮತ್ತು ಲಾವೆಂಡರ್ ಎಂಬ ಮೂರು ಕ್ಲಾಸಿಕ್ ಮತ್ತು ಟ್ರೆಂಡಿ ಶೇಡ್‌ಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
ಇನ್ನು ಫೋನಿನ ಹಿಂಭಾಗದ ಡಿಸೈನ್ ನೋಡುವುದಾದರೆ, iPhone 17e ಒಂದೇ ಕ್ಯಾಮೆರಾ ಘಟಕವನ್ನು ಹೊಂದಿರಬಹುದು, ಜೊತೆಗೆ LED ಫ್ಲ್ಯಾಷ್ ಮತ್ತು ಹಿಂಭಾಗದಲ್ಲಿ ದ್ವಿತೀಯ ಮೈಕ್ರೊಫೋನ್ ಅನ್ನು ಹೊಂದಿರಬಹುದು. ಹೆಚ್ಚುವರಿಯಾಗಿ, Phone 17e ನಲ್ಲಿ ವಾಲ್ಯೂಮ್ ಕಂಟ್ರೋಲ್‌ಗಳು ಮತ್ತು ಎಡಭಾಗದಲ್ಲಿ ಆಕ್ಷನ್ ಬಟನ್ ಇರಬಹುದು ಮತ್ತು ಬಲಭಾಗದಲ್ಲಿ ಪವರ್ ಬಟನ್ ಅನ್ನು ಇರಿಸಬಹುದು ಎಂದು ಹೇಳಲಾಗಿದೆ. ಇಷ್ಟೇ ಅಲ್ಲದೆ, ಸುರಕ್ಷತೆಗಾಗಿ, ಈ ಫೋನ್ IP68 ರೇಟಿಂಗ್‌ನೊಂದಿಗೆ ಧೂಳು ಮತ್ತು ನೀರಿನಿಂದ ರಕ್ಷಣೆ ಸೌಲಭ್ಯ ಇರಬಹುದು ಎಂದು ವರದಿಗಳು ಹೇಳುತ್ತಿವೆ.
ಪ್ರಮುಖ ಅಪ್‌ಗ್ರೇಡ್: ಹೊಸ A19 ಚಿಪ್
iPhone 17e ಯ ಅತಿ ದೊಡ್ಡ ಹೈಲೈಟ್ ಎಂದರೆ ಅದರ ಪ್ರೊಸೆಸರ್. ಲೀಕ್ ಪ್ರಕಾರ, ಈ ಫೋನ್‌ನಲ್ಲಿ ಆಪಲ್‌ನ ಹೊಸ A19 ಚಿಪ್ ಬಳಸಲಾಗುತ್ತದೆ. ಇದು iPhone 16e ಯಲ್ಲಿದ್ದ A18 ಚಿಪ್‌ಗೆ ಹೋಲಿಸಿದರೆ ಹೆಚ್ಚು ವೇಗ, ಉತ್ತಮ ಬ್ಯಾಟರಿ ದಕ್ಷತೆ ಮತ್ತು AI ಆಧಾರಿತ ಫೀಚರ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. ದಿನನಿತ್ಯದ ಬಳಕೆ ಮತ್ತು ಗೇಮಿಂಗ್ ಅನುಭವದಲ್ಲೂ ಸ್ಪಷ್ಟವಾದ ಸುಧಾರಣೆ ನಿರೀಕ್ಷಿಸಬಹುದು.
ಡಿಸ್‌ಪ್ಲೇ ಮತ್ತು ಕ್ಯಾಮೆರಾ
iPhone 17e ನಲ್ಲಿನ 6.1 ಇಂಚಿನ ಡಿಸ್ಪ್ಲೇ, ನಾಚ್ ವಿನ್ಯಾಸ, ಫೇಸ್ ಐಡಿ ಮತ್ತು 60Hz ರಿಫ್ರೆಶ್ ರೇಟ್ ಈ ಹೊಸ ಮಾದರಿಯಲ್ಲೂ ಮುಂದುವರಿಯಬಹುದು ಎಂದು ಹೇಳಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ ದೊಡ್ಡ ಬದಲಾವಣೆಗಳಿಲ್ಲ ಎನ್ನಲಾಗುತ್ತಿದೆ. iPhone 17e ನಲ್ಲಿ 48 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಜೊತೆಗೆ) ಮತ್ತು 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರಬಹುದು.

ಮ್ಯಾಗ್‌ಸೇಫ್ ಮತ್ತು ಇನ್-ಹೌಸ್ ಚಿಪ್‌ಗಳ ಸಾಧ್ಯತೆ
ಈ ಬಾರಿ iPhone 17e ಯಲ್ಲಿ MagSafe ಚಾರ್ಜಿಂಗ್ ಬೆಂಬಲ ದೊರೆಯಬಹುದು ಎನ್ನುವ ಮಾಹಿತಿ ಬಳಕೆದಾರರ ಗಮನ ಸೆಳೆಯುತ್ತಿದೆ. ಇದಲ್ಲದೆ, ಆಪಲ್ ತನ್ನದೇ ಆದ ಇನ್-ಹೌಸ್ ಸೆಲ್ಯುಲರ್ ಮತ್ತು ವೈರ್‌ಲೆಸ್ ಚಿಪ್‌ಗಳನ್ನು ಈ ಫೋನ್‌ನಲ್ಲಿ ಬಳಸಬಹುದು ಎಂದು ವರದಿಗಳು ಹೇಳುತ್ತಿವೆ. ಚಾರ್ಜಿಂಗ್ ವಿಷಯದಲ್ಲಿ 18W ವೈರ್ಡ್ ಮತ್ತು 7.5W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮುಂದುವರಿಯುವ ಸಾಧ್ಯತೆ ಇದೆ.
ಬೆಲೆ ಮತ್ತು ಬಿಡುಗಡೆ ದಿನಾಂಕ
ಬೆಲೆ ವಿಚಾರದಲ್ಲಿ ಆಪಲ್ ಅಚ್ಚರಿ ನೀಡುವ ಸಾಧ್ಯತೆ ಕಡಿಮೆ. ವರದಿಗಳ ಪ್ರಕಾರ, iPhone 17e ಯ ಬೆಲೆ ಸುಮಾರು $599, ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ₹57,000 ಅಥವಾ ಇದಕ್ಕಿಂತಲೂ ಕಡಿಮೆ ಇರಬಹುದು. ಈ ಫೋನ್ ಅನ್ನು ಆಪಲ್‌ನ ಕಡಿಮೆ ಬೆಲೆಯ ಐಫೋನ್ ಆಯ್ಕೆಯಾಗಿ ಸ್ಥಾಪಿಸುವ ಉದ್ದೇಶ ಇದರಿಂದ ಸ್ಪಷ್ಟವಾಗುತ್ತದೆ. ಬಿಡುಗಡೆ ದಿನಾಂಕವನ್ನು ಫೆಬ್ರವರಿ 19 ಎಂದು ಊಹಿಸಲಾಗಿದೆ.
ಒಟ್ಟಾರೆ ನಿರೀಕ್ಷೆ ಏನು?
ಒಟ್ಟಾರೆಯಾಗಿ, iPhone 17e ದೊಡ್ಡ ರೀಡಿಸೈನ್ ಇಲ್ಲದಿದ್ದರೂ, ಹೊಸ A19 ಚಿಪ್ ಮತ್ತು ಕೆಲವು ಆಂತರಿಕ ಸುಧಾರಣೆಗಳ ಮೂಲಕ ಮೌಲ್ಯ ಆಧಾರಿತ ಐಫೋನ್ ಆಗಿ ಹೊರಹೊಮ್ಮುವ ಸಾಧ್ಯತೆ ಇದೆ. ಪ್ರೀಮಿಯಂ ಐಫೋನ್ ಅನುಭವ ಬೇಕು, ಆದರೆ ಅತಿ ಹೆಚ್ಚು ಹಣ ಖರ್ಚು ಮಾಡಲು ಇಚ್ಛಿಸದ ಬಳಕೆದಾರರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು. ಬಿಡುಗಡೆಯ ನಂತರವೇ ಈ ಲೀಕ್‌ಗಳು ಎಷ್ಟರ ಮಟ್ಟಿಗೆ ನಿಜವಾಗುತ್ತವೆ ಎಂಬುದು ಸ್ಪಷ್ಟವಾಗಲಿದೆ. ಆದಾಗ್ಯೂ, ಇವೆಲ್ಲವೂ ಲೀಕ್ ಮಾಹಿತಿಯ ಆಧಾರಿತವಾಗಿರುವುದರಿಂದ, ಖಚಿತ ವಿವರಗಳಿಗಾಗಿ ಅಧಿಕೃತ ಪ್ರಕಟಣೆಯನ್ನು ಕಾಯುವುದು ಸೂಕ್ತ.


Click it and Unblock the Notifications