iQOO 15 Ultra ಹೈಎಂಡ್ ಫ್ಲ್ಯಾಗ್‌ಶಿಪ್: ಬಿಡುಗಡೆಗೂ ಮೊದಲೇ ವಿನ್ಯಾಸ ಬಹಿರಂಗ!
iQOO ತನ್ನ ಮುಂದಿನ ಹೈಎಂಡ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ iQOO 15 Ultra ಅನ್ನು ಚೀನಾದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ iQOO 15 ಮಾರುಕಟ್ಟೆಯಲ್ಲಿ ಗಮನ ಸೆಳೆದಿರುವ ಬೆನ್ನಲ್ಲೇ, ಈ Ultra ಮಾದರಿ ಇನ್ನಷ್ಟು ಪ್ರೀಮಿಯಂ ವಿನ್ಯಾಸ ಮತ್ತು ಉನ್ನತ ಕಾರ್ಯಕ್ಷಮತೆಯೊಂದಿಗೆ ಬರಲಿದೆ ಎಂಬುದು ಖಚಿತವಾಗಿದೆ. ಬಿಡುಗಡೆಗೂ ಮುನ್ನವೇ ಕಂಪನಿಯು iQOO 15 Ultra ಫೋನ್‌ನ ವಿನ್ಯಾಸ ಮತ್ತು ಬಣ್ಣಗಳ ಕುರಿತು ಅಧಿಕೃತ ಟೀಸರ್‌ಗಳನ್ನು ಹಂಚಿಕೊಂಡಿದ್ದು, ಇದರ ಪ್ರೀಮಿಯಂ ಲುಕ್ ನಮ್ಮ ಗಮನಸೆಳೆಯುವಂತಿದೆ.
ಎರಡು ಬಣ್ಣಗಳು ಮತ್ತು ಆಕರ್ಷಕ ವಿನ್ಯಾಸ
iQOO ಕಂಪೆನಿಯು ಅಧಿಕೃತವಾಗಿ ತಿಳಿಸಿರುವಂತೆ, ಮುಂಬರುವ iQOO 15 Ultra ಹೈಎಂಡ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಎರಡು ವಿಶಿಷ್ಟ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರಲ್ಲಿ 2077 ಎಂಬ ಹೆಸರಿನ ಬಣ್ಣವು ಕಪ್ಪು ಛಾಯೆಯೊಂದಿಗೆ ಸೈಬರ್ ಪ್ರೇರಿತ ಕಿತ್ತಳೆ ಅಲಂಕಾರವನ್ನು ಹೊಂದಿದೆ. ಇನ್ನೊಂದೆಡೆ, 2049 ಬಣ್ಣ ಆಯ್ಕೆ ಬೆಳ್ಳಿ ಮೇಲ್ಮೈಯಲ್ಲಿ ತಂಪಾದ ನೀಲಿ ಬೆಳಕಿನ ಛಾಯೆಯನ್ನು ಪ್ರತಿಬಿಂಬಿಸುತ್ತದೆ. ಈ ಬಣ್ಣ ಹೆಸರುಗಳು ಭವಿಷ್ಯದ ಥೀಮ್ ಅನ್ನು ಸ್ಪಷ್ಟವಾಗಿ ಸೂಚಿಸುತ್ತವೆ.
ಫೋನ್‌ನ ಹಿಂಭಾಗದ ವಿನ್ಯಾಸ ಅತ್ಯಂತ ಆಕರ್ಷಕವಾಗಿದೆ. ಮಧ್ಯಭಾಗದಲ್ಲಿ ಜೇನುಗೂಡು ಮಾದರಿಯ ಪ್ಯಾಟರ್ನ್ ನೀಡಲಾಗಿದ್ದು, ಇದು ಫೋನ್‌ಗೆ ವಿಭಿನ್ನ ಗುರುತು ನೀಡುತ್ತದೆ. ಕಪ್ಪು ಬಣ್ಣದ ಮಾದರಿಯಲ್ಲಿ ಈ ಪ್ಯಾಟರ್ನ್ ಕಿತ್ತಳೆ ಛಾಯೆಯಲ್ಲಿ ಕಾಣಿಸಿದರೆ, ಬೆಳ್ಳಿ ಬಣ್ಣದ ಮಾದರಿಯಲ್ಲಿ ಹಗುರವಾದ ನೀಲಿ ಅಲಂಕಾರದಲ್ಲಿ ಕಾಣಿಸುತ್ತದೆ. ಒಟ್ಟಾರೆಯಾಗಿ, ಇದು ಗೇಮಿಂಗ್ ಮತ್ತು ಟೆಕ್ ಪ್ರಿಯರನ್ನು ಗುರಿಯಾಗಿಸಿಕೊಂಡ ವಿನ್ಯಾಸ ಎನ್ನಬಹುದು.

ಇನ್ನು ಈ iQOO 15 Ultra ಡಿಸೈನ್ ವಿಚಾರಕ್ಕೆ ಬಂದರೆ, ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಫೋನ್‌ನ ಬಲಭಾಗದಲ್ಲಿ ನೀಡಲಾಗಿದೆ. ಎಡಭಾಗದ ಫ್ರೇಮ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಆದರೆ, ಹಿಂದಿನ ಟೀಸರ್‌ಗಳ ಪ್ರಕಾರ, ಈ ಫೋನ್‌ನಲ್ಲಿ ಆಕ್ಟಿವ್ ಕೂಲಿಂಗ್ ಫ್ಯಾನ್ ಇರಲಿದೆ. ಇದು ದೀರ್ಘಕಾಲ ಗೇಮಿಂಗ್ ಮಾಡುವಾಗ ಫೋನ್ ತಾಪಮಾನ ನಿಯಂತ್ರಿಸಿ ಸ್ಥಿರ ಕಾರ್ಯಕ್ಷಮತೆ ನೀಡಲು ಸಹಾಯ ಮಾಡಲಿದೆ ಎಂದು ವರದಿಗಳು ಹೇಳಿವೆ.
iQOO 15 Ultra: ಕ್ಯಾಮೆರಾ ಮತ್ತು ಬಿಡುಗಡೆ ಸಮಯ
iQOO 15 Ultra ಯಲ್ಲಿ ಮೂರು ಹಿಂಭಾಗದ ಕ್ಯಾಮೆರಾಗಳಿರುವ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ ಎಂದು ಕಂಪನಿ ದೃಢಪಡಿಸಿದೆ. ಕ್ಯಾಮೆರಾ ಮೊಡ್ಯೂಲ್ ಆಯತಾಕಾರದ ವಿನ್ಯಾಸದಲ್ಲಿದ್ದು, ತೀಕ್ಷ್ಣ ಅಂಚುಗಳೊಂದಿಗೆ ಹೆಚ್ಚು ಪ್ರೀಮಿಯಂ ಲುಕ್ ನೀಡುತ್ತದೆ. ಕ್ಯಾಮೆರಾ ಭಾಗದಲ್ಲೇ "Ultra" ಎಂಬ ಬ್ರ್ಯಾಂಡಿಂಗ್ ಕಾಣಿಸಿಕೊಳ್ಳುತ್ತದೆ. LED ಫ್ಲ್ಯಾಶ್ ಅನ್ನು ಕ್ಯಾಮೆರಾ ಘಟಕದ ಕೆಳಭಾಗದಲ್ಲಿ ಇರಿಸಲಾಗಿದ್ದು, ಪಕ್ಕದಲ್ಲೇ iQOO "Monster Inside" ಟ್ಯಾಗ್‌ಲೈನ್ ನೀಡಲಾಗಿದೆ.
iQOO 15 Ultra ಅನ್ನು ಫೆಬ್ರವರಿಯಲ್ಲಿ ಚೀನಾದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಂಪನಿ ನೀಡಿರುವ ಸೂಚನೆಗಳ ಪ್ರಕಾರ, ಈ ಫೋನ್ ಚೀನಾದ ಸ್ಪ್ರಿಂಗ್ ಫೆಸ್ಟಿವಲ್‌ಗೂ (ಚೈನೀಸ್ ನ್ಯೂ ಇಯರ್) ಮುನ್ನವೇ ಅನಾವರಣಗೊಳ್ಳಬಹುದು. ಸ್ಪ್ರಿಂಗ್ ಫೆಸ್ಟಿವಲ್ ಫೆಬ್ರವರಿ 17 ರಿಂದ ಆರಂಭವಾಗುವುದರಿಂದ, ಅದರ ಮೊದಲು ಬಿಡುಗಡೆ ಆಗುವ ಸಾಧ್ಯತೆ ಹೆಚ್ಚು.
ಒಟ್ಟಾರೆಯಾಗಿ, ಭವಿಷ್ಯನಿಷ್ಠ ವಿನ್ಯಾಸ, ಗೇಮಿಂಗ್‌ಗೆ ಒತ್ತು ನೀಡಿದ ತಂತ್ರಜ್ಞಾನ ಮತ್ತು ಪ್ರೀಮಿಯಂ ಫಿನಿಷ್‌ನೊಂದಿಗೆ iQOO 15 Ultra ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಮುಂದಿನ ದಿನಗಳಲ್ಲಿ ಇದರ ಸ್ಪೆಸಿಫಿಕೇಶನ್ ಮತ್ತು ಬೆಲೆ ವಿವರಗಳು ಬಹಿರಂಗವಾದರೆ, ಇದು ಹೈಪರ್ಫಾರ್ಮೆನ್ಸ್ ಫೋನ್ ಹುಡುಕುತ್ತಿರುವ ಬಳಕೆದಾರರಿಗೆ ಪ್ರಮುಖ ಆಯ್ಕೆಯಾಗಿ ಹೊರಹೊಮ್ಮಲಿದೆ ಎಂಬುದು ನಮ್ಮ ಅಭಿಪ್ರಾಯ. ಆದರೆ, ಕಾದುನೋಡಬೇಕಿದೆ.!


Click it and Unblock the Notifications








